ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶಗಳಲ್ಲಿ ಉಡುಪಿ ಜಿಲ್ಲೆ ಮತ್ತೊಮ್ಮೆ ತನ್ನ ಅಪ್ರತಿಮ ಸಾಧನೆಯನ್ನು ದಾಖಲಿಸಿಕೊಂಡಿದೆ. ಈ ಬಾರಿ ಶೇ.96.39 ಉತ್ತೀರ್ಣತೆಯೊಂದಿಗೆ ರಾಜ್ಯದಲ್ಲೇ ಅಗ್ರಸ್ಥಾನವನ್ನು ಅಲಂಕರಿಸಿರುವ ಉಡುಪಿ, ಸತತ ಎರಡನೇ ವರ್ಷವೂ ಈ ಗೌರವವನ್ನು ತನ್ನದಾಗಿಸಿಕೊಂಡಿದೆ. ಈ ಸಾಧನೆಯ ಮೂಲಕ ಕರಾವಳಿ ಭಾಗದ ಶಿಕ್ಷಣ ವ್ಯವಸ್ಥೆಯ ಶಕ್ತಿ, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಸಮರ್ಪಣೆಯ ಸಮನ್ವಯ ಮತ್ತೆ ಸಾಬೀತಾಗಿದೆ.
ಈ ಬಾರಿ ಕೂಡ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವಿನ ತೀವ್ರ ಸ್ಪರ್ಧೆ ಗಮನಸೆಳೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಶೇ.96.35 ಫಲಿತಾಂಶದೊಂದಿಗೆ ಅತಿ ಅಲ್ಪ ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ಅಂಕಿ ಅಂಶಗಳು ಎರಡೂ ಜಿಲ್ಲೆಗಳ ನಡುವೆ ಇರುವ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ.
ಕೊರೋನಾ ನಂತರದ ಅವಧಿಯಲ್ಲಿ, ಅಂದರೆ 2022ರಿಂದ 2024ರವರೆಗೆ ದಕ್ಷಿಣ ಕನ್ನಡ ಜಿಲ್ಲೆ ನಿರಂತರವಾಗಿ ಅಗ್ರಸ್ಥಾನ ಕಾಯ್ದುಕೊಂಡಿತ್ತು. 2022ರಲ್ಲಿ ಶೇ.88.02 ಹಾಗೂ 2023ರಲ್ಲಿ ಶೇ.95.33 ಫಲಿತಾಂಶ ಪಡೆದು, 2024ರಲ್ಲಿ ಶೇ.97.37ರ ಅತ್ಯುನ್ನತ ಸಾಧನೆಯೊಂದಿಗೆ ತನ್ನ ಪ್ರಾಬಲ್ಯವನ್ನು ತೋರಿಸಿತ್ತು. ಆದರೆ, 2025ರಲ್ಲಿ ಉಡುಪಿ ಜಿಲ್ಲೆ ಶೇ.93.90 ಫಲಿತಾಂಶದೊಂದಿಗೆ ಮೊದಲ ಸ್ಥಾನಕ್ಕೇರಿ, ದಕ್ಷಿಣ ಕನ್ನಡವನ್ನು ಎರಡನೇ ಸ್ಥಾನಕ್ಕೆ ತಳ್ಳಿತು. ಈ ವರ್ಷವೂ ಅದೇ ಸಾಧನೆಯನ್ನು ಪುನರಾವರ್ತಿಸಿಕೊಂಡು ಉಡುಪಿ ತನ್ನ ಸ್ಥಾನವನ್ನು ಗಟ್ಟಿಗೊಳಿಕೊಂಡಿದೆ.
ಇನ್ನೊಂದೆಡೆ, 2018-19ರಲ್ಲಿ ಉಡುಪಿ ಜಿಲ್ಲೆ ಶೇ.92.20 ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆದಿದ್ದರೆ, 2019-20ರಲ್ಲಿ ಎರಡೂ ಜಿಲ್ಲೆಗಳು ಶೇ.90.71 ಫಲಿತಾಂಶದೊಂದಿಗೆ ಸಮಬಲ ಸಾಧಿಸಿದ್ದವು. ಹೀಗಾಗಿ, ಕಳೆದ ಒಂದು ದಶಕದಿಂದ ಕರಾವಳಿ ಜಿಲ್ಲೆಗಳ ನಡುವೆ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಪೈಪೋಟಿ ನಿರಂತರವಾಗಿದೆ.
