ಬೆಳಕು ಬಿದ್ದಾಗ ಹಸಿರು ಬಣ್ಣದಲ್ಲಿ ಮತ್ತು ಬೆಳಕು ಹಾಯ್ದಾಗ ಮಾಣಿಕ್ಯದಂತೆ ಕೆಂಪು ಬಣ್ಣಕ್ಕೆ ತಿರುಗುವ 1,600 ವರ್ಷಗಳಷ್ಟು ಹಳೆಯದಾದ ರೋಮನ್ ಕುಡಿಯುವ ಕಪ್ ಒಂದು ಜಗತ್ತಿನ ವಿಸ್ಮಯಗಳಲ್ಲೊಂದು. ಇದೀಗ, ಬ್ರಿಟನ್‌ನ ಶೆಫೀಲ್ಡ್ ವಿಶ್ವವಿದ್ಯಾಲಯದ ಸಂಶೋಧಕರು ವರ್ಷಗಳ ನಿರಂತರ ಪ್ರಯೋಗಗಳ ಬಳಿಕ ಈ ವಿಶಿಷ್ಟ ಗಾಜಿನ ಪರಿಣಾಮವನ್ನು ಯಶಸ್ವಿಯಾಗಿ ಮರುಸೃಷ್ಟಿಸಿದ್ದಾರೆ. ಇದು ಪ್ರಾಚೀನ ರೋಮನ್ ಗಾಜು ತಯಾರಕರ ತಂತ್ರಜ್ಞಾನವನ್ನು ಆಧುನಿಕ ವಿಜ್ಞಾನದ ಮೂಲಕ ಅರ್ಥಮಾಡಿಕೊಳ್ಳಲು ದಾರಿಮಾಡಿಕೊಟ್ಟಿದೆ.
ಶೆಫೀಲ್ಡ್ ವಿಶ್ವವಿದ್ಯಾಲಯದ ರಾಸಾಯನಿಕ, ವಸ್ತು ಮತ್ತು ಜೈವಿಕ ಎಂಜಿನಿಯರಿಂಗ್ ವಿಭಾಗದ ತಂತ್ರಜ್ಞೆ ಡಾ. ಲಿಸಾ ಹಾಲೆಂಡ್ಸ್ ಮತ್ತು ರೋಮನ್ ಗ್ಲಾಸ್ ತಜ್ಞೆ ಪ್ರೊ. ಕ್ಯಾರೊಲಿನ್ ಜಾಕ್ಸನ್ ಅವರ ನೇತೃತ್ವದಲ್ಲಿ ಈ ಸಾಧನೆ ಮೂಡಿಬಂದಿದೆ. ಪ್ರಸ್ತುತ ಲಂಡನ್‌ನ ಬ್ರಿಟಿಷ್ ಮ್ಯೂಸಿಯಂನಲ್ಲಿ ಸಂರಕ್ಷಿಸಿಡಲಾಗಿರುವ ಈ ಮೂಲ ಕಪ್‌ಗೆ ‘ಲೈಕರ್ಗಸ್ ಕಪ್’ (Lycurgus Cup) ಎಂದು ಹೆಸರಿಸಲಾಗಿದೆ. ಇದು ‘ಡೈಕ್ರೋಯಿಕ್ ಗ್ಲಾಸ್’ ಎಂಬ ವಿಶೇಷ ರೀತಿಯ ಗಾಜಿನಿಂದ ಮಾಡಲ್ಪಟ್ಟಿದ್ದು, ಬೆಳಕಿನೊಂದಿಗೆ ಸಂವಹನ ನಡೆಸುವ ರೀತಿಯ ಆಧಾರದ ಮೇಲೆ ವಿಭಿನ್ನ ಬಣ್ಣಗಳನ್ನು ಪ್ರದರ್ಶಿಸುವ ಅದ್ಭುತ ಗುಣ ಹೊಂದಿದೆ.
