ಜೈಲು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರುವ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಜಾರ್ಖಂಡ್ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೆ ತರುತ್ತಿದೆ.
ಹೊಸ ‘ಮುಕ್ತ ಮತ್ತು ಅರೆ-ಮುಕ್ತ ಬ್ಯಾರಕ್’ (Open and Semi-Open Barrack) ಯೋಜನೆಯಡಿ, ಸನ್ನಡೆತೆ ಹೊಂದಿರುವ ಆಯ್ದ ಕೈದಿಗಳು ಹಗಲಿನ ವೇಳೆಯಲ್ಲಿ ಜೈಲಿನಿಂದ ಹೊರಗೆ ಹೋಗಿ ಕೆಲಸ ಮಾಡಿ, ಸಂಜೆಯ ವೇಳೆಗೆ ಮರಳಿ ಜೈಲಿಗೆ ಆಗಮಿಸಲು ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ: ಮೇವು ಹಗರಣ: ಲಾಲೂ ಯಾದವ್ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಣೆ
ಯೋಜನೆ ಯಾವ ರೀತಿ ಕೆಲಸ ಮಾಡುತ್ತದೆ?
ಜಾರ್ಖಂಡ್ ಕಾರಾಗೃಹಗಳ ಐಜಿ (IG) ಸುದರ್ಶನ್ ಮಂಡಲ್ ಅವರು ನೀಡಿದ ಮಾಹಿತಿಯಂತೆ, ಅರ್ಹ ಕೈದಿಗಳು ಬೆಳಿಗ್ಗೆ 6 ಅಥವಾ 7 ಗಂಟೆಗೆ ಜೈಲಿನಿಂದ ಕೆಲಸಕ್ಕಾಗಿ ಹೊರಡಬಹುದು. ಸುಮಾರು 12 ಗಂಟೆಗಳ ಕಾಲ ಹೊರಗಡೆ ಕೆಲಸ ಮಾಡಿ, ಆರ್ಥಿಕ ಸಂಪಾದನೆ ಮಾಡಿಕೊಂಡ ನಂತರ ಸಂಜೆ ನಿಯಮಿತ ಸಮಯಕ್ಕೆ ಸರಿಯಾಗಿ ಜೈಲಿಗೆ ಮರಳಬೇಕಾಗುತ್ತದೆ.
ಆರಂಭಿಕ ಹಂತದಲ್ಲಿ ರಾಜ್ಯದ ನಾಲ್ಕು ಪ್ರಮುಖ ಕೇಂದ್ರ ಕಾರಾಗೃಹಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ರಾಂಚಿಯ ಬೀರ್ಸಾ ಮುಂಡಾ ಸೆಂಟ್ರಲ್ ಜೈಲು, ಹಜಾರಿಬಾಗ್ನ ಜಯಪ್ರಕಾಶ್ ನಾರಾಯಣ್ ಸೆಂಟ್ರಲ್ ಜೈಲು, ಪೂರ್ವ ಸಿಂಗ್ಭೂಮ್ನ ಘಾಘಿಡಿಹ್ ಸೆಂಟ್ರಲ್ ಜೈಲು ಮತ್ತು ದುಮ್ಕಾ ಸೆಂಟ್ರಲ್ ಜೈಲು ಈ ಯೋಜನೆಯಡಿ ಜಾರಿಗೆ ಬರಲಿದೆ.
ಇದನ್ನೂ ಓದಿ: ಉತ್ತರ ಪ್ರದೇಶ | 3.5 ಕೋಟಿ ಹೊಸ ಮತದಾರರನ್ನು ಸೇರಿಸುವ ಬಿಜೆಪಿ ಗುರಿ; ಬಹಿರಂಗ ‘ವೋಟ್ ಚೋರಿ’?
ಈ ನಾಲ್ಕೂ ಜೈಲುಗಳು ನಗರ ಪ್ರದೇಶಗಳಲ್ಲೇ ಇರುವುದರಿಂದ ಕೈದಿಗಳಿಗೆ ಕೆಲಸದ ಅವಕಾಶಗಳು ಮತ್ತು ಜೀವನೋಪಾಯ ಕಂಡುಕೊಳ್ಳಲು ಸುಲಭವಾಗಲಿದೆ. ಇದಕ್ಕಾಗಿ ಜೈಲುಗಳಲ್ಲಿ ವಿಶೇಷ ಬ್ಯಾರಕ್ ಹಾಗೂ ಕೊಠಡಿಗಳನ್ನು ಈಗಾಗಲೇ ಗುರುತಿಸಲಾಗಿದೆ.
ಈ ಯೋಜನೆಯು ಜೈಲಿನಲ್ಲಿರುವ ಪ್ರತಿಯೊಬ್ಬ ಕೈದಿಗೂ ಸಿಗುವುದಿಲ್ಲ. ಜೈಲು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ, ಉತ್ತಮ ನಡತೆ (Good conduct) ಪ್ರದರ್ಶಿಸುವ ಮತ್ತು ಜೈಲು ಅಧಿಕಾರಿಗಳ ಕಠಿಣ ತಪಾಸಣೆಗೆ ಒಳಪಡುವ ಆಯ್ದ ಕೈದಿಗಳಿಗೆ ಮಾತ್ರ ಹೊರಗೆ ಹೋಗಲು ಅರ್ಹತೆ ನೀಡಲಾಗುತ್ತದೆ. ಇದಕ್ಕಾಗಿ ಶೀಘ್ರದಲ್ಲೇ ಪ್ರತ್ಯೇಕ ಕಾರ್ಯಾಚರಣೆಯ ಮಾರ್ಗಸೂಚಿ (SOP) ಸಿದ್ಧಪಡಿಸಲಾಗುತ್ತದೆ.
ಸುಪ್ರೀಂ ಕೋರ್ಟ್ ‘ಸುಹಾಸ್ ಚಕ್ಮಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ನೀಡಿದ ತೀರ್ಪಿನ ಅನ್ವಯ, ಉನ್ನತ ನ್ಯಾಯಾಲಯವು ರಾಜ್ಯಗಳಿಗೆ ಮುಕ್ತ ಕಾರಾಗೃಹಗಳನ್ನು (Open Correctional Institutions) ಸ್ಥಾಪಿಸಲು ಸೂಚಿಸಿತ್ತು. ಅಲ್ಲದೆ ‘ಜಾರ್ಖಂಡ್ ಜೈಲು ಮತ್ತು ಕಾರಾಗೃಹ ಸೇವೆಗಳ ಕಾಯ್ದೆ 2025’ ರ ನಿಬಂಧನೆಗಳನ್ನು ಆಧರಿಸಿ ರಾಜ್ಯ ಸಚಿವ ಸಂಪುಟವು ಈ ನಿರ್ಧಾರಕ್ಕೆ ಅನುಮೋದನೆ ನೀಡಿದೆ.




