ಹರಿಯಾಣದಲ್ಲಿ ಬಿಜೆಪಿ ವಿರೋಧಿ ಅಲೆ | ಬಿಜೆಪಿಗೆಷ್ಟು ನಷ್ಟ – ಕಾಂಗ್ರೆಸ್‌ಗೆ ಎಷ್ಟು ಲಾಭ?

Date:

ಹರಿಯಾಣದ ಎಲ್ಲ 10 ಲೋಕಸಭಾ ಕ್ಷೇತ್ರಗಳಿಗೆ ಮೇ 25ರಂದು ಮತದಾನ ಮುಗಿದಿದೆ. ರಾಜ್ಯದಲ್ಲಿ ಬಿಜೆಪಿ ನಾನಾ ಸವಾಲು, ಬದಲಾವಣೆಗಳನ್ನು ಎದುರಿಸುತ್ತಿರುವ ಸಮಯದಲ್ಲೇ ಮತದಾನ ನಡೆಸಿದ್ದು, ಬಿಜೆಪಿ ಬಹುತೇಕ ಸ್ಥಾನಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.

ರಾಜ್ಯದಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿಯನ್ನು ಎರಡು ತಿಂಗಳ ಹಿಂದೆಯಷ್ಟೇ ಬದಲಿಸಿತ್ತು. ಮುಖ್ಯಮಂತ್ರಿಯಾಗಿದ್ದ ಮನೋಹರ್ ಲಾಲ್ ಖಟ್ಟರ್ ಅವರನ್ನು ಇಳಿಸಿ, ನಯಾಬ್ ಸಿಂಗ್ ಸೈನಿ ಅವರನ್ನು ಆ ಹುದ್ದೆಗೆ ನೇಮಿಸಿತು. ಇತ್ತೀಚೆಗೆ, ಬಿಜೆಪಿ ಬೆಂಬಲ ನೀಡಿದ್ದ ಮೂವರು ಸ್ವತಂತ್ರರು ಬೆಂಬಲವನನ್ನು ಹಿಂಪಡೆದಿದ್ದಾರೆ. ಸದ್ಯ, ವಿಧಾನಸಭೆಯಲ್ಲಿ ಬಹುಮತವಿಲ್ಲದ ಸರ್ಕಾರ ಅಧಿಕಾರದಲ್ಲಿದೆ. ಕಳೆದ ಮಾರ್ಚ್‌ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದ ವಿಪಕ್ಷಗಳು ಮತ್ತೆ ಅವಿಶ್ವಾಸ ಮಂಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ, ಇನ್ನೂ ನಾಲ್ಕೈದು ತಿಂಗಳ ಕಾಯಬೇಕಾಗಿದೆ. ಆದರೆ, ಆ ವೇಳೆಗೆ ವಿಧಾನಸಭಾ ಚುನಾವಣೆಯೇ ಬರಲಿದೆ.

ಇಂತಹ ಬಿಕ್ಕಟ್ಟು ರಾಜ್ಯದಲ್ಲಿ ಬಿಜೆಪಿ ಎದುರಿಸುತ್ತಿರುವ ಬೃಹತ್ ಸವಾಲುಗಳನ್ನು ಪ್ರತಿನಿಧಿಸುತ್ತಿದೆ. ಕೃಷಿ ಸಂಕಷ್ಟ ಮತ್ತು ಉದ್ಯೋಗಾವಕಾಶಗಳ ಕೊರತೆಯು ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದ ಅಶಾಂತಿಯನ್ನು ಸೃಷ್ಠಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಹರಿಯಾಣದಲ್ಲಿ ಬಿಜೆಪಿಗೆ ಎದುರಾಗಿರುವ ಸವಾಲುಗಳು
  • ಉದ್ಯೋಗ ಬಿಕ್ಕಟ್ಟು

ಬಿಜೆಪಿ ದೊಡ್ಡ ಸವಾಲೆಂದರೆ, ಉದ್ಯೋಗಾವಕಾಶಗಳು. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಪ್ರಕಾರ, ರಾಜ್ಯವು 37.4% ನಿರುದ್ಯೋಗ ದರವನ್ನು ಹೊಂದಿದೆ. ಇದು ದೇಶದಲ್ಲೇ ಅತ್ಯಧಿಕ ಪ್ರಮಾಣ.