ಈ ರೋಮನ್ ಕಪ್ ಬಣ್ಣ ಬದಲಾಯಿಸಲು ಕಾರಣವೇನು ಎಂಬ ಪ್ರಶ್ನೆಗೆ ಗಾಜಿನಲ್ಲಿರುವ ಚಿನ್ನ ಮತ್ತು ಬೆಳ್ಳಿಯ ಸಣ್ಣ ಕಣಗಳು ಉತ್ತರವಾಗಿವೆ. ಈ ಲೋಹಗಳು ಮರಳಿನ ಕಣಕ್ಕಿಂತ ಸಾವಿರಾರು ಪಟ್ಟು ಚಿಕ್ಕದಾದ ‘ನ್ಯಾನೊಪರ್ಟಿಕಲ್’ಗಳನ್ನು (ನ್ಯಾನೊಕಣಗಳು) ರೂಪಿಸಿವೆ. ಕಪ್‌ನ ಮೇಲೆ ಬೆಳಕು ಪ್ರತಿಫಲಿಸಿದಾಗ ಗಾಜು ಜೇಡ್ ಹಸಿರು ಬಣ್ಣದಲ್ಲಿ ಕಾಣುತ್ತದೆ, ಆದರೆ ಕಪ್‌ನ ಹಿಂದಿನಿಂದ ಬೆಳಕು ಹಾಯ್ದಾಗ ಅದು ಕೆಂಪು ಬಣ್ಣ ಪಡೆಯುತ್ತದೆ. ನ್ಯಾನೊಕಣಗಳ ಗಾತ್ರ ಮತ್ತು ಆಕಾರವು ಗೋಚರ ಬೆಳಕಿನ ತರಂಗಾಂತರಗಳಿಗಿಂತ ಚಿಕ್ಕದಾಗಿದ್ದು, ಬೆಳಕನ್ನು ಹೀರಿಕೊಳ್ಳುವ ಮತ್ತು ಚದುರಿಸುವ ಪ್ರಕ್ರಿಯೆಯಲ್ಲಿ ಈ ಅಚ್ಚರಿಯ ಬಣ್ಣ ಬದಲಾವಣೆ ಸಂಭವಿಸುತ್ತದೆ.
ಬ್ರಿಟಿಷ್ ಮ್ಯೂಸಿಯಂನ ದಾಖಲೆಗಳ ಪ್ರಕಾರ, ಈ ಲೈಕರ್ಗಸ್ ಕಪ್ ಕ್ರಿ.ಶ. ನಾಲ್ಕನೇ ಶತಮಾನಕ್ಕೆ ಸೇರಿದ್ದಾಗಿದೆ. ಬಣ್ಣ ಬದಲಾಯಿಸುವ ಇಂತಹ ಅಸಾಧಾರಣ ಗುಣವನ್ನು ಹೊಂದಿರುವ ಏಕೈಕ ರೋಮನ್ ‘ಕೇಜ್ ಕಪ್’ ಇದಾಗಿದೆ. ಕೇಜ್ ಕಪ್‌ಗಳು ಅತ್ಯಂತ ನಾಜೂಕಾದ ವಿನ್ಯಾಸ ಹೊಂದಿರುವ ಪಾತ್ರೆಗಳಾಗಿದ್ದು, ಗಾಜಿನ ಮೇಲ್ಮೈಯನ್ನು ಕೆತ್ತಿ, ತೆಳುವಾದ ಸೇತುವೆಗಳಂತಹ ರಚನೆಗಳಿಂದ ಸಂಪರ್ಕಗೊಂಡಿರುವ ಆಕರ್ಷಕ ಆಕೃತಿಗಳು ಮತ್ತು ವಿನ್ಯಾಸಗಳನ್ನು ಮಾತ್ರ ಉಳಿಸಿಕೊಳ್ಳಲಾಗಿರುತ್ತದೆ. ಕಪ್‌ನ ಅಂಚು ಮತ್ತು ತಳಭಾಗದಲ್ಲಿರುವ ಬೆಳ್ಳಿ-ಚಿನ್ನದ ಲೇಪನದ ಫಿಟ್ಟಿಂಗ್‌ಗಳು ಇದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

ಪ್ರಾಚೀನ ಕಾಲದ ಈ ತಂತ್ರಜ್ಞಾನವನ್ನು ಮರುಸೃಷ್ಟಿಸಲು ಸಂಶೋಧಕರ ತಂಡವು ಅಪಾರ ಶ್ರಮವಹಿಸಿದೆ. ಆಧುನಿಕ ವಸ್ತುಗಳನ್ನು ಬಳಸಿಕೊಂಡು ಚಿನ್ನ ಮತ್ತು ಬೆಳ್ಳಿಯ ಸಣ್ಣ ಕಣಗಳನ್ನು ಸರಿಯಾದ ಪ್ರಮಾಣದಲ್ಲಿ ಗಾಜಿನೊಂದಿಗೆ ಬೆರೆಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಇದಕ್ಕಾಗಿ ವಿವಿಧ ಕುಲುಮೆಗಳು, ಆರಂಭಿಕ ವಸ್ತುಗಳು ಮತ್ತು ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಲಾಯಿತು. ಈ ಮಿಶ್ರಣಕ್ಕೆ ಸಕ್ಕರೆಯನ್ನು ಸೇರಿಸುವಂತಹ ಪ್ರಯೋಗಗಳನ್ನೂ ತಂಡ ಮಾಡಿತು. ಅಂತಿಮವಾಗಿ, ಹಾಲೆಂಡ್ಸ್ ಸಿದ್ಧಪಡಿಸಿದ ಪಾಕವಿಧಾನವು ಪ್ರತಿಫಲಿತ ಬೆಳಕಿನಲ್ಲಿ ಹಸಿರು ಮತ್ತು ಹಿಂದಿನಿಂದ ಬೆಳಗಿದಾಗ ಕೆಂಪು ಬಣ್ಣದಲ್ಲಿ ಕಾಣುವ ಗಾಜನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು.
