ಪ್ರಲ್ಹಾದ್ ಜೋಶಿ ಅವರಿಗೆ ಕೇಂದ್ರ ಸರ್ಕಾರದ ನೂತನ ಶಿಕ್ಷಣ ಸಚಿವ ಹುದ್ದೆ ನೀಡಿರುವುದರ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಪ್ರಲ್ಹಾದ್ ಜೋಶಿ ಅವರನ್ನು ‘ಅತ್ಯಾಚಾರಿಗಳ ರಕ್ಷಕ’ ಎಂದು ಬಣ್ಣಿಸಿದ್ದಾರೆ. “2002ರ ಗುಜರಾತ್ ಕೋಮು ಗಲಭೆಯ ಸಮಯದಲ್ಲಿ ಗರ್ಭಿಣಿ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಅವರ ಕುಟುಂಬದ ಸದಸ್ಯರನ್ನು ಹತ್ಯೆಗೈದ 11 ಅಪರಾಧಿಗಳ ಪರವಾಗಿ ಜೋಶಿ ಮಾತನಾಡಿದ್ದರು. ಅಂತಹವರಿಗೆ ಶಿಕ್ಷಣ ಸಚಿವ ಹುದ್ದೆ ನೀಡಲಾಗಿದೆ” ಎಂದು ಟೀಕಿಸಿದ್ದಾರೆ.
ಮಳೆಗಾಲದ ಅಧಿವೇಶನದಲ್ಲಿ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ-2026’ ಕುರಿತು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಮಾತನಾಡಿದರು. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ನೇರವಾಗಿ ಪ್ರಶ್ನಿಸಿದರು. “ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗಳ ಬಿಡುಗಡೆಗೆ ತಮ್ಮ ಸಮ್ಮತಿ ಮತ್ತು ಸಂತಸವನ್ನು ವ್ಯಕ್ತಪಡಿಸಿದ್ದ ವ್ಯಕ್ತಿಯನ್ನು ದೇಶದ ಶಿಕ್ಷಣ ಸಚಿವರನ್ನಾಗಿ ಮಾಡುವ ಮೂಲಕ ಪ್ರಧಾನಿಯವರು ದೇಶದ ಕೋಟ್ಯಂತರ ಮಹಿಳೆಯರಿಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ” ಎಂದು ಪ್ರಿಯಾಂಕಾ ಗಾಂಧಿ ಕಟುವಾಗಿ ಕೇಳಿದರು.
ಅಂದಹಾಗೆ, 2022ರ ಆಗಸ್ಟ್ 15ರಂದು ಗುಜರಾತ್‌ನ ಬಿಜೆಪಿ ಸರ್ಕಾರವು ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿತ್ತು. ಆ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದ ಪ್ರಲ್ಹಾದ್ ಜೋಶಿ, “ಜೈಲಿನಲ್ಲಿ ಕೆಲ ಕಾಲ ಶಿಕ್ಷೆ ಅನುಭವಿಸಿದ ನಂತರ ಕಾನೂನಿನಲ್ಲಿ ಬಿಡುಗಡೆಗೆ ಅವಕಾಶವಿದೆ. ಅದರಂತೆಯೇ ಪ್ರಕ್ರಿಯೆ ನಡೆದಿದೆ. ಸರ್ಕಾರದ ಈ ನಿರ್ಧಾರದಲ್ಲಿ ಯಾವುದೇ ತಪ್ಪ ಕಂಡುಬರುತ್ತಿಲ್ಲ. ಇದು ಕಾನೂನುಬದ್ಧವಾಗಿ ನಡೆದ ಪ್ರಕ್ರಿಯೆಯಾಗಿದೆ” ಎಂದು ಹೇಳುವ ಮೂಲಕ ಅಪರಾಧಿಗಳ ಬಿಡುಗಡೆಗೆ ತಮ್ಮ ಬೆಂಬಲ ಮತ್ತು ಸಂತಸದ ಸಮ್ಮತಿಯನ್ನು ವ್ಯಕ್ತಪಡಿಸಿದ್ದರು.
