ತಮಿಳುನಾಡಿನ ಶಿವಗಂಗೈ ಜಿಲ್ಲೆಯಲ್ಲಿ ನಡೆದಿದ್ದ 26 ವರ್ಷದ ದಲಿತ ಯುವಕ ಆಕಾಶ್ ಅವರ ಲಾಕಪ್ ಡೆತ್ ಪ್ರಕರಣವನ್ನು ವಿಚಾರಣೆ ನಡೆಸಿರುವ ಸಿಬಿ-ಸಿಐಡಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ದೋಷಾರೋಪಣೆ ಪಟ್ಟಿಯಲ್ಲಿ ಗಂಭೀರ ಅಂಶಗಳನ್ನು ಉಲ್ಲೇಖಿಸಿದ್ದು, “ಆಕಾಶ್ ಪರಿಶಿಷ್ಟ ಜಾತಿ ದೇವೇಂದ್ರಕುಲ ವೆಳ್ಳಾಲರ್ ಸಮುದಾಯಕ್ಕೆ ಸೇರಿದವನೆಂಬುದು ಪೊಲೀಸರಿಗೆ ತಿಳಿದಿದ್ದರೂ, ಆತನನ್ನು ಕೊಲ್ಲುವ ಉದ್ದೇಶದಿಂದಲೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಲಾಗಿದೆ.
ಪ್ರಕರಣದಲ್ಲಿ ಮಾನಾಮಧುರೈ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿಲೀಪನ್, ಸಬ್ ಇನ್ಸ್‌ಪೆಕ್ಟರ್ ಕೆ. ಗುಹನ್, ಗ್ರೇಡ್-1 ಕಾನ್‌ಸ್ಟೇಬಲ್ ಎಸ್. ಕಾಳೀಶ್ವರನ್, ಚಾಲಕ ಕಾನ್‌ಸ್ಟೇಬಲ್ ಪಿ. ಮಹೇಂದ್ರನ್, ಕಾನ್‌ಸ್ಟೇಬಲ್ ಎಲ್. ದೈವೇಂದ್ರನ್ ಹಾಗೂ ಕಾನ್‌ಸ್ಟೇಬಲ್ ಬಿ. ಪಳನಿಯಪ್ಪನ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಈ ಆರೋಪಿ ಪೊಲೀಸರು ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಆಕಾಶ್ ಅವರನ್ನು ಮಾರ್ಚ್ 6ರಂದು ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಯುವಕ ಗುಣನೊಂದಿಗೆ ಮಾನಾಮಧುರೈ ಪೊಲೀಸರು ಬಂಧಿಸಿದ್ದರು. ಬಂಧನದ ಎರಡು ದಿನಗಳ ನಂತರ, ಮಾರ್ಚ್ 8ರಂದು ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಮೃತಪಟ್ಟಿದ್ದರು. ಆರಂಭದಿಂದಲೇ ಆಕಾಶ್ ಕುಟುಂಬಸ್ಥರು ಇದು ಪೊಲೀಸ್ ಕಸ್ಟಡಿ ಚಿತ್ರಹಿಂಸೆ ಮತ್ತು ಕೊಲೆ ಪ್ರಕರಣ ಎಂದು ಆರೋಪಿಸಿದ್ದರು.
ಪ್ರಕರಣದ ತನಿಖೆಯನ್ನು ಸಿಬಿ-ಸಿಐಡಿಗೆ ವಹಿಸಲಾಗಿತ್ತು. ತನಿಖೆ ನಡೆಸಿರುವ ಸಿಬಿ-ಸಿಐಡಿ ಜೂನ್ 18ರಂದು ಮಧುರೈನ ನಾಗರಿಕ ಹಕ್ಕುಗಳ ರಕ್ಷಣೆ ಪ್ರಕರಣಗಳ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು. ಅದರ ಪ್ರತಿಯನ್ನು ಆಕಾಶ್ ಕುಟುಂಬಕ್ಕೆ ಇತ್ತೀಚೆಗಷ್ಟೇ ನೀಡಲಾಗಿದೆ. ಈ ದೋಷಾರೋಪಣೆ ಪಟ್ಟಿಯಲ್ಲಿ ಆಕಾಶ್‌ನ ಜಾತಿ ಗುರುತು ಆರೋಪಿಗಳಿಗೆ ತಿಳಿದಿತ್ತು ಎಂಬುದನ್ನು ಸ್ಪಷ್ಟವಾಗಿ ದಾಖಲಿಸಲಾಗಿದೆ.
ಆಕಾಶ್ ದೇವೇಂದ್ರಕುಲ ವೆಳ್ಳಾಲರ್ ಸಮುದಾಯಕ್ಕೆ ಸೇರಿದವನೆಂಬ ಅರಿವು ಆರೋಪಿಗಳಿಗೆ ಇದ್ದರೂ, ಮಾರ್ಚ್ 6ರಂದು ಸಂಜೆ ಸುಮಾರು 5.30ರ ವೇಳೆಗೆ ಆತನನ್ನು ಪೊಲೀಸ್ ವಾಹನದಲ್ಲಿ ಮಾನಂಬಾತಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ನೀಲಗಿರಿ ಮರಗಳಿಂದ ಸುತ್ತುವರಿದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಲಾಗಿತ್ತು ಎಂದು ತನಿಖೆಯಲ್ಲಿ ಪತ್ತೆಯಾಗಿದೆ.
