ಕೇಸರಿ ಫೈಲ್ | ಬಿಜೆಪಿ ನಾಯಕ ‘ಹರೇನ್ ಪಾಂಡ್ಯ’ರನ್ನು ಮೌನಗೊಳಿಸಿದ ಭೀಕರ ಕತೆ

Date:

ಪಾಂಡ್ಯ ಅವರ ಮೃತದೇಹ ಪತ್ತೆಯಾದ ಲಾ ಗಾರ್ಡನ್ ಪ್ರದೇಶವು ಅಹಮದಾಬಾದ್‌ನ ಅತ್ಯಂತ ಜನನಿಬಿಡ ಪ್ರದೇಶವಾಗಿತ್ತು. ಆದರೂ, ಅಂದು ಆ ಘಟನೆಗೆ ಯಾವುದೇ ಸಾಕ್ಷಿಗಳು ಇರಲಿಲ್ಲ. ಉದ್ಯಾನವನದ ಬದಿಯಲ್ಲಿ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳನ್ನು ಕೊಲೆ ನಡೆಯುವುದಕ್ಕಿಂತ ಕೆಲವು ದಿನಗಳ ಮೊದಲೇ ಅಲ್ಲಿಂದ ತೆರವುಗೊಳಿಸಲಾಗಿತ್ತು.

- Advertisement -

ಹರೇನ್ ಪಾಂಡ್ಯ – ಬಿಜೆಪಿ ರಾಜಕೀಯದೊಳಗೆ ಎಂದಿಗೂ ಮಾಸದೆ ಉಳಿದಿರುವ ಹೆಸರು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ಜೀವನದುದ್ದಕ್ಕೂ ಕಪ್ಪು ಛಾಯೆಯಾಗಿ ಹಿಂಬಾಲಿಸುವ ಮತ್ತು ದುಃಸ್ವಪ್ನವಾಗಿ ಕಾಡುವ ವ್ಯಕ್ತಿ. 2002ರಲ್ಲಿ ನಡೆದ ಗುಜರಾತ್ ಗಲಭೆಯ ವಿರುದ್ಧ ಗಟ್ಟಿದನಿ ಎತ್ತಿದ್ದ, ಮೋದಿ-ಶಾ ಜೋಡಿಯ ಕೆಂಗಣ್ಣಿಗೆ ಗುರಿಯಾಗಿದ್ದ ಹಾಗೂ ವಿರೋಧಿಗಳ ಸಂಚಿಗೆ ಬಲಿಯಾದ ಕೇಸರಿ ಪಕ್ಷದ ನಾಯಕ. ಅವರು ಹತರಾಗಿ ಗುರುವಾರ (ಮಾರ್ಚ್‌ 26)ಕ್ಕೆ ಸರಿಯಾಗಿ 23 ವರ್ಷಗಳು ಉರುಳಿವೆ. ಆದರೆ, 2003ರ ಮಾರ್ಚ್‌ 26ರಂದು ನಡೆದ ಅವರ ಹತ್ಯೆಯ ಹಿಂದಿದ್ದವರು ಯಾರು ಎಂಬುದು ಇಂದಿಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಈ ಪ್ರಶ್ನೆ ಬಿಜೆಪಿ-ಆರ್‌ಎಸ್‌ಎಸ್‌ಅನ್ನು ಬೆನ್ನತ್ತಿದೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಹಿರಿಯ ಬಿಜೆಪಿ ನಾಯಕರಾಗಿದ್ದ ಹರೇನ್ ಪಾಂಡ್ಯ ಅವರ ಜೀವನ-ಸಾವು ಕುತೂಹಲಕಾರಿ ಸಂಗತಿ. ಬಿಜೆಪಿಯ ಮಾತೃ ಸಂಘಟನೆ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ದ (ಆರ್‌.ಎಸ್‌.ಎಸ್) ಕಟ್ಟಾ ಬೆಂಬಲಿಗ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ವಿಠ್ಠಲಭಾಯ್ ಪಾಂಡ್ಯ ಹಿಂದು ಧರ್ಮವನ್ನು ‘ಹಿಂದೂತ್ವ’ವಾಗಿ ಪರಿವರ್ತಿಸುವ ರಾಜಕೀಯ ಸಿದ್ಧಾಂತಕ್ಕೆ ಅಂಟಿಕೊಂಡಿದ್ದವರು. ಆರಂಭದಲ್ಲಿ ಹರೇನ್ ಪಾಂಡ್ಯ ಕೂಡ ಅಂತಹದ್ದೇ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದರು.

