ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ನೂತನ BJP ಸರ್ಕಾರ ತನ್ನ ಮೊದಲ ಪೂರ್ಣ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ (MAME) ಇಲಾಖೆಯ ಅನುದಾನವನ್ನು ಬರೋಬ್ಬರಿ 62% ರಷ್ಟು ಕಡಿತಗೊಳಿಸುವ ಮೂಲಕ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ಫೆಬ್ರವರಿಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ ಈ ಇಲಾಖೆಗೆ 5,713.61 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಆದರೆ, ಈಗಿನ BJP ಸರ್ಕಾರ ಅದನ್ನು 2,175.43 ಕೋಟಿ ರೂಪಾಯಿಗೆ ಇಳಿಸಿದೆ. ಮುಖ್ಯವಾಗಿ..
- ಐಕ್ಯಶ್ರೀ ವಿದ್ಯಾರ್ಥಿವೇತನ: ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ನೀಡಲಾಗುತ್ತಿದ್ದ ಈ ಯೋಜನೆಯ ಅನುದಾನವನ್ನು 50% ಕ್ಕಿಂತ ಹೆಚ್ಚು ಕಡಿತಗೊಳಿಸಲಾಗಿದೆ. ಕಳೆದ ವರ್ಷ 741 ಕೋಟಿ ರೂ. ಇದ್ದ ಅನುದಾನ ಈಗ 250 ಕೋಟಿ ರೂ.ಗೆ ಕುಸಿದಿದೆ.
- ಸಬೂಜ್ ಸಾಥಿ ಯೋಜನೆ: ಮದರಸಾ ವಿದ್ಯಾರ್ಥಿಗಳೂ ಸೇರಿದಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುವ ಈ ಯೋಜನೆಯ ನಿಧಿಯನ್ನು 100 ಕೋಟಿ ರೂ.ನಿಂದ ಕೇವಲ 15.5 ಕೋಟಿ ರೂ.ಗೆ ತಗ್ಗಿಸಲಾಗಿದೆ.
- ಇತರೆ ಕಡಿತ: ನಿರ್ಗತಿಕ ಅಲ್ಪಸಂಖ್ಯಾತ ಮಹಿಳೆಯರ ವಸತಿ ಯೋಜನೆಗೆ ಈ ಬಾರಿ ಯಾವುದೇ ಅನುದಾನ ನೀಡಿಲ್ಲ. ಹಾಗೆಯೇ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳಿಗಾಗಿ ಮೀಸಲಿದ್ದ ಮೊತ್ತವನ್ನು 103 ಕೋಟಿ ರೂ.ನಿಂದ 21 ಕೋಟಿ ರೂ.ಗೆ ಇಳಿಸಲಾಗಿದೆ.
ವಿಧಾನಸಭೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವ ಸ್ವಪನ್ ದಾಸ್‌ಗುಪ್ತ, “ಹಿಂದಿನ ಸರ್ಕಾರ ಅಲ್ಪಸಂಖ್ಯಾತ ಇಲಾಖೆಗೆ 5,000 ಕೋಟಿ ರೂ.ಗಿಂತ ಹೆಚ್ಚು ತೋರಿಸಿ, ವಾಸ್ತವದಲ್ಲಿ ಕೇವಲ 2,500 ಕೋಟಿ ರೂ. ಮಾತ್ರ ಖರ್ಚು ಮಾಡುತ್ತಿತ್ತು. ನಾವು ವಾಸ್ತವಿಕ ಮೊತ್ತವನ್ನು ಮಾತ್ರ ನಿಗದಿಪಡಿಸಿದ್ದೇವೆ” ಎಂದು ತಮ್ಮ ಅನುದಾನ ಕಡಿತ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸುವೇಂದು ಅಧಿಕಾರಿ, “ಮಕ್ಕಳನ್ನು ಮದರಸಾಗಳಿಗೆ ಕಳುಹಿಸುವ ಬದಲು ವೈದ್ಯರು ಅಥವಾ ಇಂಜಿನಿಯರ್‌ಗಳನ್ನಾಗಿ ಮಾಡಲು ಉತ್ತೇಜಿಸಬೇಕು” ಎಂದು ಹೇಳಿದ್ದಾರೆ.
