ತೊಗರಿ ನೆಟೆ ರೋಗವು ಶಿಲೀಂಧ್ರಗಳಿಂದ ಬರುವ ಒಂದು ಮಾರಕ ರೋಗವಾಗಿದ್ದು, ಗಿಡಗಳು ಹಠಾತ್ತಾಗಿ ಒಣಗುವುದು, ಬೇರುಗಳು ಕೊಳೆಯುವುದು ಮತ್ತು ಎಲೆಗಳು ಬಾಡುವುದು ಇದರ ಮುಖ್ಯ ಲಕ್ಷಣಗಳಾಗಿವೆ. ಅತಿಮಳೆ ಅಥವಾ ತೇವಾಂಶದ ಕೊರತೆಯಿಂದ ಈ ಸಮಸ್ಯೆ ಹೆಚ್ಚಾಗುತ್ತದೆ ಎಂದು ಬಾಗಲಕೋಟೆ ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ತಿಳಿಸಿದ್ದಾರೆ.
ರೋಗದ ಲಕ್ಷಣಗಳು: ಗಿಡಗಳು ಹಸಿರಾಗಿರುವಾಗಲೇ ದಿಢೀರ್ ಎಂದು ಒಣಗಿಹೋಗುತ್ತವೆ. ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಬಾಡುತ್ತವೆ. ಕಾಂಡದ ಬುಡ ಮತ್ತು ಬೇರುಗಳನ್ನು ಸೀಳಿ ನೋಡಿದರೆ ಕಂದು ಅಥವಾ ಕಪ್ಪು ಬಣ್ಣದ ತಿರುಳು ಕಾಣಿಸುತ್ತದೆ.
ನಿರ್ವಹಣಾ ಕ್ರಮಗಳು: ರೋಗಬಾಧಿತ ಗಿಡಗಳನ್ನು ಕೂಡಲೇ ಕಿತ್ತು ಹೊಲದಿಂದ ಹೊರಗೆ ತಂದು ನಾಶಪಡಿಸಬೇಕು. ಹೊಲದಲ್ಲಿ ನೀರು ನಿಲ್ಲದಂತೆ ಉತ್ತಮ ಒಳ ಕಾಲುವೆ ವ್ಯವಸ್ಥೆ ಮಾಡಬೇಕು. ಬಿತ್ತನೆಗೂ ಮುನ್ನ ಬೀಜವನ್ನು ಕಾರ್ಬಾಕ್ಸಿನ್ ಶೇ. 37.5 + ಥೈರಮ್ ಶೇ. 37.5 ಅನ್ನು 3 ಗ್ರಾಂ/ಕೆಜಿ ಬೀಜ ದರದಲ್ಲಿ ಬಳಸಿ ಬೀಜೋಪಚಾರ ಮಾಡಬೇಕು. ಟ್ರೈಕೋಡರ್ಮಾ ವಿರಿಡೆ ಅಥವಾ ಟಿ. ಹಾರ್ಜಿಯಾನಮ್ ಅನ್ನು 10 ಗ್ರಾಂ/ಕೆಜಿ ಬೀಜ ಬಳಸಿ ಜೈವಿಕ ಬೀಜೋಪಚಾರ ಮಾಡುವುದು ಉತ್ತಮ. ನಿಂತ ಬೆಳೆಯಲ್ಲಿ ರೋಗ ಕಂಡುಬಂದಲ್ಲಿ ಕಾರ್ಬೆಂಡಜಿಮ್ ಶೇ. 12 + ಮ್ಯಾಂಕೋಜೆಬ್ ಶೇ. 63 ಡಬ್ಲ್ಯೂಪಿ ಅನ್ನು 3 ಗ್ರಾಂ/ಲೀಟರ್ ನೀರು ದರದಲ್ಲಿ ಗಿಡದ ಬುಡಕ್ಕೆ ದ್ರಾವಣವನ್ನು ನೆನೆಸುವಂತೆ ಹಾಕಬೇಕು. ಮುಂದಿನ ಹಂಗಾಮಿನಲ್ಲಿ ಬೆಳೆ ಪರಿವರ್ತನೆ ಅನುಸರಿಸುವುದು ಹಾಗೂ ರೋಗನಿರೋಧಕ ತಳಿಗಳನ್ನು ಬೆಳೆಯುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.




