ರಾಜಧಾನಿ ದೆಹಲಿಯ ಜಂತರ್ ಮಂತರ್ ಪ್ರದೇಶವನ್ನು ಪ್ರತಿಭಟನೆಗಳ ನಿಗದಿತ ಸ್ಥಳವಾಗಿ ಮುಂದುವರಿಸಬೇಕೇ ಅಥವಾ ಅದನ್ನು ಸಂಪೂರ್ಣವಾಗಿ ಮುಚ್ಚಬೇಕೇ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ನಗರದ ಮಧ್ಯಭಾಗದಲ್ಲಿ ನಡೆಯುವ ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿ “ಜಂತರ್ ಮಂತರ್ ಅನ್ನು ಪ್ರತಿಭಟನೆಗಳ ಸ್ಥಳವಾಗಿ ಏಕೆ ಮುಚ್ಚಬಾರದು?” ಎಂದು ಪ್ರಶ್ನಿಸಿದೆ.
ಆಲ್ ಇಂಡಿಯಾ ದಲಿತ ಕ್ರಿಶ್ಚಿಯನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಅಮಿತ್ ಮಹಾಜನ್ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತಿಭಟನೆ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಪೊಲೀಸರು ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದು, ಅದನ್ನು ತ್ವರಿತವಾಗಿ ಪರಿಗಣಿಸುವಂತೆ ಅರ್ಜಿದಾರರು ಕೋರಿದ್ದರು.
ಅರ್ಜಿದಾರರ ಪರ ಹಿರಿಯ ವಕೀಲ ಸಂಜಯ್ ಘೋಷ್ ವಾದ ಮಂಡಿಸಿ, “ನಮ್ಮ ಪ್ರತಿಭಟನೆಯಲ್ಲಿ ಗರಿಷ್ಠ 75 ಜನ ಮಾತ್ರ ಭಾಗವಹಿಸಲಿದ್ದಾರೆ. ಜುಲೈನಲ್ಲೇ ಅರ್ಜಿ ಸಲ್ಲಿಸಿದ್ದರೂ ಪೊಲೀಸರು ಅನುಮತಿ ನೀಡಿಲ್ಲ, ತಿರಸ್ಕರಿಸಿಯೂ ಇಲ್ಲ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ವೇಳೆ ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರನ್ನು ಉದ್ದೇಶಿಸಿ ನ್ಯಾಯಮೂರ್ತಿ ಮಹಾಜನ್, “ಜಂತರ್ ಮಂತರ್ ಅನ್ನು ಸಂಪೂರ್ಣವಾಗಿ ಮುಚ್ಚುವುದನ್ನು ಸರ್ಕಾರ ಏಕೆ ಪರಿಗಣಿಸುತ್ತಿಲ್ಲ? ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇಂತಹ ಪ್ರತಿಭಟನೆಗಳು ನಗರದ ಮಧ್ಯಭಾಗದಲ್ಲಿ ನಡೆಯಬಾರದು. ಪ್ರತಿಭಟನೆಗಳ ಹೆಸರಿನಲ್ಲಿ ಇಡೀ ನಗರವನ್ನು ಒತ್ತೆಯಾಳಾಗಿಸುವುದು ಸರಿಯಲ್ಲ” ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಚೇತನ್ ಶರ್ಮಾ, ಜಂತರ್ ಮಂತರ್ ಅನ್ನು ಪ್ರತಿಭಟನೆಗಳ ನಿಗದಿತ ಸ್ಥಳವಾಗಿ ಮುಂದುವರಿಸಬೇಕೇ ಎಂಬ ವಿಷಯ ಈಗಾಗಲೇ ಸುಪ್ರೀಂ ಕೋರ್ಟ್ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
ಇದಕ್ಕೆ ನ್ಯಾಯಮೂರ್ತಿ ಮಹಾಜನ್, “ನನ್ನ ಅಭಿಪ್ರಾಯದಲ್ಲಿ ಅಂತಹ ಸ್ಥಳ ನಗರದೊಳಗೆ ಇರಬಾರದು” ಎಂದು ಪುನರುಚ್ಚರಿಸಿದರು.
ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಘೋಷ್, “ಹಾಗಾದರೆ ದೆಹಲಿಯಲ್ಲಿ ಯಾವುದೇ ಶಾಂತಿಯುತ, ಪ್ರಜಾಪ್ರಭುತ್ವದ ಪ್ರತಿಭಟನೆಗೂ ಅವಕಾಶ ಇಲ್ಲ ಎಂಬುದೇ ಸರ್ಕಾರದ ನಿಲುವೇ?” ಎಂದು ಪ್ರಶ್ನಿಸಿದರು.
ಅದಕ್ಕೆ ನ್ಯಾಯಮೂರ್ತಿ, “ಅದು ಪೊಲೀಸರ ನಿರ್ಧಾರ. ನಗರದೊಳಗೆ ಪ್ರತಿಭಟನೆ ನಡೆಸಲು ಸಾಧ್ಯವಿಲ್ಲವೆಂದು ಅವರು ಭಾವಿಸಿದರೆ ಅದನ್ನು ಹೇಳಬಹುದು” ಎಂದರು.
ಇದಕ್ಕೆ ಪ್ರತಿಯಾಗಿ ಘೋಷ್, “ಹಾಗಿದ್ದರೆ ದೆಹಲಿಯಲ್ಲಿ ಯಾವುದೇ ಪ್ರಜಾಪ್ರಭುತ್ವದ, ಶಾಂತಿಯುತ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಲಿ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ” ಎಂದು ವಾದಿಸಿದರು.
ಈ ವೇಳೆ ನ್ಯಾಯಮೂರ್ತಿ ಮಹಾಜನ್, “ನಾನು ಪ್ರಜಾಪ್ರಭುತ್ವದ ಅಥವಾ ಅಪ್ರಜಾಪ್ರಭುತ್ವದ ಪ್ರತಿಭಟನೆಗಳ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಪ್ರತಿಭಟನೆಗಳಿಂದ ಇಡೀ ನಗರವನ್ನು ಒತ್ತೆಯಾಳಾಗಿಸುವುದು ಏಕೆ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮರ್ಯಾದೆಗೇಡು ಹತ್ಯೆ: ಗರ್ಭಿಣಿ ಪುತ್ರಿಯ ಕಾಲಿಗೆ ನಮಸ್ಕರಿಸಿ ನದಿಗೆ ತಳ್ಳಿದ ತಂದೆ
ಅರ್ಜಿದಾರರ ಪರ ವಕೀಲರು, ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕನ್ನು ಸುಪ್ರೀಂ ಕೋರ್ಟ್ ಶಾಹೀನ್ ಬಾಗ್ ಪ್ರಕರಣದ ತೀರ್ಪಿನಲ್ಲಿ ಮಾನ್ಯ ಮಾಡಿದೆ ಎಂದು ವಾದಿಸಿದರು. ಇದಕ್ಕೆ ನ್ಯಾಯಮೂರ್ತಿ, “ಹೌದು, ಆದರೆ ನಗರದ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತವಾಗುವಂತಾಗಬಾರದು” ಎಂದು ಹೇಳಿದರು.
ವಿಚಾರಣೆ ವೇಳೆ ಎಎಸ್‌ಜಿ ಚೇತನ್ ಶರ್ಮಾ, ಜಂತರ್ ಮಂತರ್ ಪ್ರದೇಶದಲ್ಲಿ ಪ್ರಸ್ತುತ ನಿಷೇಧಾಜ್ಞೆ (ಸೆಕ್ಷನ್ 144) ಜಾರಿಯಲ್ಲಿದ್ದು, ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಹೆಚ್ಚಿನ ನಿಯೋಜನೆಯಲ್ಲಿವೆ ಎಂದು ತಿಳಿಸಿದರು. “75 ಜನ ಎಂದು ಆರಂಭವಾಗುವ ಪ್ರತಿಭಟನೆ 75 ಸಾವಿರ ಜನರಾಗಿ ಬದಲಾಗಬಹುದು” ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.
ಕೊನೆಗೆ ನ್ಯಾಯಾಲಯ, ಆಲ್ ಇಂಡಿಯಾ ದಲಿತ ಕ್ರಿಶ್ಚಿಯನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿಯ ಪ್ರತಿಭಟನೆ ಅನುಮತಿ ಅರ್ಜಿಯನ್ನು ಆಗಸ್ಟ್ 8ರೊಳಗೆ ಪರಿಗಣಿಸಿ ತೀರ್ಮಾನ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿ ಅರ್ಜಿಯ ವಿಚಾರಣೆಯನ್ನು ಮುಕ್ತಾಯಗೊಳಿಸಿತು.




