ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ವಿಧೇಯಕದ ಮೇಲಿನ ಚರ್ಚೆಯ ವೇಳೆ ದೇಶಾದ್ಯಂತ ನಡೆದ ವಿದ್ಯಾರ್ಥಿ-ಯುವಜನರ ಪ್ರತಿಭಟನೆಯನ್ನು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ, ಭಿನ್ನ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳದವರನ್ನು ಯುವಜನರು ‘ಮೂರ್ಖರು’ ಎಂದು ಪರಿಗಣಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಮೂರ್ಖ ಎಂಬ ಪದ ಬಳಸಿದ್ದಕ್ಕಾಗಿ, ಬಿಜೆಪಿಗರು ಸದನದಲ್ಲಿ ಗದ್ದಲು ಸೃಷ್ಟಿಸಿದ್ದಾರೆ. ಆ ಪದವನ್ನು ಕಡತದಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.
ಚರ್ಚೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಪ್ರತಿಭಟನಾನಿರತ ವಿದ್ಯಾರ್ಥಿಗಳ ಭಾವನೆಗಳನ್ನು ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳೂ ಗೌರವಿಸಬೇಕು” ಎಂದು ಆಗ್ರಹಿಸಿದರು. ಇದೇ ವೇಳೆ, 18 ವರ್ಷದ ವಿದ್ಯಾರ್ಥಿಯೊಬ್ಬರ ಜೊತೆಗಿನ ಸಂಭಾಷಣೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, “ಜನರನ್ನು ‘ವಿದ್ಯಾರ್ಥಿಗಳು’, ‘ಮೂರ್ಖರು’ ಹಾಗೂ ‘ಅಂಧಭಕ್ತರು’ ಎಂದು ಮೂರು ವರ್ಗಗಳಾಗಿ ವಿಂಗಡಿಸಿದ್ದಾನೆ. ಆತನ ಪ್ರಕಾರ, ಜ್ಞಾನವನ್ನು ಅರಸುವ ಮತ್ತು ಇತರರ ಮಾತನ್ನು ಕೇಳಲು ಸಿದ್ಧರಿರುವವರು ‘ವಿದ್ಯಾರ್ಥಿ’ಗಳು, ಭಿನ್ನ ರೀತಿಯ ಅಭಿಪ್ರಾಯಗಳನ್ನು ಕೇಳಲು ನಿರಾಕರಿಸುವವರು ‘ಮೂರ್ಖರು’ ಎಂದು ಆ ವಿದ್ಯಾರ್ಥಿ ಬಣ್ಣಿಸಿದ್ದಾನೆ” ಎಂದು ರಾಹುಲ್ ವಿವರಿಸಿದರು.
ರಾಹುಲ್ ಗಾಂಧಿ ತಮ್ಮ ಮಾತನ್ನು ಮುಂದುವರಿಸುವಷ್ಟರಲ್ಲಿ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ‘ಮೂರ್ಖರು’ ಎಂಬ ಶಬ್ದದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಅದು ‘ಅಸಂಸದೀಯ’ ಪದ. ಅದನ್ನು ಕಡತದಿಂದ ತೆಗೆದುಹಾಕಬೇಕು ಎಂದು ರಿಜಿಜು ಒತ್ತಾಯಿಸಿದರು. ಅವರ ಆಕ್ಷೇಪಕ್ಕೆ ಎನ್‌ಡಿಎ ಸಂಸದರೂ ದನಿ ಗೂಡಿಸಿದರು. ತೀವ್ರ ಗದ್ದಲು ಸೃಷ್ಟಿಸಿದರು.
ಆದಾಗ್ಯೂ, ಮಾತು ಮುಂದುವರೆಸಿದ ರಾಹುಲ್ ಗಾಂಧಿ, “ನಾನು ಸದನದಲ್ಲಿರುವವರನ್ನು ಉಲ್ಲೇಖಿಸಿ ‘ಮೂರ್ಖರು’ ಎಂಬ ಪದ ಬಳಸಿಲ್ಲ” ಎಂದು ಸ್ಪಷ್ಟನೆ ನೀಡಿದರು.
ವಿದ್ಯಾರ್ಥಿ ಪ್ರತಿಭಟನೆಯ ಕುರಿತಾದ ತಮ್ಮ ಮಾತುಗಳಿಗೆ ಮರಳಿದ ರಾಹುಲ್, “ನಮ್ಮ ದೇಶದ ಭವಿಷ್ಯವಾಗಿರುವ ಯುವಜನರು ಬೀದಿಗಿಳಿದು ಹೋರಾಡಿದ್ದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು ಮತ್ತು ಭರವಸೆ ಮೂಡಿತು. ಇದು ಕೋಪ, ಹಿಂಸೆ ಅಥವಾ ದ್ವೇಷವಾಗಿರಲಿಲ್ಲ. ಇದು ಈ ದೇಶದ ಯುವಜನರ ಮತ್ತು ಮುಂದಿನ ಪೀಳಿಗೆಯ ಆಳವಾದ ಭಾವನೆಯ ಅಭಿವ್ಯಕ್ತಿಯಾಗಿತ್ತು. ಆ ಪ್ರತಿಭಟನೆಯಲ್ಲಿ ಯಾವುದೇ ತಪ್ಪಿಲ್ಲ. ಪ್ರತಿಯೊಬ್ಬ ಭಾರತೀಯನೂ ಇದರ ಬಗ್ಗೆ ಹೆಮ್ಮೆಪಡಬೇಕು ” ಎಂದು ರಾಹುಲ್ ಗಾಂಧಿ ಹೇಳಿದರು.
“ಪ್ರತಿಭಟನೆಯು ಯುವ ಭಾರತೀಯರ ಕಳವಳವನ್ನು ಪ್ರತಿಬಿಂಬಿಸುತ್ತಿದೆ ಮತ್ತು ಪಕ್ಷಭೇದ ಮರೆತು ಎಲ್ಲರೂ ಇದನ್ನು ಬೆಂಬಲಿಸಬೇಕು” ಎಂದು ಅವರು ಹೇಳಿದರು.
“ನನ್ನ ಬಿಜೆಪಿಯ ಮಿತ್ರರು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಯುವಜನರ ಭಾವನೆಯನ್ನು ಗೌರವಿಸಬೇಕು. ಬಿಜೆಪಿಯ ಮಿತ್ರರು ತಮ್ಮದೇ ಮಕ್ಕಳ ಬಳಿಗೆ ಹೋಗಿ, ಅವರ ಸಹೋದರ-ಸಹೋದರಿಯರು ಮಾಡುತ್ತಿರುವ ಹೋರಾಟದ ಬಗ್ಗೆ ಏನು ಅನಿಸುತ್ತದೆ ಎಂದು ಕೇಳಿದರೆ, ಅವರ ಸ್ವಂತ ಮಕ್ಕಳೂ ಇದನ್ನು ಒಪ್ಪಿಕೊಳ್ಳುತ್ತಾರೆ ಎಂಬ ಭರವಸೆ ನನಗಿದೆ” ಎಂದರು.



