ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ನೇ ಸಾಲಿನ ದ್ವಿತೀಯ ಪಿಯುಸಿ (12ನೇ ತರಗತಿ) ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 9 ರಂದು ಪ್ರಕಟಿಸಲಿದೆ. ಅಂದು ಮಧ್ಯಾಹ್ನ 3 ಗಂಟೆಯಿಂದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಸಂಜೆ 6.15ಕ್ಕೆ ಸಚಿವರು ಸುದ್ದಿಗೋಷ್ಠಿ ನಡೆಸಿ, ರಾಜ್ಯದ ಟಾಪರ್‌ಗಳು ಹಾಗೂ ಜಿಲ್ಲಾವಾರು ಸಾಧನೆಯ ವಿವರಗಳನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ಈ ಹಿಂದೆ ಫಲಿತಾಂಶವನ್ನು ಏಪ್ರಿಲ್ 7 ರಂದು ಪ್ರಕಟಿಸಲು ನಿರ್ಧರಿಸಲಾಗಿತ್ತು. ಆದರೆ, ರಾಜ್ಯದಲ್ಲಿ ಉಪಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಫಲಿತಾಂಶ ಪ್ರಕಟಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಲಾಗಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಬಳಸಿ kseab.karnataka.gov.in, karresults.nic.in ಅಥವಾ ‘ಡಿಜಿಲಾಕರ್’ (DigiLocker) ಆ್ಯಪ್ ಮೂಲಕ ಫಲಿತಾಂಶವನ್ನು ಪಡೆದುಕೊಳ್ಳಬಹುದು.
ಫೆಬ್ರವರಿ 28 ರಿಂದ ಮಾರ್ಚ್ 17ರವರೆಗೆ ನಡೆದಿದ್ದ ಈ ಬಾರಿಯ ಪರೀಕ್ಷೆಗೆ ರಾಜ್ಯಾದ್ಯಂತ 5,174 ಕಾಲೇಜುಗಳಿಂದ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 6,46,801 ಹೊಸ ವಿದ್ಯಾರ್ಥಿಗಳು, 50,540 ಪುನರಾವರ್ತಿತ ಅಭ್ಯರ್ಥಿಗಳು ಹಾಗೂ 13,022 ಖಾಸಗಿ ವಿದ್ಯಾರ್ಥಿಗಳು ಸೇರಿದ್ದಾರೆ. ವಿಜ್ಞಾನ ವಿಭಾಗದಲ್ಲಿ 2,92,645, ವಾಣಿಜ್ಯ ವಿಭಾಗದಲ್ಲಿ 2,11,174 ಹಾಗೂ ಕಲಾ ವಿಭಾಗದಲ್ಲಿ 1,42,982 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಇದನ್ನು ಓದಿದ್ದೀರಾ? ಕಪ್ಪು ಮೈಬಣ್ಣ ಭೇದಭಾವಕ್ಕೆ ಅತ್ಯುತ್ತಮ ಆಟವೇ ಪ್ರತ್ಯುತ್ತರ: ಅನುಭವ ತೋಡಿಕೊಂಡ ಟೆನಿಸ್ ದಿಗ್ಗಜ
ಈ ವರ್ಷದ ವಿಶೇಷವೆಂದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೇರ್ಗಡೆಗೆ ಬೇಕಾದ ಕನಿಷ್ಠ ಅಂಕಗಳ ಪ್ರಮಾಣವನ್ನು ಶೇ. 35 ರಿಂದ ಶೇ. 30ಕ್ಕೆ ಇಳಿಸಲಾಗಿದೆ. ಅಂದರೆ, ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ (ಲಿಖಿತ ಮತ್ತು ಆಂತರಿಕ ಮೌಲ್ಯಮಾಪನ ಸೇರಿ) ಕನಿಷ್ಠ 30 ಅಂಕಗಳನ್ನು ಪಡೆಯಬೇಕು ಮತ್ತು ಒಟ್ಟಾರೆ ಶೇ. 33 ರಷ್ಟು (600ಕ್ಕೆ 198 ಅಂಕಗಳು) ಅಂಕಗಳನ್ನು ಗಳಿಸಿದರೆ ಉತ್ತೀರ್ಣರಾಗುತ್ತಾರೆ. ಅಲ್ಲದೆ, ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ವರ್ಷಕ್ಕೆ ಮೂರು ಪರೀಕ್ಷೆಗಳನ್ನು (ಪರೀಕ್ಷೆ 1, 2 ಮತ್ತು 3) ಬರೆಯುವ ಅವಕಾಶವನ್ನೂ ಮಂಡಳಿ ಕಲ್ಪಿಸಿದೆ. ಇವುಗಳಲ್ಲಿ ವಿದ್ಯಾರ್ಥಿಯು ಪಡೆದ ಅತ್ಯುತ್ತಮ ಅಂಕಗಳನ್ನೇ ಅಂತಿಮ ಫಲಿತಾಂಶಕ್ಕೆ ಪರಿಗಣಿಸಲಾಗುತ್ತದೆ.
ಕಳೆದ ವರ್ಷ (2025) ದ್ವಿತೀಯ ಪಿಯುಸಿ ಫಲಿತಾಂಶವು ಶೇ. 73.45 ರಷ್ಟಿತ್ತು. ಬಾಲಕಿಯರು ಬಾಲಕರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದರು. ಈ ಬಾರಿ ತೇರ್ಗಡೆ ನಿಯಮಗಳು ಸಡಿಲಗೊಂಡಿರುವುದರಿಂದ ಫಲಿತಾಂಶದ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ. ಫಲಿತಾಂಶ ಪ್ರಕಟವಾದ ನಂತರ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ, ಮರುಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮಂಡಳಿಯು ಅವಕಾಶ ನೀಡಲಿದೆ.




