ಉತ್ತರ ಕನ್ನಡ: ಜಿಲ್ಲೆಯ ಮುಂಡಗೋಡ ಹಾಗೂ ಶಿರಸಿ ಪಟ್ಟಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದ ಮೇರೆಗೆ ಇಬ್ಬರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮುಂಡಗೋಡ ಪಟ್ಟಣದ ಕೆಎಸ್‌ಆರ್‌ಟಿಸಿ ಡಿಪೋ ಸಮೀಪ ಅ.3ರಂದು ಸಂಜೆ ಸುಮಾರು 4.30ರ ವೇಳೆಗೆ ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ಗನಿಖಾನ್ ತಂದೆ ಮಹಾಬೂಬಖಾನ್ ಪಠಾಣ (19) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈತ ಮುಂಡಗೋಡದಲ್ಲಿ ಮೊಬೈಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮುಂಡಗೋಡ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ
ಇದೇ ದಿನ ಶಿರಸಿ ನಗರದ ಕಾಲೇಜು ರಸ್ತೆಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಕ್ರಾಸ್ ಸಮೀಪ ಬೆಳಿಗ್ಗೆ 11.15ರ ವೇಳೆಗೆ ಗಾಂಜಾ ಸೇವನೆ ಮಾಡಿದ ಆರೋಪದ ಮೇರೆಗೆ ಪರಿಕ್ಷೀತ ತಂದೆ ಶ್ರೀನಿವಾಸ ಪತ್ತಾರ (26) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಎಚ್‌ಬಿ ಕಾಲೋನಿ ನಿವಾಸಿಯಾಗಿರುವ ಈತ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲೂ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಎರಡೂ ಪ್ರಕರಣಗಳಲ್ಲಿ ಆರೋಪಿತರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 27(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.