ಚಾರ್ಜ್‌ಶೀಟ್ ಪ್ರಕಾರ, ಆಕಾಶ್ ಮೇಲೆ ಹಲ್ಲೆ ಆಕಸ್ಮಿಕವಾಗಿ ನಡೆದದ್ದಲ್ಲ. ಇನ್ಸ್‌ಪೆಕ್ಟರ್ ದಿಲೀಪನ್ ಅವರು ಆಕಾಶ್ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿ, ಆತನ ಕಾಲು ಮುರಿಯಬೇಕೆಂದು ಸಬ್ ಇನ್ಸ್‌ಪೆಕ್ಟರ್ ಗುಹನ್‌ಗೆ ಸೂಚಿಸಿದ್ದಾರೆ. ಅಲ್ಲದೆ, ಆತನ ಮೇಲೆ ಹಲ್ಲೆ ನಡೆಸಲು ಸೂಕ್ತವಾದ ನಿರ್ಜನ ಸ್ಥಳವನ್ನು ಗುರುತಿಸುವಂತೆಯೂ ಹೇಳಿದ್ದರು ಎನ್ನಲಾಗಿದೆ.
ಈ ಸೂಚನೆಯ ಬಳಿಕ ಗುಹನ್, ಕಾನ್‌ಸ್ಟೇಬಲ್‌ಗಳಾದ ದೈವೇಂದ್ರನ್ ಮತ್ತು ಪಳನಿಯಪ್ಪನ್ ಅವರೊಂದಿಗೆ ಮಧುರೈ-ಮಾನಂಬಾತಿ ರಸ್ತೆಯ ಬಳಿಯ ನೀಲಗಿರಿ ತೋಪಿನ ಸಮೀಪದ ನಿರ್ಜನ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಂತರ ದಿಲೀಪನ್, ಕಾಳೀಶ್ವರನ್ ಮತ್ತು ಮಹೇಂದ್ರನ್ ಮತ್ತೊಂದು ಪೊಲೀಸ್ ವಾಹನದಲ್ಲಿ ಅಲ್ಲಿಗೆ ತೆರಳಿದ್ದಾರೆ.
ಆಕಾಶ್‌ನ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು ಎಂದು ದೋಷಾರೋಪಣೆ ಪಟ್ಟಿಯಲ್ಲಿ ಹೇಳಲಾಗಿದೆ. ಆತನನ್ನು ಒಂದು ವಾಹನದಿಂದ ಇಳಿಸಿ ಮತ್ತೊಂದು ಪೊಲೀಸ್ ವಾಹನಕ್ಕೆ ಹತ್ತಿಸಿ ನೀಲಗಿರಿ ತೋಪಿಗೆ ಕರೆದೊಯ್ಯಲಾಗಿದೆ. ಅಲ್ಲಿ ಗುಹನ್, ದೈವೇಂದ್ರನ್ ಮತ್ತು ಪಳನಿಯಪ್ಪನ್ ಈಗಾಗಲೇ ಕಾಯುತ್ತಿದ್ದರು.
ಬಳಿಕ ಆರು ಮಂದಿ ಪೊಲೀಸರು ಸೇರಿ ಆಕಾಶ್‌ನ ಬಲಗಾಲಿನ ಮಂಡಿಯ ಕೆಳಭಾಗ ಮತ್ತು ಹಿಮ್ಮಡಿಗೆ ಕಬ್ಬಿಣದ ರಾಡ್‌ನಿಂದ ತೀವ್ರವಾಗಿ ಹೊಡೆದಿದ್ದಾರೆ. ಹಲ್ಲೆಯ ತೀವ್ರತೆಗೆ ಆತನ ಟಿಬಿಯಾ ಮತ್ತು ಫಿಬುಲಾ ಮೂಳೆಗಳು ಮುರಿದು, ಮೂಳೆ ಹೊರಗೆ ಕಾಣುವಷ್ಟರ ಮಟ್ಟಿಗೆ ಗಾಯಗಳಾಗಿದ್ದವು ಎಂದು ತನಿಖಾ ಸಂಸ್ಥೆ ವಿವರಿಸಿದೆ.
