ಸಚಿವರಿಗೆ ಕನ್ನಡ ಆದ್ಯತೆಯ ವಿಷಯ ಆಗಲು ಸಾಧ್ಯವೇ? ಒಂದು ಭಾಷೆ, ಸಮುದಾಯದ ಅಭಿವೃದ್ಧಿ, ರಕ್ಷಣೆಯಾಗಬೇಕಾದರೆ ಆ ಸಮುದಾಯದ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಆದರೆ, ಈ ವಿಧೇಯಕದಲ್ಲಿ ಸೂಚಿಸಿರುವ ಜಾರಿ ಸಮಿತಿಗಳಲ್ಲಿ ಅಧಿಕಾರಿಗಳೇ ತುಂಬಿಕೊಂಡಿದ್ದಾರೆ. ಕನ್ನಡಕ್ಕೆ ಕಂಟಕರಾಗಿರುವ ಅಧಿಕಾರಿಶಾಹಿಗಳಿಗೆ ಮಣೆ ಹಾಕಿರುವುದು ಕಳ್ಳರ ಕೈಗೆ ಬೀಗದ ಕೈ ಕೊಟ್ಟಂತಾಗಿದೆ
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ಕ್ಕೆ ಸದನದ ಒಪ್ಪಿಗೆ ದೊರೆತು, ಅದಕ್ಕೆ ರಾಜ್ಯಪಾಲರ ಅಂಕಿತವು ದೊರೆತಿದೆ. ಕನ್ನಡಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳು ಒಂದು ಕಾಯಿದೆಯಲ್ಲಿ ಅಡಕವಾಗಿರುವುದು ಸ್ವಾಗತಾರ್ಹ. ಪ್ರಸ್ತುತ ನಾಮಫಲಕ, ಜಾಹಿರಾತುಗಳಲ್ಲಿ ಕನ್ನಡ ಕಡ್ಡಾಯದ ಬಗ್ಗೆ ಅಧಿಕೃತ ನಿಯಮವೇ ಇರಲಿಲ್ಲ. ಈ ಕಾಯಿದೆಯಲ್ಲಿ ನಾಮಫಲಕಗಳಲ್ಲಿ ಕನ್ನಡ ಬಳಕೆಯ ಬಗ್ಗೆ ಮಾರ್ಗಸೂಚಿಯಿದೆ. ಇಂತಹ ಕೆಲವು ಸಂಗತಿಗಳನ್ನು ಹೊರತುಪಡಿಸಿದರೆ, ಈ ಕಾಯಿದೆಯಲ್ಲಿ ಸ್ಪಷ್ಟತೆಯಿಲ್ಲ. ಕನ್ನಡಕ್ಕೆ ಹಿನ್ನಡೆಯಾಗುವ ಕೆಲವು ಅಂಶಗಳಿವೆ.
