ಮೀನುಗಳ ಸಂತಾನೋತ್ಪತ್ತಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಎರಡು ತಿಂಗಳ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಅವಧಿ ಅಂತ್ಯಗೊಂಡಿದ್ದು, ಶನಿವಾರ (ಆ.1)ರಿಂದ ಕರಾವಳಿ ಕರ್ನಾಟಕದಲ್ಲಿ ಮತ್ತೆ ಆಳಸಮುದ್ರ ಮೀನುಗಾರಿಕೆ ಆರಂಭವಾಗುತ್ತಿದೆ. ಎರಡು ತಿಂಗಳ ವಿಶ್ರಾಂತಿಯ ಬಳಿಕ ಬೋಟ್‌ಗಳು ಮತ್ತೆ ಕಡಲಿಗಿಳಿಯಲಿದ್ದು, ಹೊಸ ಮೀನುಗಾರಿಕಾ ಋತುವಿನ ಬಗ್ಗೆ ಮೀನುಗಾರರಲ್ಲಿ ಆಶಾಭಾವನೆ ಮೂಡಿದೆ.
ಕಳೆದ ಒಂದು ವಾರದಿಂದಲೇ ಮಂಗಳೂರು, ಗಂಗೊಳ್ಳಿ, ಮಲ್ಪೆ, ಬೈಂದೂರು, ಕುಂದಾಪುರ ಸೇರಿದಂತೆ ಪ್ರಮುಖ ಬಂದರುಗಳಲ್ಲಿ ಬೋಟ್‌ಗಳ ದುರಸ್ತಿ, ಎಂಜಿನ್ ನಿರ್ವಹಣೆ, ಬಲೆಗಳ ಜೋಡಣೆ, ಹಗ್ಗಗಳ ದುರಸ್ತಿ, ಬಣ್ಣ ಬಳಿಯುವ ಕೆಲಸ ಹಾಗೂ ಐಸ್ ತುಂಬಿಸುವ ಕಾರ್ಯಗಳು ಭರದಿಂದ ನಡೆದಿವೆ. ಬೋಟ್‌ಗಳು ಸಮುದ್ರಕ್ಕಿಳಿಯಲು ಸಜ್ಜಾಗಿವೆ.

ಮೊದಲ ದಿನ ಸುಮಾರು 70ರಿಂದ 100 ಯಾಂತ್ರೀಕೃತ ಬೋಟ್‌ಗಳು ಮೀನುಗಾರಿಕೆಗೆ ತೆರಳುವ ಸಾಧ್ಯತೆಯಿದೆ ಎಂದು ದಕ್ಷಿಣ ಕನ್ನಡ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ದಿಲೀಪ್ ತಿಳಿಸಿದ್ದಾರೆ.
ಸುಮಾರು 400 ಟ್ರಾಲಿಂಗ್ ಬೋಟ್‌ಗಳು ಸಿದ್ಧವಾಗಿದ್ದರೂ, ಹವಾಮಾನ ವೈಪರೀತ್ಯ ಮೀನುಗಾರರಿಗೆ ಆತಂಕ ಮೂಡಿಸಿದೆ. ಸಮುದ್ರದಲ್ಲಿ ಬಲವಾದ ಗಾಳಿ ಹಾಗೂ ಅಲೆಗಳ ಅಬ್ಬರ ಮುಂದುವರಿದರೆ ಟ್ರಾಲಿಂಗ್ ನಡೆಸುವುದು ಕಷ್ಟವಾಗಲಿದೆ. ಪರಿಸ್ಥಿತಿ ಸುಧಾರಿಸಿದರೆ ಮಾತ್ರ ಬೋಟ್‌ಗಳು ಪೂರ್ಣ ಪ್ರಮಾಣದಲ್ಲಿ ಕಡಲಿಗಿಳಿಯಲಿವೆ. ಪರ್ಸಿನ್ ಬೋಟ್‌ಗಳ ಮೀನುಗಾರಿಕೆ ಸಮುದ್ರ ಪೂಜೆಯ ಬಳಿಕ ಆ.7ರಿಂದ ಆರಂಭವಾಗಲಿದೆ ಎಂದು ಮಂಗಳೂರಿನ ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ತಿಳಿಸಿದ್ದಾರೆ.
