- ಕರೀಮ್‌ನಗರದ ನಿವಾಸದಲ್ಲಿ ಸಂಜಯ್ ಕುಮಾರ್ ಬಂಧನ
- ಏಪ್ರಿಲ್ 8 ರಂದು ತೆಲಂಗಾಣಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ಪೊಲೀಸರು ಮಂಗಳವಾರ (ಏಪ್ರಿಲ್ 4) ತಡರಾತ್ರಿ ಬಂಧಿಸಿದ್ದಾರೆ.
10ನೇ ತರಗತಿಯ ಹಿಂದಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪೊಲೀಸರು ಕರೀಮ್‌ನಗರದಲ್ಲಿರುವ ನಿವಾಸದಲ್ಲಿ ಸಂಜಯ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಜ್ಯದಲ್ಲಿ ಹತ್ತನೇ ತರಗತಿಯ ಹಿಂದಿ ಭಾಷೆಯ ಪರೀಕ್ಷೆ ಮಂಗಳವಾರ ಬೆಳಿಗ್ಗೆ 9.30ಕ್ಕೆ ಆರಂಭವಾಯಿತು. ಆದರೆ 10 ಗಂಟೆ ವೇಳೆಗಾಗಲೇ ವಾರಂಗಲ್ ಜಿಲ್ಲೆಯಲ್ಲಿ ವಾಟ್ಸಾಪ್ ಗುಂಪುಗಳಲ್ಲಿ ಪ್ರಶ್ನೆಪತ್ರಿಕೆ ಪ್ರತಿಗಳು ಹರಿದಾಡಿದವು.
ಬಳಿಕ ಇತರ ಜಿಲ್ಲೆಗಳಿಗೂ ಪ್ರಶ್ನೆಪತ್ರಿಕೆ ಪ್ರತಿ ಹರಿದಾಡಿತು. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಏಪ್ರಿಲ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಭೇಟಿ ನೀಡಲಿದ್ದು, ಸಿಕಂದರಾಬಾದ್‌ನಿಂದ ತಿರುಪತಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಉದ್ಘಾಟಿಸುವ ಜೊತೆಗೆ ನಾನಾ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದಕ್ಕೂ ಮೊದಲೇ ಸಂಜಯ್ ಕುಮಾರ್ ಅವರ ಬಂಧನವಾಗಿದೆ.
ಪ್ರಧಾನಿ ಮೋದಿ ಭೇಟಿಗೂ ಮೊದಲೇ ಬಂಧಿಸಲಾಗಿದೆ. ಪ್ರಧಾನಿ ಭೇಟಿಗೆ ತಡೆ ನೀಡಲು ಆಡಳಿತ ಪಕ್ಷ ಬಿಆರ್‌ಎಸ್ ಹೀಗೆ ಮಾಡಿದೆ ಎಂದು ಸಂಜಯ್ ಕುಮಾರ್ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.
ಬಂಧನದ ವಿಡಿಯೊಗಳನ್ನು ಬಂಡಿ ಸಂಜಯ್ ಕುಮಾರ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಂಡಿ ಸಂಜಯ್ ಕುಮಾರ್ ಬಂಧನದ ವೇಳೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಅವರನ್ನು ನಲಗೊಂಡ ಜಿಲ್ಲೆಯ ಬೊಮ್ಮಲ ರಾಮರಾಮ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ತೆಲಂಗಾಣ ಬಿಜೆಪಿ ಅಧ್ಯಕ್ಷ ಸಂಜಯ್ ಕುಮಾರ್ ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಮೇಂದ್ರ ರೆಡ್ಡಿ ಕಿಡಿಕಾರಿದ್ದಾರೆ.
“ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಬಿಆರ್‌ಎಸ್ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿರುವುದಕ್ಕೆ ಈ ರೀತಿ ಮಾಡಲಾಗಿದೆ. ಇದೆಲ್ಲವೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ” ಎಂದು ಪ್ರೇಮೇಂದ್ರ ರೆಡ್ಡಿ ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಅರುಣಾಚಲ ಪ್ರದೇಶ ಸ್ಥಳಗಳಿಗೆ ಹೊಸ ಹೆಸರಿಟ್ಟ ಚೀನಾ; ಟೀಕಿಸಿ ಸುಮ್ಮನಾದ ಭಾರತ
ಕಳೆದ ತಿಂಗಳು ತೆಲಂಗಾಣ ರಾಜ್ಯ ಲೋಕಸೇವಾ ಆಯೋಗದ (ಟಿಎಸ್‌ಪಿಎಸ್‌ಸಿ) ಪ್ರಶ್ನೆ ಪತ್ರಿಕೆಯನ್ನು ಉದ್ಯೋಗಿಯೊಬ್ಬರು ಸೋರಿಕೆ ಮಾಡಿದ ನಂತರ ಬಂಡಿ ಸಂಜಯ್ ಕುಮಾರ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದರು.
ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಸಂಬಂಧಿಗಳ ಕೈವಾಡವಿದೆ ಎಂದು ಸಂಜಯ್ ಆರೋಪಿಸಿದ್ದರು.