ಗಡಿಭಾಗದಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಬದುಕನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದು, ಬಡ ಹಾಗೂ ಅನಾಥ ಮಕ್ಕಳಿಗೆ ಅನ್ನ, ಅಕ್ಷರ ಮತ್ತು ಆಶ್ರಯ ನೀಡುವ ಮೂಲಕ ನಿಜವಾದ ಮಾನವೀಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯಪಟ್ಟರು.
ಭಾಲ್ಕಿ ತಾಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಚನ್ನಬಸವೇಶ್ವರ ಗುರುಕುಲ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಸಮಾಜದಲ್ಲಿ ಮಠದ ಆಸ್ತಿ, ಅಧಿಕಾರ ಹಾಗೂ ಅಂತಸ್ತಿಗಾಗಿ ಜಗಳವಾಡುವ ಮಠಾಧೀಶರು ಸಾಕಷ್ಟು ಜನರಿದ್ದರೂ, ಅನಾಥ ಮಕ್ಕಳ ಆಶ್ರಯ ಹಾಗೂ ಶಿಕ್ಷಣಕ್ಕಾಗಿ ನ್ಯಾಯಾಲಯದ ಹಾದಿ ಹಿಡಿದು ಹೋರಾಡಿರುವ ಬಸವಲಿಂಗ ಪಟ್ಟದ್ದೇವರ ಸೇವೆ ಮಾದರಿಯಾಗಿದೆ. ಹೆತ್ತವರಿಗೆ ಬೇಡವಾದ ಮಕ್ಕಳನ್ನು ಕರೆತಂದು ಅವರಿಗೆ ಶಿಕ್ಷಣ, ಸಂಸ್ಕಾರ ನೀಡಿ ಇದುವರೆಗೆ 107 ಮಕ್ಕಳನ್ನು ಮಕ್ಕಳಿಲ್ಲದ ಕುಟುಂಬಗಳಿಗೆ ಹಸ್ತಾಂತರಿಸುವ ಮೂಲಕ ಅವರ ಬದುಕನ್ನು ಬೆಳಗಿಸಿರುವುದು ನಿಜವಾದ ಸಮಾಜ ಸೇವೆಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಗ್ರಾಮೀಣ ಭಾಗದ ಸಾವಿರಾರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡುವ ಮೂಲಕ ಪರಮಪೂಜ್ಯರು ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸುತ್ತಿದ್ದಾರೆ. ಲಾಭ-ನಷ್ಟದ ಲೆಕ್ಕಾಚಾರ ಮಾಡದೇ, ಜಾತಿ-ಧರ್ಮ ಭೇದವಿಲ್ಲದೆ ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಇಂದಿನ ಪೋಷಕರು ಮಕ್ಕಳ ಕೈಗೆ ಅತಿಯಾಗಿ ಮೊಬೈಲ್ ನೀಡುವುದನ್ನು ತಪ್ಪಿಸಿ, ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಬೇಕು. ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡದೇ, ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ ಪ್ರೋತ್ಸಾಹಿಸಬೇಕು” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಸಂತೋಷ ತಾಳಂಪಳ್ಳಿ ಬಸವಗುರುವಿನ ಪೂಜೆ ನೆರವೇರಿಸಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, “ಕಲ್ಯಾಣದ ಪ್ರಗತಿಗೆ ಕಂದಕೂರ ಸದನದಲ್ಲಿ ಧ್ವನಿ ಕಲ್ಯಾಣ ಕರ್ನಾಟಕದ ಪ್ರಗತಿಗಾಗಿ ಗುರಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ವಿಧಾನಸೌಧದ ಒಳಗೆ ಮತ್ತು ಹೊರಗೆ ಧ್ವನಿಯೆತ್ತುತ್ತಿದ್ದಾರೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಭಾಗದ ಆರೋಗ್ಯ, ಶಿಕ್ಷಣ, ಕೃಷಿ ಸೇರಿ ಜನರ ಮುಂತಾದ ಜಲ್ವಂತ ಸಮಸ್ಯೆಗಳಿಗೆ ಕಂದಕೂರ ಅವರು ಧ್ವನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಳ, ಸಜ್ಜನಿಕೆಗೆ ಹೆಸರಾಗಿರುವ ಕಂದಕೂರ ಅವರು ಯುವಶಕ್ತಿಯ ಬ್ರ್ಯಾಂಡ್ ಆಗಿ ಗುರುತಿಸಿಕೊಂಡು ತಮ್ಮದೇ ಆದ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಅವರಿಗೆ ಮುಂದಿನ ಜನರ ಸೇವೆಗೈಯಲು ವಿಶ್ವಗುರು ಬಸವಣ್ಣನವರು ಮತ್ತಷ್ಟು ಶಕ್ತಿ ನೀಡಲಿ” ಎಂದು ಹಾರೈಸಿದರು.
