ಕಳೆದ ವರ್ಷ ಮೇಘಾಲಯದಲ್ಲಿ ನಡೆದಿದ್ದ ಕುಖ್ಯಾತ ‘ಹನಿಮೂನ್ ಮರ್ಡರ್’ ಪ್ರಕರಣದ ಪ್ರಮುಖ ಆರೋಪಿ ಸೋನಂ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಶೀಲ್ ನಾಗು ಅವರಿದ್ದ ದ್ವಿಸದಸ್ಯ ಪೀಠವು ವಿಚಾರಣೆ ವೇಳೆ ಆದೇಶ ನೀಡುವಾಗ ಕೊಂಚ ಗೊಂದಲಕ್ಕೀಡಾಗಿತ್ತು. ಆರಂಭದಲ್ಲಿ ಜಾಮೀನು ರದ್ದುಪಡಿಸುವುದಾಗಿ ಹೇಳಿದ್ದ ಪೀಠ, ಆನಂತರ ಆರೋಪಿ ಆಗಲೇ ಜೈಲಿನಿಂದ ಬಿಡುಗಡೆಯಾಗಿರುವ ಅಂಶವನ್ನು ಗಮನಿಸಿ ತನ್ನ ನಿರ್ಧಾರ ಬದಲಿಸಿತು. ಸದ್ಯಕ್ಕೆ ಆರೋಪಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು, ಕೆಳ ಹಂತದಲ್ಲಿ ನಡೆಯುತ್ತಿರುವ ವಿಚಾರಣೆಯ ಪ್ರಗತಿಯನ್ನು ಗಮನಿಸುವುದಾಗಿ ತಿಳಿಸಿದೆ.
ಆರೋಪಿಯನ್ನು ಬಂಧಿಸುವಾಗ ದಾಖಲೆಗಳಲ್ಲಿ ತಾಂತ್ರಿಕ ದೋಷ (Typo error) ಇದ್ದ ಕಾರಣಕ್ಕೆ ಶಿಲ್ಲಾಂಗ್‌ನ ವಿಚಾರಣಾ ನ್ಯಾಯಾಲಯವು ಏಪ್ರಿಲ್‌ನಲ್ಲಿ ಆಕೆಗೆ ಜಾಮೀನು ನೀಡಿತ್ತು. ಜೂನ್ 29ರಂದು ಮೇಘಾಲಯ ಹೈಕೋರ್ಟ್ ಕೂಡ ಈ ಆದೇಶವನ್ನು ಎತ್ತಿ ಹಿಡಿದಿತ್ತು. ಕೇವಲ ತಾಂತ್ರಿಕ ಕಾರಣಕ್ಕೆ ಗಂಭೀರ ಪ್ರಕರಣದ ಆರೋಪಿಗೆ ಜಾಮೀನು ನೀಡಬಾರದೆಂದು ಮೇಘಾಲಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಹಿಂದೆ ನಡೆದ ಘಟನಾವಳಿಗಳನ್ನು ಗಮನಿಸುವುದಾದರೆ, ಮಧ್ಯಪ್ರದೇಶದ ಇಂದೋರ್ ಮೂಲದ ಸೋನಂ ಮತ್ತು ಉದ್ಯಮಿ ರಾಜಾ ರಘುವಂಶಿ 2025ರ ಮೇ ತಿಂಗಳಲ್ಲಿ ಮೇಘಾಲಯದ ಸೊಹ್ರಾಗೆ ಮಧುಚಂದ್ರಕ್ಕೆ ತೆರಳಿದ್ದರು. ಮೇ 23ರಂದು ನಾಪತ್ತೆಯಾಗಿದ್ದ ರಾಜಾ ಅವರ ಮೃತದೇಹ ಒಂಬತ್ತು ದಿನಗಳ ಬಳಿಕ ಆಳವಾದ ಪ್ರಪಾತದಲ್ಲಿ ಪತ್ತೆಯಾಗಿತ್ತು. ಹಣದಾಸೆಗಾಗಿ ಸುಪಾರಿ ಹಂತಕರೊಂದಿಗೆ ಸೇರಿ ಪತಿಯನ್ನೇ ಕೊಂದ ಆರೋಪದ ಮೇಲೆ ಸೋನಂಳನ್ನು ಜೂನ್‌ನಲ್ಲಿ ಬಂಧಿಸಲಾಗಿತ್ತು.




