ಮಹಿಳಾ ಸಬಲೀಕರಣ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸಿಕ್ಕಿಂ ಸರ್ಕಾರ ಮಹತ್ತರ ಹೆಜ್ಜೆ ಇಟ್ಟಿದೆ. ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್‌ನಲ್ಲಿ ಮಹಿಳೆಯರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಸ್ ಸೇವೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಹಸಿರು ನಿಶಾನೆ ತೋರಿದ್ದಾರೆ.
ಗ್ಯಾಂಗ್ಟಾಕ್‌ನ ರಿಡ್ಜ್ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಮತ್ತು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಸಮ್ಮುಖದಲ್ಲಿ ಈ ‘ಪಿಂಕ್ ಸಿಟಿ ರನ್ನರ್ ಆಮಾ ದೀದಿ ಬಹಿನಿ ಬಸ್ ಸೇವೆ’ (Pink City Runner–Aama Didi Bahini Bus Sewa) ಗೆ ಅಧಿಕೃತ ಚಾಲನೆ ನೀಡಲಾಯಿತು.
ಈ ಬಸ್ ಸೇವೆಯ ವಿಶೇಷತೆಯೆಂದರೆ, ಇದನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸಲಿದ್ದಾರೆ. ಚಾಲಕರಿಂದ ಹಿಡಿದು ನಿರ್ವಾಹಕರವರೆಗೆ ಎಲ್ಲರೂ ಮಹಿಳೆಯರೇ ಇರಲಿದ್ದು, ಮಹಿಳಾ ಪ್ರಯಾಣಿಕರಿಗೆ ಅತ್ಯಂತ ಸುರಕ್ಷಿತ ಮತ್ತು ಸಬಲೀಕರಣದ ವಾತಾವರಣವನ್ನು ನಿರ್ಮಿಸಿಕೊಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಸ್‌ಗಳು ಗ್ಯಾಂಗ್ಟಾಕ್‌ನ ರಾಣಿಪೂಲ್ ಮತ್ತು ಸಚಿವಾಲಯದ ನಡುವೆ ಸಂಚರಿಸಲಿದ್ದು, ಸುಮಾರು 12 ಕಿಲೋಮೀಟರ್ ದೂರ ಕ್ರಮಿಸಲಿವೆ. ಅತ್ಯಂತ ಕಡಿಮೆ ದರ ಅಂದರೆ ಕೇವಲ 25 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.
ಮಹಿಳೆಯರ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಈ ಬಸ್‌ಗಳಲ್ಲಿ ಹತ್ತು ಹಲವು ವಿಶೇಷ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಸುರಕ್ಷತೆಗಾಗಿ ಇಡೀ ಬಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಬಳಸಲು ಪ್ರತಿಯೊಂದು ಸೀಟಿನ ಬಳಿ ಚಾರ್ಜಿಂಗ್ ಸೌಲಭ್ಯವಿದೆ. ಸುಖಕರ ಪ್ರಯಾಣಕ್ಕಾಗಿ ಸಂಪೂರ್ಣ ಎಸಿ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ʼಹೌದು, ಸಿಎಂ ರಾಜೀನಾಮೆ ಕೊಡ್ತಾರಂತೆʼ: ಆರ್ ವಿ ದೇಶಪಾಂಡೆ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, “ನಮ್ಮ ಸರ್ಕಾರದ ಈ ವಿಶಿಷ್ಟ ಉಪಕ್ರಮವನ್ನು ರಾಷ್ಟ್ರಪತಿಗಳು ಉದ್ಘಾಟಿಸಿರುವುದು ನಮಗೆ ಹೆಮ್ಮೆಯ ವಿಷಯ. ಮಹಿಳೆಯರು ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಈ ಸುರಕ್ಷಿತ ಸಾರಿಗೆ ವ್ಯವಸ್ಥೆ ಉತ್ತೇಜನ ನೀಡಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.