ಈ ಕಾಯಿದೆಯ ಅನುಷ್ಠಾನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಇದರ ಉಪಾಧ್ಯಕ್ಷರಾಗಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಂಸ್ಕೃತಿ ಇಲಾಖೆಗೆ ಪ್ರತ್ಯೇಕ ಸಚಿವರು ಇರುವುದಿಲ್ಲ. ಬೇರೆ ಪ್ರಮುಖ ಖಾತೆಯ ಸಚಿವರಿಗೆ ಹೆಚ್ಚುವರಿ ಜವಾಬ್ಧಾರಿಯಾಗಿರುತ್ತದೆ. ಸಚಿವರಿಗೆ ಕನ್ನಡ ಆದ್ಯತೆಯ ವಿಷಯ ಆಗಲು ಸಾಧ್ಯವೇ? ಒಂದು ಭಾಷೆ, ಸಮುದಾಯದ ಅಭಿವೃದ್ಧಿ, ರಕ್ಷಣೆಯಾಗಬೇಕಾದರೆ ಆ ಸಮುದಾಯದ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಆದರೆ, ಈ ವಿಧೇಯಕದಲ್ಲಿ ಸೂಚಿಸಿರುವ ಜಾರಿ ಸಮಿತಿಗಳಲ್ಲಿ ಅಧಿಕಾರಿಗಳೇ ತುಂಬಿಕೊಂಡಿದ್ದಾರೆ. ಕನ್ನಡಕ್ಕೆ ಕಂಟಕರಾಗಿರುವ ಅಧಿಕಾರಿಶಾಹಿಗಳಗೆ ಮಣೆ ಹಾಕಿರುವುದು ಕಳ್ಳರ ಕೈಗೆ ಬೀಗದ ಕೈಕೊಟ್ಟಂತಾಗಿದೆ. ಪ್ರಸ್ತುತ ಕನ್ನಡ ಅನುಷ್ಠಾನದ ಹೊಣೆಗಾರಿಕೆಯಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಈ ಸಮಿತಿಯ ಸಾಮಾನ್ಯ ಸದಸ್ಯರನ್ನಾಗಿಸಿದೆ. ಶ್ರೀಸಾಮಾನ್ಯರು ಸಚಿವರನ್ನು ಕಂಡು ಕನ್ನಡ ಅನುಷ್ಠಾನದಲ್ಲಿ ಆಗುತ್ತಿರುವ ದೋಷವನ್ನು ತಿಳಿಸಲು ಸಾಧ್ಯವೇ? 1983ಕ್ಕೆ ಮುನ್ನ ಇಂತಹದೇ ವ್ಯವಸ್ಥೆಯಿತ್ತು. ಅದರಿಂದ ಕನ್ನಡ ಜಾರಿ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಕನ್ನಡ ಹೋರಾಟಗಾರರು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಗಮನಕ್ಕೆ ತಂದಾಗ ಅದನ್ನು ಪರಿಗಣಸಿ ಕನ್ನಡ ಕಾವಲು ಸಮಿತಿಯನ್ನು (ಕನ್ನಡ ಅಭಿವೃದ್ಧಿ ಪ್ರಾಧಿಕಾರ) ರಚಿಸಿದರು. ಈ ವ್ಯವಸ್ಥೆ ಸಾಕಷ್ಟು ಪರಿಣಾಮಕಾರಿಯಾಗಿ ಕನ್ನಡವನ್ನು ಆಡಳಿತದಲ್ಲಿ ಅನುಷ್ಠಾನಗೊಳಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಇದನ್ನು ಗಮನಿಸಿ ಹಲವು ರಾಜ್ಯಗಳು ಭಾಷಾ ಪ್ರಾಧಿಕಾರವನ್ನು ರಚಿಸಿವೆ. ಈ ಕಾಯಿದೆ ಇರುವ ವ್ಯವಸ್ಥೆಯನ್ನು ಅಸ್ಥಿರಗೊಳಿಸಿ, 4 ದಶಕಗಳ ಹಿಂದಿದ್ದ ವ್ಯವಸ್ಥೆಗೆ ಮರಳಿರುವುದು ದುರಂತ.
