ಸಂಸದ ಅನಂತಕುಮಾರ್ ಹೆಗಡೆಯ ಏಕವಚನ ಉವಾಚ ಮತ್ತು ಬ್ರಾಹ್ಮಣಿಕೆ ಸಂಸ್ಕಾರ

Date:

ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗುವುದು ಪಕ್ಕಾ ಎಂಬ ಅತಿ ವಿಶ್ವಾಸದಲ್ಲಿ ಅನಂತ್ ಹಾರಾಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಗೆಲುವಿಗೆ ತೊಡಕಾಗಿದ್ದಾರೆಂದು ಗಾಬರಿ ಬಿದ್ದಿದ್ದಾರೆ. ಜಿಲ್ಲೆಯ ಬಹುಸಂಖ್ಯಾತ ಶೋಷಿತ ಹಿಂದುಳಿದ ವರ್ಗದಲ್ಲಿ ಪ್ರಭಾವಿಯಾಗಿರುವ ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಯೋಜನೆಗಳ ‘ಮಹಿಮೆ’ ಅನಂತರ ನಿದ್ದೆಗೆಡಿಸಿಬಿಟ್ಟಿದೆ. ಹಾಗಾಗಿ ಸೋಲುವ ಆತಂಕದಿಂದ ಅವರು ಹೋದಲ್ಲಿ-ಬಂದಲ್ಲಿ ಸಿದ್ದರಾಮಯ್ಯರನ್ನೇ ಗುರಿಯಾಗಿಟ್ಟುಕೊಂಡು ಅಸಹ್ಯವಾಗಿ ಟೀಕೆಗಿಳಿದಿದ್ದಾರೆ.

ಉತ್ತರ ಕನ್ನಡದ ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಸಂಸದನಾಗುವ ಹಪಾಹಪಿಯ ಬಿದ್ದಿದ್ದಾರೆ. ತಮ್ಮನ್ನು ಆರು ಬಾರಿ ಎಂಪಿಯಾಗಿಸಿದ್ದ ಕ್ಷೇತ್ರದ ಮಂದಿಗೆ ದ್ರೋಹ-ವಂಚನೆ ಮಾಡಿ ಭೂಗತರಾಗಿದ್ದ ಅನಂತಕುಮಾರ್ ಮತ್ತದೇ ಕೆಲಸಕ್ಕೆ ಬಾರದ ರಾಮ ಮಂದಿರ ಕಟ್ಟುವ, ಮುಸ್ಲಿಮರ ಮಸೀದಿ ಕೆಡುವುವ ಜೀವ ವಿರೋಧಿ ಹಿಂದುತ್ವದ ಪರಿಭಾಷೆಯಲ್ಲಿ ಅರಚಾಡುತ್ತಿದ್ದಾರೆ. ಹಿರಿಯ ಮುತ್ಸದ್ದಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬಾಯಿಗೆ ಬಂದಂತೆ ಮೂದಲಿಸುತ್ತ ಬಿಜೆಪಿ ಟಿಕೆಟ್ ಹಂಚಿಕೆಯ ದೊರೆಗಳ ಗಮನ ಸೆಳೆಯಲು ಹವಣಿಸುತ್ತಿದ್ದಾರೆ. ಕೇಸರಿ ಹೈಕಮಾಂಡಿಗೆ ತಾನು ಅನಿವಾರ್ಯ ಅಭ್ಯರ್ಥಿಯಾಗುವ ಒತ್ತಡ ಸೃಷ್ಟಿಸುವ ಹಿಡನ್ ಅಜೆಂಡಾ ಇಟ್ಟುಕೊಂಡು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅಲೆಯುತ್ತಿದ್ದಾರೆ.

