ದೇಶದ ಜನತೆಗೆ ಮೇ ತಿಂಗಳ ಮೊದಲ ದಿನವೇ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ನಡೆದ ಭಾರೀ ಏರಿಕೆ ವ್ಯಾಪಾರ ವಲಯವನ್ನು ಬೆಚ್ಚಿಬೀಳಿಸಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಏಕಾಏಕಿ 993 ರೂಪಾಯಿಗಳಷ್ಟು ಹೆಚ್ಚಿಸಲಾಗಿದ್ದು, ಈವರೆಗೆ ಸುಮಾರು ₹2,162 ಇದ್ದ ಸಿಲಿಂಡರ್ ದರ ಈಗ ₹3,153ರಿಂದ ₹3,154 ಗಡಿ ದಾಟಿದೆ. ಬೆಂಗಳೂರಿನಲ್ಲಿ ಹೊಸ ದರ ₹3,154 ತಲುಪಿರುವುದು ವ್ಯಾಪಾರ ವಲಯಕ್ಕೆ ದೊಡ್ಡ ಆಘಾತವಾಗಿದೆ.
ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರ ₹3071.50 ತಲುಪಿದ್ದು, ದೇಶದ ವಿವಿಧ ನಗರಗಳಲ್ಲೂ ದರ ಏರಿಕೆಯ ಪರಿಣಾಮ ಗೋಚರಿಸುತ್ತಿದೆ. ಅದೇ ವೇಳೆ 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ(ಎಫ್‌ಟಿಎಲ್) ಸಿಲಿಂಡರ್ ದರದಲ್ಲೂ ₹261 ಏರಿಕೆ ಮಾಡಲಾಗಿದೆ. ಆದರೆ ಗೃಹಬಳಕೆಯ 14.2 ಕೆಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಬೆಂಗಳೂರಿನಲ್ಲಿ ₹915 ದರವನ್ನು ಮುಂದುವರಿಸಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಂಡಿರುವ ಯುದ್ಧ ಪರಿಸ್ಥಿತಿ ಮತ್ತು ಜಾಗತಿಕ ಇಂಧನ ಮಾರುಕಟ್ಟೆಯ ಅಸ್ಥಿರತೆ ಈ ಭಾರೀ ದರ ಏರಿಕೆಗೆ ಪ್ರಮುಖ ಕಾರಣವೆಂದು ತೈಲ ವಲಯದ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಜಾಗತಿಕ ಕಚ್ಚಾ ತೈಲ ಪೂರೈಕೆ ವ್ಯವಸ್ಥೆಯ ಪ್ರಮುಖ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ ಭಾಗದಲ್ಲಿ ಉಂಟಾದ ಉದ್ವಿಗ್ನತೆಯಿಂದ ತೈಲ ಸಾಗಾಟದಲ್ಲಿ ವ್ಯತ್ಯಯ ಉಂಟಾಗಿದೆ. ಪರಿಣಾಮವಾಗಿ ಜಾಗತಿಕ ತೈಲ ದರ ಶೇ.50ರಷ್ಟು ಏರಿಕೆಯಾಗಿದೆ ಎನ್ನಲಾಗುತ್ತಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಗಳು ಪ್ರತಿ ತಿಂಗಳ ಮೊದಲ ದಿನ ಮಾಡುವ ದರ ಪರಿಷ್ಕರಣೆಯಲ್ಲಿ ವಾಣಿಜ್ಯ ಸಿಲಿಂಡರ್ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲು ಮುಂದಾಗಿವೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ದರ ಏರಿಕೆಯ ಪರಿಣಾಮ ತೀವ್ರವಾಗಿ ಕಾಣಿಸಿಕೊಂಡಿದೆ. ಕರಾವಳಿ ಭಾಗದಲ್ಲಿ ಹೋಟೆಲ್, ರೆಸ್ಟ್ರಂಟ್, ಬೇಕರಿ, ಚಹಾ ಅಂಗಡಿ, ಕ್ಯಾಟರಿಂಗ್, ಮಿಠಾಯಿ ತಯಾರಿಕಾ ಘಟಕಗಳು ಸೇರಿದಂತೆ ಸಾವಿರಾರು ಸಣ್ಣ ವ್ಯಾಪಾರಿಗಳು ವಾಣಿಜ್ಯ ಸಿಲಿಂಡರ್‌ಗಳ ಮೇಲೆಯೇ ಅವಲಂಬಿತರಾಗಿದ್ದಾರೆ.

