2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳು ಸಿದ್ದತೆಯಲ್ಲಿ ತೊಡಗಿವೆ. ಸಮಾಜವಾದಿ ಪಕ್ಷವೂ ಚುನಾವಣೆಯ ಗೆಲುವಿಗಾಗಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಇದೇ ಸಮಯದಲ್ಲಿ, ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ರಾಜ್ಯದ ಪ್ರತಿ ಕ್ಷೇತ್ರದಲ್ಲಿಯೂ ಆಡಳಿತಾರೂಢ ಬಿಜೆಪಿ ಪಡೆಯುವ ಮತಗಳನ್ನು ತಲಾ 27,000 ಕಡಿಮೆ ಮಾಡುವುದಾಗಿ ಮತ್ತು ಎಸ್‌ಪಿಯ ಮತಗಳನ್ನು ಹೆಚ್ಚಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಲಕ್ನೋದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, 2027ರ ಹೊತ್ತಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಪಕ್ಷದ ಬೆಂಬಲವನ್ನು ವೃದ್ಧಿಸಿಕೊಳ್ಳಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. “ನಮ್ಮ ಗುರಿಯನ್ನು ತಲುಪಲು ಆಧುನಿಕ ತಂತ್ರಜ್ಞಾನವನ್ನು ಬಳಸುವುದು, ಮನೆ ಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವುದು ಹಾಗೂ ಅವರಿಗೆ ನ್ಯಾಯ ಮತ್ತು ಗೌರವ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲು ಪಕ್ಷ ತೀರ್ಮಾನಿಸಿದೆ” ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳ ಮೇಲಿನ ದಾಳಿಗಳ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಖಿಲೇಶ್. “ರಾಜ್ಯದ 72 ಜಿಲ್ಲೆಗಳಲ್ಲಿ ಈವರೆಗೆ 151ಕ್ಕೂ ಹೆಚ್ಚು ಅಂಬೇಡ್ಕರ್ ಪ್ರತಿಮೆಗಳಿಗೆ ಹಾನಿ ಉಂಟುಮಾಡಲಾಗಿದೆ. ಆದರೆ ಸರ್ಕಾರವು ಕೇವಲ 14 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳನ್ನು ಬಂಧಿಸಿದೆ. ಬಿಜೆಪಿಗೆ ಸಂವಿಧಾನವನ್ನು ಬದಲಾಯಿಸುವ ಆಸೆಯಿತ್ತು, ಆದರೆ ಅದು ಸಾಧ್ಯವಾಗದ ಕಾರಣ ಉದ್ದೇಶಪೂರ್ವಕವಾಗಿ ಇಂತಹ ಕೃತ್ಯಗಳನ್ನು ನಡೆಸಲಾಗುತ್ತಿದೆ. ಬಿಜೆಪಿಯು ಅಂಬೇಡ್ಕರ್ ಅವರಿಗಾಗಲಿ, ಅವರ ಪ್ರತಿಮೆಗಳಿಗಾಗಲಿ ಅಥವಾ ಅವರನ್ನು ಗೌರವಿಸುವ ಜನರಿಗಾಗಲಿ ಯಾವುದೇ ಗೌರವ ನೀಡುತ್ತಿಲ್ಲ” ಎಂದು ದೂರಿದ್ದಾರೆ.
ಸಮಾಜವಾದಿ ಪಕ್ಷವು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಒಟ್ಟು ಪ್ರಕರಣಗಳಲ್ಲಿ 84 ಘಟನೆಗಳಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. 45 ಪ್ರಕರಣಗಳಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಯೋಗಿ ಆದಿತ್ಯನಾಥ್ ಸರ್ಕಾರದ ಮೊದಲ ಅವಧಿಯಲ್ಲಿ 46 ಪ್ರತಿಮೆಗಳಿಗೆ ಹಾನಿಯಾಗಿದ್ದರೆ, ಎರಡನೇ ಅವಧಿಯಲ್ಲಿ ಈ ಸಂಖ್ಯೆ 105ಕ್ಕೆ ಏರಕೆಯಾಗಿದೆ.
This video cannot be played in your browser. Open the video directly