ಈ ಬಾರಿ ಮೊದಲ ಬಾರಿಗೆ ಪರೀಕ್ಷೆ ಬರೆದ 16,624 ವಿದ್ಯಾರ್ಥಿಗಳಲ್ಲಿ 16,024 ಮಂದಿ ಉತ್ತೀರ್ಣರಾಗಿದ್ದು ಶೇ.96.39 ಫಲಿತಾಂಶ ದಾಖಲಾಗಿದೆ. ಒಟ್ಟಾರೆ ಖಾಸಗಿ ಹಾಗೂ ಮರುಪರೀಕ್ಷಾರ್ಥಿಗಳನ್ನು ಒಳಗೊಂಡಂತೆ 17,133 ಮಂದಿ ಪರೀಕ್ಷೆಗೆ ಹಾಜರಾದರೆ, 16,275 ಮಂದಿ ತೇರ್ಗಡೆಗೊಂಡು ಶೇ.94.99 ಫಲಿತಾಂಶ ಬಂದಿದೆ. ಇದು ಜಿಲ್ಲೆಯ ಸಮಗ್ರ ಸಾಧನೆಯನ್ನೇ ಪ್ರತಿಬಿಂಬಿಸುತ್ತದೆ.
ಖಾಸಗಿ ಅಭ್ಯರ್ಥಿಗಳಲ್ಲಿ ಶೇ.52.43 ಮಂದಿ ಹಾಗೂ ಮರುಪರೀಕ್ಷಾರ್ಥಿಗಳಲ್ಲಿ ಶೇ.41.01 ಮಂದಿ ಉತ್ತೀರ್ಣರಾಗಿರುವುದು, ಈ ವಿಭಾಗಗಳಲ್ಲಿ ಇನ್ನಷ್ಟು ಸುಧಾರಣೆಗೆ ಅವಕಾಶವಿದೆ ಎಂಬುದನ್ನು ಸೂಚಿಸುತ್ತದೆ. ಆದರೂ, ಒಟ್ಟಾರೆ ಫಲಿತಾಂಶದ ಮಟ್ಟ ಗಮನಾರ್ಹವಾಗಿದೆ.
ಈ ಬಾರಿ ಕೂಡ ಬಾಲಕಿಯರು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. 8,681 ಬಾಲಕಿಯರಲ್ಲಿ 8,403 ಮಂದಿ (ಶೇ.96.8) ಉತ್ತೀರ್ಣರಾಗಿದ್ದರೆ, 8,452 ಬಾಲಕರಲ್ಲಿ 7,872 ಮಂದಿ (ಶೇ.93.14) ಮಾತ್ರ ಪಾಸಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಮುಂದುವರಿದಿರುವ ಈ ಪ್ರವೃತ್ತಿ, ಬಾಲಕಿಯರ ಶೈಕ್ಷಣಿಕ ಚೇತನ ಮತ್ತು ಪರಿಶ್ರಮವನ್ನು ತೋರಿಸುತ್ತದೆ.
ಬಾಲಕಿಯರ ಸಾಧನೆಯು ಕೇವಲ ಅಂಕಿಅಂಶಗಳಲ್ಲೇ ಅಲ್ಲದೆ, ಒಟ್ಟಾರೆ ಶಿಕ್ಷಣದ ಗುಣಮಟ್ಟದ ಸೂಚಕವಾಗಿಯೂ ಪರಿಣಮಿಸಿದೆ. ಕುಟುಂಬ, ಶಾಲೆ ಮತ್ತು ಸಮಾಜದ ಸಹಕಾರದಿಂದ ಬಾಲಕಿಯರಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗುತ್ತಿರುವುದು ಇದರ ಹಿಂದೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.
ಮಾಧ್ಯಮ ಆಧಾರಿತ ಫಲಿತಾಂಶದಲ್ಲಿ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. 15,299 ವಿದ್ಯಾರ್ಥಿಗಳಲ್ಲಿ 14,756 ಮಂದಿ (ಶೇ.96.45) ಪಾಸಾಗಿರುವುದು ಗಮನಾರ್ಹ. ಇದಕ್ಕೆ ವಿರುದ್ಧವಾಗಿ ಕನ್ನಡ ಮಾಧ್ಯಮದಲ್ಲಿ 1,834 ವಿದ್ಯಾರ್ಥಿಗಳಲ್ಲಿ 1,519 ಮಂದಿ (ಶೇ.82.82) ಮಾತ್ರ ಉತ್ತೀರ್ಣರಾಗಿದ್ದಾರೆ.
