ಪರಮಾನಂದ ಬೆಟ್ಟವನ್ನು ಪರಿಸರ ಸ್ನೇಹಿತರ ಆಶಯದಂತೆ ಡೀಮ್ಡ್ ಅರಣ್ಯವಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದನ್ನು ʼದೇವಿವನʼವನ್ನಾಗಿ ರೂಪಿಸುವ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುದ್ದೇಬಿಹಾಳ ಸಾಮಾಜಿಕ ಅರಣ್ಯ ವಲಯಾಧಿಕಾರಿ ಬಸವರಾಜ ಬಿರಾದಾರ್ ನರಸಲಗಿ ಹೇಳಿದರು.
ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಬಿ. ಸಾಲವಾಡಗಿ ಗ್ರಾಮದ ಪರಮಾನಂದ ಬೆಟ್ಟದಲ್ಲಿ ಅರಣ್ಯ ಇಲಾಖೆ, ‘ನಮ್ಮ ಹೆಮ್ಮೆ, ನಮ್ಮ ಸಾಲವಾಡಗಿ’, ಹಸಿರು ಸಂಪದ ಬಳಗ ತಾಳಿಕೋಟಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ 7ನೇ ವರ್ಷದ ಮಹೋತ್ಸವ–2026 ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸಾಲವಾಡಗಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆಗೆ ಸ್ಥಳೀಯ ಸಂಘಟನೆಗಳು ಹಾಗೂ ಗ್ರಾಮಸ್ಥರು ತೋರಿದ ಬದ್ಧತೆ ಶ್ಲಾಘನೀಯವಾಗಿದೆ. ಪರಿಸರ ಉಳಿಸುವ ಇಂತಹ ಜನಾಂದೋಲನಗಳಿಗೆ ಅರಣ್ಯ ಇಲಾಖೆ ಸದಾ ಬೆಂಬಲ ನೀಡಲಿದೆ” ಎಂದು ತಿಳಿಸಿದರು.
ಸಾಹಿತಿ ಅಶೋಕ ಹಂಚಲಿ ಮಾತನಾಡಿ, “ವಿಜಯಪುರ ಜಿಲ್ಲೆಯಲ್ಲಿ ನಡೆದಿರುವ ಪರಿಸರ ಕಾರ್ಯಗಳಿಂದ ಬಿಸಿಲು ನಾಡು ಹಸಿರು ನಾಡಾಗುವತ್ತ ಸಾಗಿದೆ. ಇದರಲ್ಲಿ ಸಚಿವ ಎಂ ಬಿ ಪಾಟೀಲರ ಕೋಟಿ ವೃಕ್ಷ ಅಭಿಯಾನ, ಜಿ ಪಂ ನಿವೃತ್ತ ಅಧೀಕ್ಷಕ ಎನ್ ಡಿ ಪಾಟೀಲರು ಸ್ವಂತ ಖರ್ಚಿನಲ್ಲಿ 2016 ರಿಂದ ತಮ್ಮೂರು ಡೊಮನಾಳದಲ್ಲಿ ಬೆಳೆಸುತ್ತಿರುವ 27 ಸಾವಿರಕ್ಕೂ ಅಧಿಕ ಗಿಡಗಳು, ಹಾಗೆಯೇ ಬಂಡೆಪ್ಪನ ಸಾಲವಾಡಗಿಯ ಬೋಳು ಬೆಟ್ಟದಲ್ಲಿ ಹಸಿರು ಮೂಡಿಸಿರುವ ನಮ್ಮ ಸಾಲವಾಡಗಿ ನಮ್ಮ ಹೆಮ್ಮೆ ಬಳಗ, ತಾಳಿಕೋಟೆಯ ಹಸಿರು ಸಂಪದ ಬಳಗ, ಮುದ್ದೇಬಿಹಾಳದ ಹಸಿರು ತೋರಣ ಗೆಳೆಯರ ಬಳಗ, ಬಸವ ಹಸಿರು ಬಳಗದಂತಹ ಪರಿಸರ ಸಂಘಟನೆಗಳು ಅತ್ಯಂತ ಮಹತ್ವದ ಕಾರ್ಯ ಮಾಡುತ್ತಿವೆ” ಎಂದು ಹೇಳಿದರು.
ಸಾಹಿತಿ ಶ್ರೀಕಾಂತ ಪತ್ತಾರ, ವಿದ್ಯಾರ್ಥಿನಿ ಸಹನಾ ದೇಸಾಯಿ ಹಾಗೂ ಅನಿಲಕುಮಾರ ಈರಾಜ್ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಲಿಂಗಾಯತ ಸ್ವತಂತ್ರ ಧರ್ಮ: ಸಾಂವಿಧಾನಿಕ ಮಾನ್ಯತೆಗೆ ಸಂಘಟಿತ ಹೋರಾಟದ ಕರೆ
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಆರ್‌ಎಫ್ ಗಿರೀಶ ಹಲ್ಕುಡೆ, ಡಿಆರ್‌ಎಫ್ ರಮೇಶ್, ವಿಜಯಪುರ ಡಯಟ್ ಹಿರಿಯ ಉಪನ್ಯಾಸಕಿ ರೇಣುಕಾ ಕಲಬುರ್ಗಿ, ಗ್ರಾಮ ಪಂಚಾಯಿತಿ ಪಿಡಿಒ, ಜಿಲ್ಲಾ ಪಂಚಾಯಿತಿ ನಿವೃತ್ತ ಅಧೀಕ್ಷಕ ಎನ್ ಡಿ ಪಾಟೀಲ, ಹಸಿರು ಸಂಪದ ಬಳಗದ ಅಧ್ಯಕ್ಷ ಡಾ. ವಿ ಎಸ್ ಕಾರ್ಚಿ, ‘ನಮ್ಮ ಸಾಲವಾಡಗಿ ನಮ್ಮ ಹೆಮ್ಮೆ’ ಬಳಗದ ಅಧ್ಯಕ್ಷ ಶಿವರಾಮ ಪಾಟೀಲ, ಮುದ್ದೇಬಿಹಾಳ ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ರವಿ ಗೂಳಿ, ಬಸವ ಹಸಿರು ಬಳಗದ ಸಂಸ್ಥಾಪಕ ಭೀಮನಗೌಡ ಗುಂಡಕನಾಳ, ನಿವೃತ್ತ ಎಸ್‌ಪಿ ರವಿ ಪಾಟೀಲ ಸೇರಿದಂತೆ ಪರಿಸರ ಹೋರಾಟಗಾರರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು. ರಾಮನಗೌಡ ಮುಂದಿನಮನೆ ಸ್ವಾಗತಿಸಿದರು. ಅಂಬರೀಶ ಹಿರೇಮಠ ಮತ್ತು ಎಸ್ ಎಸ್ ಗಡೇದ್ ಕಾರ್ಯಕ್ರಮ ನಿರ್ವಹಿಸಿದರು. ಯಾಳಗಿ ವಂದಿಸಿದರು.




