ಯೂಟ್ಯೂಬರ್ ಜೋಸೆಫ್ ಅಲಿಯಾಸ್ ‘ಪ್ರಶ್ನ ರಾವಣ್’ ಬಂಧನವು ಆಂಧ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾವಣ್ ಅವರು ಪ್ರಕರಣವೊಂದರಲ್ಲಿ ಜಾಮೀನು ಪಡೆದು ಹೊರಬರುತ್ತಿದ್ದಂತೆಯೇ, ಅವರನ್ನು ಮತ್ತೊಂದು ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಬಂಧನವನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಖಂಡಿಸಿದ್ದಾರೆ. ‘ರಾವಣ್ ವಿರುದ್ಧ ಸತತ ಪ್ರಕರಣಗಳನ್ನು ದಾಖಲಿಸುತ್ತಿರುವುದು ನಾಚಿಕೆಯಿಲ್ಲದ ಸೇಡಿನ ಕೃತ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶ ಸರ್ಕಾರದ ಧೋರಣೆಗಳನ್ನು ಪ್ರಶ್ನಿಸಿ ತಮ್ಮ ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ಪ್ರಕಟಿಸುವ ರಾವಣ್ ಅವರನ್ನು ಇತ್ತೀಚೆಗೆ ಆಂಧ್ರ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿ ಕಾಕಿನಾಡ ಜಿಲ್ಲೆಯ ಪಿಠಾಪುರಂ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಬಳಿಕ ಅವರನ್ನು, ಪಿಠಾಪುರಂನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಅಲ್ಲಿ ವೈಯಕ್ತಿಕ ಬಾಂಡ್ ಆಧಾರದಲ್ಲಿ ರಾವಣ್ ಅವರಿಗೆ ಜಾಮೀನು ದೊರೆಯಿತು. ಅವರು ಜಾಮೀನು ಪಡೆದು ಬಿಡುಗಡೆಯಾಗುತ್ತಿದ್ದಂತೆಯೇ, ಅವರನ್ನು ಮತ್ತೊಂದು ಪ್ರಕರಣದಲ್ಲಿ ಸರ್ಪವರಂ ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ.
ಈ ಬಂಧನವು ರಾಜಕೀಯ ಸೇಡಿ ಕೃತ್ಯವೆಂದು ಪ್ರಕಾಶ್ ರಾಜ್ ಖಂಡಿಸಿದ್ದಾರೆ. ‘ಎಕ್ಸ್’ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, “ನ್ಯಾಯಾಲಯಗಳು ಜಾಮೀನು ನೀಡುತ್ತಿದ್ದರೂ, ಬಂಧನಕ್ಕೆ ಅಗತ್ಯ ಕಾರಣಗಳಿಲ್ಲವೆಂದು ಸೂಚಿಸಿದರೂ – ಅಧಿಕಾರಿಗಳು ರಾವಣ್ ಅವರನ್ನು ಮತ್ತೆ ಬಂಧಿಸಲು ಹೊಸ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಅವರ ವಿರುದ್ಧ ಸುಮಾರು 30 ಪ್ರಕರಣಗಳನ್ನು ಹೆಣೆಯಲಾಗಿದೆ ಎಂದು ನಾನು ಕೇಳಿದ್ದೇನೆ. ಈ ಅಧಿಕಾರ ದುರುಪಯೋಗ ಎಲ್ಲಿಯವರೆಗೆ ಹೋಗುತ್ತದೆ? ಈ ನಾಚಿಕೆಯಿಲ್ಲದ ಸೇಡಿನ ಕೃತ್ಯಗಳ ಉದ್ದೇಶವೇನು? ಸಾರ್ವಜನಿಕರು ನೋಡುತ್ತಿದ್ದಾರೆ. ರಾವಣ್ ಶೀಘ್ರವೇ ಬಿಡುಗಡೆಯಾಗುತ್ತಾರೆ ಎಂಬ ಭರವಸೆ ಇದೆ” ಎಂದು ಅವರು ಹೇಳಿದ್ದಾರೆ.
How low will you stoop down and missuse power and government machinery.. do you realise you are getting Naked day by day . #justasking pic.twitter.com/f3dDPw2ZAk
— Prakash Raj (@prakashraaj) July 2, 2026



