ದೇಶದ ದೇಶದ್ರೋಹ ಮತ್ತು ಭಯೋತ್ಪಾದನಾ ವಿರೋಧಿ ಕಾನೂನುಗಳನ್ನು ಹಲವು ಬಾರಿ ಅಷ್ಟೊಂದು ಹೆಸರುವಾಸಿಯಲ್ಲದವರ, ದಮನಿತರ ವಿರುದ್ಧವೇ ಪ್ರಯೋಗಗೊಂಡಿರುವುದು. ಅರ್ಥಶಾಸ್ತ್ರಜ್ಞರು ಹೇಳುವಂತೆ ಕಾನೂನು ಬಹುಪಾಲು ಒಂದು ತೆರಿಗೆಯಂತೆಯೇ ಕಾರ್ಯನಿರ್ವಹಿಸುತ್ತದೆ. ಹಾಗಾಗಿ, ಸಾಂವಿಧಾನಿಕವಾಗಿ ಮತ್ತು ಆರ್ಥಿಕವಾಗಿ ಎರಡೂ ದೃಷ್ಟಿಯಿಂದ ನೋಡಿದಾಗ ದೇಶದ ಭವಿಷ್ಯ ತೀರ ಅನಿಶ್ಚಿತವಾಗಿ ಕಾಣುತ್ತಿದೆ.
ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಮ್ಮೆ ಭಾರತದ್ದು. ಆದರೆ ದೇಶದಲ್ಲಿರುವ ಭಯೋತ್ಪಾದನಾ ನಿರೋಧಿ ಕಾನೂನುಗಳು ಈ ಹೆಮ್ಮೆಗೆ ತದ್ವಿರುದ್ಧವಾಗಿ ನಮ್ಮಲ್ಲಿ ಕಳವಳವನ್ನು ಮೂಡಿಸುತ್ತವೆ. ಯಾವುದೇ ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಇರಬೇಕಾದ ಮೂಲಭೂತ ಹಕ್ಕು ‘ಅಭಿವ್ಯಕ್ತಿ ಸ್ವಾತಂತ್ರ್ಯ’. ಆದರೆ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿರುವ ಈ ಕಾನೂನುಗಳು ಹಂತ-ಹಂತವಾಗಿ ಮೂಲಭೂತ ಹಕ್ಕುಗಳನ್ನೇ ಕಾನೂನುಬಾಹಿರಗೊಳಿಸುತ್ತಿದೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA), 1967, ಮತ್ತು ಭಾರತೀಯ ನ್ಯಾಯ ಸಂಹಿತೆ, 2024 ರ ಸೆಕ್ಷನ್ 152 ರ ಅಡಿಯಲ್ಲಿ ಬರುವ ದೇಶದ್ರೋಹದ ಕಾನೂನು (ಹಿಂದಿನ ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 124A), ಇವೆರಡೂ ಕೇಂದ್ರದ ವಿರುದ್ದ ಭಿನ್ನಾಭಿಪ್ರಾಯ ಹೊಂದಿರುವವರೇ ಅಪರಾಧಿಗಳು ಎಂಬಂತೆ ಬಿಂಬಿಸುವ ಕಾನೂನುಗಳು. ಈ ಕಾನೂನುಗಳ ದುರ್ಬಳಕೆಯನ್ನು ಕೇವಲ ಸಾಂವಿಧಾನಿಕ ವೈಫಲ್ಯ ಎಂದು ಮಾತ್ರವಲ್ಲದೆ, ಆರ್ಥಿಕ ವೈಫಲ್ಯ ಎಂದೂ ಹೇಳಬಹುದು.
ಇದನ್ನೂ ಓದಿ: ಈ ದಿನ ಸಂಪಾದಕೀಯ | 2023ರ ಐಟಿ ನಿಯಮಗಳು- ಅಭಿವ್ಯಕ್ತಿ ಸ್ವಾತಂತ್ರ್ಯ ಹಣಿಯುವ ಮತ್ತೊಂದು ಹುನ್ನಾರ?
