ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ Whatsapp, ಮುಂಬರುವ ದಿನಗಳಲ್ಲಿ ಪರಿಚಯಿಸಲಿರುವ ತನ್ನ ಹೊಸ ‘ಯೂಸರ್‌ನೇಮ್’ (ಬಳಕೆದಾರರ ಹೆಸರು) ಫೀಚರ್ ಕುರಿತು ವ್ಯಕ್ತವಾಗಿರುವ ಸುರಕ್ಷತೆ ಹಾಗೂ ಗೌಪ್ಯತೆಯ ಕಳವಳಗಳ ಬಗ್ಗೆ ಮಹತ್ವದ ಸ್ಪಷ್ಟನೆ ನೀಡಿದೆ. ಈ ಫೀಚರ್ ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಇದು ಬಳಕೆದಾರರ ಸುರಕ್ಷತೆಗೆ ಧಕ್ಕೆ ತರುವುದಿಲ್ಲ ಎಂದು ಕಂಪನಿ ಭರವಸೆ ನೀಡಿದೆ.
ಈ ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿರುವ ಈ ಯೂಸರ್‌ನೇಮ್‌ಗಳನ್ನು ಕಾಯ್ದಿರಿಸುವ (ರಿಸರ್ವ್ ಮಾಡುವ) ಪ್ರಕ್ರಿಯೆ ಆರಂಭವಾಗಿರುವ ನಡುವೆಯೇ, ವಂಚನೆ ಹಾಗೂ ನಕಲಿ ಖಾತೆಗಳ ಹಾವಳಿಯ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ Whatsapp ಉತ್ತರಿಸಿದೆ. ಈ ಹೊಸ ಫೀಚರ್‌ನಿಂದಾಗಿ ಬಳಕೆದಾರರು ತಮ್ಮ ಫೋನ್ ನಂಬರ್ ಅನ್ನು ಹಂಚಿಕೊಳ್ಳದೆಯೇ ಇತರರೊಂದಿಗೆ (ಮುಖ್ಯವಾಗಿ ಗ್ರೂಪ್‌ಗಳಲ್ಲಿ ಮತ್ತು ಹೊಸ ಪರಿಚಿತರೊಂದಿಗೆ) Whatsappನಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ.
ಯೂಸರ್‌ನೇಮ್ ಕಡ್ಡಾಯವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಂಪನಿ, ಇದು ಕೇವಲ ಐಚ್ಛಿಕ ಆಯ್ಕೆಯಾಗಿದ್ದು, ಯಾರು ಬೇಕಾದರೂ ಬಳಸಬಹುದು ಅಥವಾ ಬಿಡಬಹುದು ಎಂದಿದೆ. ಮುಖ್ಯವಾಗಿ, ವಾಟ್ಸ್‌ಆ್ಯಪ್‌ನಲ್ಲಿ ಫೋನ್ ನಂಬರ್‌ಗಳನ್ನು ಹೇಗೆ ಹುಡುಕಲು (Search) ಸಾಧ್ಯವಿಲ್ಲವೋ, ಅದೇ ರೀತಿ ಯೂಸರ್‌ನೇಮ್‌ಗಳನ್ನು ಕೂಡ ಹುಡುಕಲು ಸಾಧ್ಯವಿಲ್ಲ. ಅಪರಿಚಿತ ವ್ಯಕ್ತಿಗಳು ಯೂಸರ್‌ನೇಮ್ ಮೂಲಕ ಸಂದೇಶ ಕಳುಹಿಸಿದಾಗ, ಸಂದೇಶ ಕಳುಹಿಸಿದವರ ದೇಶದ ಮಾಹಿತಿ ಹಾಗೂ ‘ಮೊದಲ ಬಾರಿಯ ಸಂಪರ್ಕ’ ಎಂಬ ಎಚ್ಚರಿಕೆ ಸಂದೇಶ ಬಳಕೆದಾರರಿಗೆ ರವಾನೆಯಾಗಲಿದೆ. ಇದರಿಂದ ವಂಚಕರನ್ನು ಸುಲಭವಾಗಿ ಪತ್ತೆಹಚ್ಚಿ ಬ್ಲಾಕ್ (Block) ಅಥವಾ ರಿಪೋರ್ಟ್ (Report) ಮಾಡಬಹುದು.