ಈ ಯಶಸ್ವಿ ಪ್ರಯೋಗದ ನಂತರ, ನೆಟ್‌ಫ್ಲಿಕ್ಸ್‌ನ ‘ಬ್ಲೋನ್ ಎವೇ’ (Blown Away) ಸೀಸನ್ 2 ವಿಜೇತ, ಖ್ಯಾತ ಗ್ಲಾಸ್ ಕಲಾವಿದ ಎಲಿಯಟ್ ವಾಕರ್ ಅವರಿಂದ ಈ ಹೊಸ ಗಾಜಿನ ತಂತ್ರಜ್ಞಾನ ಬಳಸಿ ಒಂದು ಸಮಕಾಲೀನ ಕಲಾಕೃತಿಯನ್ನು ರಚಿಸಲಾಗಿದೆ. ಪ್ರಾಚೀನ ಫರ್ನೀಸ್ ಅಟ್ಲಾಸ್ ಶಿಲ್ಪದ ಆಕಾರವನ್ನು ಇದು ಹೋಲುತ್ತದೆ. 2026ರ ನವೆಂಬರ್ 6 ರಿಂದ 15ರವರೆಗೆ ನಡೆಯಲಿರುವ ವಿಶ್ವವಿದ್ಯಾಲಯದ ‘ಫೆಸ್ಟಿವಲ್ ಆಫ್ ದಿ ಮೈಂಡ್’ ಕಾರ್ಯಕ್ರಮದ ಅಂಗವಾಗಿ ಶೆಫೀಲ್ಡ್‌ನ ಮಿಲೇನಿಯಮ್ ಗ್ಯಾಲರಿಯಲ್ಲಿ ಈ ಕಲಾಕೃತಿಯನ್ನು ಅನಾವರಣಗೊಳಿಸಲಾಗುವುದು. ತರುವಾಯ ಇದನ್ನು ಟರ್ನರ್ ಮ್ಯೂಸಿಯಂ ಆಫ್ ಗ್ಲಾಸ್‌ನಲ್ಲಿ ಶಾಶ್ವತ ಪ್ರದರ್ಶನಕ್ಕಿಡಲಾಗುವುದು.
ಈ ಮರುಸೃಷ್ಟಿಯಾದ ಗಾಜು ಕೇವಲ ಕಲಾತ್ಮಕ ಮೌಲ್ಯವನ್ನು ಮಾತ್ರವಲ್ಲದೆ, ವ್ಯಾಪಕ ವೈಜ್ಞಾನಿಕ ಪ್ರಸ್ತುತತೆಯನ್ನೂ ಹೊಂದಿದೆ. ಇದನ್ನು ಸೌರಶಕ್ತಿ, ಕ್ವಾಂಟಮ್ ತಂತ್ರಜ್ಞಾನ, ಆರೋಗ್ಯ ರೋಗನಿರ್ಣಯ ಮತ್ತು ವಿಕಿರಣಶೀಲ ತ್ಯಾಜ್ಯವನ್ನು ಸ್ಥಿರಗೊಳಿಸಲು ಬಳಸುವ ಸುಧಾರಿತ ಗಾಜಿನ ಅಭಿವೃದ್ಧಿಯಲ್ಲಿ ಬಳಸಬಹುದಾಗಿದೆ. ಮೂಲ ಕಪ್ ಥ್ರೇಸ್‌ನ ಪೌರಾಣಿಕ ರಾಜ ಲೈಕರ್ಗಸ್‌ನ ಕಥೆಯನ್ನು ಚಿತ್ರಿಸುತ್ತದೆ; ಲೈಕರ್ಗಸ್ ಡಯೋನೈಸಸ್‌ನ ಮೇಲೆ ದಾಳಿ ಮಾಡಿದಾಗ, ಬಳ್ಳಿಯಾಗಿ ಬದಲಾಗುವ ಅಂಬ್ರೋಸಿಯಾ ಎಂಬಾಕೆ ರಾಜನನ್ನು ಸುತ್ತುವರಿದು ಬಂಧಿಸುವ ದೃಶ್ಯ ಕಪ್‌ನಲ್ಲಿದೆ. ಪ್ರಾಚೀನ ಕುಶಲಕರ್ಮಿಗಳ ಈ ಕಲೆ ಮತ್ತು ಆಧುನಿಕ ವಿಜ್ಞಾನದ ಸಮ್ಮಿಲನವು ಈಗ ಹೊಸ ಸಂಶೋಧನೆಗಳಿಗೆ ನಾಂದಿ ಹಾಡಿದೆ.





