ಭೀಕರ ಬಿರುಗಾಳಿಯಿಂದಾಗಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದಿದ್ದು, ಕನಿಷ್ಠ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹಮಿರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗುವ ಆತಂಕವಿದೆ.
ಬೆತ್ವಾ ನದಿಗೆ ಅಡ್ಡಲಾಗಿ ಮೊರಾಕಾಂದರ್‌ನಿಂದ ಕಂದೌರ್ ಗ್ರಾಮದವರೆಗೆ ಈ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. ತಡರಾತ್ರಿ 2 ಗಂಟೆಯ ಸುಮಾರಿಗೆ ಸೇತುವೆಯ ಕೆಲಸ ನಡೆಯುತ್ತಿತ್ತು, ಮಳೆಯಿಂದಾಗಿ ಕೆಲ ಕಾರ್ಮಿಕರು ಹೈಡ್ರಾ ಯಂತ್ರದ ಅಡಿಯಲ್ಲಿ ನಿಂತಿದ್ದರು. ಈ ವೇಳೆ, ಸೇತುವೆ ಕುಸಿದು ಬಿದ್ದಿದ್ದು, ದುರಂತ ಘಟನೆ ನಡೆದಿದೆ ಎಂದು ವರದಿಯಾಗಿದೆ. ನಿರ್ಮಾಣ ಸ್ಥಳದಲ್ಲಿ ಕೈಗೊಳ್ಳಲಾಗಿದ್ದ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳೆದ್ದಿದ್ದು, ಆಕ್ರೋಶ ವ್ಯಕ್ತವಾಗಿದೆ.
ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಹಮಿರ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಅರವಿಂದ್ ಕುಮಾರ್ ವರ್ಮಾ, “ಸದ್ಯ ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಬಿರುಗಾಳಿಯ ನಡುವೆಯೂ ಸೇತುವೆಯ ಕೆಲಸ ನಡೆಯುತ್ತಿತ್ತು. ಮೊದಲು ಸೇತುವೆಯ ಮೇಲ್ಭಾಗದ ಭಾಗಗಳು ಮುರಿದು ಬಿದ್ದಿವೆ. ಬಳಿಕ, ಅದಕ್ಕೆ ಆಸರೆಯಾಗಿದ್ದ ಪಿಲ್ಲರ್‌ಗಳು ಕುಸಿದು ಬಿದ್ದಿವೆ” ಎಂದು ತಿಳಿಸಿದ್ದಾರೆ.
ಸೇತುವೆಯ ಕಾವಲು ಕಾಯುತ್ತಿದ್ದ ಸಮೀಪದ ಹಳ್ಳಿಯ ಇಬ್ಬರು ಭದ್ರತಾ ಸಿಬ್ಬಂದಿಗಳು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ. ನಾಲ್ವರು ಕಾರ್ಮಿಕರು ಕೂಡ ಮೃತಪಟ್ಟಿದ್ದಾರೆ. ಇನ್ನೂ ಮೂವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟವರಲ್ಲಿ ಅತ್ಯಂತ ಕಿರಿಯ ವಯಸ್ಸಿನ ಯುವಕನನ್ನು ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಚಿಲ್ಲಾ ಗ್ರಾಮದ ಕುಲದೀಪ್ ನಿಶಾದ್ (19) ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದರನ್ನು ಚಿಲ್ಲಾ ನಿವಾಸಿ ಲೋಕೇಂದ್ರ, ಕುಲದೀಪ್ ನಿಶಾದ್, ಭೂರಾಗಢದ ಸಾವಂತ್ ಯಾದವ್ ಮತ್ತು ಸಭಾಜಿತ್, ಸ್ವಾಸಾ ಖುರ್ದ್ ನಿವಾಸಿ ಪುಷ್ಪೇಂದ್ರ ಸಿಂಗ್ ಚೌಹಾಣ್ ಹಾಗೂ ಅಚ್ಪುರ ನಿವಾಸಿ ರಾಜೇಶ್ ಪಾಲ್ ಎಂದು ಗುರುತಿಸಲಾಗಿದೆ.