ಇದಲ್ಲದೆ, ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆಯ ಪ್ರಕಾರ, ಹರಿಯಾಣದಲ್ಲಿ ನಿರುದ್ಯೋಗವು ಶೇ.9 ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಿದೆ.

ಹರಿಯಾಣದ ಕೈತಾಲ್ ಮತ್ತು ಕುರುಕ್ಷೇತ್ರ ಜಿಲ್ಲೆಗಳ ಕೆಲ ಯುವಜನರು ಉದ್ಯೋಗ ಹರಸಿ ರಷ್ಯಾಕ್ಕೆ ಹೋಗಿದ್ದು, ಅವರು ಮಧ್ಯವರ್ತಿಗಳಿಂದ ವಂಚನೆಗೆ ಒಳಗಾಗಿ, ರಷ್ಯಾದಲ್ಲಿ ಸಿಲುಕಿದ್ದಾರೆ. ಅವರನ್ನು ರಷ್ಯಾ ಪಡೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡುವಂತೆ ಒತ್ತಾಯಿಸಿದೆ. ಇದು, ಹರಿಯಾಣದಲ್ಲಿನ ನಿರುದ್ಯೋಗ ಸಮಸ್ಯೆಯ ಭೀಕರೆಯನ್ನು ಸೂಚಿಸುತ್ತದೆ.

ಕೇವಲ ಶಿಕ್ಷಿತ ಯುವಜನರು ಮಾತ್ರವಲ್ಲ, ಮನರೇಗಾ ಕಾರ್ಮಿಕರಿಗೂ ಕೂಡ ರಾಜ್ಯದಲ್ಲಿ ಸಾಕಷ್ಟು ಕೆಲಸಗಳು ದೊರೆಯದೆ, ಸಂಕಷ್ಟ ಎದುರಿಸುತ್ತಿರುವುದುದಾಗಿ ದೂರಿದ್ದಾರೆ. ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯಲ್ಲೂ ಸರ್ಕಾರದ ಹೆಚ್ಚಿನ ಕಾಳಜಿ ತೋರುತ್ತಿಲ್ಲ ಎಂಬುದು ಕೂಡ ಅಸಮಾಧಾನ ಸೃಷ್ಠಿಸಿದೆ.

  • ಸಾಮಾಜಿಕ ಬಿಕ್ಕಟ್ಟು

ಹರ್ಯಾಣದಲ್ಲಿ ಬಿಜೆಪಿ 10 ವರ್ಷಗಳಿಂದ ಅಧಿಕಾರದಲ್ಲಿದೆ. ಜಾಟ್ ಪ್ರಾಬಲ್ಯದ ವಿರುದ್ಧ ಇತರ ಸಮುದಾಯಗಳನ್ನು ಕ್ರೋಢೀಕರಿಸುವ ಮೂಲಕ ರಾಜ್ಯದಲ್ಲಿ ಜಾತಿ ಆಧಾರದ ಮೇಲೆ ಬಿಜೆಪಿ ಹಿಡಿತವನ್ನು ಉಳಿಸಿಕೊಂಡಿದೆ. ರಾಜ್ಯದಲ್ಲಿ 27% ಜಾಟ್‌ ಜನಸಂಖ್ಯೆಯಿದ್ದು, ಹರಿಯಾಣ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದ್ದಾರೆ.