ಬ್ರಿಟಿಷರು ಭಾರತೀಯ ರಾಷ್ಟ್ರೀಯ ಚಳವಳಿಯನ್ನು ಹತ್ತಿಕ್ಕಲು ದೇಶದ್ರೋಹದ ಕಾನೂನನ್ನು (IPC ಸೆಕ್ಷನ್ 124A) ಜಾರಿಗೆ ತಂದಿದ್ದರು. ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಈ ಕಾನೂನು ಬಳಸಲಾಗಿತ್ತು. ಬ್ರಿಟಿಷ್ ಆಡಳಿತದ ವಿರುದ್ಧ ‘ಅಸಮಾಧಾನ’ ವ್ಯಕ್ತಪಡಿಸುವ ಯಾವುದೇ ವ್ಯಕ್ತಿಗೆ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಅವಕಾಶವನ್ನು ಈ ಕಾನೂನು ಹೊಂದಿತ್ತು. ಭಾರತ ಸ್ವತಂತ್ರಗೊಂಡ ಬಳಿಕವೂ ಇದೇ ಕಾನೂನು ಮುಂದುವರೆಯಿತು.
1962ರ ‘ಕೇದಾರ್ ನಾಥ್ ಸಿಂಗ್ ವರ್ಸಸ್ ಬಿಹಾರ್ ರಾಜ್ಯ’ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಸೆಕ್ಷನ್ 124A ರ ಸಿಂಧುತ್ವವನ್ನು ಎತ್ತಿಹಿಡಿಯಿತು. ಆದರೆ, ನೇರವಾಗಿ ಹಿಂಸಾಚಾರ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಪ್ರಚೋದನಾಕಾರಿ ಭಾಷಣಗಳಿಗೆ ಮಾತ್ರ ಈ ಕಾನೂನು ಅನ್ವಯಿಸುತ್ತದೆ. ಸರ್ಕಾರವನ್ನು ಎಷ್ಟೇ ತೀಕ್ಷ್ಣವಾಗಿ ಟೀಕಿಸಿದ್ದರೂ ಅದು ಸೆಕ್ಷನ್ 124Aರ ಅಡಿಯಲ್ಲಿ ಬರದು ಎಂದು ಸ್ಪಷ್ಟಪಡಿಸಿತ್ತು. ಸುಪ್ರೀಂ ಕೋರ್ಟ್ ಈ ಎಚ್ಚರಿಕೆ ನೀಡಿದ್ದರೂ ಸರ್ಕಾರಗಳು ಮಾತ್ರ ನಿರಂತರವಾಗಿ ಆದೇಶವನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಆದಿವಾಸಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರ ವಿರುದ್ಧ ಈ ಸೆಕ್ಷನ್ ಪ್ರಯೋಗಿಸಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2014ರಲ್ಲಿ ದೇಶದ್ರೋಹದ ಪ್ರಕರಣಗಳನ್ನು ಪತ್ತೆಹಚ್ಚಲು ಪ್ರಾರಂಭಿಸಿದಾಗ ದೊರೆತ ಅಂಕಿ-ಅಂಶಗಳು ಕಾನೂನು ದುರುಪಯೋಗದ ಸ್ಪಷ್ಟವಾದ ಚಿತ್ರಣವನ್ನು ನೀಡಿದೆ. 2014 ಮತ್ತು 2019ರ ನಡುವೆ ದಾಖಲಾದ 326 ಪ್ರಕರಣಗಳಲ್ಲಿ ಕೇವಲ ಆರು ಪ್ರಕರಣಗಳಲ್ಲಿ ಮಾತ್ರ ಅಪರಾಧ ಸಾಬೀತಾಗಿದೆ. ಉಳಿದಂತೆ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆಯೂ ಆಗಿರಲಿಲ್ಲ. 2022ರ ‘ವೊಂಬತ್ಕೆರೆ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಕಳವಳಗಳನ್ನು ಒಪ್ಪಿಕೊಂಡು, ಸೆಕ್ಷನ್ 124A ಅಡಿಯಲ್ಲಿನ ಎಲ್ಲಾ ಹೊಸ ಪ್ರಕರಣಗಳಿಗೆ ತಡೆಯಾಜ್ಞೆ ನೀಡಿತು. ಅಲ್ಲದೆ, ಈ ನಿಬಂಧನೆಯು ‘ಪ್ರಸ್ತುತ ಸಾಮಾಜಿಕ ಪರಿಸರಕ್ಕೆ ಹೊಂದಿಕೆಯಾಗುತ್ತಿಲ್ಲ’ ಎಂದೂ ಹೇಳಿತು.
