ತಮಿಳುನಾಡಿನಲ್ಲಿ ಬಕ್ರೀದ್ ಅಥವಾ ಇನ್ನಾವುದೇ ದಿನದಂದು ಗೋಹತ್ಯೆ ಮಾಡುವುದನ್ನು ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ರಾಜ್ಯ ಸರ್ಕಾರವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಈ ಮಧ್ಯಂತರ ಆದೇಶವನ್ನು ಹೊರಡಿಸಿದೆ.
ಇದನ್ನೂ ಓದಿ: ವಿಫಲಗೊಳ್ಳುತ್ತಿದೆ ಗೋಹತ್ಯೆ ನಿಷೇಧ; ಬಿಜೆಪಿಗೆ ತಿರುಗು ಬಾಣ
ರಾಜ್ಯಾದ್ಯಂತ ಗೋಹತ್ಯೆಯನ್ನು ನಿಷೇಧಿಸಿದ ಹೈಕೋರ್ಟ್ ಆದೇಶದ ಕೊನೆಯ ಪ್ಯಾರಾಗ್ರಾಫ್ ಪ್ರಾಥಮಿಕವಾಗಿ ‘ತಿದ್ದುಪಡಿ’ ಮಾಡುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಿಸಿದೆ.
ಮೇ 27ರಂದು ಮದ್ರಾಸ್ ಹೈಕೋರ್ಟ್, ಬಕ್ರೀದ್ ಸೇರಿದಂತೆ ಯಾವುದೇ ದಿನಗಳಂದು ರಾಜ್ಯದಲ್ಲಿ ಗೋವು ಅಥವಾ ಕರುಗಳನ್ನು ಹತ್ಯೆ ಮಾಡಬಾರದು ಎಂದು ಸಂಪೂರ್ಣ ನಿಷೇಧ ಹೇರಿ ಆದೇಶಿಸಿತ್ತು. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರವು ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958ರ ಪ್ರಕಾರ, 10 ವರ್ಷ ಮೇಲ್ಪಟ್ಟ ಮತ್ತು ಸಂತಾನೋತ್ಪತ್ತಿಗೆ ಅನ್ವಯಿಸದ ಗೋವುಗಳ ವಧೆಗೆ ಕೆಲವು ಷರತ್ತುಗಳೊಂದಿಗೆ ಅವಕಾಶವಿದೆ. ಹೈಕೋರ್ಟ್‌ನ ಸಂಪೂರ್ಣ ನಿಷೇಧದ ಆದೇಶವು ಈ ಅಸ್ತಿತ್ವದಲ್ಲಿರುವ ಶಾಸನಬದ್ಧ ಕಾನೂನಿಗೆ ವಿರುದ್ಧವಾಗಿದೆ ಎಂದು ಸರ್ಕಾರ ಪರವಾಗಿ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದರು.
ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ಮಧ್ಯಂತರ ತಡೆ ನೀಡಿರುವುದರಿಂದ ತಮಿಳುನಾಡಿನಲ್ಲಿ ಸದ್ಯಕ್ಕೆ ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಯಾಗುವುದಿಲ್ಲ. ಸುಪ್ರೀಂ ಕೋರ್ಟ್ ಈ ಕುರಿತು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯವರೆಗೆ ಹೈಕೋರ್ಟ್ ಆದೇಶಕ್ಕೆ ತಡೆ ಮುಂದುವರಿಯಲಿದೆ.




