ಚುನಾವಣೆ 2026 | ಹಿಮಂತ, ಮಮತಾ, ಸ್ಟಾಲಿನ್, ಪಿಣರಾಯಿ – ಯಾರಿಗೆ ಉಳಿಯಲಿದೆ ಅಧಿಕಾರ?

Date:

ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಸಾಂಸ್ಕೃತಿಕ ನೆಲೆಯ ಹೋರಾಟ, ತಮಿಳುನಾಡಿನಲ್ಲಿ ದ್ರಾವಿಡ ಅಸ್ಮಿತೆಯ ಭಾವ, ಅಸ್ಸಾಂನಲ್ಲಿ ಸ್ಥಳೀಯರು-ವಲಸಿಗರೆಂಬ ವಾದ, ಕೇರಳದಲ್ಲಿ ಬದಲಾವಣೆಯ ಬಯಕೆ. ಎಲ್ಲ ರಾಜ್ಯಗಳಲ್ಲೂ ಆಡಳಿತ ವಿರೋಧಿ ಅಲೆಯ ತೂಗುಗತ್ತಿ. ಗೆದ್ದು ಬೀಗುವವರಾರು? ಸೋತು ಸೊರಗುವವರಾರು? 

2026ರ ಆರಂಭವು 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ಚುನಾವಣೆಗಳೊಂದಿಗೆ ರಾಷ್ಟ್ರ/ರಾಜ್ಯ ರಾಜಕೀಯವನ್ನು ಹೆಚ್ಚು ಸಕ್ರಿಯಗೊಳಿಸಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಹಾಗೂ ಪುದುಚೆರಿಯಲ್ಲಿ ಏಪ್ರಿಲ್ 9, 23 ಹಾಗೂ 29ರಂದು ಮತದಾನ ನಡೆಯಲಿವೆ. ಮೇ 4ರಂದು ರಾಜ್ಯಗಳ ಭವಿಷ್ಯದ ಆಡಳಿತ ನಿರ್ಧರಿಸುವ ಫಲಿತಾಂಶವೂ ಪ್ರಕಟವಾಗಲಿದೆ. ಆಯಾ ರಾಜ್ಯಗಳಲ್ಲಿನ ಆಡಳಿತಾರೂಢ ಪಕ್ಷಗಳು ಮತ್ತೊಂದು ಅವಧಿಗೆ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಿವೆ. ಪ್ರತಿಪಕ್ಷಗಳು ಆಡಳಿತ ಕಸಿದುಕೊಳ್ಳಲು ತವಕಿಸುತ್ತಿವೆ. ಹಾಲಿ ಮುಖ್ಯಮಂತ್ರಿಗಳು ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಲು ಎದುರು ನೋಡುತ್ತಿದ್ದಾರೆ. ಆದರೆ, ಪ್ರತಿಯೊಂದು ರಾಜ್ಯಗಳಲ್ಲೂ ಅಧಿಕಾರ ಅವಧಿ, ಪ್ರಮುಖ ಸಾಧನೆಗಳು, ಜನರ ಒಲವು, ಆಂತರಿಕ ಸಮಸ್ಯೆಗಳು, ವಿರೋಧಿ ಶಕ್ತಿಗಳು ಹಾಗೂ ಪ್ರಸ್ತುತ ಪರಿಸ್ಥಿತಿಗಳು ವಿಭಿನ್ನವಾಗಿವೆ.

- Advertisement -

ಅಸ್ಸಾಂ – ಹಿಮಂತ ಬಿಸ್ವಾ ಶರ್ಮಾ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಸದ್ಯ, ಚುನಾವಣೆ ನಡೆಯುತ್ತಿರುವ ಐದು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪೈಕಿ ಅಸ್ಸಾಂ ಮತ್ತು ಪುದುಚೆರಿಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಆ ರಾಜ್ಯದಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಚುನಾವಣೆಗೆ ದಿನಗಣನೆ ನಡೆಯುತ್ತಿರುವಾಗಲೇ, ಬಹುತೇಕ ಪ್ರಿ-ಪೋಲ್ ವಿಶ್ಲೇಷಣೆಗಳು, ಸಮೀಕ್ಷೆಗಳು ಚರ್ಚೆಯಲ್ಲಿವೆ. ಅಸ್ಸಾಂನಲ್ಲಿ ಚುನಾವಣಾ ವಾತಾವರಣವು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ (BJP + AGP + BPF) ಅನುಕೂಲಕರವಾಗಿದೆ. ಹಿಮಂತ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬಹುದು ಎಂದು ಸಮೀಕ್ಷೆಗಳು ಹೇಳುತ್ತಿವೆ.

ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಹಿಮಂತ ಶರ್ಮಾ ಅವರು 2015ರಲ್ಲಿ, ಕಾಂಗ್ರೆಸ್‌ಗೆ ಕೈಕೊಟ್ಟು ಕಮಲದ ಕೈಹಿಡಿದು ಬಿಜೆಪಿ ಸೇರಿದರು. 2021ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ, ಅಸ್ಸಾಂ ಮುಖ್ಯಮಂತ್ರಿಯೂ ಆದರು. ಹಾಲಿ ಚುನಾವಣೆಯಲ್ಲಿ ಜಲುಕ್ಬಾರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಗೆಲುವು ಮತ್ತು ಮುಖ್ಯಮಂತ್ರಿ ಹುದ್ದೆಯ ಮುಂದುವರಿಕೆಗಾಗಿ ಹಂಬಲಿಸುತ್ತಿದ್ದಾರೆ.

WhatsApp Image 2026 04 02 at 12.43.05 PM

ಅಸ್ಸಾಂನಲ್ಲಿ ಹಿಮಂತ ಶರ್ಮಾ ಅವರ ವ್ಯಕ್ತಿಗತ ಜನಪ್ರಿಯತೆ ಮತ್ತು ಅಕ್ರಮ ವಲಸೆ ವಿರೋಧಿ ನಿಲುವುಗಳು ಅವರಿಗೆ ಜನಬೆಂಬಲವನ್ನು ಉಳಿಸಿವೆ ಎಂದು ಕೆಲ ಸಮೀಕ್ಷೆಗಳು ಹೇಳುತ್ತಿವೆ. ಆದಾಗ್ಯೂ, ಕಾಂಗ್ರೆಸ್‌ ನಾಯಕ ಗೌರವ್ ಗೊಗೊಯ್ ನೇತೃತ್ವದಲ್ಲಿ ವಿರೋಧಪಕ್ಷಗಳು ಒಂದುಗೂಡುವ ಪ್ರಯತ್ನ ಮಾಡಿದ್ದವು. ಒಂದು ವೇಳೆ ಅದು ಸಾಧ್ಯವಾಗಿದ್ದರೆ, ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಸಿಎಎ, ಭ್ರಷ್ಟಾಚಾರದ ಅರೋಪಗಳು, ಆಡಳಿತ ವಿರೋಧಿ ಅಲೆಯನ್ನು ಸಮರ್ಪಕವಾಗಿ ಬಳಸಿಕೊಂಡು, ಅಧಿಕಾರ ಬದಲಾವಣೆಯ ಸಾಧ್ಯತೆಗಳನ್ನು ಹೆಚ್ಚಿಸಬಹುದಿತ್ತು.

ಮುಸ್ಲಿಂ ಸಮುದಾಯದ ವಿರುದ್ಧ ‘ಬಾಂಗ್ಲಾದೇಶಿ’ ಎಂಬ ಟೀಕೆ, ಮದ್ರಸಾ ಪರಿವರ್ತನೆ, ಬುಲ್ಡೋಜರ್ ಕ್ರಮಗಳನ್ನ ವಿರುದ್ಧ ವಿಪಕ್ಷಗಳು ಜನಾಭಿಪ್ರಾಯ ರೂಪಿಸಬಹುದಿತ್ತು.  ಇನ್ನು, ಭೂಮಿ ಹೊಂದಿಕೆ, ಸಬ್ಸಿಡಿ ವಿವಾದ, ಸರದಾ ಹಗರಣ, ಭೂಮಿ ದುರ್ಬಳಕೆ (ಅದಾನಿ ಗ್ರೂಪ್‌ಗೆ ಪುಕ್ಕಟ್ಟೆ ಭೂಮಿ ನೀಡಿದ ಆರೋಪ) ರೀತಿಯ ಭ್ರಷ್ಟಾಚಾರ ಆರೋಪಗಳು ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳಿಗೆ ಪ್ರಮುಖ ಅಸ್ತ್ರಗಳೂ ಆಗಿದ್ದವು. ಜೊತೆಗೆ, ಬೆಲೆ ಏರಿಕೆ, ನಿರುದ್ಯೋಗ, ಬಡತನ, ಪ್ರವಾಹ ನಿಯಂತ್ರಣದಲ್ಲಿ ಕೊರತೆಗಳು ಆಡಳಿತ ವಿರೋಧಿ ಅಲೆ ಸ್ಪೋಟಿಸುವಂತೆ ಮಾಡಲು ನೆರವಾಗುತ್ತಿದ್ದವು.