ಆದರೆ ಇದಕ್ಕೆ ಶಾಸಕಾಂಗ ಮಾಡಿದ್ದೇನು? ಶಾಸಕಾಂಗ ಈ ನಿಬಂಧನೆಯನ್ನು ಮರುನಾಮಕರಣ ಮಾಡಿತೇ ಹೊರತು ಸುಧಾರಣೆ ಮಾಡಿಲ್ಲ. ಭಾರತೀಯ ನ್ಯಾಯ ಸಂಹಿತೆಯಡಿಯಲ್ಲಿ ಸೆಕ್ಷನ್ 124Aರ ಬದಲಿಗೆ ಸೆಕ್ಷನ್ 152 ಅನ್ನು ತರಲಾಗಿದೆ. ಈ ಸೆಕ್ಷನ್ ಪ್ರಕಾರ ದೇಶದ ಸಾರ್ವಭೌಮತೆ, ಏಕತೆ ಅಥವಾ ಸಮಗ್ರತೆಗೆ ಧಕ್ಕೆ ತರುವಂತಹ ಕೃತ್ಯಗಳು ಅಪರಾಧ. ಕೇಂದ್ರ ಸರ್ಕಾರವು ಇದನ್ನು ‘ರಾಜದ್ರೋಹ’ದಿಂದ ‘ದೇಶದ್ರೋಹ’ಕ್ಕೆ ಬದಲಾದ ರೂಪ ಎಂದು ಬಂಬಿಸಿದೆ. ಆದರೆ ಕಾನೂನು ತಜ್ಞರ ಪ್ರಕಾರ ಇದು ‘ಹೊಸ ಬಾಟಲಿಯಲ್ಲಿ ಹಳೆಯ ಹೆಂಡ’ ಅಂದರೆ ಹೆಸರು ಬದಲಾದರೂ ಗುಣ ಬದಲಾಗಿಲ್ಲ.
ಇದನ್ನೂ ಓದಿ: ನಮ್ಮ ಅವಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಇಲ್ಲ: ಸಿಎಂ ಸಿದ್ದರಾಮಯ್ಯ
ಪ್ರತ್ಯೇಕತಾವಾದಿ ಸಂಘಟನೆಗಳನ್ನು ನಿಯಂತ್ರಿಸಲು 1967ರಲ್ಲಿ ಜಾರಿಗೆ ತರಲಾದ UAPA (ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ), ಕಾಲಾನಂತರದಲ್ಲಿ ಗಮನಾರ್ಹ ತಿದ್ದುಪಡಿಗಳಿಗೆ ಒಳಪಟ್ಟಿದೆ. ಹಂತ ಹಂತವಾಗಿ ನಡೆದ ಈ ತಿದ್ದುಪಡಿಗಳು ಜನರ ಹಕ್ಕುಗಳನ್ನು ಕಡಿತಗೊಳಿಸಿದೆ. ಈ ಮೂಲಕ ಸರ್ಕಾರದ ಅಧಿಕಾರವನ್ನು ವಿಸ್ತರಿಸುತ್ತಲೇ ಬಂದಿವೆ. 2019ರಲ್ಲಾದ ತಿದ್ದುಪಡಿಯು ಅತ್ಯಂತ ತೀವ್ರ ಸ್ವರೂಪದ್ದು. ಯಾವುದೇ ಅಪರಾಧ ನಡೆಯದಿದ್ದರೂ ಸಹ, ಯಾವುದೇ ವ್ಯಕ್ತಿ ಅಥವಾ ಗುಂಪನ್ನು ಭಯೋತ್ಪಾದಕ ಎಂದು ಘೋಷಿಸುವ ಅಧಿಕಾರವನ್ನು ಸರ್ಕಾರಕ್ಕೆ ಈ ತಿದ್ದುಪಡಿ ನೀಡಿದೆ. ಇದರ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಸರ್ಕಾರಿ ಅಧಿಕಾರಿಗಳ ಸಮಿತಿಗೆ ವಹಿಸಲಾಗಿದೆ. ಆಶ್ಚರ್ಯವೆಂದರೆ ಈ ಸಮಿತಿಯ ಸದಸ್ಯರಿಗೆ ನ್ಯಾಯಾಂಗದ ಪರಿಣತಿ ಇರಬಹುದು ಅಥವಾ ಇಲ್ಲದೆಯೂ ಇರಬಹುದು.