ಒಂದು ಹೋಟೆಲ್‌ಗೆ ತಿಂಗಳಿಗೆ ಸರಾಸರಿ 10ರಿಂದ 25 ಸಿಲಿಂಡರ್‌ಗಳವರೆಗೆ ಅಗತ್ಯವಿರುವ ಹಿನ್ನೆಲೆಯಲ್ಲಿ ದರ ಏರಿಕೆ ನೇರವಾಗಿ ಉದ್ಯಮದ ಲಾಭಾಂಶಕ್ಕೆ ಹೊಡೆತ ನೀಡಲಿದೆ. ಈಗಾಗಲೇ ತರಕಾರಿ, ಎಣ್ಣೆ, ಹಾಲು ಮತ್ತು ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿದ್ದ ವ್ಯಾಪಾರಿಗಳಿಗೆ ಈ ನಿರ್ಧಾರ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಈ ದಿನ.ಕಾಮ್ ಜತೆಗೆ ಮಾತನಾಡಿದ ಹೋಟೆಲ್ ಮಾಲೀಕ ಸುದರ್ಶನ್, “ಈ ದರ ಏರಿಕೆಯನ್ನು ತಡೆದುಕೊಳ್ಳುವುದು ಅಸಾಧ್ಯ. ಅನಿವಾರ್ಯವಾಗಿ ಊಟ-ತಿನಿಸುಗಳ ದರ ಹೆಚ್ಚಿಸಬೇಕಾದ ಪರಿಸ್ಥಿತಿ ಬರುತ್ತಿದೆ” ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರು ಹೊರಗೆ ಊಟ ಮಾಡುವ ಖರ್ಚು ಕೂಡ ಹೆಚ್ಚುವ ಸಾಧ್ಯತೆ ಇದೆ.
ವಾಣಿಜ್ಯ ಸಿಲಿಂಡರ್ ದರ ಏರಿಕೆಯನ್ನು ಖಂಡಿಸಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಂಗ್ರೆಸ್, ಯುವ ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಉಡುಪಿ, ಕಾರ್ಕಳ, ಮಂಗಳೂರು, ಬಂಟ್ವಾಳ ಸೇರಿದಂತೆ ಹಲವೆಡೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಈಗಾಗಲೇ ಪ್ರತಿಭಟನೆ ನಡೆಸಲಾಗಿದೆ. “ಅಚ್ಚೇ ದಿನ್ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರಿಗೆ ಬೆಲೆ ಏರಿಕೆಯ ಹೊರೆ ಮಾತ್ರ ನೀಡುತ್ತಿದೆ” ಎಂದು ಆರೋಪಿಸಿದ್ದಾರೆ. ʼನಾರೀ ಶಕ್ತಿʼ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ ಅಡುಗೆ ಅನಿಲದ ದರ ನಿಯಂತ್ರಣದಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಈ ದಿನ.ಕಾಮ್ ಜತೆ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಅವರು, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏಕಾಏಕಿ ₹993ಕ್ಕೆ ಏರಿಕೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು. ಇತಿಹಾಸದಲ್ಲಿಯೇ ಇದು ಅತಿ ದೊಡ್ಡಮಟ್ಟದ ಬೆಲೆ ಏರಿಕೆಯಾಗಿದ್ದು, ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕು ಎಂದು ಹೇಳಿದರು.
