ಮುಂಬೈನ ಬೋರಿವಲಿಯಲ್ಲಿ ಆಯೋಜಿಸಲಾಗುತ್ತಿರುವ ಮುಂಬರುವ ನವರಾತ್ರಿ ಗರ್ಬಾ ಮತ್ತು ದಾಂಡಿಯಾ ಉತ್ಸವದಲ್ಲಿ ಮುಸ್ಲಿಂ ಸಮುದಾಯದ ಪ್ರವೇಶಕ್ಕೆ ಕಠಿಣ ನಿಯಮಗಳನ್ನು ವಿಧಿಸಲಾಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನೀಡಿದ್ದ ನಿರ್ದೇಶನಗಳ ಬೆನ್ನಲ್ಲೇ, ಸ್ಥಳೀಯ ಬಿಜೆಪಿ ಶಾಸಕ ಸಂಜಯ್ ಉಪಾಧ್ಯಾಯ ಹಾಗೂ ಸಂಘಟಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವ ಪ್ರತಿಯೊಬ್ಬರಿಗೂ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದ್ದಾರೆ. ಈ ಮಾರ್ಗಸೂಚಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಗರ್ಬಾ ಮಂಟಪ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯ ಗುರುತನ್ನು ಆಧಾರ್ ಕಾರ್ಡ್ ಅಥವಾ ಅಧಿಕೃತ ಗುರುತಿನ ಚೀಟಿಯ ಮೂಲಕ ಪರಿಶೀಲಿಸಲಾಗುತ್ತದೆ. ಪ್ರವೇಶ ದ್ವಾರದಲ್ಲೇ ಕಡ್ಡಾಯವಾಗಿ ನೊಸಲಿಗೆ ತಿಲಕವನ್ನು ಇಡಲಾಗುತ್ತದೆ. ಅನ್ಯಧರ್ಮೀಯರು ಅಥವಾ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಭಾಗವಹಿಸುವುದಾದರೆ, ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ (ಪತ್ನಿ, ಸಹೋದರಿ ಅಥವಾ ಕುಟುಂಬದೊಂದಿಗೆ) ಮಾತ್ರ ಆಗಮಿಸಬೇಕು ಎಂದು ಶಾಸಕ ಸಂಜಯ್ ಉಪಾಧ್ಯಾಯ ಹಾಗೂ ಸಂಘಟಕರು ಹೇಳಿದ್ದಾರೆ.
ಇದನ್ನೂ ಓದಿ: ಗರ್ಬಾ ಕಾರ್ಯಕ್ರಮಕ್ಕೆ ಮುಸ್ಲಿಮರ ಪ್ರವೇಶ ನಿಷೇಧ ಸಂವಿಧಾನ ವಿರೋಧಿ: ವಿಎಚ್‌ಪಿ ಫರ್ಮಾನು ವಿರುದ್ಧ ಸಚಿವ ಅಠಾವಳೆ ಆಕ್ರೋಶ
ಗರ್ಬಾ ಕೇವಲ ನೃತ್ಯ ಹಾಗೂ ಮನರಂಜನೆಯಲ್ಲ, ಅದು ನವದುರ್ಗೆಯ ಆರಾಧನೆಯಾಗಿದೆ. ಹೀಗಾಗಿ ದೇವಿಯ ಪೂಜೆ ಹಾಗೂ ವಿಗ್ರಹಾರಾಧನೆಯಲ್ಲಿ ನಂಬಿಕೆ ಉಳ್ಳವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ ಎಂದು ಆಯೋಜಕರು ಪ್ರತಿಪಾದಿಸಿದ್ದಾರೆ.
ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮುಂಬೈನ ಸಮಾಜವಾದಿ ಪಕ್ಷದ ಶಾಸಕ ರಹೀಸ್ ಶೇಖ್ ಸೇರಿದಂತೆ ಹಲವು ನಾಯಕರು, “ವಿಎಚ್‌ಪಿ ಮತ್ತು ಆಡಳಿತ ಪಕ್ಷದ ನಾಯಕರ ಈ ನಿರ್ಧಾರವು ಭಾರತೀಯ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಮತ್ತು ಸಮಾಜದಲ್ಲಿ ಧ್ರುವೀಕರಣವನ್ನು ಉಂಟುಮಾಡುತ್ತದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ವಿಎಚ್‌ಪಿ ನೀತಿಯನ್ನು ವಿರೋಧಿಸಿದ್ದು, ದೇಶದಲ್ಲಿ ಪ್ರತಿಯೊಬ್ಬರಿಗೂ ಇತರ ಧರ್ಮಗಳ ಹಬ್ಬಗಳಲ್ಲಿ ಭಾಗವಹಿಸುವ ಹಕ್ಕಿದೆ ಮತ್ತು ಇಂತಹ ನಿರ್ಬಂಧಗಳು ಸರಿಯಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಭದ್ರತೆ ಹಾಗೂ ‘ಲವ್ ಜಿಹಾದ್’ ತಡೆಯುವ ನಿಟ್ಟಿನಲ್ಲಿ ಈ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯೋಜಕರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.