2016ರಲ್ಲಿ ನಡೆದ ಜಾಟ್ ಮೀಸಲಾತಿ ಹೋರಾಟದ ವೇಳೆ ಉಂಟಾದ ಹಿಂಸಾಚಾರವನ್ನು ಮೇಲ್ಜಾತಿಗಳು ಮತ್ತು ಒಬಿಸಿಗಳನ್ನು ತನ್ನತ್ತ ಕ್ರೋಢೀಕರಿಸಿಕೊಳ್ಳಲು ಬಿಜೆಪಿ ಬಳಸಿಕೊಂಡಿದೆ. ಆದರೆ, ಜಾಟ್ ಮತಗಳಲ್ಲಿ ಮೂರು ಭಾಗಗಳಾಗಿ ವಿಭಜನೆಯಾಗಿದ್ದವು. ಕಾಂಗ್ರೆಸ್, ಐಎನ್‌ಎಲ್‌ಡಿ, ಜೆಜೆಪಿ ನಡುವೆ ಜಾಟ್ ಮತಗಳ ಹಂಚಿಹೋಗಿದ್ದು, ಬಿಜೆಪಿಗೆ ಮತ್ತಷ್ಟು ಲಾಭ ಮಾಡಿಕೊಟ್ಟಿತ್ತು.

ಆದರೆ, ಈಗ ಇದು ಬದಲಾಗಿದೆ. ರಾಜ್ಯದಲ್ಲಿ ಜಾಟ್ ಸಮುದಾಯವು ತನ್ನನ್ನು ಪರಕೀಯರಂತೆ ನೋಡಲಾಗುತ್ತಿವೆ ಎಂಬ ಆಕ್ರೋಶದಲ್ಲಿದೆ. ಜೊತೆಗೆ, 2016ರ ಜಾಟ್ ಮೀಸಲಾತಿ ಹೋರಾಟ, 2020-21ರ ರೈತ ಆಂದೋಲನ ಹಾಗೂ ಪ್ರತಿಪಟುಗಳ ಪ್ರತಿಭಟನೆಗಳು ಬಿಜೆಪಿ ವಿರುದ್ಧ ಜಾಟ್‌ ಸಮುದಾಯ ಆಕ್ರೋಶಗೊಳ್ಳಲು ಕಾರಣವಾಗಿವೆ. ಜೊತೆಗೆ, ನಿರುದ್ಯೋಗವು ನಿರ್ಣಾಯಕವಾಗಿ ಜಾಟ್‌ಗಳಲ್ಲಿ ಅಸಮಾಧಾನ ಸೃಷ್ಠಿಸಿದೆ.

ಎರಡನೆಯದಾಗಿ, ಉದ್ಯೋಗ ಬಿಕ್ಕಟ್ಟು ಮತ್ತು ಕೃಷಿ ಸಂಕಟವು ಜಾಟ್ ಅಲ್ಲದ ಸಮುದಾಯಗಳ ಮೇಲೆ ಪರಿಣಾಮ ಬೀರಿತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿ ವಿರುದ್ಧ ಹೆಚ್ಚಿನ ಅಸಮಾಧಾನ ವ್ಯಕ್ತವಾಗುತ್ತಿದೆ. ನಿರುದ್ಯೋಗ ಮತ್ತು ಕೃಷಿ ಬಿಕ್ಕಟ್ಟು ಹಳ್ಳಿಗಳಲ್ಲಿ ನೆಲೆಸಿರುವ ಒಬಿಸಿಗಳು, ದಲಿತರು ಮತ್ತು ಮೇಲ್ಜಾತಿಗಳಲ್ಲಿ ಭಾರೀ ಅಸಮಾಧಾನ ಸೃಷ್ಠಿಸಿದೆ.

