ಪತಿ-ಪತ್ನಿಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಾಗಲಕೋಟೆ ಜಿಲ್ಲೆಯ ಸಂಗೋಂದಿ ಗ್ರಾಮದ ಸದಾಶಿವ ಗುರಪ್ಪ ಮೇಟಿ ಎಂಬಾತನಿಗೆ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದೆ.
2025ರ ಫೆಬ್ರವರಿ 4ರಂದು ಸಂಗೋಂದಿ ಗ್ರಾಮದ ಸೊಸೈಟಿ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಪಿರ್ಯಾದಿ ಹಾಗೂ ಅವರ ಪತ್ನಿ ನೀಲವ್ವ ಅವರೊಂದಿಗೆ ಜಗಳವಾಡಿದ್ದ ಆರೋಪಿ, ಇಬ್ಬರ ಮೇಲೂ ಕಲ್ಲಿನಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದನು.
ಅಲ್ಲದೆ ಜೀವ ಬೆದರಿಕೆ ಹಾಕಿದ್ದನು.ಪ್ರಕರಣದ ವಿಚಾರಣೆ ನಡೆಸಿದ ಬಾಗಲಕೋಟೆಯ 1ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಸಂದೀಪ ಅಪ್ಪಾಸಾಹೇಬ ನಾಯಕ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನವೆಂಬರ್ 16ರಂದು ಶಿಕ್ಷೆ ಪ್ರಕಟಿಸಿದ್ದಾರೆ.ಸರ್ಕಾರದ ಪರ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಶಾರದಾ ಎ. ಬದಾಮಿ ವಾದ ಮಂಡಿಸಿದ್ದರು.