ಕಾಯಿದೆಯಲ್ಲಿ ನಿವೃತ್ತ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ, ಅವಕಾಶ ಕಲ್ಪಿಸುವ ರಾಜಭಾಷಾ ಆಯೋಗವನ್ನು ರಚಿಸತಕ್ಕದ್ದು ಎಂದಿದೆ. ಇದು ನಿವೃತ್ತ ಅಧಿಕಾರಗಳಿಗೆ ಪುನರ್ವಸತಿ ಕಲ್ಪಿಸುವ ಗಂಜಿ ಕೇಂದ್ರವಾಗಿ ಸರ್ಕಾರಕ್ಕೆ ಅನಗತ್ಯ ಅರ್ಥಿಕ ಹೊರೆಯಾಗಲಿದೆ (ಅನುಷ್ಠಾನಕ್ಕೆ ಅಪರ ನಿರ್ದೇಶಕರನ್ನು ಹೊಸ ಹುದ್ದೆ ಸೃಷ್ಟಿಯಾಗಲಿದೆ. ಇದರ ಹಿಂದೆ ಸ್ಥಾಪಿತ ಹಿತಾಸಕ್ತಿಯಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ವಾಸ್ತವವಾಗಿ ಈಗ ರಾಜಭಾಷಾ ಆಯೋಗದ ಅಗತ್ಯ ಇಲ್ಲಾ ಎಂದು ಹಿಂದೆ ಅಧ್ಯಕ್ಷರಾಗಿದ್ದವರೇ ಹೇಳಿದ್ದಾರೆ). ಭಾಷಾಂತರ ಇಲಾಖೆಗೆ ಈ ಜವಾಬ್ಧಾರಿಯನ್ನು ನೀಡಬಹುದು. ಆಡಳಿತ ಭಾಷೆಯಾಗಿ ಕನ್ನಡವನ್ನು ಇಡೀ ರಾಷ್ಟ್ರಕ್ಕೆ ಮಾದರಿಯಾಗಿ ಅನುಷ್ಠಾಗೊಳಿಸಿದ ಕೀರ್ತಿ ಕರ್ನಾಟಕ ಸರ್ಕಾರಕ್ಕೆ ಇದೆ. ಅನುಷ್ಠಾನಕ್ಕೆ ಹೊಸ ವ್ಯವಸ್ಥೆ ಅನಗತ್ಯ.
ಪರಿಷ್ಕೃತ ಮಹಿಷಿ ವರದಿಯಲ್ಲಿ ಯಾರು ಕನ್ನಡಿಗ ಅನ್ನುವುದಕ್ಕೆ 15 ರಾಜ್ಯದಲ್ಲಿ ವಾಸವಾಗಿದ್ದು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಅಭ್ಯಸಿಸಿರಬೇಕು ಎಂಬ ಸ್ಪಷ್ಟ ವಿವರಣೆಯಿದೆ. ಇದನ್ನು ಹೊರನಾಡು ಕನ್ನಡಿಗರಿಗೂ ಅನ್ವಯಿಸಿದೆ. ಆದರೆ, ಈ ಕಾಯಿದೆಯಲ್ಲಿ (ಪರಿಭಾಷೆ1-ಇ) ಕನ್ನಡಿಗ ಎಂದರೆ, ಕನ್ನಡ ಓದುವ ಮತ್ತು ಬರೆಯುವ ಜ್ಞಾನ ಹೊಂದಿರಬೇಕು ಎಂದಿದೆ. ಹೊರನಾಡು ಕನ್ನಡಿಗರನ್ನು ಪರಿಗಣಸಿಲ್ಲದಿರುವುದು ಮತ್ತು ಅಸ್ಪಷ್ಟವಾಗಿ ಈ ಬಗ್ಗೆ ನಿಯಮಿಸ ಬಹುದಾದಂಥ ದಾಖಲೆಗಳನ್ನು ಹೊಂದಿರಬೇಕು ಎಂಬುದು ಸರಿಯಲ್ಲ.