  • ರೈತ ಹೋರಾಟ

ಜೊತೆಗೆ, 2020-21ರಲ್ಲಿ ನಡೆದ ಬೃಹತ್ ರೈತ ಹೋರಾಟದ ಸಮಯದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ ರೈತರ ಮೇಲೆ ನಡೆಸಿದ ದಮನಗಳನ್ನು ರೈತರು ಮರೆತಿಲ್ಲ. ಆಗ, ದೆಹಲಿಯತ್ತ ಹೊರಟಿದ್ದ ರೈತರನ್ನು ತಡೆಯಲು ಯತ್ನಿಸಿದ್ದ ಖಟ್ಟರ್ ನೇತೃತ್ವದ ಸರ್ಕಾರ ರೈತರ ಮೇಲೆ ನಾನಾ ರೀತಿಯಲ್ಲಿ ದೌರ್ಜನ್ಯ ಎಸಗಿತ್ತು. ರಸ್ತೆಗಳಿಗೆ ಬ್ಯಾರಿಕೇಟ್ ಬೇಲಿಗಳನ್ನು ಹಾಕಿತ್ತು, ರಸ್ತೆಗಳಲ್ಲಿ ಕಂದಕಗಳನ್ನು ತೋಡಿತ್ತು. ಲಾಠಿ ಜಾರ್ಜ್‌, ಜಲಪಿರಂಗಿ ದಾಳಿ ನಡೆಸಿತ್ತು. ಅಲ್ಲದೆ, ಇತ್ತೀಚೆಗೆ ನಡೆದ ರೈತ ಪ್ರತಿಭಟನೆಯ ಸಮಯದಲ್ಲೂ ಇದೆಲ್ಲವೂ ಮತ್ತೆ ಮರುಕಳಿಸಿತ್ತು. ಬಿಜೆಪಿ ಸರ್ಕಾರದ ನಡೆ ರೈತರನ್ನು ಆಕ್ರೋಶಗೊಳಿಸಿದೆ.

ಇದೆಲ್ಲವೂ ಹರಿಯಾಣದಲ್ಲಿ ಜಾತಿ ಧ್ರುವೀಕರಣವನ್ನು ದುರ್ಬಲಗೊಳಿಸಿದೆ. ಜಾಟ್‌ ಸಮುದಾಯದ ವಿರುದ್ದ ಇತರ ಸಮುದಾಯಗಳನ್ನು ಒಗ್ಗೂಡಿಸಿಕೊಳ್ಳಲುವುದು ಬಿಜೆಪಿ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಲೋಕಸಭೆ ಚುನಾವಣೆ ಪರಿಸ್ಥಿತಿ

ಹರಿಯಾಣದಲ್ಲಿ ಅಸಮಾಧಾನದ ನದಿಯೇ ಹರಿಯುತ್ತಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಅಮಾಧಾನ ಹೆಚ್ಚು ಪ್ರಭಾವ ಬೀರಬಹುದು. ಆದರೆ, ಲೋಖಸಭಾ ಚುನಾವಣೆಯಲ್ಲಿ ಮೋದಿ ಮೇಲಿನ ಪ್ರೀತಿ ಕೆಲವು ಮತದಾರರನ್ನು ಈಗಲೂ ಪ್ರಭಾವಿಸುತ್ತಿದೆ. ಬಿಜೆಪಿ ವಿರುದ್ಧದ ಆಕ್ರೋಶದ ಹೊರತಾಗಿಯೂ ಕೆಲವರು ಮೋದಿಗಾಗಿ ಬಿಜೆಪಿಗೆ ಮತ ಚಲಾಯಿಸಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಬಹುತೇಕರು ಬಿಜೆಪಿ ವಿರುದ್ಧವೇ ಮತ ಚಲಾಯಿಸಿದ್ದಾರೆ ಎಂಬುದನ್ನು ರಾಜ್ಯದ ರಾಜಕೀಯ ವಾತಾವರಣ ಸೂಚಿಸುತ್ತಿದೆ.

