ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಬಿಜೆಪಿಯಲ್ಲಿರುವ ತಮ್ಮ ಅಚ್ಚುಮೆಚ್ಚಿನ ನಾಯಕ ಯಾರು ಎಂಬ ಪ್ರಶ್ನೆಗೆ ನೀಡಿರುವ ಉತ್ತರ Video ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಹುಲ್ ಗಾಂಧಿ ಹೆಸರಿಸಿರುವ ನಾಯಕ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್.
ಇನ್‌ಸ್ಟಾಗ್ರಾಮ್‌ನಲ್ಲಿ ‘ಜೆನ್ Z’ ಬಳಕೆದಾರರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, “ಯಾವುದೇ ಪ್ರಶ್ನೆ ಕೇಳಿ, ಉತ್ತರಿಸುತ್ತೇನೆ” ಎಂದು ಆಹ್ವಾನ ನೀಡಿದ್ದರು. ಈ ವೇಳೆ ಒಬ್ಬರು, “ಬಿಜೆಪಿಯಲ್ಲಿರುವ ನಿಮ್ಮ ಮೆಚ್ಚಿನ ನಾಯಕ ಯಾರು?” ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ಖಂಡಿತವಾಗಿಯೂ ಕ್ಯಾಪ್ಟನ್ ಅಮರಿಂದರ್ ಸಿಂಗ್” ಎಂದು ಉತ್ತರಿಸಿದರು.
“ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರು ಅತ್ಯಂತ ತಾಳ್ಮೆಯ ವ್ಯಕ್ತಿ. ಸೇನಾ ಇತಿಹಾಸದ ಬಗ್ಗೆ ಅವರಿಗೆ ಅಪಾರ ಜ್ಞಾನವಿದೆ. ಅದಕ್ಕಾಗಿ ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ” ಎಂದು ರಾಹುಲ್ ಹೇಳಿದರು. ಇದೇ ವೇಳೆ ನಗುತ್ತಾ, “ಹಲೋ, ಅಂಕಲ್ ಅಮರಿಂದರ್” ಎಂದು ಹೇಳುವ ಮೂಲಕ ತಮ್ಮ ಆತ್ಮೀಯತೆಯನ್ನೂ ವ್ಯಕ್ತಪಡಿಸಿದರು.

ಕ್ಯಾಪ್ಟನ್ ಅಮರಿಂದರ್ ಸಿಂಗ್ 2021ರಲ್ಲಿ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ತೊರೆದಿದ್ದರು. ನಂತರ ಅವರು ‘ಪಂಜಾಬ್ ಲೋಕ್ ಕಾಂಗ್ರೆಸ್’ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಆದರೆ 2022ರಲ್ಲಿ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ ಕೇಸರಿ ಪಕ್ಷ ಸೇರ್ಪಡೆಯಾದರು.
ಇದನ್ನೂ ಓದಿ: ನೀವೇಕೆ ಜಂತರ್ ಮಂತರ್ ಮುಚ್ಚಬಾರದು?; ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಪ್ರಶ್ನೆ
ಕಾಂಗ್ರೆಸ್‌ನಲ್ಲಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ಅಮರಿಂದರ್ ಸಿಂಗ್ ಒಟ್ಟಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್‌ನಿಂದ ಅಮರಿಂದರ್ ಹೊರಬಂದ ಬಳಿಕ ಇಬ್ಬರ ರಾಜಕೀಯ ಹಾದಿ ಬೇರೆಬೇರೆಯಾದರೂ, ಅವರ ಬಗ್ಗೆ ರಾಹುಲ್ ಗಾಂಧಿ ವ್ಯಕ್ತಪಡಿಸಿರುವ ಮೆಚ್ಚುಗೆಯ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ರಾಜಕೀಯದ ಹಿರಿಯ ನಾಯಕರಲ್ಲಿ ಒಬ್ಬರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಅವರು, ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿ ಆಗಿದ್ದರು. 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ತಂದುಕೊಟ್ಟ ಪ್ರಮುಖ ನಾಯಕರು. 2021ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ತೊರೆದು ‘ಪಂಜಾಬ್ ಲೋಕ ಕಾಂಗ್ರೆಸ್’ ಪಕ್ಷ ಸ್ಥಾಪಿಸಿ 2022ರಲ್ಲಿ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದರು. ಕಾಂಗ್ರೆಸ್‌ನಲ್ಲಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿಯೊಂದಿಗೆ ಆಪ್ತವಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್‌ನಿಂದ ಹೊರಬಂದ ಬಳಿಕ ವೈಯಕ್ತಿಕವಾಗಿ ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ವಿರುದ್ಧ ಎಂದೂ ಟೀಕೆಗಳನ್ನು ಮಾಡಿದವರಲ್ಲ. ಆದರೆ, ಕಾಂಗ್ರೆಸ್ ನಾಯಕತ್ವದ ವಿರುದ್ಧ ಹಲವು ಬಾರಿ ಟೀಕೆ ಮಾಡಿದ್ದರು..