ಅಹಮದಾಬಾದ್‌ನ ಎಲ್ಲಿಸ್ ಬ್ರಿಡ್ಜ್ ಕ್ಷೇತ್ರದಿಂದ ಸತತ ಮೂರು ಚುನಾವಣೆಗಳನ್ನು ಗೆದ್ದಿದ್ದ ಪಾಂಡ್ಯ, ಕೇಶುಭಾಯ್ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು. 2002ರಲ್ಲಿ ನರಮೇಧ ನಡೆದಾಗ ಗುಜರಾತ್‌ನ ಮೋದಿ ಸರ್ಕಾರದಲ್ಲಿ ಕಂದಾಯ ಸಚಿವರೂ ಆಗಿದ್ದರು. ಅಂದಿನ ಗಲಭೆಯಲ್ಲಿ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಪಾಲ್ಡಿ ಪ್ರದೇಶದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರಿಗೆ ಸೇರಿದ ಅಪಾರ ಆಸ್ತಿ-ಪಾಸ್ತಿ ಹಾನಿಯಾಗಿತ್ತು. ಹಾನಿ ಎಸಗಿದ ಗುಂಪಿನಲ್ಲಿ ಪಾಂಡ್ಯ ಕೂಡ ಇದ್ದರು ಎಂಬ ಆರೋಪಗಳಿವೆ. ಆದರೆ, ಆ ಆರೋಪವನ್ನು ಪಾಂಡ್ಯ ಬದುಕಿದ್ದ ಅಷ್ಟೂ ದಿನ ನಿರಾಕರಿಸಿದ್ದರು. ಅಲ್ಲದೆ, 2002ರ ಮೇನಲ್ಲಿ ಅಹಮದಾಬಾದ್‌ನಲ್ಲಿ ಪಾಂಡ್ಯ ಅವರು ‘ಕನ್ಸರ್ನ್ಡ್ ಸಿಟಿಜನ್ಸ್ ಟ್ರಿಬ್ಯೂನಲ್ – ಕ್ರೈಮ್ಸ್ ಅಗೆನ್ಸ್ಟ್ ಹ್ಯುಮಾನಿಟಿ ಗುಜರಾತ್-2002’ ಅನ್ನು ಭೇಟಿಯಾಗಿ, ಗಲಭೆಯ ಕುರಿತು ವಿವರಿಸಿದ್ದರು. ಆ ಬಗ್ಗೆ, ಟ್ರಿಬ್ಯೂನಲ್‌ನ ಸಂಚಾಲಕಿಯೂ ಆಗಿದ್ದ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರು ತಮ್ಮ ‘A Murder Most Foul: How Haren Pandya was silenced’ ಲೇಖನದಲ್ಲಿ ವಿವರಿಸಿದ್ದಾರೆ.

“2002ರ ಗುಜರಾತ್‌ ನರಮೇಧದ ಕುರಿತು ಪಾಂಡ್ಯ, ಪೊಲೀಸ್ ಅಧಿಕಾರಿಗಳು, ಕಮಿಷನರ್‌ಗಳು ಹಾಗೂ ಜಿಲ್ಲಾಧಿಕಾರಿಗಳು ಟ್ರಿಬ್ಯೂನಲ್ ಮುಂದೆ ನೀಡಿದ್ದ ಸಾಕ್ಷ್ಯಗಳು, ನರಮೇಧದ ಚಿತ್ರಣವನ್ನು ಭೀಕರವಾಗಿ ಚಿತ್ರಿಸಿದ್ದವು. ಗಲಭೆ ಸಂಚಿನ ರೂಪರೇಷೆಗಳಲ್ಲಿ ಪೊಲೀಸ್ ಪಡೆ ಮತ್ತು ಇತರ ಕಾನೂನು ರಕ್ಷಣಾ ಸಂಸ್ಥೆಗಳನ್ನು ಸಕ್ರಿಯವಾಗಿ ತಟಸ್ಥಗೊಳಿಸುವ ಮತ್ತು ಅಸಹಾಯಕಗೊಳಿಸುವ ತಂತ್ರವೂ ಇತ್ತು. ಈ ತಂತ್ರವು ಅತ್ಯುನ್ನತ ಮಟ್ಟದಲ್ಲಿಯೇ ರೂಪುಗೊಂಡಿತ್ತು ಎಂಬುದನ್ನು ಆ ಸಾಕ್ಷ್ಯಗಳು ಬಹಿರಂಗಪಡಿಸಿದ್ದವು” ಎಂದು ತೀಸ್ತಾ ವಿವರಿಸಿದ್ದಾರೆ.

