ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆಯ ತಯಾರಿ ನಡೆಯುತ್ತಿದೆ. ಈ ನಡುವೆ ಹವಾಮಾನ ತೀವ್ರ ಏರಿಳಿತ ಕಾಣುತ್ತಿದೆ. ಒಮ್ಮೆ ತಾಪಮಾನ ಏರಿಕೆ, ಮತ್ತೊಮ್ಮೆ ದಿಢೀರ್ ಮಳೆಯಾಗುತ್ತಿದೆ. ಈ ಹವಾಮಾನ ವೈಪರೀತ್ಯವು ಕೋಟ್ಯಂತರ ಮತದಾರರು ಮತ್ತು ಲಕ್ಷಾಂತರ ಚುನಾವಣಾ ಕರ್ತವ್ಯನಿರತ ಅಧಿಕಾರಿಗಳಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ ಎಂದು ತಜ್ಞರುಗಳು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ, ಸುಮಾರು 17.5 ಕೋಟಿ ಮತದಾರರು 824 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಚುನಾವಣೆಗೂ ಮುನ್ನ ಹವಾಮಾನ ಇಲಾಖೆಯು ಈ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಹವಾಮಾನ ಪರಿಸ್ಥಿತಿ ಬಗ್ಗೆ ಮೌಲ್ಯಮಾಪನ ಮಾಡಿದೆ.
ಇದನ್ನು ಓದಿದ್ದೀರಾ? ಕರ್ನಾಟಕದ 20 ಜಿಲ್ಲೆಗಳಲ್ಲಿ ಇನ್ನೂ 5 ದಿನ ಭಾರೀ ಮಳೆ: ಹವಾಮಾನ ಇಲಾಖೆ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೊರಡಿಸಿದ ಮುನ್ಸೂಚನೆ ಪ್ರಕಾರ, ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಹೀಟ್ ವೇವ್ (ಬಿಸಿ ಗಾಳಿ)ಯ ಅಪಾಯ ಹೆಚ್ಚಾಗಿದೆ. ಅಸ್ಸಾಂನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇವೆರಡೂ ಅಪಾಯಕಾರಿ ಎಂದು ಹೇಳಿದೆ.
ಆದರೆ ಚುನಾವಣಾ ಆಯೋಗವು ಚುನಾವಣೆಯ ದಿನಾಂಕಗಳನ್ನು ನಿರ್ಧರಿಸುವಾಗ ಹವಾಮಾನ ಬದಲಾವಣೆಯ ಸವಾಲುಗಳ ಬಗ್ಗೆಯೂ ಚಿಂತನೆ ನಡೆಸುತ್ತದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ ಪಿ ರಾವತ್ ಹೇಳಿದ್ದಾರೆ.
“ನಾವು ಈಗ ಚುನಾವಣೆಗಳು ಹವಾಮಾನ ಬದಲಾವಣೆಗೆ ಹೇಗೆ ಕೊಡುಗೆ ನೀಡುತ್ತಿವೆ ಎಂಬುದರ ಮೇಲೆ ಗಮನಹರಿಸಬೇಕು. ಸಾರ್ವಜನಿಕ ಸಭೆಗಳಲ್ಲಿ ಫ್ಲೆಕ್ಸ್‌ಗಳು ಮತ್ತು ಪ್ಲಾಸ್ಟಿಕ್ ವಸ್ತುಗಳ ದೊಡ್ಡ ಬಳಕೆಯಾಗುತ್ತದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಸಾಕಷ್ಟು ಇಂಧನ ಬಳಕೆಯೂ ಆಗುತ್ತದೆ. ಇವೆಲ್ಲವೂ ಹವಾಮಾನದ ಮೇಲೆ ಪ್ರಭಾವ ಬೀರುತ್ತದೆ. ಇವುಗಳನ್ನು ನಿಗ್ರಹಿಸಬೇಕಾಗಿದೆ” ಎಂದು ಹೇಳಿದ್ದಾರೆ.