ಈ ಗಂಭೀರ ಗಾಯಗಳಿಂದಾಗಿ ಉಂಟಾದ ‘ಫ್ಯಾಟ್ ಎಂಬೋಲಿಸಮ್’, ಅಂದರೆ ಮುರಿದ ಮೂಳೆಯಿಂದ ಕೊಬ್ಬಿನ ಕಣಗಳು ರಕ್ತನಾಳಕ್ಕೆ ಸೇರಿ ರಕ್ತಪ್ರವಾಹಕ್ಕೆ ಅಡ್ಡಿಯಾಗಿದೆ. ಇದು ಆಕಾಶ್ ಸಾವಿಗೆ ನೇರ ಕಾರಣವಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದಷ್ಟೇ ಅಲ್ಲದೆ, ಹಲ್ಲೆಯ ನಂತರ ಪೊಲೀಸರು ಸಾಕ್ಷ್ಯ ನಾಶಪಡಿಸಲು ಮತ್ತು ಸುಳ್ಳು ಕಥೆ ಕಟ್ಟಲು ಯತ್ನಿಸಿದ್ದಾರೆ ಎಂಬ ಆರೋಪವೂ ಚಾರ್ಜ್‌ಶೀಟ್‌ನಲ್ಲಿದೆ. ಹಲ್ಲೆಗೆ ಬಳಸಿದ ಕಬ್ಬಿಣದ ರಾಡ್‌ನ್ನು ಮುಚ್ಚಿಟ್ಟು, ಆಕಾಶ್‌ಗೆ ಗಾಯಗಳಾದ ಬಗ್ಗೆ ಬೇರೆ ಕಥೆ ಸೃಷ್ಟಿಸಲಾಗಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್‌ನದ್ದು ವೋಟ್ ಬ್ಯಾಂಕ್ ರಾಜಕಾರಣವಾದರೆ, ಧರ್ಮ-ʼದೇಶಭಕ್ತಿʼಯ ಹೆಸರಿನಲ್ಲಿ ಬಿಜೆಪಿ ಮಾಡುತ್ತಿರುವುದೇನು?
ಮಾನಾಮಧುರೈ ಸಮೀಪದ ಮೇಲಪ್ಪಸಾಲಿ ಸೇತುವೆಯಿಂದ ಜಿಗಿದಿದ್ದರಿಂದ ಆಕಾಶ್‌ಗೆ ಗಾಯಗಳಾಗಿವೆ ಎಂದು ಇನ್ಸ್‌ಪೆಕ್ಟರ್ ದಿಲೀಪನ್ ಪೊಲೀಸ್ ದಾಖಲೆಯಲ್ಲಿ ನಮೂದಿಸಿದ್ದಾರೆ. ಆದರೆ, ಆಕಾಶ್ ಸೇತುವೆಯಿಂದ ಜಿಗಿದಿರಲಿಲ್ಲ. ಹಾಗಿದ್ದರೂ, ಉದ್ದೇಶಪೂರ್ವಕವಾಗಿ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ ಎಂದು ಸಿಬಿ-ಸಿಐಡಿ ಆರೋಪಿಸಿದೆ.
ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿಯೂ ಆಕಾಶ್ ದೇಹದ ಮೇಲೆ ಗಂಭೀರ ಗಾಯಗಳು ದಾಖಲಾಗಿವೆ. ಬಲಗಾಲಿನ ಟಿಬಿಯಾ ಮತ್ತು ಫಿಬುಲಾ ಮೂಳೆ ಮುರಿತ, ಸ್ನಾಯು ಮತ್ತು ನರಗಳಿಗೆ ಹಾನಿ, ಮೊಣಕೈ ಮತ್ತು ಮೊಣಕಾಲುಗಳಲ್ಲಿ ಗಾಯಗಳು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ 24ಕ್ಕೂ ಹೆಚ್ಚು ಗಾಯಗಳು ಕಂಡುಬಂದಿದ್ದವು.
ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(2)(ವಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ, ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದಂತೆ ದಿಲೀಪನ್ ವಿರುದ್ಧ ಸಾರ್ವಜನಿಕ ಸೇವಕನಾಗಿದ್ದುಕೊಂಡು ಮತ್ತೊಬ್ಬರಿಗೆ ಹಾನಿ ಉಂಟುಮಾಡುವ ಉದ್ದೇಶದಿಂದ ಸುಳ್ಳು ದಾಖಲೆ ಸೃಷ್ಟಿಸಿದ ಹೆಚ್ಚುವರಿ ಆರೋಪಗಳನ್ನೂ ಹೊರಿಸಲಾಗಿದೆ. ಕೊಲೆ, ಸಾಕ್ಷ್ಯ ನಾಶ ಮತ್ತು ಸುಳ್ಳು ಮಾಹಿತಿ ನೀಡಿದ ಆರೋಪಗಳೂ ಪ್ರಕರಣದಲ್ಲಿ ಸೇರಿವೆ.\
ಗಮನಾರ್ಹವಾಗಿ, ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕುಟುಂಬಸ್ಥರು ಆಕಾಶ್ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ್ದರು. ಪರಿಣಾಮವಾಗಿ ಮೃತದೇಹ ಸುಮಾರು 100 ದಿನಗಳ ಕಾಲ ಸರ್ಕಾರಿ ರಾಜಾಜಿ ಆಸ್ಪತ್ರೆಯ ಶವಾಗಾರದಲ್ಲೇ ಉಳಿದಿತ್ತು. ನಂತರ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಅಂತ್ಯಸಂಸ್ಕಾರ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜೂನ್ 17ರಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.
ಪ್ರಸ್ತುತ ಪ್ರಕರಣ ಮಧುರೈನ ಪಿಸಿಆರ್ ಪ್ರಕರಣಗಳ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.