ಆದರೆ, ವಿಪಕ್ಷಗಳು ಒಗ್ಗೂಡದ ಕಾರಣ, ಅವುಗಳ ಸಂಘಟನಾ ದೌರ್ಬಲ್ಯವು ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದೆ. ಜೊತೆಗೆ, ನುಸುಳುಕೋರರನ್ನು ಹೊರಹಾಕುತ್ತೇವೆ ಮತ್ತು ಅಕ್ರಮ ವಲಸಿಗರ ವಿರುದ್ಧದ ಕ್ರಮ ಕೈಗೊಳ್ಳುತ್ತೇವೆ ಎಂಬ ಬಿಜೆಪಿಯ ಭಾರೀ ಪ್ರಚಾರವು ಅಸ್ಸಾಂ ಜನರಲ್ಲಿ ಬಿಜೆಪಿ ಕುರಿತು ಇನ್ನೂ ಒಲವನ್ನು ಉಳಿಸಿದೆ. ಮಾತ್ರವಲ್ಲದೆ, ಕಾಂಗ್ರೆಸ್‌ನ ಪ್ರಬಲ ನಾಯಕರನ್ನೂ ಬಿಜೆಪಿ ಹೊತ್ತೊಯ್ಯುತ್ತಿದೆ. ಇದೆಲ್ಲವೂ ಬಿಜೆಪಿ ಗೆಲುವು ಮತ್ತು ಶರ್ಮಾ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿವೆ.

ಈಗಿನ ಪರಿಸ್ಥಿತಿಯಲ್ಲಿ, ಅಸ್ಸಾಂ ವಿಧಾನಸಭೆಯ ಒಟ್ಟು 126 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ 90-103 ಸೀಟುಗಳನ್ನು ಗೆಲ್ಲಲಿದ್ದು, ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಪಶ್ಚಿಮ ಬಂಗಾಳ – ಮಮತಾ ಬ್ಯಾನರ್ಜಿ

ಬಂಗಾಳದಲ್ಲಿ ಕಳೆದ 15 ವರ್ಷಗಳಿಂದ ತೀವ್ರ ಪೈಪೋಟಿಯೇ ಇಲ್ಲದೆ ನಿರಾಯಾಸವಾಗಿ ಗೆದ್ದು, ಅಧಿಕಾರ ನಡೆಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಟಿಎಂಸಿಗೆ ಈ ಬಾರಿ ಬಿಜೆಪಿ ಪ್ರಬಲ ಪೈಪೋಟಿ ಒಡ್ಡುತ್ತಿದೆ. ಹಾಲಿ ಚುನಾವಣೆಯು ಟಿಎಂಸಿ ಮತ್ತು ಬಿಜೆಪಿ ನಡುವಿನ ನೇರ ಮತ್ತು ತೀವ್ರ ಹಣಾಹಣಿಯ ಕಣವಾಗಿದೆ. ಪ್ರಾದೇಶಿಕತೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಚುನಾವಣಾ ಅಸ್ತ್ರವಾಗಿಸಿರುವ ಮಮತಾ, ಬಿಜೆಪಿಯನ್ನು ಹೊರಗಿನವರು ಮತ್ತು ಬಿಜೆಪಿ ನಾಯಕ ಸುವೇಂದು ಅಧಿಕಾರಿಯನ್ನು ದ್ರೋಹಿ ಎಂದು ದೂರುತ್ತಿದ್ದಾರೆ. ಬಿಜೆಪಿ ವಿರುದ್ಧ ಪ್ರಬಲ ಜನಭಿಪ್ರಾಯ ರೂಪಿಸುತ್ತಿದ್ದಾರೆ. ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗಿ ಉಳಿಯುವ ವಿಶ್ವಾಸದಲ್ಲಿದ್ದಾರೆ.

