ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಯುದ್ಧ ಕೇವಲ ಕಚ್ಚಾ ತೈಲ, ಎಲ್ಪಿಜಿ, ರಸಗೊಬ್ಬರ ಪೂರೈಕೆಯ ಮೇಲೆ ಅಷ್ಟಲ್ಲದೆ, ಭಾರತದ ಇಂಟರ್ನೆಟ್ ಸಂಪರ್ಕದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಸಮುದ್ರದ ಆಳದಲ್ಲಿ ಹರಡಿಕೊಂಡಿರುವ ಫೈಬರ್-ಆಪ್ಟಿಕ್ ಕೇಬಲ್ಗಳಿಗೆ ಯುದ್ಧದಿಂದ ಹಾನಿಯಾಗುವ ಸಾಧ್ಯತೆ ಇರುವುದು ಜಾಗತಿಕ ಮಟ್ಟದ ಡಿಜಿಟಲ್ ಜಗತ್ತಿನಲ್ಲಿ ಆತಂಕವನ್ನು ಉಂಟು ಮಾಡಿದೆ.
ಅಂತಾರಾಷ್ಟ್ರೀಯ ಇಂಟರ್ನೆಟ್ ಸೌಲಭ್ಯದ ಶೇ.99 ರಷ್ಟು ಪಾಲು ಸಮುದ್ರದ ಅಡಿಯಲ್ಲಿರುವ ಸಬ್ಮೆರಿನ್ ಕೇಬಲ್ಗಳ ಮೂಲಕವೇ ಲಭ್ಯವಾಗುತ್ತದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಕೆಂಪು ಸಮುದ್ರ ಮತ್ತು ಹಾರ್ಮಝ್ ಜಲಸಂಧಿಯ ಮೂಲಕವೇ ಹಾದು ಹೋಗುವ ಈ ಕೇಬಲ್ಗಳು ಈಗ ಅಪಾಯದ ಅಂಚಿನಲ್ಲಿವೆ ಎಂದು ಹೇಳಲಾಗುತ್ತಿದೆ.
ಇನ್ನು,ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿರುವ ಈ ಫೈಬರ್-ಆಪ್ಟಿಕ್ ಕೇಬಲ್ಗಳನ್ನು ಕಡಿತಗೊಳಿಸುವುದಾಗಿ ಈ ಹಿಂದೆ ಹಲವು ಬಾರಿ ಬೆದರಿಕೆ ಹಾಕಿರುವುದು ಈ ಆತಂಕಕ್ಕೆ ಮೂಲ ಕಾರಣವಾಗಿದೆ ಎನ್ನುವುದು ಇಲ್ಲಿ ಮುಖ್ಯಾಂಶವಾಗಿದೆ.
ಇದನ್ನೂ ಓದಿ : ಚುನಾವಣೆ 2026 | ಹಿಮಂತ, ಮಮತಾ, ಸ್ಟಾಲಿನ್, ಪಿಣರಾಯಿ – ಯಾರಿಗೆ ಉಳಿಯಲಿದೆ ಅಧಿಕಾರ?
ಇದರಿಂದ ಭಾರಕ್ಕೇನು ಸಮಸ್ಯೆ?
ಭಾರತದ ಒಟ್ಟು ಇಂಟರ್ನೆಟ್ ಟ್ರಾಫಿಕ್ನ ಸುಮಾರು ಶೇ.60ರಷ್ಟು ಮುಂಬೈನಿಂದ ಯುರೋಪ್ಗೆ ಕೆಂಪು ಸಮುದ್ರದವೇ ಸಂಪರ್ಕ ಕೊಂಡಿಯಾಗಿದೆ. ಉಳಿದ ಶೇ.40ರಷ್ಟು ಮಾತ್ರ ಚೆನ್ನೈನಿಂದ ಸಿಂಗಾಪುರ ಮತ್ತು ಪೆಸಿಫಿಕ್ ಮಾರ್ಗದಲ್ಲಿದೆ. ಆದ್ದರಿಂದ, ಪಶ್ಚಿಮ ಮಾರ್ಗದ ಕೇಬಲ್ಗಳಿಗೆ ಯಾವುದೇ ರೀತಿಯ ಹಾನಿಯಾದರೂ ಭಾರತದ ಇಂಟರ್ನೆಟ್ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ.
ಸಾಮಾನ್ಯರ ಮೇಲೆ ಬೀರುವ ಪರಿಣಾಮಗಳೇನು?
ಸಮುದ್ರದ ಅಡಿಯಲ್ಲಿ 17ಕ್ಕೂ ಹೆಚ್ಚು ಕೇಬಲ್ಗಳು ಈ ಭಾಗದಲ್ಲಿ ಹಾದುಹೋಗುತ್ತವೆ. ಯಾವುದಾದರೂ ಒಂದು ಕೇಬಲ್ ಕಡಿತಗೊಂಡರೆ ಇಂಟರ್ನೆಟ್ ಸಂಪೂರ್ಣವಾಗಿ ಏನು ಸಸಮಸ್ಯೆ ಎದುರಾಗುವುದಿಲ್ಲ. ಆದರೆ, ಇತರ ಮಾರ್ಗಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಯಾಗಿ ಇಂಟರ್ನೆಟ್ ವೇಗ ಗಣನೀಯವಾಗಿ ಕುಸಿತಗೊಳ್ಳಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದೇ ಹೇಳಲಾಗುತ್ತಿದೆ.
ಇದರ ಪ್ರಮುಖ ಸಮಸ್ಯೆಗಳು ಯಾವುವು ಎಂದರೆ, ಆನ್ಲೈನ್ ಮೂಲಕ ಹಣಕಾಸು ವ್ಯವಹಾರ ಮಾಡುವುದಕ್ಕೆ ಸಮಸ್ಯೆ ಎದುರಾಗುತ್ತದೆ. ವಿಡಿಯೋ ಸ್ಟ್ರೀಮಿಂಗ್ ಹಾಗೂ ಡೌಲ್ಲೋಡ್ ಮಾಡುವುದಕ್ಕೆ ತೀವ್ರ ಸಮಸ್ಯೆ ಸೃಷ್ಟಿಯಾಗುತ್ತದೆ. ಅಪ್ಲಿಕೇಶನ್ಗಳ ಬಳಕೆಯಲ್ಲಿ ಅಡೆತಡೆಗಳು ಉಂಟಾಗಬಹುದು. ಎಮ್ಎನ್ಸಿ(MNC) ಸಾಫ್ಟ್ವೇರ್ ಕಂಪನಿಗಳು ಮತ್ತು ಹೊರಗುತ್ತಿಗೆ ಕೇಂದ್ರಗಳಿಗೆ ಇದು ದೊಡ್ಡ ಆರ್ಥಿಕ ಹೊಡೆತ ನೀಡಲಿದೆ ಎನ್ನಲಾಗುತ್ತಿದೆ. ಇದೊಂದು ಜಾಗತಿಕ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆಗಳಿವೆ.