image 108

ಅಂದಿನ ಸಂಚಿನ ಪ್ರಮುಖ ಘೋಷಣೆ, ‘ಯೇ ಅಂದರ್ ಕಿ ಬಾತ್ ಹೈ, ಪೋಲೀಸ್ ಹಮಾರೆ ಸಾತ್ ಹೈ’ (ಇದು ಒಳಗಿನ ಮಾತು, ಪೊಲೀಸರು ನಮ್ಮೊಂದಿಗಿದ್ದಾರೆ) ಎಂಬುತಾಗಿತ್ತು. ಇದು 2002ರ ಫೆಬ್ರವರಿ 15ರಂದು ಗುಜರಾತ್‌ನಿಂದ ಅಯೋಧ್ಯೆಗೆ ತೆರಳುತ್ತಿದ್ದ ಕರಸೇವಕರ ವಿಜಯದ ಘೋಷಣೆಯಾಗಿತ್ತು. ಈ 2002ರ ನರಮೇಧಕ್ಕಿಂತ ಐದು ವರ್ಷ ಮೊದಲೇ, ‘ಕಮ್ಯುನಲಿಸಂ ಕಾಂಬ್ಯಾಟ್’ ಎಂಬ ಮಾಸಪತ್ರಿಕೆ, ಸರ್ಕಾರ ಬೆಂಬಲಿತ ಗುಂಪುಗಳು ವ್ಯಾಪಕವಾಗಿ ಹಂಚಿದ್ದ ದ್ವೇಷಪೂರಿತ ಸಾಹಿತ್ಯ, ಪೊಲೀಸ್, ಆಡಳಿತ ಹಾಗೂ ಸರ್ಕಾರದ ಇತರ ವಿಭಾಗಗಳಲ್ಲಿ ಬಲಪಂಥೀಯ ಸಂಘಟನೆಗಳ ತೀವ್ರಗಾಮಿ ಕೇಡರ್‌ಗಳ ಒಳನುಸುಳುವಿಕೆ ಕುರಿತ ದಾಖಲೆಗಳನ್ನು ವಿವರವಾಗಿ ನೀಡಿತ್ತು. ದೀರ್ಘಕಾಲದ ಸಂಚಿನ ಫಲವಾಗಿ 2002ರಲ್ಲಿ ನರಮೇಧ ನಡೆದೇಹೋಯಿತು.

ನರಮೇಧವನ್ನು ಬಿಜೆಪಿಯೊಳಗಿದ್ದೇ ವಿರೋಧಿಸಿದ್ದವರಲ್ಲಿ ಪಾಂಡ್ಯ ಕೂಡ ಒಬ್ಬರು ಎಂದು ಹೇಳಲಾಗಿದೆ. ಅವರು ‘ಕನ್ಸರ್ನ್ಡ್ ಸಿಟಿಜನ್ಸ್ ಟ್ರಿಬ್ಯೂನಲ್’ ಮುಂದೆ ಹಾಜರಾದಾಗ, “ಗಲಭೆಯಲ್ಲಿ ತೊಡಗಿದ್ದ ಗುಂಪು ತೀವ್ರವಾಗಿ ಕೆರಳಿತ್ತು. ಅವರನ್ನು ತಡೆಯುವ ಪರಿಸ್ಥಿತಿ ಇರಲಿಲ್ಲ. ಆದ್ದರಿಂದ, ನಾನು ಅವರನ್ನು ಪ್ರಾಣ ತೆಗೆಯದಂತೆ ಮತ್ತು ಕೇವಲ ಆಸ್ತಿಗಳನ್ನು ನಾಶ ಮಾಡುವಂತೆ ಮನವೊಲಿಸಿದೆ. ಜನಸಮೂಹದ ಉನ್ಮಾದ ಆ ಮಟ್ಟಿಕ್ಕಿತ್ತು. ಅಂದಿನ ಘಟನೆಯು ಕೇವಲ ಕೋಮು ಉದ್ವಿಗ್ನ ಪರಿಸ್ಥಿತಿಯ ಸಾಮಾನ್ಯ ಪ್ರತಿಕ್ರಿಯೆಯಾಗಿರಲಿಲ್ಲ. ವ್ಯವಸ್ಥಿತ ಸಂಚಿನಿಂದ ಘಟಿಸಿದ್ದಾಗಿತ್ತು” ಎಂದು ಅವರು ಹೇಳಿದ್ದರು.