ಇದಲ್ಲದೆ, 2019ರ ‘ಎನ್‌ಐಎ ವರ್ಸಸ್ ವಟಾಲಿ’ (NIA v. Watali) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, UAPA ಅಡಿಯಲ್ಲಿ ಜಾಮೀನು ಅರ್ಜಿಗಳ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ನ್ಯಾಯಾಲಯಗಳು ಪ್ರಾಸಿಕ್ಯೂಷನ್ (ಫಿರ್ಯಾದಿ ಪಕ್ಷ) ಮಂಡಿಸಿದ ವಾದವನ್ನು ಸತ್ಯವೆಂದೇ ಭಾವಿಸಬೇಕು ಎಂದು ತೀರ್ಪು ನೀಡಿದೆ. ಅಂದರೆ ಅಪರಾಧ ಸಾಬೀತುಪಡಿಸಲು ಪುರಾವೆಯೇ ಬೇಕಾಗಿಲ್ಲ. ಹಾಗೆಯೇ ಆರೋಪಿಗಳು ತಾವು ನಿರಪರಾಧಿಗಳು ಎಂದು ಸಾಬೀತುಪಡಿಸುವುದು ಇನ್ನಷ್ಟೂ ಕಷ್ಟ.
2023ರಲ್ಲಿ ಐಪಿಸಿ ಅಡಿಯಲ್ಲಿ ಅಪರಾಧ ಸಾಬೀತು ದರ ಶೇಕಡ 54ರಷ್ಟಿದೆ. ಆದರೆ ಯುಎಪಿಎ ಅಡಿಯಲ್ಲಿ ಅಪರಾಧ ಸಾಬೀತು ದರ ಬರೀ ಶೇ.3.2ರಷ್ಟಿದೆ. ಈ ಭಾರಿ ವ್ಯತ್ಯಾಸ ಕೇವಲ ಆಕಸ್ಮಿಕ ಅಂಕಿ-ಅಂಶವಲ್ಲ. ಯುಎಪಿಎ ಕಾನೂನು ಚೌಕಟ್ಟು ಎಷ್ಟು ಅಸ್ಪಷ್ಟವಾಗಿದೆ ಎಂದರೆ, ವಿಚಾರಣೆಯ ಹಂತದಲ್ಲಿರುವವರಿಗೆ ಜಾಮೀನು ಸಿಗುವ ಯಾವುದೇ ಸಾಧ್ಯತೆಗಳಿಲ್ಲ. ಇದರಿಂದಾಗಿ ನಿರಪರಾಧಿಗಳೂ ಜೈಲು ಪಾಲಾಗಬೇಕಾಗುತ್ತದೆ. ಅಂತಿಮ ತೀರ್ಪು ಬರುವ ಮುನ್ನವೇ ಅಮೂಲ್ಯ ವರ್ಷಗಳನ್ನು ಜೈಲಿನಲ್ಲೇ ಕಳೆಯಬೇಕಾಗುತ್ತದೆ. ಇದರಿಂದಾಗಿ ಅದೆಷ್ಟೋ ಬದುಕುಗಳು ಛಿದ್ರಗೊಳ್ಳುತ್ತದೆ, ಆರ್ಥಿಕ ವಿನಾಶ ಉಂಟಾಗುತ್ತದೆ.
ಅರ್ಥಶಾಸ್ತ್ರಜ್ಞರ ವಾದದಂತೆ ಈ ವ್ಯವಸ್ಥೆಯು ಬಹುಪಾಲು ಒಂದು ತೆರಿಗೆಯಂತೆಯೇ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ, ತನಿಖಾ ಪತ್ರಿಕೋದ್ಯಮದ ಪ್ರಯೋಜನಗಳು- ಅಂದರೆ ನಾಗರಿಕರಿಗೆ ಉತ್ತಮ ಮಾಹಿತಿ ಸಿಗುತ್ತದೆ, ಜನರಲ್ಲಿ ಹೊಣೆಗಾರಿಕೆ ಹೆಚ್ಚುತ್ತದೆ ಮತ್ತು ಆಡಳಿತಾತ್ಮಕ ವೈಫಲ್ಯಗಳ ತಿದ್ದುಪಡಿಯಾಗುತ್ತದೆ — ಇವೆಲ್ಲವೂ ಇಡೀ ಸಮಾಜಕ್ಕೆ ಲಭಿಸುವಂತದ್ದು. ಆದರೆ, ಈ ಕೆಲಸಕ್ಕಾಗಿ ತಗಲುವ ಸಮಯ, ಅಪಾಯ ಮತ್ತು ಕಾನೂನಿನ ಸಂಕಷ್ಟಗಳಂತಹ ವೆಚ್ಚಗಳನ್ನು ಸಂಪೂರ್ಣವಾಗಿ ಆಯಾ ವ್ಯಕ್ತಿಯೊಬ್ಬನೇ ಭರಿಸಬೇಕಾಗುತ್ತದೆ. ಆದರೆ ಅದರ ಪ್ರತಿಫಲವನ್ನು ಮಾತ್ರ ಎಲ್ಲರೂ ಹಂಚಿಕೊಳ್ಳುತ್ತಾರೆ.