2011ರಿಂದ ಮಮತಾ ಬ್ಯಾನರ್ಜಿ ಸತತ ಮೂರು ಅವಧಿಯ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿದ್ದಾರೆ. ಅವರ ಸರ್ಕಾರವು ಕೊಂಚ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಜೊತೆಗೆ, ಭ್ರಷ್ಟಾಚಾರ ಆರೋಪಗಳೂ ಹೇಳಿಬರುತ್ತಿವೆ. ಶಿಕ್ಷಕರ ನೇಮಕಾತಿ ಹಗರಣ, ಸಂದೇಶ್‌ಖಾಲಿ ಮತ್ತು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಪ್ರಕರಣಗಳು ಜನರಲ್ಲಿ ಅಸಮಾಧಾನವನ್ನು ಹೆಚ್ಚಿಸಿವೆ. ಇವುಗಳ ಜೊತೆಗೆ, ಬಿಜೆಪಿ ತನ್ನ ಯಥಾಪ್ರಕಾರದಂತೆ ನುಸುಳುಕೋರರನ್ನು ಹೊರಹಾಕುತ್ತೇವೆಂದು ಚರ್ವೀತ ಚರ್ವಣದ ಪ್ರಚಾರ ಮಾಡುತ್ತಿದೆ. ಎಸ್‌ಐಆರ್‌ ಪ್ರಕ್ರಿಯೆಯು ಮತದಾರ ಪಟ್ಟಿಯಿಂದ ಭಾರೀ ಪ್ರಮಾಣದ ಮತದಾರರನ್ನು ಹೊರಹಾಕಿದೆ. ಇದೆಲ್ಲವೂ, ಟಿಎಂಸಿಗೆ ಕೊಂಚ ಸವಾಲನ್ನು ಹುಟ್ಟುಹಾಕಿದೆ. ಆದರೂ, ಈ ಚುನಾವಣೆಯಲ್ಲಿ ಟಿಎಂಸಿ ಕೆಲವು ಸೀಟುಗಳನ್ನು ಕಳೆದುಕೊಳ್ಳಬಹುದು. ಆದರೆ, ಅಧಿಕಾರ ಉಳಿಸಿಕೊಳ್ಳುತ್ತದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ವಿಶ್ಲೇಷಿಸಿವೆ.

image 111

ಮುಖ್ಯವಾಗಿ, ಮಮತಾ ಅವರು 2011ರಿಂದಲೂ ಬಂಗಾಳದಲ್ಲಿ ದೀರ್ಘಕಾಲದ ಆಡಳಿತ ನಡೆಸಿದ್ದರೂ, ಅವರು ಜನರೊಂದಿಗೆ ಗುರುತಿಸಿಕೊಂಡಿದ್ದಾರೆ. ಆಡಳಿತ ವಿರೋಧಿ ಅಲೆಗಿಂತ, ಜನ ಬೆಂಬಲವೇ ಪ್ರಧಾನವಾಗಿದೆ. ಅವರ ಆಡಳಿತದಲ್ಲಿ ಜಾರಿಯಾದ ಲಕ್ಷ್ಮೀರ್ ಭಂಡಾರ್, ಕನ್ಯಶ್ರೀ, ರೂಪಶ್ರೀ, ಸ್ವಸ್ತ್ಯ ಸಾಥಿ, ಖಾದ್ಯ ಸಾಥಿ, ಜೈ ಬಾಂಗ್ಲಾ, ಯುವಶ್ರೀಯಂತಹ ಪ್ರಮುಖ ಯೋಜನೆಗಳು ಮಹಿಳೆಯರು, ಯುವಜನರು ಹಾಗೂ ಬಡವರನ್ನು ನೇರವಾಗಿ ತಲುಪಿವೆ. ಈ ಯೋಜನೆಗಳು ಜನರಲ್ಲಿ ಟಿಎಂಸಿ ಕುರಿತು ಒಲವನ್ನು ಹೆಚ್ಚಿಸಿವೆ.

ಜೊತೆಗೆ, ಮಮತಾ ಪರವಾಗಿ ಮುಸ್ಲಿಂ-ಮಹಿಳಾ (MM) ಸಂಯೋಜನೆಯು ಬಲವಾಗಿದೆ. ಮಮತಾ ಅವರ ಬಂಗಾಳಿ ಗುರುತು, ಕೇಂದ್ರ ವಿರೋಧಿ ನಿಲುವುಗಳು ಜನರನ್ನು ಭಾವನಾತ್ಮಕವಾಗಿ ಸೆಳೆಯುತ್ತಿವೆ, ಮಾತ್ರವಲ್ಲದೆ, ಮಮತಾ ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ರೀತಿ, ಬೂತ್ ಮಟ್ಟದಲ್ಲಿ ಸಂಘಟನೆಗೆ ಕೊಡುತ್ತಿರುವ ಒತ್ತುಗಳು ಅವರನ್ನು ಬಂಗಾಳಿಗರು ಅಪ್ಪಿಕೊಳ್ಳುವಂತೆ ಮಾಡಿವೆ ಎಂದು ಸಮೀಕ್ಷೆಗಳು ವಿವರಿಸಿವೆ.

ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಪಶ್ಚಿಮ ರಾಜ್ಯದಲ್ಲಿ ಕಾಂಗ್ರೆಸ್‌ನ 50 ವರ್ಷಗಳ ವನವಾಸ!

ಬಂಗಾಳದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸಿರುವ ವೋಟ್‌ವೈಬ್, ಸಿಎನ್‌ಎನ್‌ ನ್ಯೂಸ್‌18 ರೀತಿಯ ಸಮೀಕ್ಷೆಗಳು ಈ ಚುನಾವಣೆಯಲ್ಲಿ ಒಟ್ಟು 294 ಸ್ಥಾನಗಳ ಪೈಕಿ, ಟಿಎಂಸಿ 184-194 ಸೀಟುಗಳ ನಡುವೆ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳುತ್ತಿವೆ. ಬಿಜೆಪಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿದ್ದು, 98ರಿಂದ 123 ಕ್ಷೇತ್ರಗಳನ್ನು ಗೆಲ್ಲಬಹುದು. ಎಡಪಕ್ಷಗಳು ಮತ್ತು ಕಾಂಗ್ರೆಸ್‌ನ ಮೈತ್ರಿ ಮುರಿದಿರುವುದು ಟಿಎಂಸಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ವಿಶ್ಲೇಷಿಸಿವೆ. ಮಮತಾ 4ನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳುತ್ತಿವೆ.

ತಮಿಳುನಾಡು – ಎಂ.ಕೆ ಸ್ಟಾಲಿನ್

ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ದ್ರಾವಿಡ ಅಸ್ಮಿತೆಯೇ ತನ್ನ ಜೀವಾಳವೆಂದು ಸಾರುತ್ತಿದೆ. ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟವು ಕಲ್ಯಾಣ ಯೋಜನೆಗಳು ಮತ್ತು ದ್ರಾವಿಡ ಸಂಸ್ಕೃತಿಯ ಮೇಲೆ ಚುನಾವಣೆಯನ್ನು ಎದುರಿಸುತ್ತಿವೆ. ಮತ್ತೊಂದು ಪ್ರಾದೇಶಿಕ ಪಕ್ಷ ಎಐಎಡಿಎಂಕೆ ನೇತೃತ್ವದ ಬಿಜೆಪಿ ಒಳಗೊಂಡ ಎನ್‌ಡಿಎ ಪ್ರಬಲ ಪೈಪೋಟಿ ನೀಡುತ್ತಿರುವುದರ ಹೊರತಾಗಿಯೂ 2ನೇ ಅವಧಿಗೆ ಸ್ಟಾಲಿನ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಅಭಿಪ್ರಾಯಗಳು ದಟ್ಟವಾಗಿವೆ.

ಡಿಎಂಕೆಯ ಐದು ವರ್ಷಗಳ ಆಡಳಿತದಲ್ಲಿ ಹಲವು ಡಿಎಂಕೆ ಶಾಸಕರು ಸ್ಥಳೀಯವಾಗಿ ಜನವಿರೋಧ ಎದುರಿಸುತ್ತಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರನ್ನು ಬದಲಿಸಲು ಮತದಾರರು ಬಯಸಿದ್ದಾರೆ. ಅದರಂತೆ, ಕೆಲ ಶಾಸಕರಿಗೆ ಡಿಎಂಕೆ ಕೂಡ ಕೋಕ್ ಕೊಟ್ಟಿದೆ. ಹೊಸಬರಿಗೆ ಮಣೆ ಹಾಕಿದೆ. ಆದಾಗ್ಯೂ, ಗ್ಯಾಸ್ ಹಗರಣಗಳು, ಕಾನೂನು-ಸುವ್ಯವಸ್ಥೆ ಕುಸಿತ, ಮಹಿಳೆಯರ ವಿರುದ್ಧ ಅಪರಾಧ ಏರಿಕೆ, ರಾಜ್ಯ ಸಾಲದಲ್ಲಿ ಹೆಚ್ಚಳದಂತಹ ಆರೋಪಗಳು ಹಾಗೂ ಬೆಲೆ ಏರಿಕೆ ಮತ್ತು ನಿರುದ್ಯೋಗದಂತಹ ಸಮಸ್ಯೆಗಳು ಆಡಳಿತ ವಿರೋಧಿ ಅಲೆಯನ್ನು ಹುಟ್ಟು ಹಾಕಿದೆ.

ಜೊತೆಗೆ, ಪಕ್ಷದಲ್ಲಿ ಉದಯನಿಧಿ ಸ್ಟಾಲಿನ್ ಅವರ ಪದನ್ನೋನ್ನತಿಯನ್ನು ಕುಟುಂಬ ರಾಜಕಾರಣವೆಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಕಳೆದ ವರ್ಷ ನಟ ವಿಜಯ್ ಹುಟ್ಟುಹಾಕಿದ ಟಿವಿಕೆ ಪಕ್ಷವು ಡಿಎಂಕೆಗೆ ಹೊಸ ತಲೆನೋವಾಗಿಯೂ ಪರಿಣಮಿಸಿದೆ. ಡಿಎಂಕೆ ಮತ್ತು ಕಾಂಗ್ರೆಸ್‌ನ ಮತಗಳನ್ನು ಟಿವಿಕೆ ವಿಭಜಿಸುವ ಅಪಾಯವೂ ಇದೆ.