ಭಾರತೀಯ ಸೇನೆಗೆ ಹೆಚ್ಚು ಸೈನಿಕರನ್ನು ಕಳಿಸುವ ರಾಜ್ಯಗಳಲ್ಲಿ ಹರಿಯಾಣವೂ ಒಂದಾಗಿದ್ದು, ಕಳೆದ ಚುನಾವಣೆಯಲ್ಲಿ ಪುಲ್ವಾಮಾ ದಾಳಿಯ ಬಳಿಕ ಬಿಜೆಪಿ ಪರವಾಗಿ ಅಲೆ ಇತ್ತು. ಹೀಗಾಗಿ, ಬಿಜೆಪಿ ಎಲ್ಲ 10 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ಈ ಬಾರಿ ಬಿಜೆಪಿ ಕೆಲ ಸ್ಥಾನಗಳನ್ನು ಕಳದುಕೊಳ್ಳುದಂತೂ ನಿಶ್ಚಿತ.

ಕಾಂಗ್ರೆಸ್‌ ತಂತ್ರ ಮತ್ತು ಸಾಧ್ಯತೆಗಳು

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ 10 ಸ್ಥಾನಗಳ ಪೈಕಿ ರೋಹ್ಟಕ್, ಸೋನೆಪತ್‌ ಹಾಗೂ ಚೌತಾಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನಿರಾಯಾಸವಾಗಿ ಗೆಲ್ಲಲಿದೆ ಎಂಬ ಅಭಿಪ್ರಾಯಗಳಿವೆ. ಇತರ ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್‌ ನಾನಾ ರೀತಿಯ ತಂತ್ರಗಳನ್ನು ಎಣೆದು, ಕೆಲಸ ಮಾಡಿದೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಜೊತೆ ಮೈತ್ರಿಯಲ್ಲಿದ್ದ ಐಎನ್‌ಎಲ್‌ಡಿ ಕೂಡ, ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡು, ಸ್ವತಂತ್ರವಾಗಿ ಕಣದಲ್ಲಿದೆ. ಇದು, ಬಿಜೆಪಿಯ ಮತಗಳು ವಿಭಜನೆಯಾಗಿರುವ ಸಾಧ್ಯತೆಗಳೇ ಹೆಚ್ಚಿವೆ. ಆ ಮತಗಳನ್ನು ಕಾಂಗ್ರೆಸ್‌ ಕ್ರೋಢೀಕರಿಸುವ ಪ್ರಯತ್ನವನ್ನೂ ಮಾಡಿದೆ.

ಮತದಾರರು ಲೋಕಸಭಾ ಚುನಾವಣೆಯನ್ನು ವಿಧಾನಸಭಾ ಚುನಾವಣೆಗಿಂತ ಭಿನ್ನವಾಗಿ ನೋಡಿದ್ದಾರೆ ಎಂಬ ಮಾತುಗಳೂ ಇವೆ. ಅದು ನಿಜವಾಗಿದ್ದರೆ, ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು ಚಲಾವಣೆಯಾಗಿರುತ್ತವೆ. ಅಲ್ಲದೆ, ಬಿಜೆಪಿ ವಿರೋಧಿ ಮತದಾರರಲ್ಲಿ ಕನಿಷ್ಠ ಪಕ್ಷ ರಾಷ್ಟ್ರೀಯ ಚುನಾವಣೆಯಲ್ಲಿ ಕಾಂಗ್ರೆಸ್ ಆಯ್ಕೆಯಾಗಬೇಕು ಎಂಬ ಭಾವನೆ ಇದೆ.