ಭಾರತ ಸರ್ಕಾರ, ವಿದೇಶ, ಇತರ ರಾಜ್ಯ, ಉಚ್ಚ/ಸರ್ವೋಚ್ಚ ನ್ಯಾಯಾಲಯಗಳೊಡನೆ ಪತ್ರ ವ್ಯವಹಾರಕ್ಕಾಗಿ ಇಂಗ್ಲಿಷ್ ಬಳಸಬಹುದು; ಎಂದು ಹೇಳಿದೆ ಅದು ಸರಿ. ಆದರೆ, ಆಡಳಿತಾತ್ಮಕ ಕಾರಣಗಳಿಗಾಗಿ ಇಂಗಿಷ್ ಭಾಷೆಯನ್ನು ಬಳಸುವುದು ಅನಿವಾರ್ಯವಾಗಿದ್ದಲ್ಲಿ ಅಥವಾ ವೈಜ್ಞಾನಿಕ ಹಾಗೂ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ವ್ಯವಹರಿಸುವಾಗ ಆಂಗ್ಲ ಭಾಷೆಯನ್ನು ಬಳಸಬಹುದು ಎಂದು ಸೇರಿಸಿದೆ (4. ಅಧಿಕೃತ ಭಾಷೆಯ ಬಳಕೆ). ಇದು ಕನ್ನಡ ಬಳಸಲು ಆಸಕ್ತಿಯಿಲ್ಲದ ಅಧಿಕಾರಶಾಹಿಗಳ ರಕ್ಷಣೆಗೆ ಅಸ್ತ್ರವಾಗುತ್ತದೆ. ಫಲಕಗಳಲ್ಲಿ ಕನ್ನಡ ಕಡ್ಡಾಯ ಸಂಬಂಧಿಸಿದಂತೆ(17-1) ಕೇಂದ್ರ ಸರ್ಕಾರದ ಕಚೇರಿ, ರಕ್ಷಣಾ ಇಲಾಖೆ ಮುಂತಾದ ಕೇಂದ್ರ ಸ್ವಾಮ್ಯದ ಇಲಾಖೆಗಳ ಪ್ರಸ್ತಾಪವೇ ಇಲ್ಲ (ತ್ರಿಭಾಷಾ ಸೂತ್ರದನ್ವಯವೇ ಅಲ್ಲಿ ಕನ್ನಡ ಬಳಕೆ ಕಡ್ಡಾಯ). ಇನ್ನು ಸಾವಜನಿಕವಾಗಿ ಕನ್ನಡ ಕಡ್ಡಾಯದ ಬಗ್ಗೆ ಉಲ್ಲೇಖ ತೀರಾ ಅಸ್ಪಷ್ಟ. ಕಾಯಿದೆಯಲ್ಲಿ, ಕನ್ನಡ ಅನುಷ್ಠಾನದ ಬಗ್ಗೆ ಆಳವಾದ ಸಮಗ್ರ ದೃಷ್ಟಿಯಿಲ್ಲದ ಅಂಶಗಳಿವೆ. ಬ್ಯಾಂಕ್‌ಗಳಲ್ಲಿ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ. ಸಾರ್ವಜನಿಕರೊಂದಿಗೆ ತನ್ನ ಎಲ್ಲ ಸಂಪರ್ಕ ಹಾಗೂ ಪತ್ರ ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಬಳಸತಕ್ಕದ್ದು [17(10)] ಎಂದಿದೆ. ಇಲ್ಲಿ ಆದಾಯ ತೆರಿಗೆ, ಜಿ.ಎಸ್.ಟಿ, ಅಂಚೆ ಕಚೇರಿ, ಜೀವವಿಮೆಗಳಂತಹ ಕೇಂದ್ರ ಸರ್ಕಾರ ಪರಧಿಯಲ್ಲಿರುವ ಸಾರ್ವಜನಿಕರು ಹೆಚ್ಚು ವ್ಯವಹರಿಸುವ ಇಲಾಖೆಗಳ ಪ್ರಸ್ಥಾಪವೇ ಇಲ್ಲ.
