ತಮಿಳುನಾಡು ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎಂಬ ಕೇವಲ ಒಂದು ಕಾರಣಕ್ಕಾಗಿ ತಮ್ಮ ಗೆಲುವನ್ನು ಅಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಪಕ್ಷದ ನಾಯಕ ಸಿ. ಜೋಸೆಫ್ ವಿಜಯ್ ಅವರು ಮದ್ರಾಸ್ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದ್ದಾರೆ. ತಿರುಚ್ಚಿರಾಪಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ಪರಾಜಿತ ಡಿಎಂಕೆ ಅಭ್ಯರ್ಥಿ ಎಸ್. ಇನಿಗೋ ಇರುದಯರಾಜ್ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ವಿಜಯ್ ಈ ಪ್ರತಿಕ್ರಿಯೆ ಸಲ್ಲಿಸಿದ್ದಾರೆ.
ತಿರುಚ್ಚಿರಾಪಳ್ಳಿ ಪೂರ್ವ ಕ್ಷೇತ್ರದಲ್ಲಿ ವಿಜಯ್ ಅವರು ಇರುದಯರಾಜ್ ವಿರುದ್ಧ 27,416 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದರು. ಆದರೆ, ವಿಜಯ್ ಮತ್ತು ಅವರ ಪಕ್ಷದ ಕಾರ್ಯಕರ್ತರು ಪ್ರಚಾರದ ವೇಳೆ ಮಕ್ಕಳನ್ನು ಬಳಸಿಕೊಳ್ಳುವ ಮೂಲಕ 2024ರ ಫೆಬ್ರವರಿ 5ರಂದು ಕೇಂದ್ರ ಚುನಾವಣಾ ಆಯೋಗ (ECI) ಹೊರಡಿಸಿದ್ದ ನಿರ್ದೇಶನವನ್ನು ಉಲ್ಲಂಘಿಸಿದ್ದಾರೆ ಎಂದು ಇರುದಯರಾಜ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. ಸಂವಿಧಾನದ 324ನೇ ವಿಧಿ ಅಡಿ ಹೊರಡಿಸಲಾದ ಈ ಆದೇಶದ ಉಲ್ಲಂಘನೆಯು 1951ರ ಪ್ರಜಾಪ್ರತಿನಿಧಿ ಕಾಯ್ದೆಯ (ROPA) ಸೆಕ್ಷನ್ 100(1)(d)(iv) ಅಡಿಯಲ್ಲಿ ಬರುತ್ತದೆ ಎಂದು ಡಿಎಂಕೆ ಅಭ್ಯರ್ಥಿ ವಾದಿಸಿದ್ದರು.
ತಮ್ಮ ವಿರುದ್ಧದ ಈ ಎಲ್ಲ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಮುಖ್ಯಮಂತ್ರಿ ವಿಜಯ್, ಚುನಾವಣಾ ಆಯೋಗದ ನಿರ್ದೇಶನವು ಪ್ರಜಾಪ್ರತಿನಿಧಿ ಕಾಯ್ದೆಯಡಿ ನೀಡಲಾದ ಆದೇಶ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ವಿಫಲರಾಗಿದ್ದಾರೆ ಎಂದಿದ್ದಾರೆ. ಮಕ್ಕಳನ್ನು ಪ್ರಚಾರಕ್ಕೆ ಬಳಸಲಾಗಿದೆ ಎಂಬ ಆರೋಪವನ್ನು ಒಪ್ಪಿಕೊಂಡರೂ, ಅದು ಚುನಾವಣಾ ಗೆಲುವನ್ನು ರದ್ದುಗೊಳಿಸಲು ಕಾನೂನಾತ್ಮಕವಾಗಿ ಸೂಕ್ತ ಆಧಾರವಾಗುವುದಿಲ್ಲ. ಕೇವಲ ಮಾದರಿ ನೀತಿಸಂಹಿತೆ ಉಲ್ಲಂಘನೆಯು ಕಾಯ್ದೆಯ ಸೆಕ್ಷನ್ 100ರ ಅಡಿ ಗೆಲುವನ್ನು ಅಸಿಂಧುಗೊಳಿಸಲು ಸ್ವತಂತ್ರ ಕಾರಣವಾಗಲು ಸಾಧ್ಯವಿಲ್ಲ. ಮಕ್ಕಳನ್ನು ಬಳಸಿದ್ದರಿಂದಲೇ ತಮಗೆ ನಿರ್ದಿಷ್ಟ ಸಂಖ್ಯೆಯ ಮತಗಳು ಒಲಿದಿವೆ ಎಂಬುದನ್ನು ಅರ್ಜಿಯಲ್ಲಿ ವಿವರಿಸಿಲ್ಲ. ಮತದಾರರು ‘ಭಾವನಾತ್ಮಕವಾಗಿ ಪ್ರಭಾವಿತರಾಗಿದ್ದಾರೆ’ ಮತ್ತು ಇದರಿಂದ ಅವರ ಮೇಲೆ ‘ತೀವ್ರ ಪರಿಣಾಮ’ ಬೀರಿದೆ ಎಂಬ ಹೇಳಿಕೆಯು ಗೆಲುವಿನ ಅಂತರದೊಂದಿಗೆ ಯಾವುದೇ ವಾಸ್ತವಿಕ ಸಂಬಂಧ ಹೊಂದಿಲ್ಲ ಎಂದು ಅವರು ವಾದಿಸಿದ್ದಾರೆ.