ಈ ಅಂತರವು ಶಿಕ್ಷಣದ ಗುಣಮಟ್ಟ, ಸಂಪನ್ಮೂಲಗಳ ಲಭ್ಯತೆ, ಪಾಠ್ಯವಿಧಾನ ಹಾಗೂ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಸಿದ್ಧತೆಯ ಮೇಲೆ ಬೆಳಕು ಚೆಲ್ಲುತ್ತದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಮಾರ್ಗದರ್ಶನ ಮತ್ತು ಶೈಕ್ಷಣಿಕ ಬೆಂಬಲ ನೀಡುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಪರಿಶಿಷ್ಟ ಜಾತಿಯ 1,160 ವಿದ್ಯಾರ್ಥಿಗಳಲ್ಲಿ 1,052 ಮಂದಿ (ಶೇ.90.69) ಹಾಗೂ ಪರಿಶಿಷ್ಟ ಪಂಗಡದ 762 ಮಂದಿಯಲ್ಲಿ 705 ಮಂದಿ (ಶೇ.92.52) ಪಾಸಾಗಿರುವುದು ಗಮನಾರ್ಹ. ಇತರ ವರ್ಗಗಳಲ್ಲಿ 2ಎ – ಶೇ.95.33, 2ಬಿ – ಶೇ.93.39, 3ಎ – ಶೇ.97.71, 3ಬಿ – ಶೇ.96.56 ಹಾಗೂ ಸಾಮಾನ್ಯ ವರ್ಗದಲ್ಲಿ ಶೇ.96.59 ಫಲಿತಾಂಶ ದಾಖಲಾಗಿದೆ. ಈ ಅಂಕಿಅಂಶಗಳು ಸಮಾಜದ ವಿವಿಧ ವರ್ಗಗಳಲ್ಲಿ ಶಿಕ್ಷಣದ ವ್ಯಾಪ್ತಿಯು ಸಮಾನವಾಗಿ ವಿಸ್ತರಿಸುತ್ತಿರುವುದನ್ನು ತೋರಿಸುತ್ತವೆ.
ನಗರ ಪ್ರದೇಶದ ವಿದ್ಯಾರ್ಥಿಗಳು ಸ್ವಲ್ಪ ಮೇಲುಗೈ ಸಾಧಿಸಿದ್ದು, 6,090 ಮಂದಿಯಲ್ಲಿ 5,877 ಮಂದಿ (ಶೇ.96.5) ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ 10,534 ಮಂದಿಯಲ್ಲಿ 10,147 ಮಂದಿ (ಶೇ.96.33) ಪಾಸಾಗಿದ್ದಾರೆ. ಎರಡೂ ವಿಭಾಗಗಳ ನಡುವೆ ಅಲ್ಪ ಅಂತರ ಮಾತ್ರ ಇರುವುದರಿಂದ, ಗ್ರಾಮೀಣ ಭಾಗದಲ್ಲಿಯೂ ಶಿಕ್ಷಣದ ಮಟ್ಟ ಉತ್ತಮವಾಗಿರುವುದು ಸ್ಪಷ್ಟವಾಗಿದೆ.
ವಿಭಾಗವಾರು ಫಲಿತಾಂಶದಲ್ಲಿ ವಿಜ್ಞಾನ ವಿಭಾಗ ಮತ್ತೆ ಅಗ್ರಸ್ಥಾನದಲ್ಲಿದೆ. 8,336 ವಿದ್ಯಾರ್ಥಿಗಳಲ್ಲಿ 8,006 ಮಂದಿ (ಶೇ.98.44) ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 7,173 ಮಂದಿಯಲ್ಲಿ 6,866 ಮಂದಿ (ಶೇ.95.72) ಪಾಸಾಗಿದ್ದು, ಕಲಾ ವಿಭಾಗದಲ್ಲಿ 1,115 ಮಂದಿಯಲ್ಲಿ 952 ಮಂದಿ (ಶೇ.85.38) ಮಾತ್ರ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದ ಈ ನಿರಂತರ ಮೇಲುಗೈ, ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೋರ್ಸ್‌ಗಳತ್ತ ಇರುವ ಆಸಕ್ತಿಯನ್ನು ತೋರಿಸುತ್ತದೆ. ಕಲಾ ವಿಭಾಗದಲ್ಲಿ ಇನ್ನಷ್ಟು ಉತ್ತೇಜನ ನೀಡುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಜಿಲ್ಲೆಯ ಎಂಟು ಸರಕಾರಿ ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ಒಟ್ಟು 25 ಕಾಲೇಜುಗಳು ಶೇ.100 ಫಲಿತಾಂಶ ದಾಖಲಿಸಿರುವುದು ವಿಶಿಷ್ಟ ಸಾಧನೆಯಾಗಿದೆ. ಇದು ಶಿಕ್ಷಣ ಸಂಸ್ಥೆಗಳ ನಿರಂತರ ಶ್ರಮ ಮತ್ತು ವಿದ್ಯಾರ್ಥಿಗಳ ತೀವ್ರ ಪರಿಶ್ರಮದ ಫಲವಾಗಿದೆ.