ಇದೆಲ್ಲಕ್ಕಿಂತ ಅಪಾಯಕಾರಿಯಾದದ್ದು ಕನ್ನಡಿಗರಿಗೆ ಉದ್ಯೋಗದ ಮೀಸಲಾತಿ ಸಂಬಂಧಸಿದ ಅಂಶ. ರಾಜ್ಯ ಸರ್ಕಾರದ ವಿನಾಯಿತಿ-ನೆರವು ಪಡೆಯುವ ಉದ್ಯಮಗಳಿಗೆ ಸೀಮಿತವಾಗಿದೆ. ವಾಸ್ತವವಾಗಿ ಸರ್ಕಾರದ ನೆರವು ಪಡೆಯದ ಉದ್ಯಮಗಳೇ ಹೆಚ್ಚಿವೆ ಅದನ್ನು ಸೇರಿಸಿಲ್ಲ. ಉದ್ಯೋಗದ ವಿಷಯ ಪೂರ್ಣವಾಗಿ ಸೇರಿಲ್ಲ. ಕೇಂದ್ರೋದ್ಯಮಗಳ ಪ್ರಸ್ಥಾಪವೇ ಇಲ್ಲ. ಅಪ್ರೆಂಟಿಸ್ ಅಧಿನಿಯಮ, 1961ರ ಮೇರೆಗೆ ಕಾರ್ಯ ನಿರ್ವಹಿಸುವ ಎಲ್ಲಾ ಕೈಗಾರಿಕೆಗಳು ಅಪ್ರೆಂಟಿಸ್ ತರಬೇತಿಯನ್ನು ನೀಡುವಲ್ಲಿ ಕನ್ನಡಿಗರಿಗೆ ಆದ್ಯತೆಯನ್ನು ನೀಡಬೇಕು ಎಂದಿದೆ. ಈ ಅದಿನಿಯಮಕ್ಕೆ 2014ರಲ್ಲಿ ತಿದ್ದುಪಡಿಯಾಗಿದೆ. ಅದನ್ನು ಗಮನಿಸಿಲ್ಲ. ಇಂತಹ ಹಲವು ಕೊರತೆಗಳು ಈ ಕಾಯಿದೆಯಲ್ಲಿವೆ. ಯಾವುದೇ ಕಾಯಿದೆ ಪರಿಪೂರ್ಣವಾಗಲು ಸಾಧ್ಯವಿಲ್ಲ. ಈ ಮಸೂದೆಗೆ ಸೇರಿಸಲೇಬೇಕಾದ ಕನ್ನಡಕ್ಕೆ ಸಂಬಂಧಿಸಿದ ಹಲವು ಸಂಗತಿಗಳಿವೆ. ಅಸ್ಪಷ್ಟ ವಾಕ್ಯಗಳೂ ಇವೆ. ಅವೆಲ್ಲವನ್ನು ಉಲ್ಲೇಖಿಸಿದರೆ ದೊಡ್ಡ ಲೇಖನವಾಗುತ್ತದೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆಗೆ ಪ್ರೇರಣೆ 2015ರಲ್ಲಿ ಕೇರಳ ಸರ್ಕಾರ ರೂಪಿಸಿರುವ THE MALAYALAM LANGUAGE(DISSEMINATION AND ENRICHMENT) BILL-2015 ಕಾಯಿದೆ. ಅದೇ ಮಾದರಿಯ ಕಾಯಿದೆಯನ್ನು ರೂಪಿಸಿವಂತೆ ಕನ್ನಡ ಸಂಘಟನೆಗಳು ಮನವಿ ಮಾಡಿದ್ದವು. ಕೇರಳ ಈ ಕಾಯಿದೆ ರೂಪಿಸುವುದಕ್ಕೆ ಮುನ್ನವೇ ಕರ್ನಾಟಕದಲ್ಲಿ ಕನ್ನಡ ಭಾಷೆಯ ಅನುಷ್ಠಾನಕ್ಕೆ ಪರಿಣಾಮಕಾರಿ ವ್ಯವಸ್ಥೆಯಿತ್ತು. ಆದರೆ, ಎಲ್ಲವೂ ಒಂದೇ ಇಲಾಖೆಯಡಿ ಇರಲಿಲ್ಲ. ಈ ಕಾಯಿದೆ ರೂಪಿಸಿದವರು ಅದನ್ನು ಗಮನಿಸದೆ ಮಲೆಯಾಳಂ ಕಾಯಿದೆಯನ್ನು ಮಾದರಿಯಾಗಿಟ್ಟುಕೊಂಡು ರಚಿಸಿರುವಂತಿದೆ.

ರಾ ನಂ ಚಂದ್ರಶೇಖರ
ಸಾಹಿತಿ, ಹಿರಿಯ ಹೋರಾಟಗಾರರು