ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿಣಿಕಿ ಭುಯಾನ್ ಶರ್ಮಾ ಅವರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಒಂದು ವಾರದ ಮಟ್ಟಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ನ್ಯಾಯಮೂರ್ತಿ ಕೆ. ಸುಜನಾ ಅವರ ನೇತೃತ್ವದ ಹೈಕೋರ್ಟ್ ಪೀಠವು ಈ ಆದೇಶವನ್ನು ಹೊರಡಿಸಿದ್ದು, ಸೂಕ್ತ ನ್ಯಾಯಾಲಯದಲ್ಲಿ (ಅಸ್ಸಾಂನಲ್ಲಿ) ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಪವನ್ ಖೇರಾ ಅವರಿಗೆ ಕೇವಲ ಒಂದು ವಾರದ ಕಾಲಾವಕಾಶವನ್ನು ನೀಡಿದೆ. “ಅರ್ಜಿದಾರರಿಗೆ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲು ಒಂದು ವಾರದ ಸಮಯವನ್ನು ನೀಡಲಾಗಿದೆ” ಎಂದು ನ್ಯಾಯಮೂರ್ತಿ ಕೆ. ಸುಜನಾ ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ, ಹೆಚ್ಚಿನ ಕಾಲಾವಕಾಶ ಕೋರಿ ಪವನ್ ಖೇರಾ ಅವರ ಪರ ವಕೀಲರು ಮಾಡಿದ ಮನವಿಯನ್ನು ನ್ಯಾಯಾಲಯವು ಇದೇ ವೇಳೆ ತಿರಸ್ಕರಿಸಿದೆ. ಕಾಂಗ್ರೆಸ್ ನಾಯಕ ಈಗಾಗಲೇ ನ್ಯಾಯಾಲಯದ ಮೊರೆ ಹೋಗುವಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಅವರು “ಸಾಮಾನ್ಯ ವ್ಯಕ್ತಿಯಲ್ಲ” ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
ಇದನ್ನು ಓದಿದ್ದೀರಾ? ಸಾಮ್ರಾಜ್ಯಶಾಹಿಯ ಅಟ್ಟಹಾಸಕ್ಕೆ ಪ್ರತಿರೋಧದ ಕಿಚ್ಚು: ಅಮೆರಿಕ-ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಲೆಬನಾನ್
ಅಸ್ಸಾಂ ಸಿಎಂ ಪತ್ನಿ ರಿಣಿಕಿ ಭುಯಾನ್ ಶರ್ಮಾ ಅವರು ಅನೇಕ ವಿದೇಶಿ ಪಾಸ್ಪೋರ್ಟ್ಗಳನ್ನು ಹೊಂದಿದ್ದಾರೆ ಎಂದು ಪವನ್ ಖೇರಾ ಅವರು ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದರು. ಈ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದ ರಿಣಿಕಿ ಭುಯಾನ್, ಖೇರಾ ಅವರು ನಕಲಿ ದಾಖಲೆಗಳನ್ನು ಬಳಸಿ ತಮ್ಮ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಸ್ಸಾಂನಲ್ಲಿ ಎಫ್ಐಆರ್ ದಾಖಲಿಸಿದ್ದರು.
ಈ ಪ್ರಕರಣದ ತನಿಖೆಗಾಗಿ ಅಸ್ಸಾಂ ಪೊಲೀಸರ ತಂಡವೊಂದು ಮಂಗಳವಾರ ನವದೆಹಲಿಯಲ್ಲಿರುವ ಪವನ್ ಖೇರಾ ಅವರ ನಿವಾಸಕ್ಕೆ ತೆರಳಿ ಶೋಧ ನಡೆಸಿತ್ತು. ಅಲ್ಲಿ ಅವರು ಪತ್ತೆಯಾಗದ ಕಾರಣ, ಹೈದರಾಬಾದ್ನಲ್ಲಿದ್ದ ಖೇರಾ ಅವರನ್ನು ಹುಡುಕಿಕೊಂಡು ಪೊಲೀಸರು ತೆಲಂಗಾಣಕ್ಕೂ ಆಗಮಿಸಿದ್ದರು. ಇದರ ಬೆನ್ನಲ್ಲೇ ಬಂಧನ ಭೀತಿಯಿಂದ ಪವನ್ ಖೇರಾ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.