ಸದ್ಯ, ಹರಿಯಾಣದಲ್ಲಿ ಈ ಬಾರಿ 62.22% ಮತದಾನವಾಗಿದೆ. ಇದು, 2019ರಲ್ಲಿ 70.34% ಇತ್ತು. 2019ಕ್ಕೆ ಹೋಲಿಸಿದರೆ, ಈ ಬಾರಿ ಬರೋಬ್ಬರಿ ಸಮಾರು 8% ಮತದಾನ ಕಡಿಮೆಯಾಗಿದೆ. ಇದು, ಬಿಜೆಪಿ ವಿರುದ್ಧದ ಅಸಮಾಧಾನವನ್ನು ಸೂಚಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಹರಿಯಾಣದಲ್ಲಿ ಮಾತ್ರವಲ್ಲ , ದೇಶದೆಲ್ಲೆಡೆ ಬಿಜೆಪಿ ವಿರೋಧಿ ಅಲೆ ಬಲವಾಗಿ ಬೀಸುತ್ತಿದೆ. ಇವಿಎಂ ಮತಯಂತ್ರಗಳಿಗೆ ಶಸ್ತ್ರಕ್ರಿಯೆ ಮಾಡಿದರೆ ಮಾತ್ರ ಬಿಜೆಪಿ ಗೆಲ್ಲಬಹುದೆ ವಿನಃ ಅನ್ಯಥಾ ಬಿಜೆಪಿ ಗೆಲುವು ಖಂಡಿತಾ ಅಸಾಧ್ಯ.

    ಮತಯಂತ್ರಗಳ ದುರ್ಬಳಕೆ ಆಗದಿರಲಿ. ಮತದಾರರ ನಿರ್ಧಾರ ಘೋಷಣೆಯಾಗಲಿ. ಪ್ರಜಾಪ್ರಭುತ್ವಕ್ಕೆ ಜಯವಾಗಲಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇವದಾರಿ ಗಣಿಗಾರಿಕೆ ಯೋಜನೆ ಬಗ್ಗೆ ಕಳವಳ ಬೇಡ: ಕೇಂದ್ರ ಸಚಿವ ಕುಮಾರಸ್ವಾಮಿ

ಬಳ್ಳಾರಿಯ ಸಂಡೂರು ವ್ಯಾಪ್ತಿಯ ದೇವದಾರಿ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿ...

ಬಿಹಾರ | ಉದ್ಘಾಟನೆಗೂ ಮುನ್ನ ನದಿಯಲ್ಲಿ ಕೊಚ್ಚಿ ಹೋದ 12 ಕೋಟಿ ರೂ. ವೆಚ್ಚದ ಸೇತುವೆ

ಬಿಹಾರ ದ ಅರಾರಿಯಾ ಜಿಲ್ಲೆಯಲ್ಲಿ ಬಾಕ್ರಾ ನದಿಗೆ ಅಡ್ಡಲಾಗಿ 12 ಕೋಟಿ...

ಸಾಹಿತಿಗಳೂ ರಾಜಕಾರಣಿಗಳೇ, ಸರ್ಕಾರದಿಂದ ನೇಮಕವಾಗಿದ್ದಾರೆ, ಸಭೆ ಮಾಡಿದ್ದೇನೆ: ಡಿ ಕೆ ಶಿವಕುಮಾರ್

ಇತ್ತೀಚೆಗೆ ಕೆಪಿಸಿಸಿ ಕಚೇರಿಗೆ ಸಾಹಿತ್ಯ, ಸಂಸ್ಕೃತಿ ಹಾಗೂ ಇತರ ಅಕಾಡೆಮಿಗಳ ಅಧ್ಯಕ್ಷರ...

ವಿನೀತ ಮೋದಿಗೆ ಜಾಗತಿಕ ಒತ್ತಡ; ದುರ್ಬಲಗೊಳ್ಳುತ್ತಿದೆ ವಿದೇಶಾಂಗ ಸಂಬಂಧ

ಭಾರತದಲ್ಲಿ ದುರ್ಬಲರಾಗಿ, ವಿನೀತರಾಗಬೇಕಾದ ಒತ್ತಡ ಹೊಂದಿರುವ ಮೋದಿ, ತಮ್ಮ ಮೂರನೇ ಅವಧಿಯಲ್ಲಿ...