image 112

ಇದೆಲ್ಲದರ ನಡುವೆಯೂ, ಸ್ಟಾಲಿನ್ ಅವರ ‘ದ್ರಾವಿಡಿಯನ್ ಮಾಡೆಲ್ 2.0’ ಎಂಬ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳು ಜನರನ್ನು ತಲುಪಿವೆ. ಅವರ ಸರ್ಕಾರದ ‘ಕಲೈಜ್ಞರ್ ಮಗಳೀರ್ ಉರಿಮೈ ತೊಗೈ’ (ಕರ್ನಾಟಕದ ಗೃಹಲಕ್ಷ್ಮಿ), ಮಹಿಳೆಯರಿಗೆ ನಗರಗಳಲ್ಲಿ ಉಚಿತ ಬಸ್ ಪ್ರಯಾಣ, ವಿದ್ಯಾರ್ಥಿಗಳಿಗೆ ಉಪಹಾರ ಯೋಜನೆ, ಪುತುಮೈ ಪೆನ್ನ್ / ತಮಿಳ್ ಪುದಲ್ವನ್ ಯೋಜನೆಯಡಿ ಶಿಕ್ಷಣಕ್ಕೆ ಒತ್ತು, ವೃದ್ಧಾಪ್ಯ ಪಿಂಚಣಿ ಹೆಚ್ಚಳ, ಆರೋಗ್ಯ ವಿಮೆ ವ್ಯಾಪ್ತಿ ಹೆಚ್ಚಳ ರೀತಿಯ ಕ್ರಮಗಳು ರಾಜ್ಯದಲ್ಲಿ ಸ್ಟಾಲಿನ್ ಮೇಲಿನ ಒಲವನ್ನೂ ಹೆಚ್ಚಸಿದೆ.

ಜೊತೆಗೆ, ಅಭಿವೃದ್ಧಿ ಯೋಜನೆಗಳು, ಆರ್ಥಿಕ ಬೆಳವಣಿಗೆ, ಎಲೆಕ್ಟ್ರಾನಿಕ್ಸ್ ರಫ್ತು, EV ಪ್ಲಾಂಟ್‌ಗಳ ವಿಸ್ತರಣೆ, ಆಟೋಮೊಬೈಲ್, ತಯಾರಿಕಾ ಕ್ಷೇತ್ರದಲ್ಲಿ ಪ್ರಗತಿ, ಕೃಷಿಗೆ ಉತ್ತೇಜನವು ಸರ್ಕಾರದ ಕೆಲಸಗಳನ್ನು ಎತ್ತಿ ತೋರಿಸಿದೆ. ಮಾತ್ರಲ್ಲದೆ, ದೇವಾಲಯ ಪೂಜಾರಿ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ, NEET ವಿರೋಧ, ಗವರ್ನರ್ ವಿರುದ್ಧದ ಹೋರಾಟ, ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಜನರ ದ್ರಾವಿಡ ಭಾವನೆಯು ಡಿಎಂಕೆ ಪರವಾದ ಅಲೆಯನ್ನು ಸೃಷ್ಟಿಸಿದೆ.

ಪರಿಣಾಮವಾಗಿ, ಡಿಎಂಕೆ ನೇತೃತ್ವದ ಮೈತ್ರಿಕೂಟವು ಮತ್ತೊಂದು ಅವಧಿಗೆ ಅಧಿಕಾರ ಉಳಿಸಿಕೊಳ್ಳಲಿದೆ ಮತ್ತು ಸ್ಟಾಲಿನ್ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿವೆ. ಬಹುತೇಕ ಸಮೀಕ್ಷೆಗಳು ಡಿಎಂಕೆ ಮೈತ್ರಿಯು ಒಟ್ಟು 234 ಸ್ಥಾನಗಳ ಪೈಕಿ, 113-189 ಸೀಟುಗಳನ್ನು ಗೆಲ್ಲಬಹುದು ಎಂದು ಹೇಳುತ್ತಿವೆ. ಎಐಎಡಿಎಂಕೆ ಮತ್ತೆ ವಿಪಕ್ಷವಾಗಿಯೇ ಉಳಿಯಲಿದೆ. ವಿಜಯ್ ಅವರ ಟಿವಿಕೆ ಮೂರನೇ ಶಕ್ತಿಯಾಗಿ ಹೊರಹೊಮ್ಮಲಿದ್ದು ಗರಿಷ್ಠ 8 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಗಳು ಅಂದಾಜಿಸಿವೆ.