Here’s Prahlad Joshi Jis video defending the decision of Bilkis Bano’s rapists being released. Whats BJP so upset about? pic.twitter.com/y9MAxbf4Fs
— Priyanka Chaturvedi🇮🇳 (@priyankac19) July 28, 2026
ಅವರ ಈ ಹೇಳಿಕೆಗಳನ್ನು ಲೋಕಸಭೆಯಲ್ಲಿ ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿ ಅವರು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆದಾಗ್ಯೂ, ಪ್ರಿಯಾಂಕಾ ಗಾಂಧಿ ಅವರ ವಾಗ್ದಾಳಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ಸ್ವತಃ ಎದ್ದು ನಿಂತ ಪ್ರಲ್ಹಾದ್ ಜೋಶಿ, ತಮ್ಮ ವಿರುದ್ಧ ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂದು ದೂರಿದರು. ಅವರಿಗೆ ಬೆಂಬಲವಾಗಿ ನಿಂತ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಪ್ರಿಯಾಂಕಾ ಅವರ ಹೇಳಿಕೆಯು ಸಚಿವರ ‘ಚಾರಿತ್ರ್ಯ ವಧೆ’ಗೆ ಯತ್ನ ಎಂದರು. ಆದಾಗ್ಯೂ, ತಮ್ಮ ಮಾತನ್ನು ಹಿಂಪಡೆಯಲು ಪ್ರಿಯಾಂಕಾ ನಿರಾಕರಿಸಿದರು.
ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಇತ್ತೀಚೆಗೆ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವತಿಯರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ ಬೆನ್ನಲ್ಲೇ, ‘ಅತ್ಯಾಚಾರಗಳ ರಕ್ಷಕ’ನಂತಿರುವ ವ್ಯಕ್ತಿಯನ್ನು ಶಿಕ್ಷಣ ಸಚಿವರನ್ನಾಗಿ ಪ್ರಧಾನಿ ಮೋದಿ ನೇಮಿಸಿದ್ದಾರೆ. ಅತ್ಯಾಚಾರಿಗಳಿಗೆ ರಕ್ಷಣೆ ನೀಡಬೇಕು ಎಂದು ಹೇಳುವ ವ್ಯಕ್ತಿಗಿಂತ ಹೀನಾಯ ವ್ಯಕ್ತಿ ಬೇರೊಬ್ಬರಿರಲು ಸಾಧ್ಯವಿಲ್ಲ, ಅಂತಹ ವ್ಯಕ್ತಿಯನ್ನು ದೇಶದ ಶಿಕ್ಷಣ ವ್ಯವಸ್ಥೆಯ ಮುಖ್ಯಸ್ಥರನ್ನಾಗಿ ಮಾಡಿರುವುದು ದುರದೃಷ್ಟಕರ” ಎಂದು ವಾಗ್ದಾಳಿ ನಡೆಸಿದರು.
ಅಂದಹಾಗೆ, 2022ರಲ್ಲಿ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗುಜರಾತ್ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿತ್ತಾದರೂ, ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್ ಬಾನೋ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು ಸರ್ಕಾರದ ಧೋರಣೆಯನ್ನು ಟೀಕಿಸಿ, ನಿರ್ಧಾರವನ್ನು ರದ್ದುಗೊಳಿಸಿತ್ತು. ಅಪರಾಧಿಗಳನ್ನು ಮರಳಿ ಜೈಲಿಗಟ್ಟುವಂತೆ ನಿರ್ದೇಶನ ನೀಡಿತ್ತು. ಅದರಂತೆ, ಅಪರಾಧಿಗಳನ್ನು ಜೈಲಿಗೆ ಕಳಿಸಲಾಗಿದೆ.



