ಬಿಹಾರದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿಯಿಂದಾಗಿ ಲಕ್ಷಾಂತರ ಜನರು ತೊಂದರೆಯಲ್ಲಿರುವಾಗ ಮತ್ತು ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವಾಗ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆಗಾಗಿ ಕೋಟ್ಯಂತರ ರೂಪಾಯಿ ಹಣವನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಬಿಹಾರದ ವಿಪಕ್ಷ ನಾಯಕ ಹಾಗೂ ಆರ್‌ಜೆಡಿ (ಆರ್‌ಜೆಡಿ) ಮುಖಂಡ ತೇಜಸ್ವಿ ಯಾದವ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮತ್ತು ತಮ್ಮ ಸಾಮಾಜಿಕ ಜಾಲತಾಣ ‘X’ ಖಾತೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ‘ಆಶೀರ್ವಾದದ ದೀಪ’ ಹಚ್ಚುವ ಕಾರ್ಯಕ್ರಮಕ್ಕಾಗಿ ರಾಜ್ಯ ಸರ್ಕಾರಿ ಖಜಾನೆಯಿಂದ ಸುಮಾರು 100 ಕೋಟಿ ರೂಪಾಯಿಗಳನ್ನು ಅನಗತ್ಯವಾಗಿ ಪೋಲು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಬಿಹಾರ ಮತದಾರರ ಅಧಿಕಾರ ಯಾತ್ರೆ: ರಾಹುಲ್, ತೇಜಸ್ವಿ ಜೊತೆ ಸೇರಿದ ಅಖಿಲೇಶ್ ಯಾದವ್
ಬಿಹಾರದ ಸುಮಾರು 45 ರಿಂದ 50 ಲಕ್ಷ ಜನರು ಭೀಕರ ಪ್ರವಾಹದಿಂದ ತತ್ತರಿಸಿದ್ದಾರೆ. ಅವರಿಗೆ ಕುಡಿಯುವ ನೀರು, ಆಹಾರ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಹಣವಿಲ್ಲ ಎನ್ನುವ ಸರ್ಕಾರ, ಪ್ರಧಾನಿ ಹುಟ್ಟುಹಬ್ಬಕ್ಕೆ ಕೋಟ್ಯಂತರ ರೂಪಾಯಿಗಳನ್ನು ಪ್ರಚಾರಕ್ಕಾಗಿ ಪೋಲು ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯೊಬ್ಬರ ಜನ್ಮದಿನಕ್ಕೆ ಸರ್ಕಾರಿ ಸುತ್ತೋಲೆ ಹೊರಡಿಸಿ, ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದೀಪ ಹಚ್ಚುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದರೂ, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಪಾಠ ಪ್ರವಚನ ಬಿಟ್ಟು ದೀಪ ಹಚ್ಚುವ ಮತ್ತು ಕಾಯುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಬೆಲೆ ಏರಿಕೆ, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದ ನಡುವೆ ಸಾರ್ವಜನಿಕರ ತೆರಿಗೆ ಹಣವನ್ನು ಇಂತಹ ಕಾರ್ಯಕ್ರಮಗಳಿಗೆ ಬಳಸುವುದು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಅವರು ಬಣ್ಣಿಸಿದ್ದಾರೆ. ಬಿಹಾರ ಸರ್ಕಾರದ ಈ ನಡೆಗೆ ವ್ಯಾಪಕ ರಾಜಕೀಯ ಚರ್ಚೆ ಮತ್ತು ಆಕ್ರೋಶ ವ್ಯಕ್ತವಾಗಿದೆ.




