ದೇಶದಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ವರದಕ್ಷಿಣೆ ಸಾವಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಲ್ಲಿ ಉಂಟಾಗುತ್ತಿರುವ ಸುದೀರ್ಘ ವಿಳಂಬಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ವಿಚಾರಣಾ ನ್ಯಾಯಾಲಯಗಳಲ್ಲಿ ಇಂತಹ ಪ್ರಕರಣಗಳನ್ನು ಕಾಲಮಿತಿಯೊಳಗೆ ಹಾಗೂ ಆದ್ಯತೆಯ ಮೇರೆಗೆ ಇತ್ಯರ್ಥಪಡಿಸಲು ನ್ಯಾಯಪೀಠವು ದೇಶವ್ಯಾಪಿ ಪ್ರಮುಖ ಮಾರ್ಗಸೂಚಿಗಳನ್ನು ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ದ್ವಿಪೀಠವು ಈ ಮಹತ್ವದ ಆದೇಶವನ್ನು ನೀಡಿದೆ. “ಸಮಾಜದಲ್ಲಿ ವರದಕ್ಷಿಣೆ ನೀಡುವ ಮತ್ತು ಪಡೆಯುವ ಅನೇಕರು ಸುಲಭವಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ವರದಕ್ಷಿಣೆ ನಿಷೇಧ ಕಾಯ್ದೆಯು ಸರಿಯಾಗಿ ಅನುಷ್ಠಾನಗೊಳ್ಳದಿರುವುದು ಕಳವಳಕಾರಿ” ಎಂದು ನ್ಯಾಯಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಕಾನೂನು ದುರುಪಯೋಗ ಕುರಿತ ಸುಪ್ರೀಂ ಕೋರ್ಟ್ ಹೇಳಿಕೆ ಅಪಾಯಕಾರಿ
ಅಲ್ಲದೆ, ರಾಜ್ಯ ಸರ್ಕಾರಗಳು ಮತ್ತು ಎಲ್ಲ ಹೈಕೋರ್ಟ್ಗಳು ಪ್ರಕರಣಗಳ ವಿಲೇವಾರಿ ಕುರಿತು ಪ್ರತಿ ವರ್ಷ ಜನವರಿ 15, ಮೇ 15 ಮತ್ತು ಸೆಪ್ಟೆಂಬರ್ 15 ರಂದು ಸುಪ್ರೀಂ ಕೋರ್ಟ್ಗೆ ಪ್ರಗತಿ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.
ಸುಪ್ರೀಂ ಕೋರ್ಟ್ ನೀಡಿದ ಮುಖ್ಯ ನಿರ್ದೇಶನಗಳು
ಚಾರ್ಜ್ಶೀಟ್ (ಆರೋಪಪಟ್ಟಿ) ಸಲ್ಲಿಕೆಯಾದ 60 ರಿಂದ 90 ದಿನಗಳ ಒಳಗಾಗಿ ನ್ಯಾಯಾಲಯಗಳು ಆರೋಪಗಳನ್ನು ಕಡ್ಡಾಯವಾಗಿ ನಿಗದಿಪಡಿಸಬೇಕು.
ಆರೋಪ ನಿಗದಿಯಾದ ನಂತರ ಸಾಕ್ಷಿ ವಿಚಾರಣೆಯನ್ನು ವಿಳಂಬ ಮಾಡದೇ ‘ದಿನಂಪ್ರತಿ’ ಆಧಾರದ ಮೇಲೆ ನಡೆಸಬೇಕು.
ಕಾರಣವಿಲ್ಲದೆ ವಿಚಾರಣೆಯನ್ನು ಮುಂದೂಡುವುದನ್ನು ನ್ಯಾಯಾಲಯಗಳು ಕಟ್ಟುನಿಟ್ಟಾಗಿ ತಡೆಯಬೇಕು. ವಕೀಲರು ಹಾಜರಾಗದಿದ್ದರೆ ‘ಲಿಗಲ್ ಏಡ್’ ವಕೀಲರನ್ನು ನೇಮಿಸಿ ವಿಚಾರಣೆ ಮುಂದುವರಿಸಬೇಕು.
