ದೇಶದಲ್ಲಿ ಭಾಷೆಯ ಕುರಿತಾದ ಚರ್ಚೆಗಳು ತೀವ್ರಗೊಳ್ಳುತ್ತಿರುವ ಹೊತ್ತಲ್ಲೇ, ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಮುರಳಿ ಮನೋಹರ ಜೋಶಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಉರ್ದು ಒಂದು ಭಾರತೀಯ ಭಾಷೆಯಾಗಿದ್ದು, ಅದು ದೇಶದ ಹೊರಗಿನಿಂದ ಬಂದಿದ್ದಲ್ಲ ಎಂದಿದ್ದಾರೆ.
ನಿನ್ನೆ (ಜು.2) ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೋಶಿ, “ಉರ್ದು ಭಾರತದ ಮಣ್ಣಿನ ಭಾಷೆಯಾಗಿದೆ. ಅಷ್ಟೇ ಅಲ್ಲ, ಬಾಂಗ್ಲಾದೇಶದ ರಾಷ್ಟ್ರೀಯ ಭಾಷೆಯಾದ ಬಂಗಾಳಿಯೂ ಸಹ ಭಾರತೀಯ ಉಪಖಂಡದಲ್ಲೇ ಹುಟ್ಟಿಕೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ, ಭಾರತೀಯ ಮುಸ್ಲಿಮರು ಕುರಾನ್ ಅನ್ನು ಅರೇಬಿಕ್ ಬದಲು ಉರ್ದುವಿನಲ್ಲಿ ಓದುವಂತೆ ಉತ್ತೇಜಿಸಲು ಕೈಗೊಂಡ ಪ್ರಯತ್ನಗಳನ್ನು ಅವರು ಇದೇ ವೇಳೆ ಶ್ಲಾಘಿಸಿದರು.
ಇದನ್ನೂ ಓದಿ: ಇಂಧನ ಶುಲ್ಕ ಕಡಿತಗೊಳಿಸಿದ ಏರ್ ಇಂಡಿಯಾ; ಟಿಕೆಟ್ ದರವೂ ಇಳಿಯುವ ನಿರೀಕ್ಷೆ
ವಿಶ್ವ ಹಿಂದೂ ಪರಿಷತ್ (VHP) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಚಿ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪಂಜಾಬ್‌ನಲ್ಲಿ ಹಿಂದೂ ಮತ್ತು ಸಿಖ್ ಸಮುದಾಯಗಳ ನಡುವಿನ ಐಕ್ಯತೆಯನ್ನು ಬಲಪಡಿಸಲು ‘ಸಾಂಜೀವಲ್ತಾ’ (Sanjhiwalta) ಅಭಿಯಾನವನ್ನು ಶಂಕರಾಚಾರ್ಯರು ಘೋಷಿಸಿದರು. ಅಲ್ಲದೆ, ಪಂಜಾಬ್‌ನಲ್ಲಿ ದೇವಾಲಯಗಳ ಜೀರ್ಣೋದ್ಧಾರ ಮತ್ತು ಸಂಬಂಧಿತ ಧಾರ್ಮಿಕ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ವಿಶೇಷ ಟ್ರಸ್ಟ್ ಒಂದನ್ನು ರಚಿಸುವುದಾಗಿ ಅವರು ತಿಳಿಸಿದರು. ಹಿಂದೂಗಳು ಮತ್ತು ಸಿಖ್ಖರು ಸಾಮಾನ್ಯ ಆಧ್ಯಾತ್ಮಿಕ ಪರಂಪರೆಯನ್ನು ಹಂಚಿಕೊಂಡಿದ್ದಾರೆ ಎಂದು ಅವರು ಸ್ಮರಿಸಿದರು.