ಈ ಬಾರಿ ಅನಂತ್ ಗುಡುಗಿಗೆ ಜಿಲ್ಲೆಯ ಬಿಜೆಪಿಯಲ್ಲಿ ಮಳೆಯಾಗುತ್ತಿಲ್ಲ, ಕಟ್ಟರ್ ಹಿಂದುತ್ವದ ಕಾರ್ಯಕರ್ತರೂ ಕ್ಯಾರೆ ಎನ್ನುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅವಾಚ್ಯ ಪದ ಪ್ರಯೋಗವನ್ನು ಬಿಜೆಪಿಗರೇ ಒಪ್ಪುತ್ತಿಲ್ಲ. ಎಲೆಕ್ಷನ್ ಬಂದಾಗಷ್ಟೇ ಹಿಂದುತ್ವದ ಆವೇಶ ಆವಾಹಿಸಿಕೊಳ್ಳುವ ಅನಂತಕುಮಾರ್ ಮಾತು ನಂಬುವಂಥದ್ದಲ್ಲ. ಎರಡೂ ಕಾಲು ದಶಕ ಸಂಸತ್ ಸದಸ್ಯತ್ವ ವ್ಯರ್ಥವಾಗಿ ಕಳೆದಿರುವ ಅನಂತ್ ಮತ್ತೆ ಎಂಪಿಯಾದರೆ ಜಿಲ್ಲೆಗೆ, ಬಿಜೆಪಿ ಕಾರ್ಯಕರ್ತರಿಗೆ ಬಿಡಿಗಾಸಿನ ಪ್ರಯೋಜನವಿಲ್ಲ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಜೋರಾಗಿದೆ.

ಜಿಲ್ಲೆ-ರಾಜ್ಯದ ನಾಯಕರು ಅನಂತಕುಮಾರ್ ಸಹವಾಸವೇ ಬೇಡವೆಂದು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಜಿಲ್ಲಾ ಬಿಜೆಪಿಯ ಹಿರಿಯ ನೇತಾರ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯಂಥವರು ‘ನಮ್ಮ ಸಂಸದರು ಎಂಥವರೆಂದು ಜಿಲ್ಲೆಯ ಜನರಿಗೆ ಗೊತ್ತಿದೆ’ ಎಂದು ವ್ಯಂಗ್ಯದ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯ ಮಾಜಿ ಶಾಸಕರಾದ ಸುನಿಲ್ ನಾಯ್ಕ್, ರೂಪಾಲಿ ನಾಯ್ಕ್ ಅನಂತಕುಮಾರ್ ಅವರನ್ನು ಮಾಜಿ ಮಾಡದೆ ಬಿಡುವುದಿಲ್ಲವೆಂದು ತೀರ್ಮಾನಿಸಿದ್ದಾರೆ. ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್‍‌ಗೆ ಅನಂತ್ ಎಂದರೆ ಅಷ್ಟಕ್ಕಷ್ಟೇ. ಕುಮಟಾ ಎಮ್ಮೆಲ್ಲೆ ದಿನಕರ ಶೆಟ್ಟಿ ಹೊರನೋಟಕ್ಕೆ ಅನಂತ್ ಬೆಂಬಲಿಗರಂತೆ ತೋರಿಸಿಕೊಳ್ಳುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜಿಲ್ಲಾ ಬಿಜೆಪಿಯಲ್ಲಿ ಅನಂತಕುಮಾರ್ ಗೆ ಮತ್ತೆ ಅವಕಾಶ ಕೊಡಕೂಡದೆಂಬ ಕೂಗು ಜೋರಾಗುತ್ತಿದೆ. ಸಂಘದ ಸಹವಾಸದಲ್ಲಿರುವ ಪತ್ರಕರ್ತ ಹರಿಪ್ರಸಾದ್ ಕೋಣೆಮನೆ ಮತ್ತು ಮಾಜಿ ಸ್ಪೀಕರ್ ಕಾಗೇರಿ ಟಿಕೆಟ್ ರೇಸ್ ನಲ್ಲಿದ್ದಾರೆ. ಹಾಗೆಯೇ ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಹೆಸರು ದಿಲ್ಲಿ ದರ್ಬಾರಿನಲ್ಲಿ ಪರಿಗಣನೆಗೆ ಬಂದಿದೆ ಎನ್ನಲಾಗುತ್ತಿದೆ. ಈ ಎಲ್ಲ ಸುದ್ದಿಗಳ ನಡುವೆಯೇ, ಅನಂತಕುಮಾರ್ ದಿಲ್ಲಿಗೆ ಹೋಗಿ ಟಿಕೆಟ್ ದಯಪಾಲಿಸುವವರ ಅಭಯ ಪಡೆದ ನಂತರವೇ ಜಿಲ್ಲೆಯಲ್ಲಿ ‘ದಂಡ’ಯಾತ್ರೆ ಶುರುಮಾಡಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಅನಂತಕುಮಾರ್‍ ಗೆ ಟಿಕೆಟ್ ಇಲ್ಲವೆಂದು ನೇರವಾಗಿ ಹೇಳಿದರೆ, ಅದು ಕಾರ್ಯಕರ್ತರು, ಸಂಘಟನೆ ಮತ್ತು ಪಕ್ಷದ ಮೇಲೆ ಪರಿಣಾಮ ಬೀರಬಹುದೆಂದು, ಹೈಕಮಾಂಡ್ ಸುಮ್ಮನಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಇದನ್ನು ಓದಿದ್ದೀರಾ?: ಭಾರತೀಯರಿಗೆ ಪುರಾಣ ಪಥ್ಯವಾಯಿತು, ವಾಸ್ತವ ಅಪಥ್ಯವಾಯಿತು

