ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಕ್ರಮವನ್ನು ಖಂಡಿಸಿರುವ ಟಿಎಂಸಿ, “ಇದು ಆಯ್ದ ಮತ್ತು ರಾಜಕೀಯ ಪ್ರೇರಿತ” ಎಂದು ಪ್ರಕರಣ ಎಂದು ಕರೆದಿದೆ.
ಎಫ್‌ಐಆರ್ ಬಗ್ಗೆ ಮಾತನಾಡಿರುವ ಟಿಎಂಸಿ ನಾಯಕ ತನ್ಮಯ್ ಘೋಷ್, “ಬಿಜೆಪಿ ನಾಯಕರಿಂದ ನಾವು ಅನೇಕ ಪ್ರಚೋದನಕಾರಿ ಹೇಳಿಕೆಗಳನ್ನು ಕೇಳಿದ್ದೇವೆ. ಘನತೆಯಿಂದ ರಾಜಕೀಯ ಮಾಡಬೇಕು ಎಂದು ನಾವು ನಂಬುತ್ತೇವೆ. ಈ ರೀತಿ ಆಯ್ದು ಎಫ್‌ಐಆರ್ ದಾಖಲಿಸುವುದು ಸರಿಯಲ್ಲ” ಎಂದು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಕೋಲ್ಕತ್ತಾ ಹೈಕೋರ್ಟ್ ಮತ್ತು ಟಿಎಂಸಿ ಸರ್ಕಾರದ ನಡುವಿನ ಹಗ್ಗಜಗ್ಗಾಟ
“ಎಲ್ಲರಿಗೂ ಈ ನಿಯಮ ಅನ್ವಯವಾಗಬೇಕು. ಪ್ರಚೋದನಕಾರಿ ಭಾಷಣ ಮಾಡಿದವರೆಲ್ಲರ ಮೇಲೆ ಎಫ್‌ಐಆರ್ ದಾಖಲಾಗಲಿ. ಟಿಎಂಸಿ ಚುನಾವಣೆಯಲ್ಲಿ ಸೋತ ಕಾರಣ ಅಭಿಷೇಕ್ ವಿರುದ್ಧ ಮಾತ್ರ ಪ್ರಕರಣ ದಾಖಲಿಸುವುದೇ? ಇದು ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಚುನಾವಣೆ ಪ್ರಚಾರದ ವೇಳೆ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಆದರೆ ಅವರ ವಿರುದ್ಧ ಈವರೆಗೆ ಚುನಾವಣಾ ಆಯೋಗವು ನೇರವಾಗಿ ಎಫ್‌ಐಆರ್ ದಾಖಲಿಸಿಲ್ಲ. ಹೇಳಿಕೆ ವಿರುದ್ಧ ವಿಪಕ್ಷಗಳು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದೆ. ಆಯೋಗ ಹಾಗೂ ಪೊಲೀಸರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಸುವೇಂದು ಮಾತ್ರವಲ್ಲದೆ, ಮಿಥುನ್ ಚಕ್ರವರ್ತಿ, ಹರಿ ಮಿಶ್ರಾ ಹೀಗೆ ಹಲವು ಬಿಜೆಪಿ ನಾಯಕರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಆದರೆ ಅವರುಗಳನ್ನು ಬಿಟ್ಟು ಬರೀ ಟಿಎಂಸಿ ನಾಯಕರನ್ನೇ ಗುರಿಯಾಗಿಸಿಕೊಂಡಿರುವುದು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ.




