ಹಾವು ಕಡಿತಕ್ಕೆ ಒಳಗಾದವರು ಆತಂಕಕ್ಕೊಳಗಾಗಿ ನಾಟಿ ಚಿಕಿತ್ಸೆ, ನಕಲಿ ವೈದ್ಯರ ಮೊರೆ ಹೋಗದೆ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿದರೆ ಅಮೂಲ್ಯ ಜೀವಗಳನ್ನು ಉಳಿಸಬಹುದು. ಹಾವು ಕಡಿತಕ್ಕೆ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಮಹೇಶ ಕೋಣಿ ತಿಳಿಸಿದರು.
ಬಾಗಲಕೋಟೆ ನಗರದ ಜಿಲ್ಲಾ ಆಸ್ಪತ್ರೆಯ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಹಾವು ಕಚ್ಚಿದ ಸಂದರ್ಭದಲ್ಲಿ ಕೆಲವರು ವೈಜ್ಞಾನಿಕ ವೈದ್ಯಕೀಯ ಚಿಕಿತ್ಸೆಗೆ ಬದಲಾಗಿ ನಾಟಿ ಚಿಕಿತ್ಸೆ ಅಥವಾ ಇತರ ಪರ್ಯಾಯ ವಿಧಾನಗಳ ಮೊರೆ ಹೋಗುತ್ತಾರೆ. ಇದರಿಂದ ಚಿಕಿತ್ಸೆಗೆ ಅಗತ್ಯವಿರುವ ಸಮಯ ವ್ಯರ್ಥವಾಗಿ, ವಿಷದ ಪರಿಣಾಮ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಹಾವು ಕಡಿತವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು” ಎಂದು ಡಾ. ಕೋಣಿ ಸಲಹೆ ನೀಡಿದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಅಶೋಕ ಸೂರ್ಯವಂಶಿ ಮಾತನಾಡಿ, “ಹಾವು ಕಡಿತದಿಂದ ಸಂಭವಿಸುವ ಸಾವುಗಳನ್ನು ಕಡಿಮೆ ಮಾಡಲು ಕೇವಲ ಆರೋಗ್ಯ ಇಲಾಖೆಯ ಪ್ರಯತ್ನ ಸಾಕಾಗುವುದಿಲ್ಲ. ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ” ಎಂದರು.
This video cannot be played in your browser. Open the video directly
“ಹಾವು ಕಚ್ಚಿದ ಸಂದರ್ಭದಲ್ಲಿ ಏನು ಮಾಡಬೇಕು, ಯಾವ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ತಲುಪಬೇಕು. ವೈಜ್ಞಾನಿಕ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವುದರಿಂದ ಅನೇಕ ಅನಾಹುತಗಳನ್ನು ತಪ್ಪಿಸಬಹುದು ಎಂದು ಹೇಳಿದರು.
ಹಾವುಗಳ ಬಗ್ಗೆ ತಿಳಿದುಕೊಳ್ಳುವುದೂ ಮುಖ್ಯ
ಎಪಿಡೆಮಿಯಾಲಜಿಸ್ಟ್ ಡಾ. ಸೀಮಾ ಹುದ್ದಾರ ಅವರು ವಿವಿಧ ಜಾತಿಯ ಹಾವುಗಳ ಸ್ವರೂಪ, ಅವುಗಳನ್ನು ಗುರುತಿಸುವ ವಿಧಾನ ಹಾಗೂ ಹಾವು ಕಡಿತದ ನಂತರ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳ ಕುರಿತು ಮಾಹಿತಿ ನೀಡಿದರು.
“ಹಾವು ಕಡಿತದ ಪ್ರಕರಣಗಳಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುವುದು ಅತ್ಯಂತ ಪ್ರಮುಖವಾಗಿರುವುದರಿಂದ, ಸಾರ್ವಜನಿಕರು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು” ಎಂದು ತಿಳಿಸಿದರು.
ಉರಗ ರಕ್ಷಕ ರಾಜಮಹ್ಮದ ಮದಾರಿಯಾ ಮಾತನಾಡಿ, “ಜನವಸತಿ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಂಡಾಗ ಭಯದಿಂದ ಅವುಗಳನ್ನು ಕೊಲ್ಲುವ ಬದಲು ತರಬೇತಿ ಪಡೆದ ಉರಗ ರಕ್ಷಕರಿಗೆ ಮಾಹಿತಿ ನೀಡಬೇಕು. ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ನೈಸರ್ಗಿಕ ಪರಿಸರಕ್ಕೆ ಬಿಡುವ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಮತದಾರರ ಪಟ್ಟಿಯಲ್ಲಿ ಹೆಸರು ಖಚಿತಪಡಿಸಿಕೊಳ್ಳಿ: ಕೆ.ರಾಜೇಂದ್ರ
ಕಾರ್ಯಕ್ರಮದಲ್ಲಿ ಜಿಲ್ಲಾ ಸಮೀಕ್ಷಾ ಘಟಕದ ಐಡಿಎಸ್‌ಪಿ ಡೇಟಾ ಮ್ಯಾನೇಜರ್ ಪ್ರವೀಣ ಕಾಶಿನಕುಂಟಿ, ಪ್ಯಾರಾಮೆಡಿಕಲ್ ಕಾಲೇಜಿನ ಸಂಯೋಜಕ ಸಂತೋಷಕುಮಾರ ಮಠ, ಎಫ್‌ಎಲ್‌ಸಿ ಎಂ ಬಿ ಪಾಟೀಲ, ಜಿಲ್ಲಾ ಸಮೀಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.