“ಐದು ರಾಜ್ಯಗಳ ಚುನಾವಣೆಯ ಮತದಾನ ಮುಗಿದ ತಕ್ಷಣವೇ ಈ ರೀತಿಯಾಗಿ ಬೆಲೆ ಏರಿಕೆ ಮಾಡಿರುವುದು ಜನರಿಗೆ ದೊಡ್ಡ ಹೊರೆ ತಂದಿದೆ. ಗ್ಯಾಸ್ ದರ ಏರಿಕೆಯಿಂದ ಕೇವಲ ಹೋಟೆಲ್ ಉದ್ಯಮ ಮಾತ್ರವಲ್ಲ, ಅದನ್ನು ಅವಲಂಬಿಸಿರುವ ಸಾವಿರಾರು ಕಾರ್ಮಿಕರ ಜೀವನಕ್ಕೂ ಸಂಕಷ್ಟ ಎದುರಾಗಿದೆ. ಅನೇಕ ಹೋಟೆಲ್‌ಗಳು ಬಂದ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾಳಸಂತೆಯಲ್ಲೂ ಗ್ಯಾಸ್ ಸಿಲಿಂಡರ್‌ಗಳು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿವೆ” ಎಂದು ಆರೋಪಿಸಿದರು.
“ಒಮ್ಮೆಯೇ ದರ ಹೆಚ್ಚಳವಾದ ಕಾರಣ ಹೋಟೆಲ್ ಉದ್ಯಮಿಗಳು ಮೂರು ಸಾವಿರ ರೂಪಾಯಿಗೂ ಅಧಿಕ ಹಣ ನೀಡಿ ಸಿಲಿಂಡರ್ ಖರೀದಿಸುವಂತಾಗಿದೆ. ಇದಲ್ಲದೆ ಗ್ಯಾಸ್ ಸರಬರಾಜಿನಲ್ಲಿಯೂ ಕೊರತೆ ಉಂಟಾಗಿದೆ ಎಂದು ದೂರಿದರು. ಕೆಲವು ದಿನಗಳ ಹಿಂದೆ ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನೂ ₹115 ಏರಿಸಲಾಗಿತ್ತು. ಯುದ್ಧದ ಹೆಸರನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನೇರವಾಗಿ ಅಡುಗೆ ಮನೆಗೆ ಕನ್ನ ಹಾಕುವ ಕೆಲಸ ಮಾಡುತ್ತಿದೆ” ಎಂದು ಟೀಕಿಸಿದರು.
“ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಯನ್ನು ಮುಂದುವರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪುನಃ ವಿನಂತಿ ಮಾಡುತ್ತೇವೆ. ಅಮೆರಿಕದ ಒತ್ತಡಕ್ಕೆ ಮಣಿದು ಅದರ ಹೇಳಿಕೆಯಂತೆ ಭಾರತ ನಡೆದುಕೊಳ್ಳಬಾರದು. ವಿಶ್ವದಲ್ಲೇ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಭಾರತ ದೇಶದ ಜನರ ಬದುಕು ಮತ್ತು ಆರ್ಥಿಕತೆ ಮುಖ್ಯವಾಗಬೇಕು” ಎಂದು ಹೇಳಿದರು.
“ನಾರೀ ಶಕ್ತಿ ಎಂಬ ಘೋಷಣೆಗಳನ್ನು ಮಾಡುವುದಕ್ಕಿಂತ ಅಡುಗೆ ಮನೆಯಲ್ಲಿರುವ ಮಹಿಳೆಯರ ಕಣ್ಣೀರನ್ನು ಒರೆಸುವ ಕೆಲಸ ಸರ್ಕಾರ ಮಾಡಬೇಕು. ಮಹಿಳೆಯರ ಪರ ಮಾತನಾಡುವುದಷ್ಟೇ ಸಾಕಾಗುವುದಿಲ್ಲ, ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಇಂದು ಕೇಂದ್ರ ಸರ್ಕಾರ ಐಟಿ, ಇಡಿ ಹಾಗೂ ಚುನಾವಣಾ ಆಯೋಗ ಸೇರಿದಂತೆ ವಿವಿಧ ಸಂಸ್ಥೆಗಳನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದೆ. ಈ ಬೆಲೆ ಏರಿಕೆಯ ಮೂಲಕ ಪ್ರತಿ ಮನೆ, ಹೋಟೆಲ್ ಹಾಗೂ ಉದ್ಯೋಗ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಲಾಗಿದೆ” ಎಂದು ಹೇಳಿದರು.
