ಜಾರ್ಖಂಡ್ ಮೂಲದ ನಿಷೇಧಿತ ಮಾವೋವಾದಿ ಸಂಘಟನೆ ‘ತೃತೀಯ ಪ್ರಸ್ತುತಿ ಕಮಿಟಿ’ (ಟಿಪಿಸಿ) ಮುಖ್ಯಸ್ಥ ಹಾಗೂ ಪ್ರಮುಖ ಮಾವೋವಾದಿ ಕಮಾಂಡರ್ ಬ್ರಿಜೇಶ್ ಗಂಜೂ ಅಲಿಯಾಸ್ ಗೋಪಾಲ್ ಸಿಂಗ್ ಭೋಕ್ತಾ, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾನುವಾರ ಮುಂಜಾನೆ ನಡೆದ ಯುಪಿ ಭಯೋತ್ಪಾದನಾ ವಿರೋಧಿ ದಳ (ಎಟಿಎಸ್) ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ.
ಹತರಾದ ಬ್ರಿಜೇಶ್ ಗಂಜೂ ತಲೆಯ ಮೇಲೆ ಜಾರ್ಖಂಡ್ ಸರ್ಕಾರ 25 ಲಕ್ಷ ರೂಪಾಯಿ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 5 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 30 ಲಕ್ಷ ರೂಪಾಯಿಗಳ ಇನಾಮನ್ನು ಘೋಷಿಸಿದ್ದವು.
ಇದನ್ನೂ ಓದಿ: ಉತ್ತರ ಪ್ರದೇಶ | ಲಖಿಂಪುರ ಖೇರಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಪ್ರಮುಖ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ
ವಾರಣಾಸಿಯ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಂಕಾ ಮೈದಾನದ ಬಳಿ ಮುಂಜಾನೆ ಸುಮಾರು 4 ಗಂಟೆಗೆ ಈ ಕಾರ್ಯಾಚರಣೆ ನಡೆದಿದೆ. ರಹಸ್ಯ ಮಾಹಿತಿಯನ್ನಾಧರಿಸಿ ಯುಪಿ ಎಟಿಎಸ್ ಪಡೆ, ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಬ್ರಿಜೇಶ್ ಗಂಜೂ ಮತ್ತು ಆತನ ಸಹಚರನನ್ನು ತಡೆಯಲು ಯತ್ನಿಸಿತು. ಈ ವೇಳೆ ವಾಹನದಿಂದ ಕೆಳಗಿಳಿದ ಗಂಜೂ, ಎಟಿಎಸ್ ಸಿಬ್ಬಂದಿಯ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ.
ಆತ್ಮರಕ್ಷಣೆಗಾಗಿ ಎಟಿಎಸ್ ಸಿಬ್ಬಂದಿ ನಡೆಸಿದ ಪ್ರತ್ಯುತ್ತರ ಗುಂಡಿನ ಚಕಮಕಿಯಲ್ಲಿ ಗಂಜೂ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಗುಂಡಿನ ಚಕಮಕಿಯ ವೇಳೆ ಎಟಿಎಸ್ ಡಿಎಸ್‌ಪಿ ವಿಪಿನ್ ರೈ ಮತ್ತು ಹೆಡ್ ಕಾನ್‌ಸ್ಟೇಬಲ್ ನಿತೇಂದ್ರ ಕೃಷ್ಣ ಅವರ ಬುಲೆಟ್‌ಪ್ರೂಫ್ ಜಾಕೆಟ್‌ಗಳಿಗೆ ಗುಂಡುಗಳು ತಾಗಿದ್ದು, ಇಬ್ಬರೂ ಅಧಿಕಾರಿಗಳು ಅಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳದಿಂದ ಎರಡು ಪಿಸ್ತೂಲ್‌ಗಳು, ಒಂದು ಕಾರ್ಬೈನ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಾರ್ಖಂಡ್‌ನ ಛತ್ರಾ ಜಿಲ್ಲೆಯ ನಿವಾಸಿಯಾಗಿದ್ದ ಬ್ರಿಜೇಶ್ ಗಂಜೂ ಮೇಲೆ 1996ರಿಂದಲೇ ಹತ್ಯೆ, ಅಪಹರಣ, ಸರಕಾರಿ ನೌಕರರ ಮೇಲೆ ದಾಳಿ, ಸುಲಿಗೆ ಹಾಗೂ ಸ್ಫೋಟಕ ಕಾಯ್ದೆ ಸೇರಿದಂತೆ ಸುಮಾರು 39ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಭಯೋತ್ಪಾದನಾ ಆರ್ಥಿಕ ನೆರವು ಪ್ರಕರಣದಲ್ಲೂ ಎನ್‌ಐಎಗೆ ಈತ ಬೇಕಾಗಿದ್ದ. ಈತನ ಸಾವಿನೊಂದಿಗೆ ಟಿಪಿಸಿ ನಕ್ಸಲ್ ಸಂಘಟನೆಯ ಜಾಲಕ್ಕೆ ಭಾರಿ ಹೊಡೆತ ಬಿದ್ದಂತಾಗಿದೆ ಎಂದು ಯುಪಿ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಭ್ ಯಶ್ ತಿಳಿಸಿದ್ದಾರೆ.




