ರಷ್ಯಾ-ಉಕ್ರೇನ್ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ, ನಾಪತ್ತೆಯಾದ ಹಾಗೂ ಗಾಯಗೊಂಡಿರುವ ಭಾರತೀಯರ ಕುಟುಂಬಗಳಿಗೆ ನೆರವಾಗಲು ಮತ್ತು ಅವರೊಂದಿಗೆ ಸಮನ್ವಯ ಸಾಧಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (MEA) ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ಯುದ್ಧಭೂಮಿಯಲ್ಲಿ ಮೃತಪಟ್ಟಿರುವ ಭಾರತೀಯರ ಪಾರ್ಥಿವ ಶರೀರಗಳನ್ನು ತಾಯ್ನಾಡಿಗೆ ತರಲು ಅನುಕೂಲವಾಗುವಂತೆ, ಮೃತರ ಕುಟುಂಬದ ಸದಸ್ಯರೊಂದಿಗೆ ಡಿಎನ್‌ಎ ಹೊಂದಾಣಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸುವಂತೆಯೂ ವಿದೇಶಾಂಗ ಸಚಿವಾಲಯಕ್ಕೆ ನ್ಯಾಯಪೀಠವು ಸೂಚಿಸಿದೆ.
ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರ್ಟ್ ಸೂಚಿಸಿದೆ. ನವದೆಹಲಿಯಲ್ಲಿರುವ ರಷ್ಯಾ ರಾಯಭಾರ ಕಚೇರಿಯ ಮುಂದೆ ಪರಿಹಾರದ ಕ್ಲೇಮುಗಳನ್ನು ಸಲ್ಲಿಸಲು ಸಂತ್ರಸ್ತ ಕುಟುಂಬಗಳಿಗೆ ವಿದೇಶಾಂಗ ಸಚಿವಾಲಯವು ಸೂಕ್ತ ಮಾರ್ಗದರ್ಶನ ಹಾಗೂ ನೆರವು ನೀಡಬೇಕು. ಅಲ್ಲದೆ, ಈ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ಮಾಹಿತಿಗಳು ಮತ್ತು ಅಪ್‌ಡೇಟ್‌ಗಳನ್ನು ಆಯಾ ಕುಟುಂಬಗಳ ಪ್ರಾದೇಶಿಕ ಭಾಷೆಗಳಲ್ಲೇ ಒದಗಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಮೃತರ ಪಾರ್ಥಿವ ಶರೀರಗಳನ್ನು ಪಡೆಯಲು ಹಾಗೂ ಪರಿಹಾರ ಕ್ಲೇಮುಗಳನ್ನು ಮುಂದುವರಿಸಲು ಸಂತ್ರಸ್ತರಿಗೆ ಕಾನೂನಾತ್ಮಕ ಬೆಂಬಲದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಕಾನೂನು ನೆರವು ಮತ್ತು ಮಾರ್ಗದರ್ಶನ ಒದಗಿಸುವಂತೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳಿಗೂ ಸುಪ್ರೀಂ ಕೋರ್ಟ್ ಇದೇ ವೇಳೆ ನಿರ್ದೇಶನ ನೀಡಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಹೋರಾಡಲು ನೇಮಕಗೊಂಡು, ಬಳಿಕ ಪ್ರಾಣ ಕಳೆದುಕೊಂಡ ಅಥವಾ ನಾಪತ್ತೆಯಾದ ಯುವಕರ ಕುಟುಂಬದ ಸದಸ್ಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸಂಕಷ್ಟದಲ್ಲಿರುವ ತಮ್ಮವರನ್ನು ಮರಳಿ ತರಲು ಹಾಗೂ ಸೂಕ್ತ ಪರಿಹಾರ ಒದಗಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಈ ಮೇಲಿನ ಆದೇಶಗಳನ್ನು ಹೊರಡಿಸಿದೆ.