ಗಂಗೊಳ್ಳಿಯಲ್ಲಿ ಸಮುದ್ರ ಪೂಜೆ ಬಳಿಕ ಚಟುವಟಿಕೆ ಆರಂಭ
ಉಡುಪಿ ಜಿಲ್ಲೆಯ ಎರಡನೇ ಅತಿದೊಡ್ಡ ಮೀನುಗಾರಿಕಾ ಬಂದರು ಗಂಗೊಳ್ಳಿಯಲ್ಲೂ ಹೊಸ ಮೀನುಗಾರಿಕಾ ಋತುವಿಗೆ ಸಿದ್ಧತೆ ಅಂತಿಮ ಹಂತ ತಲುಪಿದೆ. ಆ.1ರಿಂದ ಮೀನುಗಾರಿಕೆ ಆರಂಭಕ್ಕೆ ಅವಕಾಶ ಇದ್ದರೂ, ಆ.3ರಂದು ಸಮುದ್ರ ಪೂಜೆ ನಡೆಯಲಿದ್ದು, ಅದರ ಬಳಿಕ ಹೆಚ್ಚಿನ ಬೋಟ್‌ಗಳು ಕಡಲಿಗಿಳಿಯಲಿವೆ.
ಕೋಡಿ, ಮರವಂತೆ, ಕೊಡೇರಿ, ಉಪ್ಪುಂದ, ಮಡಿಕಲ್, ಶಿರೂರು, ಅಳ್ವೆಗದ್ದೆ ಸೇರಿದಂತೆ ವಿವಿಧ ಮೀನುಗಾರಿಕಾ ಕೇಂದ್ರಗಳಲ್ಲೂ ಹಂತ ಹಂತವಾಗಿ ಯಾಂತ್ರೀಕೃತ ಬೋಟ್‌ಗಳು ಸಮುದ್ರಯಾನ ಆರಂಭಿಸಲಿವೆ. ಈ ವಾರದೊಳಗೆ ಹವಾಮಾನ ಅನುಕೂಲಕರವಾಗಿದ್ದರೆ ಬಹುತೇಕ ಎಲ್ಲಾ ಬಂದರುಗಳಲ್ಲಿ ಮೀನುಗಾರಿಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ನಿರೀಕ್ಷೆಯಿದೆ.
ಹೊಸ ಮೀನುಗಾರಿಕಾ ಋತು ಆರಂಭವಾಗುತ್ತಿದ್ದರೂ, ಗಂಗೊಳ್ಳಿ ಬಂದರಿನ ಹಲವು ಮೂಲಸೌಕರ್ಯ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಬಂದರಿನಲ್ಲಿ ಬೋಟ್‌ಗಳನ್ನು ನಿಲ್ಲಿಸಲು ಸಾಕಷ್ಟು ಜಾಗದ ಕೊರತೆ ಇದೆ. ಜೆಟ್ಟಿಯಲ್ಲಿ ಮೀನು ಇಳಿಸುವ ವ್ಯವಸ್ಥೆ ಇರದಿರುವುದರಿಂದ ಕೆಲವು ಬೋಟ್‌ಗಳು ಬೇರೆ ಬಂದರುಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ.

ಇದರ ಜೊತೆಗೆ ಬಂದರು ಹಾಗೂ ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಬೋಟ್ ಸಂಚಾರ ಅಪಾಯಕಾರಿಯಾಗಿದ್ದು, ಮೀನುಗಾರರು ಜೀವವನ್ನು ಪಣಕ್ಕಿಟ್ಟು ಸಂಚರಿಸಬೇಕಾಗಿದೆ. ಈ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದಾರೆ.
