ಲೋಕಸಭೆಯಲ್ಲಿ ನಡೆದ ‘ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯುವ ಮಸೂದೆ-2026’ (The Public Examinations Amendment Bill-2026) ಕುರಿತ ಚರ್ಚೆಯ ವೇಳೆ ಮೋದಿ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. “ರಾಮಮಂದಿರದ ದೇಣಿಗೆ ಹಣವನ್ನೇ ರಕ್ಷಿಸಲು ಸಾಧ್ಯವಾಗದವರು, ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯುವರೇ?” ಎಂದು ಲೇವಡಿ ಮಾಡಿದ್ದಾರೆ.
“ಇತ್ತೀಚೆಗೆ ಪರೀಕ್ಷಾ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಸರ್ಕಾರ ನಡೆಸಿದ ದೌರ್ಜನ್ಯವು ದೇಶದಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ದೌರ್ಜನ್ಯಕ್ಕಿಂತ ಕಡಿಮೆಯಿರಲಿಲ್ಲ. ಅಂದಿನ ತುರ್ತು ಪರಿಸ್ಥಿತಿಯ ಸಮಯದಲ್ಲಿ ಲಾಠಿಚಾರ್ಜ್ ಮಾತ್ರ ಮಾಡಲಾಗುತ್ತಿತ್ತು. ಆದರೆ, ಈ ಸರ್ಕಾರದಲ್ಲಿ ಪ್ರತಿಭಟನಾನಿರತ ಯುವಜನರಿಗೆ ಕರೆಂಟ್ ಶಾಕ್ ಕೂಡ ನೀಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ತುರ್ತು ಪರಿಸ್ಥಿತಿಯ ನಂತರ ಹೇಗೆ ಆಡಳಿತ ಬದಲಾಯಿತೋ, ಅದೇ ರೀತಿ ಈಗಲೂ ಸರ್ಕಾರ ಬದಲಾಗುವುದು ನಿಶ್ಚಿತ. ಯುವಜನರ ಬೃಹತ್ ಪ್ರತಿಭಟನೆಗೆ ಹೆದರಿ ಸರ್ಕಾರವು ಧರ್ಮೇಂದ್ರ ಪ್ರಧಾನ್ ಅವರಿಂದ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಂಡಿದೆ. ಪ್ರಧಾನಮಂತ್ರಿಯವರನ್ನು ರಕ್ಷಿಸಲು ಈ ತಂತ್ರ ಹೂಡಿದೆ” ಎಂದು ಅವರು ಟೀಕಿಸಿದ್ದಾರೆ.
“2024ರಲ್ಲೇ ಪರೀಕ್ಷಾ ಅಕ್ರಮ ತಡೆ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಸಹ ದೇಶದಲ್ಲಿ ಮತ್ತೆ ಮತ್ತೆ ಪ್ರಶ್ನೆಪತ್ರಿಕೆಗಳು ಏಕೆ ಸೋರಿಕೆಯಾಗುತ್ತಿವೆ. ಅಯೋಧ್ಯೆಯ ರಾಮಮಂದಿರದಲ್ಲಿ ಕಾಣಿಕೆ ಹಣದ ಕಳುವಾಗಿದೆ. ದೇವಸ್ಥಾನದ ಚಂದಾವನ್ನೇ ರಕ್ಷಿಸಲು ಸಾಧ್ಯವಾಗದವರು ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಹೇಗೆ ತಡೆಯುತ್ತಾರೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯನ್ನು (NTA) ಅನ್ನು ಹೊರಗುತ್ತಿಗೆ ಸಿಬ್ಬಂದಿಯಿಂದ ನಡೆಸಲಾಗುತ್ತಿದ್ದು, ಹೀಗೆಯೇ ಮುಂದುವರಿದರೆ ಇಡೀ ಸರ್ಕಾರವೇ ಹೊರಗುತ್ತಿಗೆಯಾಗುವ ಭೀತಿ ಇದೆ” ಎಂದು ಟೀಕಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಪ್ರತಿಭಟನಾಕಾರರ ಹಿನ್ನೆಲೆ ಕೆದಕುತ್ತಿರುವ ಪೊಲೀಸರು; ವಿದ್ಯಾರ್ಥಿಗಳನ್ನು’ಕ್ರಿಮಿನಲ್’ ಎಂದು ಬಿಂಬಿಸುತ್ತಿರುವ ಗೋದಿ ಮಾಧ್ಯಮಗಳು!
“ಉತ್ತರ ಪ್ರದೇಶ ಒಂದರಲ್ಲೇ 26,386 ಪ್ರಾಥಮಿಕ ಶಾಲೆಗಳು ಸೇರಿದಂತೆ ದೇಶಾದ್ಯಂತ 1 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳನ್ನು ಮುಚ್ಚಿರುವುದು ಬಡವರು ಮತ್ತು ದಲಿತರ ಮಕ್ಕಳು ಶಿಕ್ಷಣ ಪಡೆಯುವುದನ್ನು ತಡೆಯುವ ಸರ್ಕಾರದ ಹುನ್ನಾರವಾಗಿದೆ. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ತನಗಿಷ್ಟ ಬಂದಂತೆ ಬಳಸಿಕೊಳ್ಳುತ್ತಿದೆ” ಎಂದು ದೂರಿದ್ದಾರೆ.
“ಪರೀಕ್ಷಾ ಅಕ್ರಮ ಮತ್ತು ಶೈಕ್ಷಣಿಕ ಒತ್ತಡದಿಂದಾಗಿ ಆತ್ಮಹತ್ಯೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಸರ್ಕಾರವು ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
“ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿಯೂ ದೇಶದ ಯುವಜನರ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತಿರುವ ಸರ್ಕಾರದ ನೀತಿಗಳು, ಶೈಕ್ಷಣಿಕ ಅಕ್ರಮ ಹಾಗೂ ಆಡಳಿತಾತ್ಮಕ ವೈಫಲ್ಯಗಳನ್ನೇ ಪ್ರಮುಖ ವಿಷಯವನ್ನಾಗಿ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.



