ತಾಪಮಾನ ಹೆಚ್ಚಳ ಮತ್ತು ಬಿಸಿ ಗಾಳಿ ಪ್ರಕೃತಿಯ ಕೋಪವಲ್ಲ, ನಮ್ಮ ನಿರ್ಲಕ್ಷ್ಯದ ಪ್ರತಿಫಲ. ಇದು ಎಚ್ಚರಿಕೆಯ ಗಂಟೆ. ಇದನ್ನು ಅರಿತು ನಮಗಲ್ಲ, ನಮ್ಮ ಮಕ್ಕಳ ನೆಮ್ಮದಿಯ ಬದುಕಿಗಾಗಿ ಜಾಗೃತರಾಗಬೇಕಿದೆ. ಇಲ್ಲದಿದ್ದರೆ, ಇಂದಿನ ಬಿಸಿ ಗಾಳಿಯೇ ನಾಳೆಯ ಮಹಾಪ್ರಳಯವಾದರೂ ಆಶ್ಚರ್ಯವಿಲ್ಲ.
ಕಡು ಬೇಸಿಗೆಯ ಬಿಸಿಲ ದಗೆಯಿಂದ ಬೇಯುತ್ತಿರುವಾಗಲೇ, ಮುಂದಿನ ಮೂರು ದಿನಗಳಲ್ಲಿ ತೀವ್ರ ಸ್ವರೂಪದ ಬಿಸಿ ಗಾಳಿಗೆ ಕರ್ನಾಟಕ ಮೈಚಾಚಲಿದೆ. ಅಧಿಕ ಉಷ್ಣಾಂಶ ದಾಖಲಾಗುವ, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ, ಜನ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಎಚ್ಚರಿಕೆ ನೀಡಿದೆ.
ಇಂದು ‘ಬಿಸಿ ಗಾಳಿ’ ಎಂಬ ಪದ ಕೇವಲ ಹವಾಮಾನ ವರದಿಗಳಿಗಷ್ಟೇ ಸೀಮಿತವಾಗಿಲ್ಲ. ಪ್ರತಿಯೊಬ್ಬರ ಬದುಕಿನ ಭಾಗವೇ ಆಗಿದೆ, ಭಾರೀ ಪರಿಣಾಮ ಬೀರುತ್ತಿದೆ. ನಿಲ್ಲಲಾಗದ, ಕೂರಲಾಗದ, ತಾಳಲಾರದ ತಳಮಳವನ್ನು ಸೃಷ್ಟಿಸುತ್ತಿದೆ. ಜನರ ಜೀವನವನ್ನು ಹೈರಾಣು ಮಾಡುತ್ತಿದೆ. ಅದರಲ್ಲೂ ವಯಸ್ಕರು, ಮಕ್ಕಳು ಮತ್ತು ಹೃದಯಸಂಬಂಧಿ ರೋಗಿಗಳನ್ನು ಬಾಧಿಸುತ್ತಿದೆ. ಈ ಬೇಸಿಗೆ ಹಿಂದಿನಂತಿಲ್ಲ ಎಂಬುದನ್ನು ಮತ್ತೆ ಮತ್ತೆ ಮನದಟ್ಟು ಮಾಡಿಸುತ್ತಿದೆ.
ಬಿಸಿ ಗಾಳಿಗೆ ಜಾಗತಿಕ ತಾಪಮಾನ ಏರಿಕೆಯೇ ಪ್ರಮುಖ ಕಾರಣ ಎನ್ನುವುದು ತಜ್ಞರ ಅಭಿಮತವಾಗಿದೆ. ಪೆಸಿಫಿಕ್ ಸಾಗರದಲ್ಲಿ ಉಂಟಾಗುವ ಎಲ್ ನಿನೋ(ಮಹಾಸಾಗರದ ಮೇಲೆ ಗಾಳಿ ಮತ್ತು ಸಮುದ್ರ ಮೇಲ್ಮೈ ತಾಪಮಾನದಲ್ಲಿನ ವ್ಯತ್ಯಾಸದಿಂದ ಹೊರಹೊಮ್ಮುವ ಉಷ್ಣವಲಯ) ಪ್ರಕ್ರಿಯೆಯಿಂದ ವಾತಾವರಣ ಬದಲಾಗಿ ಬಿಸಿ ಗಾಳಿ ಹೆಚ್ಚಾಗುತ್ತದೆ. ಹಸಿರುಮನೆ ಅನಿಲ (ಕಾರ್ಬನ್ ಡೈಆಕ್ಸೈಡ್, ಮೀಥೇನ್) ಹೊರಸೂಸುವಿಕೆ ಹೆಚ್ಚಳದಿಂದ ಭೂಮಿಯ ಉಷ್ಣತೆ ಹೆಚ್ಚುತ್ತದೆ. ಇದರಿಂದ ಉಷ್ಣ ಅಲೆಗಳು ಅಥವಾ ಬಿಸಿ ಗಾಳಿ ಬೀಸತೊಡಗುತ್ತದೆ. ಬಿಸಿ ಗಾಳಿ ಎಂದರೆ ಒಂದು ಪ್ರದೇಶದಲ್ಲಿ ಸಾಮಾನ್ಯ ಉಷ್ಣಾಂಶಕ್ಕಿಂತ ಹೆಚ್ಚು ಬಿಸಿಯಾದ ಗಾಳಿ ಬೀಸುವುದು. ಉದಾಹರಣೆಗೆ, ಬಯಲು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ, ಅದನ್ನು ಬಿಸಿ ಗಾಳಿ ಅಥವಾ ಹೀಟ್ ವೇವ್ಸ್ ಎಂದು ಪರಿಗಣಿಸಲಾಗುತ್ತದೆ.
