ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಶೋಕ್ ಖಾರತ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನಾಸಿಕ್ ನ್ಯಾಯಾಲಯ ಆದೇಶಿಸಿದೆ.
ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ಮಿರ್ಗಾಂವ್‌ನಲ್ಲಿ ಆಶ್ರಮ ನಡೆಸುತ್ತಿರುವ ಅಶೋಕ್ ಖಾರತ್, ಮಹಿಳೆಯರ ಜೀವನವನ್ನು ಸುಧಾರಿಸುತ್ತೇನೆ, ಅವರ ವೈಯಕ್ತಿಕ ಮತ್ತು ವೃತ್ತಿಪರ ಸಮಸ್ಯೆಗಳನ್ನು ಮಾಟಮಂತ್ರದ ಮೂಲಕ ಪರಿಹರಿಸುತ್ತೇನೆಂದು ಪ್ರಚಾರ ಪಡೆದಿದ್ದ. ಅದೇ ನೆಪದಲ್ಲಿ 150ಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿದ್ದ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ, ಅಶೋಕ್ ಖಾರತ್‌ನನ್ನು ನಾಸಿಕ್ ಪೊಲೀಸರು ಬಂಧಿಸಿದ್ದರು. ಆತನನ್ನು ಏಪ್ರಿಲ್ 1ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇದೀಗ, ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರವು ಐಪಿಎಸ್ ಅಧಿಕಾರಿ ತೇಜಸ್ವಿ ಸಾತ್ಪುತೆ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
“ಅಶೋಕ್ ಖಾರತ್ ಅನೇಕ ಸಸ್ಯಾಹಾರಿ ಅನುಯಾಯಿಗಳಿಗೆ ಮೀನನ್ನು ಜಲಸಸ್ಯಗಳೆಂದು ನಂಬಿಸಿ ತಿನ್ನಿಸುತ್ತಿದ್ದನು. ಮೀನು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತದೆಯೆಂದು ಪ್ರತಿಪಾದಿಸುತ್ತಿದ್ದನು” ಎಂದು ತನಿಖೆಯ ಸಮಯದಲ್ಲಿ ಕಂಡುಬಂದಿರುವುದಾಗಿ ಎಸ್‌ಐಟಿ ತಿಳಿಸಿದೆ.
ಅಲ್ಲದೆ, ಅಶೋಕ್ ಖಾರತ್ ಮಹಿಳಾ ಅನುಯಾಯಿಗಳನ್ನು ಲೈಂಗಿಕವಾಗಿ ಶೋಷಿಸಿದ್ದಾನೆ. ಮಾತ್ರವಲ್ಲದೆ, ಅವರಿಗೆ ಮಾದಕ ಪಾನೀಯಗಳನ್ನು ನೀಡುವ ಮೂಲಕ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳಂತಹ ವಿಐಪಿ ವ್ಯಕ್ತಿಗಳೊಂದಿಗೆ ಮಲಗುವಂತೆ ಒತ್ತಾಯಿಸುತ್ತಿದ್ದನು” ಎಂದು ಎಸ್‌ಐಟಿ ತನಿಖೆಯಲ್ಲಿ ತಿಳಿದುಬಂದಿದೆ.
“ಖಾರತ್ ಅನೇಕ ರಾಜಕಾರಣಿಗಳು ಮತ್ತು ಹೈಪ್ರೊಫೈಲ್ ವ್ಯಕ್ತಿಗಳಿಗೆ ಬ್ಲ್ಯಾಕ್‌ಮೇಲ್ ಮಾಡಿ, ಭಾರಿ ಮೊತ್ತದ ಹಣ ಮತ್ತು ಎಸ್‌ಯುವಿ ಕಾರುಗಳನ್ನು ಪಡೆಯುತ್ತಿದ್ದನು. ಆತನ ಬೇಡಿಕೆಗಳು ಈಡೇರದಿದ್ದರೆ, ಈ ವಿಐಪಿಗಳ ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದನು. 35ಕ್ಕೂ ಹೆಚ್ಚು ಶಾಸಕರು ಮತ್ತು ಸಚಿವರು ಖಾರತ್‌ನ ಆಶ್ರಮಕ್ಕೆ ಆಗ್ಗಾಗ್ಗೆ ಭೇಟಿ ನೀಡುತ್ತಿದ್ದರು. ಪ್ರಮುಖ ನಿರ್ಧಾರಗಳಿಗಾಗಿ ಆತನ ಸಲಹೆಯನ್ನು ಪಡೆಯುತ್ತಿದ್ದರು” ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಲೇಖನ ಓದಿದ್ದೀರಾ?: ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಚೀನಾ – ಪಾಕಿಸ್ತಾನದ 5 ಅಂಶಗಳ ಮಹತ್ವದ ಪ್ರಸ್ತಾವನೆ
ಅಶೋಕ್ ಖಾರತ್‌ನ ಪತ್ನಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಮಗನನ್ನು ಬಂಧಿಸಿದ್ದಾರೆ. ಆತನ ಮಗಳ ವಿರುದ್ಧವೂ ತನಿಖೆ ಆರಂಭಿಸಿದ್ದಾರೆ.
ಖಾರತ್‌ನ ನಾಲ್ಕು ಮೊಬೈಲ್ ಫೋನ್‌ಗಳಿಂದ ಡೇಟಾವನ್ನು ಸಂಗ್ರಹಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ವಿಐಪಿ ವ್ಯಕ್ತಿಗಳ ಹೆಸರುಗಳನ್ನು ವಿವಿಧ ಹೆಸರುಗಳು ಮತ್ತು ಕೋಡ್‌ಗಳಲ್ಲಿ ಸೇವ್ ಮಾಡಲಾಗಿದೆ. ಇದು ಇತರ ಆರೋಪಿಗಳ ಗುರುತನ್ನು ಪತ್ತೆಹಚ್ಚಲು ಕಷ್ಟಕರವಾಗಿಸಿದೆ ಎಂದು ಮೂಲಗಳು ತಿಳಿಸಿವೆ.