ಮಾತ್ರವಲ್ಲ, ನರಮೇಧದ ಸಮಯದಲ್ಲಿ ಮೇಲಿನಿಂದ ಸೂಚನೆಗಳಿದ್ದ ಕಾರಣ ಪೊಲೀಸರು ಉದ್ದೇಶಪೂರ್ವಕವಾಗಿ ನಿಷ್ಕ್ರಿಯರಾಗಿದ್ದರು. ಗುಜರಾತ್ ಸಂಪುಟದ ಕೆಲವು ಸಚಿವರು, ಪೊಲೀಸ್ ಮಹಾನಿರ್ದೇಶಕ ಕೆ. ಚಕ್ರವರ್ತಿ, ಅಹಮದಾಬಾದ್ ಕಮಿಷನರ್ ಪಿ.ಸಿ. ಪಾಂಡೆ ಹಾಗೂ ಮುಖ್ಯಮಂತ್ರಿ ಕಚೇರಿಯ (CMO) ಇತರ ಕೆಲವು ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದ ಸಭೆಯಲ್ಲಿ ನರಮೇಧದ ಸಂಚಿನ ಚರ್ಚೆಗಳು ನಡೆದಿದ್ದವರು ಎಂಬುದನ್ನು ಅವರು ವಿವರಿಸಿದ್ದರೆಂದು ತೀಸ್ತಾ ಬರೆದಿದ್ದಾರೆ.

“ಆ ಸಭೆಯಲ್ಲಿ; 2002ರ ಫೆಬ್ರವರಿ 27ರಂದು ಗೋದ್ರಾ ಘಟನೆಯ ಮರುದಿನ ಬೀದಿಗಳಲ್ಲಿ ಹಿಂದುಗಳ ಆಕ್ರೋಶ ಎದ್ದುಕಾಣುವಂತೆ ಇರುತ್ತದೆ. ಪೊಲೀಸರು ಈ ಆಕ್ರೋಶ ಹೊರಹೊಮ್ಮಲು ಅವಕಾಶ ನೀಡಬೇಕು. ಅವರನ್ನು ನಿಯಂತ್ರಿಸಲು ಏನನ್ನೂ ಮಾಡಬಾರದೆಂದು ಮುಖ್ಯಮಂತ್ರಿಗಳು ಪೊಲೀಸರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದರೆಂದು ಆರೋಪಿಸಲಾಗಿದೆ. ಗುಜರಾತ್ ಸರ್ಕಾರವು ಮಾಡಿದ ಅಸಂವಿಧಾನಿಕ ಕೃತ್ಯಗಳು ಕೇವಲ ಆಕಸ್ಮಿಕ ವೈಫಲ್ಯವಲ್ಲ, ಬದಲಿಗೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗಳಿಗೆ ಅವಕಾಶ ನೀಡಲು ವಿವಿಧ ಹಂತಗಳಲ್ಲಿ ಯೋಜಿತವಾಗಿ ಮಾಡಿದ ಕೃತ್ಯಗಳಾಗಿವೆ ಎಂಬ ಅಧಿಕೃತ ದೃಢೀಕರಣವನ್ನು ಪಾಂಡ್ಯ ಟ್ರಿಬ್ಯೂನಲ್‌ಗೆ ನೀಡಿದ್ದರು” ಎಂದು ತೀಸ್ತಾ ವಿವರಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ದೆಹಲಿ ಗಲಭೆ | ಕೋಮುದ್ವೇಷಿ ಕಪಿಲ್ ಮಿಶ್ರಾಗೆ ಮಂತ್ರಿಗಿರಿ; ಸೌಹಾರ್ದತೆ ಸಾರಿದ ಉಮರ್‌ಗೆ ಸೆರೆವಾಸ

