ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ 33ರಷ್ಟು ಮಹಿಳಾ ಮೀಸಲಾತಿಯನ್ನು ‘ಕ್ಷೇತ್ರ ಮರುವಿಂಗಡಣೆ’ ಪ್ರಕ್ರಿಯೆಗೆ ತಳುಕು ಹಾಕದೆ, ಯಾವುದೇ ಷರತ್ತುಗಳಿಲ್ಲದೆ ತಕ್ಷಣವೇ ಜಾರಿಗೊಳಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಹಿಳಾ ಸಬಲೀಕರಣದ ಕುರಿತು ರಾಹುಲ್ ಗಾಂಧಿ ಹಂಚಿಕೊಂಡಿದ್ದ ವಿಡಿಯೊವನ್ನು ಉಲ್ಲೇಖಿಸಿದ್ದ ಸಚಿವ ರಿಜಿಜು, ‘ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಬೇಷರತ್ ಬೆಂಬಲ ನೀಡಲಿದೆ ಎಂದು ಭಾವಿಸುತ್ತೇನೆ’ ಎಂದಿದ್ದರು. ಇದಕ್ಕೆ ‘ಎಕ್ಸ್’ (X) ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರಾಹುಲ್, “ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲದೊಂದಿಗೆ 2023ರಲ್ಲೇ ಮಹಿಳಾ ಮೀಸಲಾತಿ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದೆ. ಮಸೂದೆ ಪಾಸ್ ಆಗಿ ಮೂರು ವರ್ಷ ಕಳೆದರೂ ಸರ್ಕಾರ ಅದನ್ನು ಇನ್ನೂ ಏಕೆ ಜಾರಿಗೊಳಿಸಿಲ್ಲ ಎಂಬುದು ನಮ್ಮ ಪ್ರಶ್ನೆ. ಈಗ ಅದನ್ನು ಕ್ಷೇತ್ರ ಮರುವಿಂಗಡಣೆಗೆ ಅನಗತ್ಯವಾಗಿ ಲಿಂಕ್ ಮಾಡುತ್ತಿರುವುದೇಕೆ? 2023ರ ಕಾಯ್ದೆಯನ್ನು ಯಾವುದೇ ಷರತ್ತುಗಳಿಲ್ಲದೆ ತಕ್ಷಣ ಜಾರಿಗೊಳಿಸಿ,” ಎಂದು ಆಗ್ರಹಿಸಿದ್ದಾರೆ.
ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಿಜಿಜು, “ಹಾಲಿ ಕಾನೂನಿನ ಪ್ರಕಾರ 2023ರ ನಂತರದ ಜನಗಣತಿ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ನಡೆದ ಬಳಿಕವಷ್ಟೇ ಮೀಸಲಾತಿ ಜಾರಿಗೆ ಬರಲು ಸಾಧ್ಯ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಜಾತಿ ಗಣತಿಯನ್ನು ಸೇರ್ಪಡೆಗೊಳಿಸುವುದರಿಂದ ಜನಗಣತಿ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದ್ದು, 2034ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಮೀಸಲಾತಿ ಜಾರಿ ಕಷ್ಟವಾಗಬಹುದು. ಹೀಗಾಗಿ 2029ರ ಚುನಾವಣೆ ವೇಳೆಗೆ ಮೀಸಲಾತಿ ಜಾರಿಗೊಳಿಸಲು, 2011ರ ಜನಗಣತಿಯ ಆಧಾರದಲ್ಲೇ ಶೀಘ್ರವಾಗಿ ಕ್ಷೇತ್ರ ಮರುವಿಂಗಡಣೆ ನಡೆಸುವ ಅಗತ್ಯವಿದೆ,” ಎಂದು ಸಮರ್ಥಿಸಿಕೊಂಡಿದ್ದಾರೆ.
ಲೋಕಸಭಾ ಸ್ಥಾನಗಳನ್ನು 850ಕ್ಕೆ ಹೆಚ್ಚಿಸಿ, ಕ್ಷೇತ್ರ ಮರುವಿಂಗಡಣೆ ಮಾಡಿದ ನಂತರ ಶೇ. 33 ಮೀಸಲಾತಿ ಜಾರಿಗೊಳಿಸಲು ಮುಂದಾಗಿದ್ದ ಸರ್ಕಾರದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ವಿರೋಧ ಪಕ್ಷಗಳು ಇತ್ತೀಚೆಗಷ್ಟೇ ವಿಫಲಗೊಳಿಸಿದ್ದವು ಎಂಬುದನ್ನು ರಿಜಿಜು ನೆನಪಿಸಿದ್ದಾರೆ. 2029ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರವು ರಾಜಕೀಯ ಲಾಭಕ್ಕಾಗಿ ಕ್ಷೇತ್ರ ಮರುವಿಂಗಡಣೆಗೆ ಮುಂದಾಗಿದೆ ಎಂಬುದು ವಿಪಕ್ಷಗಳ ಪ್ರಮುಖ ಆರೋಪವಾಗಿದೆ. ಏಪ್ರಿಲ್‌ನಲ್ಲಿ ಮಸೂದೆ ಅಂಗೀಕಾರಕ್ಕೆ ಸಂವಿಧಾನ ತಿದ್ದುಪಡಿಗೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಸರ್ಕಾರಕ್ಕೆ ಸಿಕ್ಕಿರಲಿಲ್ಲ.
ಕಳೆದ ವಾರವಷ್ಟೇ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ಗೌರವ್ ಗೊಗೊಯ್ ಅವರನ್ನು ಭೇಟಿಯಾಗಿದ್ದ ಸಚಿವ ರಿಜಿಜು, ಕ್ಷೇತ್ರ ಮರುವಿಂಗಡಣೆ ಮಸೂದೆ ಕುರಿತು ಚರ್ಚಿಸಿದ್ದರು. ಈ ವೇಳೆ, ಹಾಲಿ ಇರುವ 543 ಲೋಕಸಭಾ ಸ್ಥಾನಗಳಲ್ಲೇ ಶೇ 33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು ವಿನಃ, ಹೊಸ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗಲ್ಲ ಎಂಬ ವಿಪಕ್ಷಗಳ ಸ್ಪಷ್ಟ ನಿಲುವನ್ನು ರಾಹುಲ್ ಗಾಂಧಿ ಸಚಿವರಿಗೆ ಖಡಕ್ ಆಗಿ ತಿಳಿಸಿದ್ದರು.