ಪುದುಚೆರಿ – ಎನ್‌ ರಂಗನಾಥ್

33 ಶಾಸಕರನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನಸಭೆಗೆ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಪ್ರಸ್ತುತ, ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಲ್ಲಿದೆ. ಮುಖ್ಯಮಂತ್ರಿ ಎನ್‌ ರಂಗನಾಥ್ ಅವರು ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಹಾಲಿ ಚುನಾವಣೆಯಲ್ಲಿಯೂ ಎನ್‌ಡಿಎ ಬಹುಮತ ಪಡೆದು ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದರೆ, ಎನ್‌ ರಂಗನಾಥ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂಬುದು ಖಚಿತವಿಲ್ಲ. ಬಿಜೆಪಿ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರುವವರನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಕೇರಳ – ಪಿಣರಾಯಿ ವಿಜಯನ್

ಪ್ರಸ್ತುತ ಚುನಾವಣೆ ನಡೆಯುತ್ತಿರುವ 5 ರಾಜ್ಯ/ಕೇಂದ್ರಾಳಿತ ಪ್ರದೇಶಗಳ ಪೈಕಿ ಅಧಿಕಾರ ಬದಲಾವಣೆಯಾಗಲಿರುವ ಏಕೈಕ ರಾಜ್ಯವಾಗಿ ಕೇರಳವಿದೆ. ಕೇಳದಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರ ನಡೆಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ವಿಜಯನ್ ಅವರ ಸಿಪಿಐಎಂ ನೇತೃತ್ವದ ಎಲ್‌ಜಿಎಫ್‌ ಮೈತ್ರಿಕೂಟಕ್ಕೆ 3ನೇ ಅವಧಿಗೆ ಆಯ್ಕೆಯಾಗುವ ಅವಕಾಶಗಳು ಕಡಿಮೆ ಇವೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಗಮನಾರ್ಹವಾಗಿ, ಕೇರಳದ ಇತಿಹಾಸದಲ್ಲಿ ಆಡಳಿತ ನಡೆಸಿದ ಸರ್ಕಾರವು ಮತ್ತೊಂದು ಅವಧಿಗೆ ಮರು ಆಯ್ಕೆಯಾಗುವುದು ತೀರಾ ಕಡಿಮೆ. ಹಾಗಿದ್ದರೂ, 2016ರಲ್ಲಿ ಅಧಿಕಾರಕ್ಕೆ ಬಂದಿದ್ದ ಎಲ್‌ಡಿಎಫ್‌, 2021ರಲ್ಲಿ ಮರು ಆಯ್ಕೆಯಾಗಿತ್ತು. ಚುನಾವಣೆಗೂ ಒಂದು ವರ್ಷ ಮುನ್ನ ಎದುರಾಗಿದ್ದ ಕೋವಿಡ್‌-19 ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಸಕ್ರಿಯತೆ ಮತ್ತು ಜನಪರ ಯೋಜನೆಗಳು ಜನರನ್ನು ಭಾವನಾತ್ಮಕವಾಗಿ ಸೆಳೆದಿದ್ದವು. ಪಿಣರಾಯಿ ಅವರಿಗೆ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದವು.

image 112

2016ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಪಿಣರಾಯಿ ಅವರು ಗಮನಾರ್ಹ ಕೆಲಸಗಳನ್ನು ಮಾಡಿದ್ದರು. 2018ರ ಪ್ರವಾಹ, Nipah ವೈರಸ್ ಮತ್ತು COVID-19 ವಿರುದ್ಧದ ಹೋರಾಟವು ಅವರ ಪರಿಣಾಮಕಾರಿ ನಾಯಕತ್ವವನ್ನು ಎತ್ತಿ ಹಿಡಿದಿತ್ತು. ಅವರನ್ನು ‘ಪ್ರಜೆಗಳ ರಕ್ಷಕ’ನೆಂದೂ ಕರೆಯುವಂತೆ ಮಾಡಿತ್ತು.

ಜೊತೆಗೆ, ನಾನಾ ಅಭಿವೃದ್ಧಿ ಯೋಜನೆಗಳು, ನವ ಕೇರಳ ಮಿಷನ್, ನಿರ್ಗತಿಕರಿಗೆ ಮನೆ ಕಟ್ಟಿಕೊಡುವ ‘ಲೈಫ್‌ ಮಿಷನ್’, K-FON (ಉಚಿತ ಇಂಟರ್ನೆಟ್), ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ, ಸಾಕ್ಷರತೆ, ಜೀವಿತಾವಧಿ ಹೆಚ್ಚಳ, ಸಾಮಾಜಿಕ ನ್ಯಾಯ, ತೀವ್ರ ಬಡತನ ನಿರ್ಮೂಲನೆ, ಅಲ್ಪಸಂಖ್ಯಾತರ ರಕ್ಷಣೆಯಂತಹ ಕೆಲಸಗಳಿಂದ ಪಿಣರಾಯಿ ಅವರ ಸರ್ಕಾರ ಮುಂಚೂಣಿಯಲ್ಲಿತ್ತು. 2021ರಲ್ಲಿ 2ನೇ ಬಾರಿ ಅಧಿಕಾರಕ್ಕೂ ಬಂದಿತು.

