ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (SIT), ಗುರುವಾರ (ಜು.2) ಮತ್ತೂ ಮೂವರನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧನಕ್ಕೊಳಗಾದವರ ಒಟ್ಟು ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಬಂಧಿತರನ್ನು ಕಪಿಲ್ ದಹಿಯಾ (ಪಂಜಾಬ್‌ನ ಪಠಾಣ್‌ಕೋಟ್), ಮಿಥುನ್‌ಕುಮಾರ್ ಸುಬ್ಲಾಲ್ ಸಿಂಗ್ ಮತ್ತು ಸೋನುಕುಮಾರ್ ಕುಶ್‌ವೇಶ್ವರ್ ಸಿಂಗ್ (ಇಬ್ಬರೂ ಬಿಹಾರದ ಸಮಸ್ತಿಪುರದವರು) ಎಂದು ಗುರುತಿಸಲಾಗಿದೆ. ನ್ಯಾಯಾಲಯವು ಮೂವರನ್ನು ಜುಲೈ 9ರವರೆಗೆ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.
ಕಪಿಲ್ ದಹಿಯಾ ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದು, ಎಫ್‌ಐಆರ್‌ನಲ್ಲಿ ಹೆಸರಿತ್ತು. ಕಳೆದ ವಾರ ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡಲು ಮುಂಬೈಗೆ ಬಂದಿದ್ದ ನಾಲ್ವರ ತಂಡದಲ್ಲಿ ಈತ ಕೂಡ ಇದ್ದ. ಪೊಲೀಸರು ಬಲೆ ಬೀಸಿದಾಗ ಇವನ ಸಹಚರ ಸಿಕ್ಕಿಬಿದ್ದಿದ್ದರೂ, ಕಪಿಲ್ ದಹಿಯಾ ಪುಣೆಗೆ ಪರಾರಿಯಾಗಿ ಅಲ್ಲಿಂದ ವಿಮಾನದ ಮೂಲಕ ಮಹಾರಾಷ್ಟ್ರದಿಂದ ತಪ್ಪಿಸಿಕೊಂಡಿದ್ದ. ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸಲು ಈತ ತನ್ನ ಟಿಕೆಟ್ ಅನ್ನು ‘ಕಪಿಲ್ ಕಪಿಲ್’ ಎಂಬ ಹೆಸರಿನಲ್ಲಿ ಬುಕ್ ಮಾಡಿದ್ದ. ಇವನು ಪ್ರಕರಣದ ಮಾಸ್ಟರ್‌ಮೈಂಡ್ ಬಿಜೇಂದ್ರ ಕುಮಾರ್ ಗುಪ್ತಾನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ.
ಬಿಹಾರದ ಸಮಸ್ತಿಪುರದ ನಿವಾಸಿಯಾದ ಮಿಥುನ್‌ಕುಮಾರ್ ಸುಬ್ಲಾಲ್ ಸಿಂಗ್, ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡಲು ಮತ್ತು ಅಭ್ಯರ್ಥಿಗಳಿಗೆ ಉತ್ತರಗಳನ್ನು ಒದಗಿಸಲು ಪುಣೆಗೆ ಹೋಗಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಉರ್ದು ಭಾರತೀಯ ಭಾಷೆ, ಹೊರಗಿನಿಂದ ಬಂದಿದ್ದಲ್ಲ: ಮುರಳಿ ಮನೋಹರ್ ಜೋಶಿ
ಬಿಹಾರದಲ್ಲಿ ಫೋಟೋಶಾಪ್ ಸೆಂಟರ್ ನಡೆಸುತ್ತಿರುವ ಸೋನುಕುಮಾರ್ ಕುಶ್‌ವೇಶ್ವರ್ ಸಿಂಗ್, ಮುಖ್ಯ ಆರೋಪಿ ಬಿಜೇಂದ್ರ ಗುಪ್ತನಿಗೆ ನಕಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸಿಕೊಟ್ಟಿದ್ದ. ಈ ನಕಲಿ ದಾಖಲೆಗಳನ್ನು ಬಳಸಿಯೇ ಬಿಜೇಂದ್ರ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ. ಅಲ್ಲದೆ, ತನ್ನ ಅಂಗಡಿಯಲ್ಲಿ ಸೋರಿಕೆಯಾದ ಪರೀಕ್ಷಾ ಪತ್ರಿಕೆಗಳ ಪ್ರತಿಗಳನ್ನು ತೆಗೆಯಲು ಈತ ಸಹಾಯ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ 7 ಮಂದಿ ಬಂಧನಕ್ಕೊಳಗಾಗಿದ್ದರೂ, ಈ ಇಡೀ ಅಕ್ರಮದ ರೂವಾರಿ ಎಂದು ಶಂಕಿಸಲಾದ ಬಿಜೇಂದ್ರ ಕುಮಾರ್ ಗುಪ್ತ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಆತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.