ಭೂಮಿ ತನ್ನ ಸಹಜ ಸಮತೋಲನವನ್ನು ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ತಾಪಮಾನ ಹೆಚ್ಚಳ ಮತ್ತು ಬಿಸಿ ಗಾಳಿಯ ಅಬ್ಬರ ಸ್ಪಷ್ಟ ಸೂಚನೆಗಳಾಗಿವೆ. ಇದು ಕೇವಲ ಹವಾಮಾನ ವೈಪರೀತ್ಯವಲ್ಲ, ಮಾನವ ನಿರ್ಮಿತ ಸಮಸ್ಯೆಗಳ ಪ್ರತಿಫಲ.
ಇದನ್ನು ಓದಿದ್ದೀರಾ?: ಮಂದಿರ ಪ್ರವೇಶಕ್ಕೆ ಬೆಂಬಲಿಸದ ಮೋದಿ ಸರ್ಕಾರ, ಮಹಿಳಾ ಹಕ್ಕುಗಳ ರಕ್ಷಣೆ ಮಾಡುವುದೇ?
ಹಿಂದಿನ ಕಾಲದಲ್ಲಿ ಬೇಸಿಗೆ ಎಂದರೆ ಸಹಜ ಉಷ್ಣತೆ, ಅದು ಕೂಡ ಬದುಕಿನ ಒಂದು ಭಾಗವಾಗಿತ್ತು. ಆದರೆ ಈಗ ಅದು ಸಹಿಸಲಾರದ ಮಟ್ಟಕ್ಕೆ ಏರಿದೆ. ಅದಕ್ಕಿಂತ ಹೆಚ್ಚಾಗಿ ನಮ್ಮ ಮನಸ್ಥಿತಿ ಸಹಿಸಲಾರದ ಮಟ್ಟ ಮುಟ್ಟಿದೆ. ಕಂಡ ಕಂಫರ್ಟಬಲ್ ಸರಕೆಲ್ಲ ಬೇಕೆನಿಸಿದೆ. ಸರಳ ಬದುಕು ಸೈಡಿಗೆ ಸರಿದಿದೆ.
ಆಧುನಿಕ ಬದುಕನ್ನು ಅಪ್ಪಿಕೊಳ್ಳುವ ಧಾವಂತದಲ್ಲಿ ಮರಗಳನ್ನು ಕಡಿಯುತ್ತಿದ್ದೇವೆ. ಕೆರೆ-ಕಟ್ಟೆಗಳನ್ನು ಬರಿದಾಗಿಸುತ್ತಿದ್ದೇವೆ. ಆ ಜಾಗವನ್ನು ಕಾಂಕ್ರೀಟ್ ಕಟ್ಟಡಗಳ ಕಾಡು ಮಾಡುತ್ತಿದ್ದೇವೆ. ಆ ಐಷಾರಾಮಿ ಬದುಕು ಬೇಡುವ ಸರಕುಗಳು, ವಾಹನಗಳು, ಅವುಗಳ ಓಡಾಟ, ಜನದಟ್ಟಣೆ, ಹೊಗೆ-ಧೂಳು, ಕೈಗಾರಿಕೆಗಳಿಂದ ಮಾಲಿನ್ಯ- ಇವೆಲ್ಲವೂ ಸೇರಿ ವಾತಾವರಣದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಗ್ರಾಮೀಣ ಪ್ರದೇಶಗಳ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ನಗರಗಳತ್ತ ಆಕರ್ಷಿತರಾದ ಯುವಜನತೆ ಕೃಷಿ ಬಗ್ಗೆ ಅಸಡ್ಡೆ ತೋರಿರುವುದರಿಂದ ಕೃಷಿ ವಲಯ ಕುಗ್ಗುತ್ತಿದೆ. ಮೇವು ಮತ್ತು ನೀರಿನ ಕೊರತೆಯಿಂದ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಸಾಂಪ್ರದಾಯಿಕ ಕಸುಬುಗಳು ನಶಿಸಿ ಆ ಜಾಗವನ್ನು ಯಂತ್ರೋಪಕರಣಗಳು ಆಕ್ರಮಿಸಿಕೊಂಡಿವೆ. ಅವುಗಳ ಬಳಕೆ ಅತಿಯಾಗುತ್ತಿದೆ. ಇವೆಲ್ಲವೂ ಬಿಸಿ ಗಾಳಿಗೆ ಕೊಡುಗೆ ನೀಡುತ್ತಿವೆ.