ಇದನ್ನು ಓದಿದ್ದೀರಾ? ದೇಶದ ರಿಯಲ್ ಎಸ್ಟೇಟ್ ಮೇಲೆ ಯುದ್ಧದ ಕಾರ್ಮೋಡ: 7 ನಗರಗಳಲ್ಲಿ ವಸತಿ ಮಾರಾಟ ಕುಸಿತ
ಬಯಸಿದ ಯೂಸರ್‌ನೇಮ್ ಸಿಗದಿದ್ದರೆ ಏನು ಮಾಡಬೇಕು ಎಂಬ ಬಗ್ಗೆಯೂ ಕಂಪನಿ ವಿವರಿಸಿದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿರುವ ಯೂಸರ್‌ನೇಮ್‌ಗಳು ಆಯಾ ಖಾತೆಯ ನೈಜ ಮಾಲೀಕರಿಗೆ ಮಾತ್ರ ಮೀಸಲಿರುತ್ತವೆ. ಅಲ್ಲದೆ, ಪ್ರಖ್ಯಾತ ವ್ಯಕ್ತಿಗಳು, ಸರ್ಕಾರಿ ಸಂಸ್ಥೆಗಳು, ಗಣ್ಯರು ಹಾಗೂ ‘ಮೆಟಾ ವೆರಿಫೈಡ್’ ಖಾತೆಗಳ ಹೆಸರನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಲು ಆ ನಿರ್ದಿಷ್ಟ ಹೆಸರುಗಳನ್ನು ಕಾಯ್ದಿರಿಸಲಾಗಿದೆ .
ಅಪರಿಚಿತರು ಸುಮ್ಮನೆ ಯೂಸರ್‌ನೇಮ್ ಊಹಿಸಿ ಸಂದೇಶ ಕಳುಹಿಸುವುದನ್ನು ತಡೆಯಲು ‘ಯೂಸರ್‌ನೇಮ್ ಕೀ’ ಎಂಬ ಹೆಚ್ಚುವರಿ ಭದ್ರತಾ ಆಯ್ಕೆಯನ್ನು Whatsapp ಪರಿಚಯಿಸುತ್ತಿದೆ. ಇದರ ಅನ್ವಯ, ಯಾರಾದರೂ ನಿಮಗೆ ಸಂದೇಶ ಕಳುಹಿಸಬೇಕಾದರೆ ಅವರಿಗೆ ಕೇವಲ ನಿಮ್ಮ ಯೂಸರ್‌ನೇಮ್ ತಿಳಿದಿದ್ದರೆ ಸಾಲದು, ಬದಲಿಗೆ ನೀವು ಸೆಟ್ ಮಾಡಿರುವ ‘ಯೂಸರ್‌ನೇಮ್ ಕೀ’ ಕೂಡ ತಿಳಿದಿರಬೇಕು. ಈ ಕೀಯನ್ನು ಬಳಕೆದಾರರು ತಮ್ಮ ಇಚ್ಛೆಯಂತೆ ಯಾವಾಗ ಬೇಕಾದರೂ ಬದಲಾಯಿಸಬಹುದು.
ಈ ಹೊಸ ಫೀಚರ್‌ನಿಂದಾಗಿ ಆನ್‌ಲೈನ್ ವಂಚನೆ, ಫಿಶಿಂಗ್, ‘ಡಿಜಿಟಲ್ ಅರೆಸ್ಟ್’ ನಂತಹ ಹಗರಣಗಳು ಮತ್ತು ಆರ್ಥಿಕ ವಂಚನೆಗಳು ಹೆಚ್ಚಾಗಬಹುದು ಎಂದು ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಸರ್ಕಾರದ ಜೊತೆಗಿನ ಸಮಾಲೋಚನೆ ಮುಗಿಯುವವರೆಗೆ ಈ ಫೀಚರ್ ಅನ್ನು ಬಿಡುಗಡೆ ಮಾಡಬಾರದು ಎಂದು Whatsappಗೆ ಸೂಚಿಸಿದೆ. ಅಲ್ಲದೆ, ಈ ಕುರಿತು 3 ದಿನಗಳ ಒಳಗೆ ಅಗತ್ಯ ದಾಖಲೆಗಳೊಂದಿಗೆ ವಿವರವಾದ ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ಕೇಂದ್ರದ ನೋಟಿಸ್‌ಗೆ ಪ್ರತಿಕ್ರಿಯಿಸಿರುವ Whatsapp ವಕ್ತಾರರು, “ಸದ್ಯ ಬಳಕೆದಾರರಿಗೆ ತಮ್ಮ ನೆಚ್ಚಿನ ಯೂಸರ್‌ನೇಮ್ ಕಾಯ್ದಿರಿಸಲು ಮಾತ್ರ ಅವಕಾಶ ನೀಡಲಾಗಿದೆಯೇ ಹೊರತು, ಈ ಫೀಚರ್ ಇನ್ನೂ ಬಳಕೆಗೆ ಮುಕ್ತವಾಗಿಲ್ಲ. ಈ ವರ್ಷದ ಕೊನೆಯಲ್ಲಿ ಹಂತಹಂತವಾಗಿ ಇದನ್ನು ಬಿಡುಗಡೆ ಮಾಡಲಾಗುವುದು. ವಂಚನೆ ತಡೆಯಲು ಅಗತ್ಯವಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗೆಯೇ, Whatsapp ಬಳಸಲು ಫೋನ್ ನಂಬರ್ ಹೊಂದುವುದು ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.




