ನೇಪಾಳ–ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಡುವೆಯೇ ಅಪಾಯದಿಂದ ಪಾರಾದ 54 ಕನ್ನಡಿಗರು ಸುರಕ್ಷಿತವಾಗಿ ಕರ್ನಾಟಕಕ್ಕೆ ಮರಳಿದ್ದಾರೆ. ಶನಿವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ.
ಬೆಂಗಳೂರು, ಹಾವೇರಿ, ಶಿವಮೊಗ್ಗ, ಕಡೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪ್ರವಾಸಿಗರು ಆಗಸ್ಟ್ 23ರಂದು ನೇಪಾಳ ಪ್ರವಾಸ ಆರಂಭಿಸಿದ್ದರು. ಆದರೆ, ಆಗಸ್ಟ್ 26ರಂದು ಪರಿಸ್ಥಿತಿ ಏಕಾಏಕಿ ಬದಲಾಗಿದ್ದು, ಹಠಾತ್ ಪ್ರವಾಹದಿಂದ ರಸ್ತೆಗಳು, ಸೇತುವೆಗಳು ಹಾಗೂ ಇತರ ಮೂಲಸೌಕರ್ಯಗಳು ನಾಶವಾಗಿದ್ದವು. ಹಲವು ಪ್ರವಾಸಿಗರು ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದರು.
ನೇಪಾಳ ತಲುಪುವ ಮೊದಲು ಈ ತಂಡವು ಉತ್ತರ ಪ್ರದೇಶದ ಗೋರಖ್ಪುರ ಮಾರ್ಗವಾಗಿ ಪ್ರಯಾಣಿಸಿತ್ತು. ಪ್ರವಾಹಕ್ಕೆ ತುತ್ತಾದ ಮಾರ್ಗದಲ್ಲಿ ಸಾಗುತ್ತಿದ್ದ ತಂಡವು ಪ್ರಯಾಣದ ನಡುವೆ ಚಹಾ ಕುಡಿಯಲು ಸುಮಾರು ಅರ್ಧಗಂಟೆ ವಿರಾಮ ತೆಗೆದುಕೊಂಡಿದ್ದರು. ಈ ಚಹಾ ವಿರಾಮವೇ ತಮ್ಮ ಜೀವ ಉಳಿಸಿತು ಎಂದು ಪ್ರವಾಸಿಗರು ಹೇಳಿದ್ದಾರೆ.
“ನಾವು ಇಂದು ಜೀವಂತವಾಗಿದ್ದೇವೆ ಎಂದರೆ ಅದು ನಿಜಕ್ಕೂ ಪವಾಡ. ನಾವು ಸಾಗಬೇಕಿದ್ದ ಮಾರ್ಗವು ಕೆಲವೇ ಕ್ಷಣಗಳಲ್ಲಿ ದುರಂತದ ಪ್ರದೇಶವಾಗಿ ಬದಲಾಗಿತ್ತು. ಒಂದು ವೇಳೆ ನಾವು ಚಹಾ ವಿರಾಮ ತೆಗೆದುಕೊಳ್ಳದೇ ಇದ್ದಿದ್ದರೆ, ಆ ದುರಂತದಲ್ಲಿ ನಾವೂ ಸಿಲುಕುತ್ತಿದ್ದೆವು” ಎಂದು ನೇಪಾಳದಿಂದ ರಾಜ್ಯಕ್ಕೆ ಮರಳಿದ ಪ್ರವಾಸಿಗರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
“ಚಹಾ ವಿರಾಮದಲ್ಲಿದ್ದ ನಮಗೆ ನಾವು ಸಾಗಬೇಕಿದ್ದ ಮುಂದಿನ ಮಾರ್ಗದಲ್ಲಿ ಹಠಾತ್ ಪ್ರವಾಹ ಉಂಟಾಗಿದೆ ಎಂಬ ಮಾಹಿತಿ ತಲುಪಿತ್ತು. ಆ ವಿರಾಮವಿಲ್ಲದೆ ಪ್ರಯಾಣ ಮುಂದುವರಿಸಿದ್ದರೆ, ನಮ್ಮ ವಾಹನಗಳೂ ಪ್ರವಾಹದ ಹೊಡೆತಕ್ಕೆ ಸಿಲುಕುವ ಸಾಧ್ಯತೆ ಇತ್ತು” ಎಂದು ಅವರು ಹೇಳಿದ್ದಾರೆ.