ಟ್ರಿಬ್ಯೂನಲ್‌ಗೆ ಪಾಂಡ್ಯ ನೀಡಿದ್ದ ವಿವರಣೆಯು ಹಿಂಸಾಚಾರವು ಎಷ್ಟು ಕ್ರೌರ್ಯದಿಂದ ಕೂಡಿತ್ತು, ಕುತಂತ್ರದಿಂದ ಪ್ರೇರೇಪಿಸಲ್ಪಟ್ಟಿತ್ತು ಎಂಬುದನ್ನು ವಿವರಿಸಿದ್ದರು. ಅಲ್ಲದೆ, ಅಂತಹ ಅತ್ಯಾಚಾರ, ಕೊಲೆ ಹಾಗೂ ಸೇಡಿನ ಕೃತ್ಯಗಳಲ್ಲಿ ತಾನು ಎಂದಿಗೂ ಭಾಗಿಯಾಗಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು. ತಾವು ತಮ್ಮ ವಿಶೇಷ ಭದ್ರತೆಯನ್ನು ಬಳಸಿಕೊಂಡು ಸರಸ್ಪುರದಲ್ಲಿ ವಾಸಿಸುತ್ತಿದ್ದ ದಾವೂದಿ ಬೊಹ್ರಾ ಧಾರ್ಮಿಕ ಮುಖ್ಯಸ್ಥರನ್ನು ಸುರಕ್ಷಿತವಾಗಿ ಮುಂಬೈಗೆ ತಪ್ಪಿಸಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಕರೆದೊಯ್ದಿದ್ದಾಗಿಯೂ ಅವರು ವಿವರಿಸಿದ್ದರು.

ತಾವು ಗಲಭೆಯನ್ನು ವಿರೋಧಿಸಿದ್ದಕ್ಕಾಗಿಯೂ, ಗಲಭೆಯ ಹಿಂದೆ ಮೋದಿ ಸರ್ಕಾರದ ಸಂಚಿನ ನೇರ ಪಾತ್ರವಿದೆ ಎಂಬುದನ್ನು ಬಹಿರಂಗಪಡಿಸಿದ್ದಕ್ಕಾಗಿಯೂ ಹಾಗೂ ನರಮೇಧಕ್ಕೆ ಸಂಬಂಧಿಸಿದ ಹಲವಾರು ಸಾಕ್ಷ್ಯಗಳನ್ನು ಟ್ರಿಬ್ಯೂನಲ್‌ಗೆ ನೀಡಿದ್ದಕ್ಕಾಗಿಯೂ ಪಾಂಡ್ಯ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದರು.

ಪಾಂಡ್ಯ ಅವರು ನೀಡಿದ್ದ ಸಾಕ್ಷ್ಯಗಳ ವಿಷಯವು ಅನಿವಾರ್ಯವಾಗಿ ಸರ್ಕಾರದ ಕಿವಿಗಳಿಗೆ ತಲುಪಿದ್ದವು. 2002ರ ಜೂನ್‌ ವೇಳೆಗೆ, ಮಾಧ್ಯಮಗಳಿಗೂ ತಿಳಿಯಿತು. ಪರಿಣಾಮ, ಪಾಂಡ್ಯ ಅವರು ರಾಜಕೀಯ ಬಹಿಷ್ಕಾರ ಮತ್ತು ಬಿಜೆಪಿಯೊಳಗಿನ ಆಂತರಿಕ ದ್ವೇಷದ ಸುಳಿಗೆ ಸಿಲುಕಿದರು. ಮುಖ್ಯಮಂತ್ರಿಯಾಗಿದ್ದಾಗಲೂ ಮೋದಿ ಅವರು ಭಿನ್ನಾಭಿಪ್ರಾಯವನ್ನಾಗಲಿ ಅಥವಾ ಆರೋಗ್ಯಕರ ಸ್ಪರ್ಧೆಯನ್ನಾಗಲಿ ಸಹಿಸುತ್ತಿರಲಿಲ್ಲ. ಆದರೆ, ಪಾಂಡ್ಯ ಅವರು ಭಿನ್ನಾಭಿಪ್ರಾಯವನ್ನು ನೇರವಾಗಿ ಮೋದಿ ಸರ್ಕಾರದ ಮುಂದಿಟ್ಟಿದ್ದರು.