ಅಮೆರಿಕದ ಅರ್ಥಶಾಸ್ತ್ರಜ್ಞ ಪಾಲ್ ಸ್ಯಾಮ್ಯುಯೆಲ್ಸನ್ ಅವರು ಹೇಳುವಂತೆ ಸಮಾಜಕ್ಕೆ ಒಳಿತನ್ನು ಮಾಡುವ ಕೆಲವು ಕೆಲಸಗಳನ್ನು ಅಥವಾ ಸೇವೆಗಳನ್ನು ಕೇವಲ ಮುಕ್ತ ಮಾರುಕಟ್ಟೆಯ ಶಕ್ತಿಗಳಿಗೆ (ಅಂದರೆ ಕೇವಲ ಲಾಭ-ನಷ್ಟದ ಲೆಕ್ಕಾಚಾರಕ್ಕೆ) ಬಿಟ್ಟುಬಿಟ್ಟರೆ, ಸಮಾಜಕ್ಕೆ ನಿಜವಾಗಿ ಎಷ್ಟು ಅಗತ್ಯವಿದೆಯೋ ಅಷ್ಟು ಪ್ರಮಾಣದಲ್ಲಿ ಅವು ಉತ್ಪತ್ತಿಯಾಗುವುದೇ ಇಲ್ಲ. ಅದೇ ರೀತಿ, ಬ್ರಿಟಿಷ್ ಅರ್ಥಶಾಸ್ತ್ರಜ್ಞ ಆರ್ಥರ್ ಪಿಗು ಅವರ ವಾದದ ಪ್ರಕಾರ, ಯಾವ ಕೆಲಸಗಳಿಂದ ಇಡೀ ಸಮಾಜಕ್ಕೆ ಒಳ್ಳೆಯದಾಗುತ್ತದೆಯೋ, ಅಂತಹ ಕೆಲಸಗಳನ್ನು ಸರ್ಕಾರಗಳು ಪ್ರೋತ್ಸಾಹಿಸಬೇಕೇ ಹೊರತು ಅವುಗಳ ಮೇಲೆ ತೆರಿಗೆ ಹಾಕಿ ದಂಡಿಸಬಾರದು.
ಆದರೆ ಈ ಕಠಿಣ ಕಾನೂನುಗಳು ಆ ತರ್ಕವನ್ನೇ ತಲೆಕೆಳಗಾಗಿಸುತ್ತದೆ. ತಾವು ಸಮಾಜಕ್ಕೆ ಮಾಡುವ ಒಳ್ಳೆಯ ಕಾರ್ಯಕ್ಕಾಗಿ, ಸುದೀರ್ಘ ಬಂಧನ, ದಾಖಲಾದ ದೂರಿನ ಕಾನೂನು ಹೋರಾಟಕ್ಕಾಗಿ ವೆಚ್ಚ ಭರಿಸುವುದು, ಹೀಗೆ ಒಟ್ಟಾರೆಯಾಗಿ ಆರ್ಥಿಕ ವಿನಾಶದ ಭಾರವನ್ನು ಹೊರುವಂತೆ ಈ ಕಾನೂನು ಮಾಡುತ್ತದೆ. ಇದು ‘ಸಾರ್ವಜನಿಕ ಸರಕುಗಳ ತೆರಿಗೆ’ (public goods tax) ಅಲ್ಲದೆ ಮತ್ತೇನೂ ಅಲ್ಲ. ಅಂದರೆ ಸಮಾಜದ ಒಳಿತಿಗಾಗಿ ಧ್ವನಿ ಎತ್ತುವವರು, ಸಮಾಜದಲ್ಲಿರುವ ಇತರರು ಎಂದಿಗೂ ತೆರಬೇಕಾಗಿಲ್ಲದ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ. ಅದಕ್ಕಾಗಿ ಈ ಕಾನೂನುಗಳನ್ನು ಬಳಸಿಕೊಳ್ಳಲಾಗುತ್ತದೆ.