ಅಕಸ್ಮಾತ್ ಈ ಬಾರಿ ಅನಂತಕುಮಾರ್ ಅಭ್ಯರ್ಥಿಯಾದರೆ, ಕಾಗೇರಿ ಮೈಛಳಿ ಬಿಟ್ಟು ಕೆಲಸ ಮಾಡುವುದಿಲ್ಲವೆಂಬುದು ಜನಜನಿತ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ತಾನು ಶಿರಸಿಯಲ್ಲಿ ಸೋತಿದ್ದೇ ಅನಂತಕುಮಾರ್ ಅನುಯಾಯಿಗಳಿಂದ ಎಂಬ ಸಿಟ್ಟು ಕಾಗೇರಿಗಿದೆ. ಕಳೆದ ಮೂರ್ನಾಲ್ಕು ಅಸೆಂಬ್ಲಿ ಚುನಾವಣೆಯಲ್ಲಿ ಕಾಗೇರಿ ಹಣಿಯಲು ಅನಂತ್ ಪ್ರಯತ್ನಪಟ್ಟಿದ್ದು ಸುಳ್ಳಲ್ಲ.

ಹಿಂದಿನ ಹಲವು ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಅನಂತಕುಮಾರ್ ಸೋಲಿಸಲು ಕಾಗೇರಿ ಬಯಸಿದ್ದರೂ ಬಹಿರಂಗ ಕಾರ್ಯಾಚರಣೆಗಿಳಿವ ಧೈರ್ಯ ಮಾಡಿದ್ದಿಲ್ಲ. ಆದರೆ ಈ ಸಲ ಅನಂತ್ ಗೆ ಟಿಕೆಟ್ ತಪ್ಪಿಸಿ ತಾವೇ ಕೇಸರಿ ಕ್ಯಾಂಡಿಡೇಟ್ ಆಗುವ ಹೋರಾಟ ಆರಂಭಿಸಿದ್ದಾರೆ. ಹಾಗೊಮ್ಮೆ ಅನಂತಕುಮಾರ್ ಬಿಜೆಪಿಯಿಂದ ಚುನಾವಣೆಗಿಳಿದರೆ ಕಾಗೇರಿ ಸೇಡು ತೀರಿಸಿಕೊಳ್ಳದೇ ಬಿಡುವುದಿಲ್ಲವೆಂಬುದು ಆಪ್ತ ವಲಯದಿಂದ ಕೇಳಿಬರುತ್ತಿದೆ. ಜತೆಗೆ ಪ್ರಬಲ ಆಡಳಿತವಿರೋಧಿ ಅಲೆ ಅನಂತ್ ಬೆನ್ನು ಬಿದ್ದು ಕಾಡುತ್ತಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಭಾಗದಲ್ಲಿ ನಾಲಾಯಕ್ ಸಂಸದನೆಂಬ ಆಕ್ರೋಶ ಜನಮಾನಸದಲ್ಲಿ ಮಡುಗಟ್ಟಿದೆ. ಆ ಭಾಗದ ಬಿಜೆಪಿಯ ಹಿರಿಯ ನಾಯಕ ಜಯಂತ್ ತಿನೈಕರ್, ‘ಅನಂತಕುಮಾರ್ ಅರ್ಹ ಅಭ್ಯರ್ಥಿಯಲ್ಲ, ಸಂಸದನಾಗಿ ಕೆಲಸ ಮಾಡಿಲ್ಲ. ಆತನಿಗೆ ವಿರಾಮ ಕೊಟ್ಟು ಹೊಸ ಮುಖಕ್ಕೆ ಟಿಕೆಟ್ ಕೊಡಬೇಕು’ ಎಂದು ಹೈಕಮಾಂಡಿಗೆ ದೂರಿದ್ದಾರೆ. ಅದು ಇತ್ತೀಚಿನ ಸಭೆಗಳಲ್ಲಿ ಬಹಿರಂಗವಾಗಿಯೇ ವ್ಯಕ್ತವಾಗುತ್ತಿದೆ.