ಬಡ ಮಕ್ಕಳ ಶಿಕ್ಷಣಕ್ಕೆ ₹17.50 ಲಕ್ಷ ನೆರವು
ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ₹17.50 ಲಕ್ಷ ಆರ್ಥಿಕ ನೆರವು ನೀಡಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ಆದೀಶ್ ಡಾ. ರಜನೀಶ್ ವಾಲಿ ನೇತೃತ್ವದಲ್ಲಿ ಪದಾಧಿಕಾರಿಗಳು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಪೀಠಾಧಿಪತಿ ಗುರುಬಸವ ಪಟ್ಟದ್ದೇವರಿಗೆ ಚೆಕ್ ಹಸ್ತಾಂತರಿಸಿದರು.
137 ವಿದ್ಯಾರ್ಥಿಗಳಿಗೆ ಸನ್ಮಾನ
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ 137 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದ ಆನಂದ ಪಾಂಡುರಂಗ (624 ಅಂಕ), ಅಜಯಕುಮಾರ (620), ಶಿವಂ (618), ಸ್ಪೂರ್ತಿ (617), ಪ್ರಿಯಾ (615), ಸೌರಭ (615), ಅಮರ (614), ದರ್ಶನ (613), ನಾಗೇಶ್ (612), ಶಿವಕನ್ಯಾ (611), ಅಭಿಷೇಕ್ (611) ಸೇರಿದಂತೆ ಒಟ್ಟು 137 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ : ಬೀದರ್ | ಕನೇರಿ ಸ್ವಾಮಿ ಬಸವಕಲ್ಯಾಣ ಪ್ರವೇಶಿಸಕೂಡದು: ಬಸವಪರ ಸಂಘಟನೆಗಳ ನಿರ್ಣಯ
ಈ ಸಂದರ್ಭದಲ್ಲಿ ಹಾವಶೆಟ್ಟಿ ಪಾಟೀಲ್, ಬೀದರ್ ರೋಟರಿ ಕ್ಲಬ್ ಅಧ್ಯಕ್ಷ ಆದೀಶ್ ರಜನೀಶ್ ವಾಲಿ, ಮುಖ್ಯಗುರು ಮಹೇಶ ಮಹಾರಾಜ, ಎಸ್‌ಎಸ್‌ಎಲ್‌ಸಿ ಸಂಯೋಜಕ ಪ್ರವೀಣ ಖಂಡಾಳೆ, ಭಾವೇಶ್ ಪಟೇಲ್, ಗುರು ಸಿಂಧೋಳ, ಅರವಿಂದ ಪಾಟೀಲ್, ಸಹನಾ ಪಾಟೀಲ್ ಹಾಗೂ ಮಹೇಶ್ ಚಿಮಕೋಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕು. ಖುಷಿ ಹಾಗೂ ತ್ರಿಷಾ ಪ್ರಾರ್ಥನಾ ಗೀತೆ ಹಾಡಿದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು. ಲಕ್ಷ್ಮಣ ಮೇತ್ರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