ಒಟ್ಟಾರೆಯಾಗಿ ಸುಧಾರಣೆ ಎಂಬುದು ಒಂದು ಶಾಸನಾತ್ಮಕ ಕ್ರಮ. ಇಲ್ಲಿ ಸಂಪೂರ್ಣವಾಗಿ ರಾಜಕೀಯ ಇಚ್ಛಾಶಕ್ತಿ ಮುಖ್ಯ. ‘ಭಯೋತ್ಪಾದಕ ಕೃತ್ಯ’ ಅಥವಾ ‘ಕಾನೂನುಬಾಹಿರ ಚಟುವಟಿಕೆ’ ಎಂದರೆ ನಿಖರವಾಗಿ ಏನು ಎಂಬುದರ ಮಿತಿಯನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ಹೀಗಾದರೆ ಮಾತ್ರ ನಿರಂತರ ಮತ್ತು ನಿಷ್ಪಕ್ಷಪಾತ ಕಾನೂನು ಜಾರಿ ಸಾಧ್ಯವಾಗುತ್ತದೆ. ‘ವಟಾಲಿ’ ಪ್ರಕರಣದಲ್ಲಿ ರೂಪಿಸಲಾದ ಕಾನೂನುಗಳನ್ನು ಮರುಪರಿಶೀಲಿಸುವ ಅಗತ್ಯವಿದೆ. ಹಾಗೆಯೇ, ಈ ಕಾನೂನುಗಳ ಜಾರಿಯ ಮೇಲ್ವಿಚಾರಣೆ ನಡೆಸಲು ಒಂದು ಸ್ವತಂತ್ರ ಸಂಸ್ಥೆಯ ಅಗತ್ಯವೂ ಇದೆ.
ಇವೇನೂ ಕ್ರಾಂತಿಕಾರಿ ಸುಧಾರಣೆಗಳಲ್ಲ. ಬದಲಿಗೆ ಭಿನ್ನಾಭಿಪ್ರಾಯ ಹೊಂದಿರುವವರನ್ನು ಬಿಟ್ಟು ಕೇವಲ ಭಯೋತ್ಪಾದಕರನ್ನು ಮಾತ್ರ ಶಿಕ್ಷಿಸುವಂತಹ ನ್ಯಾಯಾಂಗ ವ್ಯವಸ್ಥೆಯ ಸಹಜ ಲಕ್ಷಣ. ದೇಶದ ದೇಶದ್ರೋಹ ಮತ್ತು ಭಯೋತ್ಪಾದನಾ ವಿರೋಧಿ ಕಾನೂನುಗಳನ್ನು ಹಲವು ಬಾರಿ ಅಷ್ಟೊಂದು ಹೆಸರುವಾಸಿಯಲ್ಲದವರ, ದಮನಿತರ ವಿರುದ್ಧವೇ ಪ್ರಯೋಗಗೊಂಡಿರುವುದು. ಹಾಗಾಗಿ, ಸಾಂವಿಧಾನಿಕವಾಗಿ ಮತ್ತು ಆರ್ಥಿಕವಾಗಿ ಎರಡೂ ದೃಷ್ಟಿಯಿಂದ ನೋಡಿದಾಗ ದೇಶದ ಭವಿಷ್ಯ ತೀರ ಅನಿಶ್ಚಿತವಾಗಿ ಕಾಣುತ್ತಿದೆ.
ಲೇಖಕರು : ಇಶಾನ್ ಉದಯ್ ಮತ್ತು ಹೆಮಾಂಗ್ ನಾಗ್‌ಪಾಲ್. ಇಬ್ಬರೂ ಗುಜರಾತ್‌ನ ಕಾನೂನು ವಿಶ್ವವಿದ್ಯಾಲಯದ ನಾಲ್ಕನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು
ಕೃಪೆ: ಡೆಕ್ಕನ್ ಹೆರಾಲ್ಡ್– https://www.deccanherald.com/opinion/how-the-law-taxes-free-speech-4056560