ಇಷ್ಟಾದರೂ ತಾನು ಬಿಜೆಪಿ ಅಭ್ಯರ್ಥಿಯಾಗುವುದು ಪಕ್ಕಾ ಎಂಬ ಅತಿ ವಿಶ್ವಾಸದಲ್ಲಿ ಅನಂತ್ ಹಾರಾಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಗೆಲುವಿಗೆ ತೊಡಕಾಗಿದ್ದಾರೆಂದು ಗಾಬರಿ ಬಿದ್ದಿದ್ದಾರೆ. ಜಿಲ್ಲೆಯ ಬಹುಸಂಖ್ಯಾತ ಶೋಷಿತ ಹಿಂದುಳಿದ ವರ್ಗದಲ್ಲಿ ಪ್ರಭಾವಿಯಾಗಿರುವ ಸಿದ್ದರಾಮಯ್ಯ ಸರಕಾರದ ಗ್ಯಾರಂಟಿ ಯೋಜನೆಗಳ ‘ಮಹಿಮೆ’ ಅನಂತರ ನಿದ್ದೆಗೆಡಿಸಿಬಿಟ್ಟಿದೆ. ಹಾಗಾಗಿ ಸೋಲುವ ಆತಂಕದಿಂದ ಅವರು ಹೋದಲ್ಲಿ-ಬಂದಲ್ಲಿ ಸಿದ್ದರಾಮಯ್ಯರನ್ನೇ ಗುರಿಯಾಗಿಟ್ಟುಕೊಂಡು ಅಸಹ್ಯವಾಗಿ ಟೀಕೆಗಿಳಿದಿದ್ದಾರೆ.

ಈ ಟೀಕೆ ಅದೆಷ್ಟು ಕೀಳುಮಟ್ಟದ್ದಾಗಿದೆ ಎಂದರೆ, ಬಿಜೆಪಿಗರಲ್ಲೇ ವಾಕರಿಕೆ ಹುಟ್ಟಿಸಿದೆ. ಹತಾಶೆಯ ಜತೆ ಬ್ರಾಹ್ಮಣಿಕೆಯ ಅಹಂಕಾರವೂ ಸೇರಿಕೊಂಡಿದೆ. ಸ್ವಭಾವತಃ ಮಹಾ ಅಹಂಕಾರಿಯಾದ ಅನಂತಕುಮಾರ್, ಯಾರಿಗೂ ಗೌರವ ಕೊಟ್ಟಿದ್ದಿಲ್ಲ. ಶಿಷ್ಟಾಚಾರ-ಸಂಸ್ಕೃತಿ ಗೊತ್ತೇ ಇಲ್ಲ. ಮಾತುಮಾತಿಗೆ ಸ್ವಪಕ್ಷ-ವಿಪಕ್ಷದ ಹಿರಿಯರು-ಕಿರಿಯರೆನ್ನದೆ ಮೈಮೇಲೇರಿಹೋಗುವ ಗುಣ–ಧರ್ಮದಿಂದಾಗಿ ಕಾಗೇರಿ, ಶಾಸಕ ಹೆಬ್ಬಾರ್, ವೈದ್ಯರು, ಅಧಿಕಾರಿಗಳು, ವಕೀಲರು, ಅಮಾಯಕ ಜನಸಾಮಾನ್ಯರೆಲ್ಲ ಹಣ್ಣಾದ ಕತೆಗಳು ಜಿಲ್ಲೆಯಲ್ಲಿ ಜನಜನಿತವಾಗಿವೆ.