ಕ್ರಿಯೇಟಿವ್ ಪಿಯು ಕಾಲೇಜು, ಜನತಾ ಇಂಡಿಪೆಂಡೆಂಟ್ ಪಿಯು ಕಾಲೇಜು, ಜ್ಞಾನಸುಧಾ ಕಾಲೇಜು, ವೆಂಕಟರಮಣ ಪಿಯು ಕಾಲೇಜು, ವಿದ್ಯೋದಯ ಪಿಯು ಕಾಲೇಜು ಸೇರಿದಂತೆ ಹಲವು ಸಂಸ್ಥೆಗಳು ಉತ್ತಮ ಸಾಧನೆ ತೋರಿವೆ. ವಿಶೇಷವಾಗಿ ಜನತಾ ಇಂಡಿಪೆಂಡೆಂಟ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ರಾಜ್ಯ ಟಾಪರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ.
ಹೆಜಮಾಡಿ ಸರಕಾರಿ ಪಿಯು ಕಾಲೇಜು ಶೇ.33.33 ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿ ಕನಿಷ್ಠ ಸಾಧನೆ ದಾಖಲಿಸಿದೆ. ಖಾಸಗಿ ಸಂಸ್ಥೆಗಳ ಪೈಕಿ ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಪಿಯು ಕಾಲೇಜು ಶೇ.53.85 ಫಲಿತಾಂಶ ಪಡೆದಿದೆ. ಈ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ.

ಜಿಲ್ಲೆಯ ಸಾಧನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿನಂದನೆ ಸಲ್ಲಿಸಿ, ಇದು ಜಿಲ್ಲೆಯ ಶೈಕ್ಷಣಿಕ ಪರಂಪರೆಯ ಪ್ರತಿಫಲ ಎಂದು ಹೇಳಿದ್ದಾರೆ. ಉಡುಪಿ ಶಾಸಕ ಯಶಪಾಲ್ ಸುವರ್ಣ ಕೂಡ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಅದೇ ವೇಳೆ, ಜಿಲ್ಲೆಯ ಶಿಕ್ಷಣಾಭಿವೃದ್ಧಿಗೆ ಹೆಚ್ಚುವರಿ ಅನುದಾನ ನೀಡುವಂತೆ ಹಾಗೂ ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಉಡುಪಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ಮೂರನೇ ರ್ಯಾಂಕ್: ಕುಕ್ಕುಂದೂರು ವಿದ್ಯಾರ್ಥಿನಿ ಪ್ರೇರಣಾ ಭರ್ಜರಿ ಸಾಧನೆ
ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಹಿರ್ಗಾನದ ಕ್ರಿಯೆಟಿವ್ ಕಾಲೇಜಿನ ವಿದ್ಯಾರ್ಥಿನಿ ಪ್ರೇರಣಾ ಅವರು ವಾಣಿಜ್ಯ ವಿಭಾಗದಲ್ಲಿ 598 ಅಂಕಗಳನ್ನು ಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯ ಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ.
ಕಾರವಾರ ಮೂಲದ ಎನ್‌ಪಿಸಿಎಲ್ ಇಂಜಿನಿಯರ್ ರಾಮಚಂದ್ರ ಹೆಗ್ಡೆ ಮತ್ತು ಶಿಲ್ಪಗಿರಿ ಬಿ.ಎಂ. ದಂಪತಿಯ ಪುತ್ರಿಯಾಗಿರುವ ಪ್ರೇರಣಾ, ಭವಿಷ್ಯದಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗುವ ಗುರಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂದಿನ ತಿಂಗಳು ವೃತ್ತಿಪರ ಕೋರ್ಸ್‌ಗೆ ಸಂಬಂಧಿಸಿದ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ತಮ್ಮ ಸಾಧನೆಯ ಕುರಿತು ಮಾತನಾಡಿದ ಅವರು, “ಸಾಮೂಹಿಕ ಪ್ರಯತ್ನದಿಂದಲೇ ಈ ಯಶಸ್ಸು ಸಾಧ್ಯವಾಯಿತು. ಕಾಲೇಜಿನ ನಿಯಮಿತ ವೇಳಾಪಟ್ಟಿ ಓದನ್ನು ವ್ಯವಸ್ಥಿತಗೊಳಿಸಲು ಸಹಾಯವಾಯಿತು. ನಾಲ್ಕು ಪೂರ್ವ ಬೋರ್ಡ್ ಪರೀಕ್ಷೆಗಳು ಹಾಗೂ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿದದ್ದು ಬಹಳ ಉಪಯುಕ್ತವಾಯಿತು” ಎಂದು ಹೇಳಿದರು.