haren pandya

ಪರಿಣಾಮವಾಗಿ, ಪಾಂಡ್ಯ ಅವರ ಮೇಲೆ ಶೀಘ್ರದಲ್ಲೇ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಹೇರಲಾಯಿತು. 2002ರ ಜುಲೈ ವೇಳೆಗೆ ಅವರು ಸಚಿವ ಸ್ಥಾನ ಕಳೆದುಕೊಂಡರು. ಮೋದಿ ಅವರು ಅಡ್ವಾಣಿ ಮತ್ತು ಜೇಟ್ಲಿ ಅವರ ಒತ್ತಡವನ್ನೂ ಮೀರಿ 2002ರ ಡಿಸೆಂಬರ್‌ನಲ್ಲಿ ನಡೆದ ಗುಜರಾತ್ ಚುನಾವಣೆಯಲ್ಲಿ ಪಾಂಡ್ಯ ಅವರಿಗೆ ಟಿಕೆಟ್ ನೀಡಲಿಲ್ಲ. ಮೋದಿ ಮತ್ತೆ ಅಧಿಕಾರಕ್ಕೆ ಬಂದಾಗ, ಪಾಂಡ್ಯ ಸಂಪೂರ್ಣವಾಗಿ ಮೂಲೆಗುಂಪಾದರು. ಮೂರು ತಿಂಗಳ ನಂತರ ಮುಂಜಾನೆಯ ನಡಿಗೆಗೆ ಹೋಗಿದ್ದಾಗ ಅವರು ಗುಂಡಿನ ದಾಳಿಗೆ ಬಲಿಯಾದರು. ಅವರ ಮೃತದೇಹವು ಗಂಟೆಗಳ ಕಾಲ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿತ್ತು.

ಪಾಂಡ್ಯ ಅವರ ಮೃತದೇಹ ಪತ್ತೆಯಾದ ಲಾ ಗಾರ್ಡನ್ ಪ್ರದೇಶವು ಅಹಮದಾಬಾದ್‌ನ ಅತ್ಯಂತ ಜನನಿಬಿಡ ಪ್ರದೇಶವಾಗಿತ್ತು. ಆದರೂ, ಅಂದು ಆ ಘಟನೆಗೆ ಯಾವುದೇ ಸಾಕ್ಷಿಗಳು ಇರಲಿಲ್ಲ. ಉದ್ಯಾನವನದ ಬದಿಯಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವ ವ್ಯಾಪಾರಿಗಳನ್ನು ಕೊಲೆಗಿಂತ ಕೆಲವು ದಿನಗಳ ಮೊದಲೇ ಅಲ್ಲಿಂದ ತೆರವುಗೊಳಿಸಲಾಗಿತ್ತು.

ಎಲ್ಲಿಸ್ ಬ್ರಿಡ್ಜ್ ಪೊಲೀಸ್ ಠಾಣೆಯು ಲಾ ಗಾರ್ಡನ್‌ಗೆ ಅತ್ಯಂತ ಸಮೀಪದಲ್ಲಿದೆ. ಆದರೆ, ವಿಚಿತ್ರವೆಂಬಂತೆ ನವ ರಂಗ್‌ಪುರ ಪೊಲೀಸರು ಮೊದಲು ಸ್ಥಳಕ್ಕೆ ಬಂದರು. ಎಲ್ಲಿಸ್ ಬ್ರಿಡ್ಜ್ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಅವರು ಬೇರೆ ಉದ್ಯಾನವನಕ್ಕೆ ಹೋಗುವಂತೆ ಮಾಡಲಾಗಿತ್ತು ಎಂದು ವರದಿಯಾಗಿದೆ.