ಇದೇ ವೇಳೆ, ಚುನಾವಣಾ ವೆಚ್ಚ ಮುಚ್ಚಿಹಾಕಿರುವುದು, ವಿದೇಶಿ ದೇಣಿಗೆ ಬಳಕೆ ಹಾಗೂ ನಾಮಪತ್ರದ ‘ಫಾರ್ಮ್ 26’ರ ಅಫಿಡವಿಟ್‌ನಲ್ಲಿನ ವ್ಯತ್ಯಾಸಗಳಿಗೆ ಸಂಬಂಧಿಸಿದ ಆರೋಪಗಳನ್ನೂ ವಿಜಯ್ ತಿರಸ್ಕರಿಸಿದ್ದಾರೆ. ಯಾರು ಹಣ ಖರ್ಚು ಮಾಡಿದರು, ಯಾರು ದೇಣಿಗೆ ನೀಡಿದರು, ಬ್ಯಾಂಕ್ ಖಾತೆ ವಿವರಗಳೇನು ಅಥವಾ ಆ ಹಣವನ್ನು ತಾನು ಮತ್ತು ತನ್ನ ಏಜೆಂಟ್ ಅಧಿಕೃತವಾಗಿ ಬಳಸಿದ್ದೇವೆಯೇ ಎಂಬ ಯಾವುದೇ ನಿರ್ದಿಷ್ಟ ಪುರಾವೆಗಳನ್ನು ನೀಡದೆ ಕೇವಲ ಅಂದಾಜು ಅಂಕಿ-ಅಂಶಗಳ ಆಧಾರದ ಮೇಲೆ ಅರ್ಜಿಯಲ್ಲಿ ಆರೋಪ ಮಾಡಲಾಗಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಧಾರ್ಮಿಕ ಸ್ಥಳಗಳಲ್ಲಿ ಪ್ರಚಾರ ನಡೆಸಿದ್ದಾರೆ ಎಂಬ ಆರೋಪಕ್ಕೂ ಪ್ರತಿಕ್ರಿಯಿಸಿರುವ ವಿಜಯ್, ತಾವು ಧಾರ್ಮಿಕ ಆಧಾರದ ಮೇಲೆ ಮತ ಕೇಳಿರುವ ಬಗ್ಗೆ ಅರ್ಜಿಯಲ್ಲಿ ಯಾವುದೇ ನಿರ್ದಿಷ್ಟ ಹೇಳಿಕೆಯನ್ನು ಉಲ್ಲೇಖಿಸಿಲ್ಲ ಎಂದು ತಿಳಿಸಿದ್ದಾರೆ. ಅಭ್ಯರ್ಥಿಯೊಬ್ಬರು ಕೇವಲ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿದ ಮಾತ್ರಕ್ಕೆ ಅಥವಾ ಪ್ರಾರ್ಥನೆ ಸಲ್ಲಿಸಿದ ಮಾತ್ರಕ್ಕೆ ಅದು ಕಾಯ್ದೆಯ ಸೆಕ್ಷನ್ 123(3)ರ ಅಡಿಯಲ್ಲಿ ‘ಭ್ರಷ್ಟಾಚಾರದ ಆಚರಣೆ’ ಎನಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯು ಆಗಸ್ಟ್ 31ರಂದು ನಡೆಯುವ ನಿರೀಕ್ಷೆಯಿದೆ.