“ಗ್ಯಾಸ್ ಸಿಲಿಂಡರ್ ದರವನ್ನು ಕೂಡಲೇ ಪರಿಷ್ಕರಿಸಿ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಬೇಕು. ಹೋಟೆಲ್ ಹಾಗೂ ಸಣ್ಣ ಉದ್ಯಮಗಳಿಗೆ ಹೊಡೆತ ಬಿದ್ದರೆ ದೇಶದ ಆರ್ಥಿಕತೆಯ ಮೇಲೂ ಅದರ ಪರಿಣಾಮ ಬೀಳಲಿದೆ ಎಂಬುದನ್ನು ಸರ್ಕಾರ ಮನಗಾಣಬೇಕು. ಅಂತಿಮವಾಗಿ, ಗ್ಯಾಸ್ ದರ ಏರಿಕೆಯನ್ನು ಶೀಘ್ರವೇ ಹಿಂಪಡೆದು ಜನರಿಗೆ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.

ಕರಾವಳಿಯ ಹೋಟೆಲ್ ಮತ್ತು ಆಹಾರ ಉದ್ಯಮವೇ ಪ್ರವಾಸೋದ್ಯಮದ ಪ್ರಮುಖ ಅಂಗವಾಗಿರುವುದರಿಂದ ಈ ದರ ಏರಿಕೆ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ವಾಣಿಜ್ಯ ಸಿಲಿಂಡರ್ ದರ ಭಾರೀ ಏರಿಕೆಯಾದರೂ ಗೃಹಬಳಕೆಯ ಸಿಲಿಂಡರ್ ದರ ಸ್ಥಿರವಾಗಿರುವುದು ಸಾಮಾನ್ಯ ಜನರಿಗೆ ತಾತ್ಕಾಲಿಕ ನಿರಾಳತೆಯನ್ನು ನೀಡಿದೆ. ಆದರೆ ವಾಣಿಜ್ಯ ಬಳಕೆಯ ಗ್ಯಾಸ್ ದರ ಏರಿಕೆಯ ಪರಿಣಾಮವಾಗಿ ಹೋಟೆಲ್ ಆಹಾರ, ಬೇಕರಿ ಉತ್ಪನ್ನಗಳು, ಟಿಫಿನ್, ಚಹಾ, ಕಾಫಿ ಸೇರಿದಂತೆ ಹಲವು ವಸ್ತುಗಳ ದರ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಅದರ ಪರೋಕ್ಷ ಹೊರೆ ಮತ್ತೆ ಜನರ ಮೇಲೆಯೇ ಬೀಳಲಿದೆ.
ಈ ಸುದ್ದಿ ಓದಿದ್ದೀರಾ? ಡಾ. ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಗಿರೀಶ್ ಮಟ್ಟಣ್ಣವರ್ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು
ಕಳೆದ ತಿಂಗಳಷ್ಟೇ ವಾಣಿಜ್ಯ ಸಿಲಿಂಡರ್ ದರ ₹195ರಿಂದ ₹218ರವರೆಗೆ ಏರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ಸಾವಿರ ರೂ. ಸಮೀಪದ ಭಾರೀ ಏರಿಕೆ ಕಂಡಿರುವುದು ಆತಂಕ ಹೆಚ್ಚಿಸಿದೆ. ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗೃಹಬಳಕೆಯ ಗ್ಯಾಸ್ ದರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದಾಗಿ ಸ್ಥಳೀಯವಾಗಿ ಕೇಳಿಬರುತ್ತಿದೆ.
ಓಟ್ಟಿನಲ್ಲಿ ದರ ಏರಿಕೆ ವಿರುದ್ಧ ರಾಜಕೀಯ ಹೋರಾಟ ತೀವ್ರಗೊಳ್ಳುತ್ತಿರುವ ನಡುವೆಯೇ, ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಯಾವುದೇ ಪರಿಹಾರ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಜನರು ಕಾದು ನೋಡುತ್ತಿದ್ದಾರೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