ಪಾಂಡ್ಯ ಅವರ ಕೊಲೆಗೂ ಮುನ್ನ ತಿಂಗಳುಗಳ ಕಾಲ ಅವರ ಮೇಲೆ ನಿಗಾ ಇಡಲಾಗಿತ್ತು ಎನ್ನಲಾಗಿದೆ. ಪಾಂಡ್ಯ ಅವರು ಟ್ರಿಬ್ಯೂನಲ್ ಮುಂದೆ ಸಾಕ್ಷ್ಯ ನೀಡಿದ ನಂತರ ಸರ್ಕಾರಿ ಯಂತ್ರವನ್ನು ಬಳಸಿ ಅವರ ಮೇಲೆ ನಿಗಾ ಇರಿಸಲಾಗಿತ್ತು ಎಂಬುದಕ್ಕೆ ಕೆಲವು ದಾಖಲೆಗಳನ್ನು ಅಂದಿನ ಎಡಿಜಿಪಿ ಆರ್.ಬಿ ಶ್ರೀಕುಮಾರ್ ನೀಡಿದ್ದರು. ಮೋದಿಯವರ ಪರವಾಗಿ ಅವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರು ಟ್ರಿಬ್ಯೂನಲ್ ಅನ್ನು ಭೇಟಿಯಾದ ಸಚಿವ ಯಾರು ಎಂಬುದನ್ನು ತಿಳಿಯಲು ಹಂಬಲಿಸುತ್ತಿದ್ದರೆಂದು ಶ್ರೀಕುಮಾರ್ ನೀಡಿದ್ದ ದಾಖಲೆಗಳು ವಿವರಿಸಿವೆ. “ತಮಗೆ ಹರೇನ್ ಪಾಂಡ್ಯ ಅವರ ಫೋನ್ ದಾಖಲೆಗಳ ಮೂಲಕ ಈ ಭೇಟಿಯ ವಿವರಗಳನ್ನು ಪತ್ತೆಹಚ್ಚುವಂತೆ ಮಿಶ್ರಾ ಸೂಚಿಸಿದ್ದರು. ಆದರೆ, ತಾವು ಇದು ತಮ್ಮ ಕರ್ತವ್ಯದ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳಿದ್ದೆ. ಆದರೂ, ಮಿಶ್ರಾ ಮತ್ತೆ ಒತ್ತಾಯಿಸಿದರು. ಅಂತಿಮವಾಗಿ ಫೋನ್ ಕರೆಗಳ ವಿವರಗಳನ್ನು ನೀಡಬೇಕಾಯಿತು” ಎಂದು ಶ್ರೀಕುಮಾರ್ ಹೇಳಿಕೊಂಡಿದ್ದಾರೆ.

ಈ ಲೇಖನ ಓದಿದ್ದೀರಾ?: UAPA | ಪೂರ್ವಗ್ರಹೀತ ವರದಿ – ಸತ್ತ ಸತ್ಯ: ಖುಲಾಸೆಯಾದರೂ ಅಳಿಯದ ‘ಭಯೋತ್ಪಾದಕ’ ಕಳಂಕ

ಶ್ರೀಕುಮಾರ್ ಬಿಚ್ಚಿಟ್ಟಿರುವ ಮತ್ತೊಂದು ಭೀಕರ ಸತ್ಯವೆಂದರೆ; 2002ರ ಜೂನ್ 28ರಂದು ಅಂದಿನ ಮುಖ್ಯ ಕಾರ್ಯದರ್ಶಿ ಸುಬ್ರಾವ್ ಅವರು ಶ್ರೀಕುಮಾರ್ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿ, ‘ರಥಯಾತ್ರೆಗೆ ಅಡ್ಡಿಪಡಿಸುವ ಯಾರನ್ನೇ ಆದರೂ ಮುಗಿಸಿಬಿಡಬೇಕು ಎಂಬುದು ಮುಖ್ಯಮಂತ್ರಿಗಳ ನಿರ್ಧಾರವಾಗಿದೆ’ ಎಂದು ತಿಳಿಸಿದ್ದರಂತೆ.

ಶ್ರೀಕುಮಾರ್ ಅವರ ಹೇಳಿಕೆಗಳು ಮತ್ತು ಒದಗಿಸಿದ ಸಾಕ್ಷ್ಯಗಳಿಂದ ಎರಡು ವಿಷಯಗಳು ಸ್ಪಷ್ಟವಾಗಿದ್ದವು: ಟ್ರಿಬ್ಯೂನಲ್ ಮುಂದೆ ಸಾಕ್ಷ್ಯ ನೀಡಿದ್ದಕ್ಕಾಗಿ ಪಾಂಡ್ಯ ಅವರು ಮೋದಿಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ಸರ್ಕಾರದ ವಿರುದ್ಧ ಇರುವವರನ್ನು ಕೊಲ್ಲುವ ಪ್ರವೃತ್ತಿಯನ್ನು ಗುಜರಾತ್ ಸರ್ಕಾರವು ಬಹಿರಂಗವಾಗಿ ಪ್ರಚಾರ ಮಾಡುತ್ತಿತ್ತು. ಗಲಭೆಯನ್ನು ವಿರೋಧಿಸಿದ್ದಕ್ಕೆ ಮತ್ತು ಸಾಕ್ಷ್ಯಗಳನ್ನು ಒದಗಿಸಿದ್ದಕ್ಕಾಗಿಯೇ ಹರೇನ್ ಪಾಂಡ್ಯ ಬಲಿಯಾಗಿದ್ದಾರೆ ಎಂದು ಇಡೀ ಜಗತ್ತು ನಂಬಿದೆ. ಆದರೆ, ಇದನ್ನು ಸಾಬೀತು ಮಾಡಲು ಸರಿಯಾದ ಸಾಕ್ಷ್ಯಗಳಿಲ್ಲ. ಬದಲಾಗಿ, 2002ರ ನರಮೇಧದ ಪ್ರತಿಕಾರವಾಗಿ ಪಾಂಡ್ಯರನ್ನು ಹತ್ಯೆಗೈಯ್ಯಲಾಗಿದೆ ಎಂದಷ್ಟೇ ಪ್ರಕರಣವನ್ನು ನೋಡಲಾಗಿದೆ.

ಅವರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿತು. 15 ಪ್ರಮುಖ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಅನ್ನೂ ಸಲ್ಲಸಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಎಲ್ಲರನ್ನೂ ನಿದೋರ್ಷಿಗಳೆಂದು ಗುಜರಾತ್‌ ಹೈಕೋರ್ಟ್ ಘೋಷಿಸಿ, ಖುಲಾಸೆಗೊಳಿಸಿತು. ಆದಾಗ್ಯೂ, ಹೈಕೋರ್ಟ್‌ನ ತೀರ್ಪನ್ನು 2019ರ ಜುಲೈ 5ರಂದು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತು. 12 ಆರೋಪಿಗಳನ್ನು ಹತ್ಯೆ ಮತ್ತು ಸಂಚು ರೂಪಿಸಿದ್ದ ಕೃತ್ಯಗಳಲ್ಲಿ ಅಪರಾಧಿಗಳೆಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿತು.

ಕೊಂದವರು ಜೈಲಿನಲ್ಲಿದ್ದಾರೆ. ಆದರೆ, ಆ ಕೊಲೆಯ ಹಿಂದಿನ ರೂವಾರಿಗಳು ಯಾರು? ಪಿತೂರಿ ಏನು? ಅವರ ಕೊಲೆ ನರಮೇಧ ಪ್ರತಿಕಾರಕ್ಕಾಗಿ ಅಗಿದ್ದಾ ಅಥವಾ ಸಾಕ್ಷ್ಯಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಆಗಿದ್ದಾ ಎಂಬ ಪ್ರಶ್ನೆಗೆ ಉತ್ತರವಿಲ್ಲ!

ಸದ್ಯ, ಹರೇನ್ ಪಾಂಡ್ಯ ಅವರಿಗೆ ಆದ ಗತಿಯೇ ಅಥವಾ ಹರೇನ್ ಪಾಂಡ್ಯರಂತೆ ನಾವೂ ಬೀದಿ ಶವವಾಗಿ ಎಲ್ಲಿಯಾದರೂ ಸಿಗಬಹುದೆಂದು ಬಿಜೆಪಿಯಲ್ಲಿದ್ದುಕೊಂಡೇ ಬಿಜೆಪಿಯನ್ನು ವಿಮರ್ಶಿಸುವ ಸುಬ್ರಮಣಿಯನ್ ಸ್ವಾಮಿ ಮೂರ್ನ್ಕಾಲ್ಕು ವರ್ಷಗಳ ಹಿಂದೆ ಹೇಳಿದ್ದರು. 2022ರ ಅಕ್ಟೋಬರ್ 31ರಂದು ಟ್ವೀಟ್‌ ಮಾಡಿದ್ದ ಸ್ವಾಮಿ, “ಮೋದಿ ಮತ್ತು ಶಾ ಅವರು ನನ್ನನ್ನು ಹರೇನ್ ಪಾಂಡ್ಯ ಮಾಡುವ ಯೋಜನೆ ಮಾಡುತ್ತಿಲ್ಲವೆಂದು ಆಶಿಸುತ್ತೇನೆ. ಹಾಗಾದರೆ, ನಾನು ನನ್ನ ಸ್ನೇಹಿತರಿಗೆ ಎಚ್ಚರಿಕೆ ನೀಡಬೇಕಾಗುತ್ತದೆ. ನಾನು ಪಡೆದಷ್ಟು ಕೊಡುತ್ತೇನೆ ಎಂಬುದನ್ನು ನೆನಪಿಡಿ” ಎಂದಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...