ಬಿಜೆಪಿಯ ಈ ನಿರ್ಧಾರವನ್ನು ತೃಣಮೂಲ ಕಾಂಗ್ರೆಸ್ (TMC) ಸೇರಿದಂತೆ ಹಲವು ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಟಿಎಂಸಿಯ ರಿತಬ್ರತಾ ಬ್ಯಾನರ್ಜಿ, “ಈ ನಿರ್ಧಾರದ ವಿರುದ್ಧ ನಾವು ವಿಧಾನಸಭೆಯಲ್ಲಿ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಸಿದ್ದಾರೆ. ಐಎಸ್‌ಎಫ್‌ನ ನೌಶಾದ್ ಸಿದ್ದಿಕಿ, “ಬಿಜೆಪಿಯು ಎಲ್ಲರನ್ನೂ ಒಗ್ಗೂಡಿಸುವುದಾಗಿ ಹೇಳುತ್ತದೆ, ಆದರೆ ವಾಸ್ತವದಲ್ಲಿ ಅಲ್ಪಸಂಖ್ಯಾತರನ್ನು ಹತ್ತಿಕ್ಕುತ್ತಿದೆ. ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರಲ್ಲ, ಜೈನರು, ಕ್ರಿಶ್ಚಿಯನ್ನರು ಮತ್ತು ಬೌದ್ಧರೂ ಇದ್ದಾರೆ, ಅವರೆಲ್ಲರಿಗೂ ಈ ಕಡಿತ ಹೊಡೆತ ನೀಡುತ್ತದೆ” ಎಂದಿದ್ದಾರೆ. ಎಜೆಯುಪಿಯ ಹುಮಾಯುನ್ ಕಬೀರ್, “ಅಲ್ಪಸಂಖ್ಯಾತರ ಅಭಿವೃದ್ಧಿಯ ನಿಧಿಯನ್ನು ಕಡಿತಗೊಳಿಸುವ ಈ ನಿರ್ಧಾರವು ಸರ್ಕಾರದ ಪ್ರತಿಷ್ಠೆಯನ್ನು ಹಾಳು ಮಾಡಲಿದೆ” ಎಂದು ಟೀಕಿಸಿದ್ದಾರೆ.
ಒಬಿಸಿ ಪಟ್ಟಿಯಿಂದ ಮುಸ್ಲಿಂ ಸಮುದಾಯಗಳನ್ನು ಕೈಬಿಟ್ಟ ಬೆನ್ನಲ್ಲೇ, ಈಗ ಇಲಾಖೆಯ ಅನುದಾನದಲ್ಲಿ ಭಾರೀ ಕಡಿತ ಮಾಡಿರುವುದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರವು ತನ್ನ ‘ವೋಟ್ ಬ್ಯಾಂಕ್’ ರಾಜಕಾರಣವನ್ನು ಮೀರಿ, ಸೈದ್ಧಾಂತಿಕ ನೆಲೆಯಲ್ಲಿ ಧ್ರುವೀಕರಣದ ಹಾದಿ ಹಿಡಿದಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದು ಮುಂಬರುವ ದಿನಗಳಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಲಿದೆ.
ಇದನ್ನೂ ಓದಿ: ದೆಹಲಿ | ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ವಿಷಾನಿಲ ಸೇವಿಸಿ ಮೂವರು ಕಾರ್ಮಿಕರು ಸಾವು
ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳ ಶಿಕ್ಷಣ ಮತ್ತು ಆರ್ಥಿಕ ಸುಧಾರಣೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ ಶಿಕ್ಷಣದ ಮುಖ್ಯವಾಹಿನಿಯಿಂದ ದೂರವಿರುವ ಸಮುದಾಯಗಳಿಗೆ ವಿದ್ಯಾರ್ಥಿವೇತನ ಮತ್ತು ಸೈಕಲ್ ವಿತರಣೆಯಂತಹ ಯೋಜನೆಗಳೇ ಆಶಾಕಿರಣವಾಗಿದ್ದವು. ಈಗ ಇವುಗಳಿಗೆ ಕತ್ತರಿ ಬಿದ್ದಿರುವುದು, ‘ಡ್ರಾಪ್‌ಔಟ್’ ದರ ಹೆಚ್ಚಾಗಲು ಮತ್ತು ಸಾಕ್ಷರತಾ ಪ್ರಮಾಣ ಕುಸಿಯಲು ಕಾರಣವಾಗಬಹುದು ಎಂಬುದು ಶಿಕ್ಷಣ ತಜ್ಞರ ಅಭಿಮತ.
ಸರ್ಕಾರವು ಇದನ್ನು ‘ಅಭಿವೃದ್ಧಿ ಮತ್ತು ಪಾರದರ್ಶಕತೆ’ ಎಂದು ಸಮರ್ಥಿಸಿಕೊಳ್ಳುತ್ತಿದ್ದರೆ, ವಿರೋಧ ಪಕ್ಷಗಳು ಇದನ್ನು ‘ಸಾಂವಿಧಾನಿಕ ಹಕ್ಕುಗಳ ಕಸಿತ’ ಎನ್ನುತ್ತಿವೆ. ನಿಜವಾಗಿಯೂ ಅರ್ಹರಾದ ಬಡ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಸಿಗಬೇಕಿದ್ದ ಮೂಲಭೂತ ಸೌಕರ್ಯಗಳೇ ಇಲ್ಲದಂತಾಗಿವೆಯೇ ಎಂಬ ಚರ್ಚೆಯೂ ನಾಗರಿಕ ವಲಯದಲ್ಲಿ ಜೋರಾಗಿದೆ.