ಈ ಯೋಜನೆಗಳು ಮತ್ತು ಕೆಲಸಗಳು 2ನೇ ಅವಧಿಯಲ್ಲಿಯೂ ಮುಂದುವರೆದಿವೆ. ಆದರೂ, ಈ ಬಾರಿ, ಪಿಣರಾಯಿ ಅವರು ಅಧಿಕಾರ ಉಳಿಸಿಕೊಳ್ಳುವುದು ಕಷ್ಟಕರ. 2020ರ ಚಿನ್ನ ಕಳ್ಳಸಾಗಣೆ ಪ್ರಕರಣಗಳು ಸರ್ಕಾರದಲ್ಲಿರುವವರೊಂದಿಗೆ ತಳುಕು ಹಾಕಿಕೊಂಡಿವೆ, ಭೂಮಿ/ಹೂಡಿಕೆ ವಿವಾದಗಳು ಹಾಗೂ ಕರ್ನಾಟಕ/ತಮಿಳುನಾಡುಗೆ ಹೋಲಿಸಿದರೆ ಉದ್ಯೋಗ, ಬೆಲೆ ಏರಿಕೆ, ಆರ್ಥಿಕ ಒತ್ತಡಗಳು ಕೇರಳದಲ್ಲಿ ಹೆಚ್ಚಿವೆ. ಇವು ಆಡಳಿತ ವಿರೋಧಿ ಅಲೆಯನ್ನು ಹೆಚ್ಚಿಸಿವೆ. 10 ವರ್ಷಗಳ ಎಲ್‌ಇಎಫ್‌ ಅಧಿಕಾರದ ನಂತರ ಜನರು ಬದಲಾವಣೆ ಬಯಸಿದ್ದಾರೆ ಎಂದು ಕೆಲ ಸಮೀಕ್ಷೆಗಳು ಹೇಳುತ್ತಿವೆ.

ಜೊತೆಗೆ, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಕೂಡ ತಮ್ಮ ಪ್ರಾಬಲ್ಯತೆಯನ್ನು ಹೆಚ್ಚಿಸಿಕೊಂಡಿದೆ. ಎಲ್‌ಡಿಎಫ್‌ಗೆ ಯುಡಿಎಫ್‌ ಪ್ರಬಲ ಪೈಪೋಟಿ ನೀಡುತ್ತಿದೆ. ಈ ಚುನಾವಣೆಯು ಎಲ್‌ಡಿಎಫ್‌-ಯುಡಿಎಫ್‌ ನಡುವಿನ ನೇರ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಹೋರಾಟದಲ್ಲಿ ಒಟ್ಟು 140 ಸ್ಥಾನಗಳ ಪೈಕಿ, ಯುಡಿಎಫ್‌ ಸುಮಾರು 81 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೇರುವ ಸಾಧ್ಯತೆಗಳು ದಟ್ಟವಾಗಿವೆ. ಪಿಣರಾಯಿ ನೇತೃತ್ವದ ಎಲ್‌ಡಿಎಫ್‌ 50 ಸ್ಥಾನಗಳಿಗೆ ಕುಸಿಯಲಿದ್ದು, ವಿಪಕ್ಷ ಸ್ಥಾನದಲ್ಲಿ ಕೂರಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 4-5 ಸ್ಥಾನಗಳನ್ನು ಗೆದ್ದುಕೊಳ್ಳುವ ನಿರೀಕ್ಷೆಯೂ ಇದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...

ಬಾಗಲಕೋಟೆ | ಗಾಂಧಿ ಜಯಂತಿ ನಿಮಿತ್ತ ಕಾಂಗ್ರೆಸ್‌ನಿಂದ ಸ್ವಚ್ಛತಾ ಅಭಿಯಾನ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ...

ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬೆಂಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು...

ಅಮೆರಿಕದ ಗುಪ್ತಚರರಿಗೇ ಸುಳಿವು ನೀಡದೆ ಉಪಗ್ರಹ ಹೊಡೆದುರುಳಿಸಿದ್ದ ಭಾರತದ ಕ್ಷಿಪಣಿ

ದಶಕಗಳ ಬಳಿಕ, 2019ರಲ್ಲಿ 'ಮಿಷನ್ ಶಕ್ತಿ' ಕಾರ್ಯಾಚರಣೆಯ ಮೂಲಕ ಉಪಗ್ರಹ...