3 ವರ್ಷಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿದಿರುವ ವರದಕ್ಷಿಣೆ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಂಗವು ಗುರುತಿಸಿ, ಅವುಗಳನ್ನು ಶೀಘ್ರ ವಿಲೇವಾರಿ ಮಾಡಲು ಮಾಸಿಕ ಅಥವಾ ತ್ರೈಮಾಸಿಕ ಪರಾಮರ್ಶೆ ನಡೆಸಬೇಕು.
ಆರೋಪ ನಿಗದಿಯಾದ ತಕ್ಷಣವೇ ಸಾಕ್ಷಿಗಳ ವಿಚಾರಣೆಗೆ ‘ವಿಟ್ನೆಸ್ ಕ್ಯಾಲೆಂಡರ್’ ಸಿದ್ಧಪಡಿಸಬೇಕು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ವರದಕ್ಷಿಣೆ ಎಂಬ ಬಲಿಪೀಠದಿಂದ ಹೆಣ್ಣುಮಕ್ಕಳ ರಕ್ಷಣೆ ಯಾವಾಗ?
ದೇಶದಲ್ಲಿ ಬಾಕಿಯಿರುವ ವರದಕ್ಷಿಣೆ ಪ್ರಕರಣಗಳು
NCRBಯ ಇತ್ತೀಚಿನ ‘ಕ್ರೈಮ್ ಇನ್ ಇಂಡಿಯಾ’ ವರದಿಯ ಪ್ರಕಾರ, ‘ವರದಕ್ಷಿಣೆ ನಿಷೇಧ ಕಾಯ್ದೆ, 1961’ (Dowry Prohibition Act) ಅಡಿಯಲ್ಲಿ ವಿವಿಧ ವಿಚಾರಣಾ ನ್ಯಾಯಾಲಯಗಳಲ್ಲಿ ಒಟ್ಟು 83,327 ಪ್ರಕರಣಗಳು ವಿಚಾರಣೆಗೆ ಬಂದಿದ್ದವು. ಇವುಗಳಲ್ಲಿ 69,434ಕ್ಕೂ ಹೆಚ್ಚು ಪ್ರಕರಣಗಳು ಹಿಂದಿನ ವರ್ಷಗಳಿಂದ ವಿಲೇವಾರಿಯಾಗದೆ ಮುಂದಕ್ಕೆ ಬಾಕಿ ಉಳಿದುಕೊಂಡು ಬಂದಿದ್ದವು.
ದೇಶದಲ್ಲಿ ಪ್ರತಿ ವರ್ಷ ಸರಾಸರಿ 6,100ಕ್ಕೂ ಹೆಚ್ಚು ವರದಕ್ಷಿಣೆ ಸಾವುಗಳು ದಾಖಲಾಗುತ್ತಿವೆ. ಇವುಗಳ ಜೊತೆಗೆ, ಗಂಡ ಅಥವಾ ಆತನ ಸಂಬಂಧಿಕರಿಂದ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ದೌರ್ಜನ್ಯ (IPC 498A) ಪ್ರಕರಣಗಳನ್ನೂ ಸೇರಿಸಿದರೆ, ದೇಶಾದ್ಯಂತ ಲಕ್ಷಕ್ಕೂ ಅಧಿಕ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿವಿಧ ಹಂತಗಳಲ್ಲಿ ಬಾಕಿ ಉಳಿದಿವೆ. ವರದಕ್ಷಿಣೆ ಪ್ರಕರಣಗಳು ಹಾಗೂ ಬಾಕಿ ಇರುವ ವಿಚಾರಣೆಗಳಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಕರ್ನಾಟಕ ರಾಜ್ಯಗಳು ಮೊದಲ ಮೂರು ಸ್ಥಾನಗಳಲ್ಲಿವೆ.




