ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ಬಳಿಕ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಗುರಿಯಾಗಿಸಿಕೊಂಡು ಅವಾಚ್ಯ ಹೇಳಿಕೆ ನೀಡಿದ ಸಚಿವ ಕುನ್ವರ್ ವಿಜಯ್ ಶಾ ವಿರುದ್ಧ ಈವರೆಗೂ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದರ ವಿಚಾರದಲ್ಲಿ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಸಚಿವರ ವಿರುದ್ಧ ಕ್ರಮಕ್ಕೆ ಇಷ್ಟೊಂದು ವಿಳಂಬ ಮಾಡುತ್ತಿರುವುದರ ವಿಚಾರದಲ್ಲಿ ಮಧ್ಯಪ್ರದೇಶ ಸರ್ಕಾರಕ್ಕೆ “ಇದು ಮಿತಿ ಮೀರಿದೆ” ಎಂದು ಹೇಳಿರುವ ಸುಪ್ರೀಂ ಕೋರ್ಟ್ ಸಚಿವ ವಿಜಯ್ ಶಾ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವ ಬಗ್ಗೆ ನಾಲ್ಕು ವಾರಗಳಲ್ಲಿ ನಿರ್ಧರಿಸಲು ನಿರ್ದೇಶಿಸಿದೆ.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ | ಮಹಿಳಾ ಅಧಿಕಾರಿಗಳಾದ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಯಾರು?
ಜನವರಿ 19ರಂದು ಕೋರ್ಟ್ ರಾಜ್ಯ ಸರ್ಕಾರಕ್ಕೆ ಪ್ರಾಸಿಕ್ಯೂಷನ್ ಅನುಮತಿ ನೀಡುವ ಬಗ್ಗೆ ಎರಡು ವಾರಗಳಲ್ಲಿ ನಿರ್ಧರಿಸಲು ಸೂಚಿಸಿತ್ತು. ಆದರೆ ರಾಜ್ಯ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ವಿಚಾರದಲ್ಲಿ ಮಧ್ಯಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ವಿಚಾರಣೆಯ ಸಮಯದಲ್ಲಿ, ರಾಜ್ಯದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಸಚಿವ ವಿಜಯ್ ಶಾ ದುರದೃಷ್ಟಕರ ಹೇಳಿಕೆಗಳನ್ನು ನೀಡಿದ್ದಾರೆ. ನಂತರ ಕ್ಷಮೆಯಾಚಿಸಿದ್ದಾರೆ” ಎಂದು ಹೇಳಿದರು. “ಆದರೆ ಇದು ಬಾಯಿ ತಪ್ಪಿ ಹೇಳಿದ ಮಾತಾಗಿದ್ದರೆ ವಿಜಯ್ ಶಾ ಕೂಡಲೇ ಕ್ಷಮೆಯಾಚಿಸಬೇಕಾಗಿತ್ತು” ಎಂದು ಸಿಜೆಐ ಹೇಳಿದ್ದಾರೆ.
ಮಧ್ಯಪ್ರದೇಶದ ಸಚಿವ ಕುನ್ವರ್ ವಿಜಯ್ ಶಾ ಅವರು ಸೇನಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಗಳು ದೊಡ್ಡ ವಿವಾದಕ್ಕೆ ಕಾರಣವಾಗಿವೆ. ಈ ಹೇಳಿಕೆ ನೀಡಿ ಒಂದು ವರ್ಷಗಳಾಗಿವೆ. 2025ರ ಮೇ ತಿಂಗಳಲ್ಲಿ ಮೌ (Mau) ಎಂಬಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಜಯ್ ಶಾ ‘ಆಪರೇಷನ್ ಸಿಂಧೂರ’ ಸಮಯದಲ್ಲಿ ಮಾಧ್ಯಮಗಳಿಗೆ ಬ್ರೀಫಿಂಗ್ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉದ್ದೇಶಿಸಿ ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು.
ಮುಸ್ಲಿಂ ಸಮುದಾಯದ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉಲ್ಲೇಖಿಸಿ, ಸಚಿವ ವಿಜಯ್ ಶಾ, “ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದವರಿಗೆ, ಅವರದ್ದೇ ಸಹೋದರಿಯನ್ನು ಕಳುಹಿಸಿ ಪಾಠ ಕಲಿಸಿದ್ದೇವೆ” ಎಂದು ಹೇಳಿದ್ದರು. ಅಂದರೆ ಪರೋಕ್ಷವಾಗಿ ಕರ್ನಲ್ ಖುರೇಷಿ ಅವರ ಧರ್ಮವನ್ನು ಉಲ್ಲೇಖಿಸಿ ಅವರು ‘ಉಗ್ರರ ಸಹೋದರಿ’ ಎಂದು ಸಚಿವರು ಹೇಳಿದ್ದರು. ಕೋರ್ಟ್ ಆದೇಶದ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಆದರೆ ಈ ಹೇಳಿಕೆ ನೀಡಿ ಒಂದು ವರ್ಷಗಳಾಗಿದ್ದರೂ ಇಂದಿಗೂ ಕ್ರಮಕೈಗೊಂಡಿಲ್ಲ.