ಈ ಬಾರಿ ಮಳೆ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದ ಮಳೆಗಾಲದ ನಾಡದೋಣಿ ಮೀನುಗಾರಿಕೆಯೂ ಸಮರ್ಪಕವಾಗಿ ನಡೆಯಲಿಲ್ಲ. ಮತ್ಸ್ಯಕ್ಷಾಮ ಉಂಟಾದ ಕಾರಣ ಬಹುತೇಕ ನಾಡದೋಣಿಗಳು ಜುಲೈ ಮಧ್ಯಭಾಗದ ನಂತರವೇ ಸಮುದ್ರಕ್ಕಿಳಿದಿದ್ದವು. ಕಳೆದ ಋತುವಿನಲ್ಲಿ ಹವಾಮಾನ ವೈಪರೀತ್ಯ ಮತ್ತು ಕಡಿಮೆ ಪ್ರಮಾಣದ ಮೀನು ಸಿಕ್ಕಿದ್ದರಿಂದ ಆರ್ಥಿಕ ಸಂಕಷ್ಟ ಅನುಭವಿಸಿದ್ದ ಮೀನುಗಾರರು, ಈ ಬಾರಿ ಸಮೃದ್ಧ ಮೀನುಗಾರಿಕೆ ದೊರೆತು ನಷ್ಟವನ್ನು ಭರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಒಟ್ಟಾರೆ 40ಕ್ಕೂ ಹೆಚ್ಚು ಪರ್ಸಿನ್ ಬೋಟ್‌ಗಳು, 243 ಟ್ರಾಲ್ ಬೋಟ್‌ಗಳು ಸೇರಿದಂತೆ 280ಕ್ಕೂ ಹೆಚ್ಚು ಆಳಸಮುದ್ರ ಬೋಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಗಂಗೊಳ್ಳಿ ಬಂದರಿನಲ್ಲೇ 100ಕ್ಕೂ ಹೆಚ್ಚು ಮೀನುಗಾರಿಕಾ ಬೋಟ್‌ಗಳು ಹೊಸ ಋತುವಿಗಾಗಿ ಸಜ್ಜಾಗಿವೆ.
‘ಉತ್ತಮ ಮೀನುಗಾರಿಕೆಯ ನಿರೀಕ್ಷೆಯಿದೆ’
ಈದಿನ.ಕಾಮ್ ಜೊತೆಗೆ ಗಂಗೊಳ್ಳಿ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಡಿವಾಳ ಮಾತನಾಡಿ, “ಆ.3ರಂದು ಗಂಗೊಳ್ಳಿಯಲ್ಲಿ ಸಮುದ್ರ ಪೂಜೆ ನಡೆಯಲಿದೆ. ಬಳಿಕ ಹವಾಮಾನವನ್ನು ಗಮನಿಸಿ ಬೋಟ್‌ಗಳು ಕಡಲಿಗಿಳಿಯಲಿವೆ. ಅಗತ್ಯ ಸಿದ್ಧತೆಗಳು ಈಗ ಅಂತಿಮ ಹಂತದಲ್ಲಿವೆ. ಈ ಬಾರಿ ಉತ್ತಮ ಪ್ರಮಾಣದಲ್ಲಿ ಮೀನು ದೊರೆಯುವ ವಿಶ್ವಾಸವಿದೆ” ಎಂದು ಹೇಳಿದರು.
ಎರಡು ತಿಂಗಳ ವಿರಾಮದ ಬಳಿಕ ಕರಾವಳಿ ಮೀನುಗಾರಿಕಾ ಚಟುವಟಿಕೆಗಳಿಗೆ ಮತ್ತೆ ಜೀವ ಬಂದಿದ್ದು, ಸಾವಿರಾರು ಮೀನುಗಾರ ಕುಟುಂಬಗಳು ಹೊಸ ಋತುವಿನ ಮೇಲೆ ಭರವಸೆ ಇಟ್ಟಿವೆ. ಆದರೆ ಉತ್ತಮ ಮೀನುಗಾರಿಕೆಯ ಜೊತೆಗೆ ಸುರಕ್ಷಿತ ಸಮುದ್ರ ಪರಿಸ್ಥಿತಿ ಹಾಗೂ ಬಂದರುಗಳ ಮೂಲಸೌಕರ್ಯ ಸುಧಾರಣೆಯೂ ಈ ಋತುವಿನ ಯಶಸ್ಸಿಗೆ ಅಷ್ಟೇ ಮುಖ್ಯವಾಗಿದೆ. ಕಳೆದ ಸಾಲಿನ ಸಂಕಷ್ಟವನ್ನು ಮರೆತು, ಈ ಬಾರಿ ಸಮೃದ್ಧ ಮೀನುಗಾರಿಕೆ ದೊರೆಯಲಿ ಎಂಬ ಆಶಯದೊಂದಿಗೆ ಕರಾವಳಿಯ ಮೀನುಗಾರರು ಮತ್ತೆ ಕಡಲತ್ತ ಮುಖ ಮಾಡಿದ್ದಾರೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