“ಕಡಿಮೆ ಸಮಯ ಓದಿದರೂ ಸಂಪೂರ್ಣ ಏಕಾಗ್ರತೆ ಮತ್ತು ಸಮರ್ಪಣೆಯಿಂದ ಓದಿದರೆ ಉತ್ತಮ ಫಲಿತಾಂಶ ಗಳಿಸಬಹುದು” ಎಂಬ ಸಂದೇಶವನ್ನು ಅವರು ವಿದ್ಯಾರ್ಥಿಗಳಿಗೆ ನೀಡಿದ್ದಾರೆ.
2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಒಟ್ಟು ಶೇ.81.58ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 6,94,545 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 5,66,608 ಮಂದಿ ಯಶಸ್ಸು ಸಾಧಿಸಿದ್ದಾರೆ.
ಹೊಸಬರ ಸಾಧನೆ ಗಮನಾರ್ಹವಾಗಿದ್ದು, 6,32,200 ವಿದ್ಯಾರ್ಥಿಗಳಲ್ಲಿ 5,46,698 ಮಂದಿ ತೇರ್ಗಡೆಯಾಗಿ ಶೇ.86.48 ಫಲಿತಾಂಶ ದಾಖಲಿಸಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 50,097 ಮಂದಿ ಪರೀಕ್ಷೆ ಬರೆದಿದ್ದು, 14,527 (ಶೇ.29) ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ. ಖಾಸಗಿ ಅಭ್ಯರ್ಥಿಗಳಲ್ಲಿ 12,248 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 5,383 (ಶೇ.43.95) ಮಂದಿ ತೇರ್ಗಡೆಯಾಗಿದ್ದಾರೆ.
ವಿಭಾಗವಾರು ಫಲಿತಾಂಶದಲ್ಲಿ ವಿಜ್ಞಾನ ವಿಭಾಗವೇ ಅಗ್ರಸ್ಥಾನದಲ್ಲಿದ್ದು, 2,90,194 ವಿದ್ಯಾರ್ಥಿಗಳಲ್ಲಿ 2,66,071 ಮಂದಿ (ಶೇ.91.86) ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 2,07,085 ವಿದ್ಯಾರ್ಥಿಗಳಲ್ಲಿ 1,82,317 ಮಂದಿ (ಶೇ.88.04) ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 1,34,921 ವಿದ್ಯಾರ್ಥಿಗಳಲ್ಲಿ 98,310 ಮಂದಿ (ಶೇ.72.86) ಉತ್ತೀರ್ಣರಾಗಿದ್ದಾರೆ.

“ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ-3 ಅನ್ನು ರದ್ದು ಮಾಡಲಾಗಿದೆ. ಸಿಇಟಿ ಪರೀಕ್ಷೆಯ ಫಲಿತಾಂಶದಲ್ಲಿ ಪರೀಕ್ಷೆ-3 ಅಂಕಗಳನ್ನು ಪರಿಗಣಿಸಲು ಸಾಧ್ಯವಾಗುತ್ತಿರಲಿಲ್ಲ. ಯಾರಿಗೂ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ,” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.
ಒಟ್ಟಾರೆ, ಉಡುಪಿ ಜಿಲ್ಲೆಯ ಸತತ ಎರಡನೇ ಅಗ್ರಸ್ಥಾನವು ಗುಣಮಟ್ಟದ ಶಿಕ್ಷಣ, ಶಿಕ್ಷಕರ ಸಮರ್ಪಣೆ ಮತ್ತು ವಿದ್ಯಾರ್ಥಿಗಳ ಪರಿಶ್ರಮದ ಪ್ರತೀಕವಾಗಿದೆ. ಕರಾವಳಿ ಜಿಲ್ಲೆಗಳ ನಡುವಿನ ಸ್ಪರ್ಧಾತ್ಮಕ ಮನೋಭಾವವೇ ಈ ಸಾಧನೆಗೆ ಪ್ರಮುಖ ಕಾರಣವಾಗಿದ್ದು, ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಮತ್ತೊಮ್ಮೆ ತನ್ನ ಸ್ಥಾನವನ್ನು ದೃಢಪಡಿಸಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