ಬಿಸಿ ಗಾಳಿಯಲ್ಲೂ ಸಾಮಾಜಿಕ ತಾರತಮ್ಯವಿದೆ. ಬಡವರಿಗೊಂದು ಬಲ್ಲಿದರಿಗೊಂದು ಬಗೆ ಇದೆ. ಬಲ್ಲಿದರು ಮಟ್ಟಸವಾದ ಮನೆ, ಫ್ಯಾನ್, ಫ್ರಿಜ್, ಏಸಿಗಳೆಂಬ ಸುರಕ್ಷಿತ ತಾಣಗಳು ಮತ್ತು ಸರಕುಗಳ ಮೊರೆ ಹೋದರೆ; ಬಡವರು ಬಿಸಿ ಗಾಳಿಗೇ ಮೈಯೊಡ್ಡಿ ಮಣಿಸುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳು, ದಿನಗೂಲಿ ನೌಕರರು, ಕಟ್ಟಡ ಕಾರ್ಮಿಕರು, ಸುರಕ್ಷಿತ ಸೌಲಭ್ಯಗಳಿಲ್ಲದ ಮನೆಗಳಲ್ಲಿ ವಾಸಿಸುವ ಬಡಜನತೆ- ಇವರು ಬಿಸಿಗಾಳಿಯ ನೇರ ಬಲಿಪಶುಗಳು. ಅಂದರೆ, ಹವಾಮಾನ ಬದಲಾವಣೆ ಕೇವಲ ಪರಿಸರ ಸಮಸ್ಯೆಯಲ್ಲ, ಅದು ಸಾಮಾಜಿಕ ನ್ಯಾಯದ ಪ್ರಶ್ನೆಯೂ ಹೌದು.
ಇದನ್ನು ಓದಿದ್ದೀರಾ?: ಮನರಂಜನೆಯ ನೆಪದಲ್ಲಿ ಬದುಕು ಬರಿದಾಗಿಸುತ್ತಿರುವ ಬಿಜೆಪಿ
ಆದರೆ, ಈ ತಾರತಮ್ಯ, ಈ ಎಚ್ಚರಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆಯೇ? ಸರ್ಕಾರಗಳು ಬಿಸಿ ಗಾಳಿಗೆ ತಾತ್ಕಾಲಿಕ ಪರಿಹಾರ ಕಾರ್ಯಗಳತ್ತ ಗಮನ ಹರಿಸಿವೆಯೇ? ದೇಶದ ಕೆಲವು ನಗರಗಳಲ್ಲಿ ‘ಹೀಟ್ ಆಕ್ಷನ್ ಪ್ಲಾನ್’ಗಳ ಘೋಷಣೆ ಇದ್ದರೂ, ಅವುಗಳ ಅನುಷ್ಠಾನದಲ್ಲಿ ಕೊರತೆ ಎದ್ದು ಕಾಣಿಸುತ್ತಿದೆ. ಹಸಿರು ವಲಯಗಳನ್ನು ಹೆಚ್ಚಿಸುವುದು, ನೀರನ್ನು ಸಂರಕ್ಷಿಸುವುದು, ಗಿಡ-ಮರಗಳನ್ನು ಬೆಳೆಸುವುದು, ವಿದ್ಯುತ್ ಬಳಕೆಯನ್ನು ನಿಯಂತ್ರಿಸುವುದು, ಪರಿಸರಸ್ನೆಹಿ ನಗರ ಯೋಜನೆ ರೂಪಿಸುವುದರತ್ತ ಹೆಚ್ಚು ಗಮನ ಹರಿಸಬೇಕಾಗಿದೆ. ಇಲ್ಲಿ ಸರ್ಕಾರಗಳ ರೀತಿ-ನೀತಿಗಳ ಜೊತೆಗೆ ಸಮಾಜದ ಜವಾಬ್ದಾರಿಯೂ ಹೆಚ್ಚಿದೆ. ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯೂ ಪ್ರಮುಖ ಪಾತ್ರ ವಹಿಸಲಿದೆ.
ತಾಪಮಾನ ಹೆಚ್ಚಳ ಮತ್ತು ಬಿಸಿ ಗಾಳಿ ಪ್ರಕೃತಿಯ ಕೋಪವಲ್ಲ, ನಮ್ಮ ನಿರ್ಲಕ್ಷ್ಯದ ಪ್ರತಿಫಲ. ಇದು ಎಚ್ಚರಿಕೆಯ ಗಂಟೆ. ಇದನ್ನು ಅರಿತು ನಮಗಲ್ಲ, ನಮ್ಮ ಮಕ್ಕಳ ನೆಮ್ಮದಿಯ ಬದುಕಿಗಾಗಿ ಜಾಗೃತರಾಗಬೇಕಿದೆ. ಇಲ್ಲದಿದ್ದರೆ, ಇಂದಿನ ಬಿಸಿ ಗಾಳಿಯೇ ನಾಳೆಯ ಮಹಾಪ್ರಳಯವಾದರೂ ಆಶ್ಚರ್ಯವಿಲ್ಲ.