ಹುಟ್ಟಿನಿಂದ ಹವ್ಯಕ ಬ್ರಾಹ್ಮಣನಾದ ಅನಂತಕುಮಾರಗೆ ಆ ಸಮುದಾಯದ ನಯ-ನಾಜೂಕಿಲ್ಲ; ಶೂದ್ರ ವರ್ಗವನ್ನು ಬಹುವಚನದಿಂದ ಸಂಬೋಧಿಸಿದ ಉದಾಹರಣೆಯೇ ಇಲ್ಲ. ಮಾತೆತ್ತಿದರೆ ಮೇಲರಿಮೆಯ ಮಡಿ-ಮೈಲಿಗೆ ಸಂಸ್ಕಾರ. ಇದು ಉತ್ತರ ಕನ್ನಡದ ಬ್ರಾಹ್ಮಣ ಸಂಸ್ಕೃತಿ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಜಿಲ್ಲೆಯ ಬಹುತೇಕ ಬ್ರಾಹ್ಮಣರು ಶೂದ್ರ-ದಲಿತರಿಗೆ ಬಹುವಚನದಿಂದ ಮಾತಾಡಿಸಿದ್ದೇ ಇಲ್ಲ. ಬ್ರಾಹಣರ ನಾಲ್ಕೈದು ವರ್ಷದ ಮಕ್ಕಳೂ ಕೂಡ ತಮಗಿಂತ ಆರೆಂಟು ಪಟ್ಟು ಹಿರಿಯರಾದ ಅನುಭವಿಗಳಿಗೂ ಏಕವಚನ ಪ್ರಯೋಗಿಸುವ ‘ಸಂಪ್ರದಾಯ’ವಿದೆ. ದಲಿತರು-ಹಾಲಕ್ಕಿಗಳಂತ ಬುಡಕಟ್ಟು ಜನಾಂಗದವರನ್ನಂತೂ ಕೀಳಾಗಿ ಕಾಣಲಾಗುತ್ತಿದೆ.

ಇತ್ತೀಚೆಗೆ ಬ್ರಾಹಣರು ಉನ್ನತ ಸ್ಥಾನ-ಮಾನದಲ್ಲಿರುವ ಅಥವಾ ಸರಕಾರಿ ನೌಕರಿಯಲ್ಲಿರುವ ಶೂದ್ರ-ದಲಿತರನ್ನು ಒಲ್ಲದ ಮನಸ್ಸಿನಿಂದಲೇ ಬಹುವಚನದ ‘ಗೌರವ’ ಎದುರಿಗಷ್ಟೇ ತೋರಿಸುತ್ತಿದ್ದಾರೆ. ಇದು ಅನಿವಾರ್ಯದ ಕಾರ್ಯಸಾಧಕ ನಟನೆಯಷ್ಟೇ. ಈ ಗುಣಸ್ವಭಾವದಿಂದಾಗಿಯೇ ಹಿಂದುಳಿದ ವರ್ಗದ ಎತ್ತರದ ನಾಯಕ ಸಿದ್ದರಾಮಯ್ಯರ ಬಗ್ಗೆ ಅನಂತಕುಮಾರ್ ಹಗುರವಾಗಿ ಮಾತಾಡುತ್ತಿರುವುದು ಎಂಬುದು ಜಿಲ್ಲೆಯ ಜನರ ವಿಶ್ಲೇಷಣೆಯಾಗಿದೆ.

-ನಹುಷ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜೈಲು ಸೇರಿದ ಬಜರಂಗದಳ ಕಾರ್ಯಕರ್ತರನ್ನು ಭೇಟಿಯಾದ ಶೋಭಾ ಕರಂದ್ಲಾಜೆ

ಲವ್ ಜಿಹಾದ್​ ಪ್ರಕರಣದಲ್ಲಿ ​ಹಲ್ಲೆ ಆರೋಪದಡಿ ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ ಸೇರಿರುವ...

ಕರಂದ್ಲಾಜೆ ವಿರುದ್ದ ಷಡ್ಯಂತ್ರ ನಡೀತಿದೆ ಎಂದ ಬಿಎಸ್‌ವೈ; ಬಾಸ್ ಈಸ್ ಆಲ್ವೇಸ್ ರೈಟ್ ಎಂದ ಸಿ ಟಿ ರವಿ

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಕೇಳಿಲ್ಲ. ಈ ಬಗ್ಗೆ ಈಗಾಗಲೇ...

ಪರಿಹಾರಕ್ಕೆ ಹಣವಿಲ್ಲ, ಜಾಹೀರಾತಿಗೆ ಹಣವಿದೆ ಎಂದು ಸರ್ಕಾರ ಕುಟುಕಿದ ಕುಮಾರಸ್ವಾಮಿ

"ರಾಜ್ಯದ ರೈತರು ನಷ್ಟದಲ್ಲಿದ್ದಾರೆ, ಪರಿಹಾರ ಕೊಡೋಕೆ ಸರ್ಕಾರದ ಬಳಿ ಹಣವಿಲ್ಲ. ಆದ್ರೆ,...